ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿನ ಹೊದಿಕೆಯಲ್ಲಿ ಕಳೆದು ಹೋದ ನಗರ

ಬಿಸಿಬಿಸಿ ಬೋಂಡಾ, ಟೀ, ಬಜ್ಜಿ... ವಾರೆ ವ್ಹಾ...
Last Updated 24 ಅಕ್ಟೋಬರ್ 2014, 7:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶ್ವೇತ ಬಣ್ಣದ ಬೃಹತ್ ಹೊದಿಕೆಯಲ್ಲಿ ಕಳೆದು ಹೋಗಬೇಕೆ? ಮಳೆಹನಿ, ಥರಗುಟ್ಟುವ ಚಳಿ ಮತ್ತು ಆಪ್ತ ಮಂಜನ್ನು ಅಪ್ಪಿಕೊಳ್ಳಬೇಕೆ? ರಸ್ತೆ ಖಾಲಿಯಿದ್ದರೂ ವೇಗದ ಮೊರೆ ಹೋಗದೇ ನಿಧಾನವಾಗಿ ಸಾಗುವ ವಾಹನಗಳನ್ನು ಕಣ್ಣಾರೆ ನೋಡಬೇಕೆ? ಪುಟ್ಟ ಪುಟ್ಟ ಕಟ್ಟಿಗೆಗಳನ್ನು ಶೇಖರಿಸಿಟ್ಟು ಅದಕ್ಕೆ ಬೆಂಕಿ ಹಚ್ಚಿ, ಪುಟ್ಟದಾದ ಲೋಟದಲ್ಲಿ ಚಹಾ ಸವಿಯುತ್ತ ಒಂದೊಂದು ಕ್ಷಣವನ್ನೂ ರೋಮಾಂಚನದಿಂದ ಕಳೆಯಬೇಕೆ...?
– ಈ ಎಲ್ಲ ಪ್ರಶ್ನೆಗೂ ನಿಮ್ಮ ಉತ್ತರ ಹೌದು ಎಂದಾಗಿದ್ದರೆ, ನೀವು ಮುಂಜಾನೆಯ ಸವಿ ನಿದ್ದೆ ತ್ಯಾಗ ಮಾಡಿ ಬೇಗ ಎದ್ದು ಹೊರಗೆ ನಡೆಯಬೇಕು.

ಬೆಳಿಗ್ಗೆ ೬ರಿಂದ 8ರ ಅವಧಿಯಲ್ಲಿ ೪ ಅಡಿ ಸಮೀಪವಿರುವುದು ವ್ಯಕ್ತಿಯೋ ವಸ್ತುವೋ ತಿಳಿಯದಷ್ಟು! ದಟ್ಟ ಮಂಜಿನ ಹೊದಿಕೆ ಆವರಿಸಿರುತ್ತದೆ. ಅತಿ ತಾಪ ಮತ್ತು ಸೂರ್ಯನ ಪ್ರಖರ ಬಿಸಿಲಿನಿಂದ ಕಂಗೆಟ್ಟಿದ್ದ ನಗರದ ಜನರಿಗೆ ಮಂಜು ಕವಿದ ವಾತಾವರಣ ಚಳಿಗಾಲದ ಮುನ್ಸೂಚನೆ ನೀಡಿದೆ.

ಚಳಿಯು ಜನರ ಬದುಕಿನ ಮೇಲೆಯೂ ಪರಿಣಾಮ ಬೀರಿದೆ. ಯಾರೂ ಬೇಗ ಏಳಲು ಬಯಸುವುದಿಲ್ಲ. ಮಕ್ಕಳನ್ನು ಎಬ್ಬಿಸಿ ಸಮವಸ್ತ್ರ ತೊಡಿಸಿ ಶಾಲೆಗೆ ಕಳುಹಿಸಲು ಗೃಹಿಣಿಯರು ಸಾಹಸ ಮಾಡಬೇಕು. ಮೂಲೆಯಲ್ಲಿದ್ದ ಸ್ವೆಟರ್, ಜಾಕೆಟ್‌ ಮತ್ತು ಬೆಚ್ಚನೆಯ ಬಟ್ಟೆಗಳಿಗೆ ಮೋಕ್ಷ. ನವೆಂಬರ್‌–ಡಿಸೆಂಬರ್‌ ತಿಂಗಳಿನಲ್ಲಂತೂ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ನಗರದ ನಿವಾಸಿ ಎಲ್‌.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಛಾಯಾಗ್ರಾಹಕರಿಗಂತೂ ಇದು ಸುಗ್ಗಿಯ ಕಾಲ. ಮುಂಜಾವಿನಲ್ಲಿ ಅವರು ರಸ್ತೆ ಪೂರ್ತಿ ಸುತ್ತಾಡಿದರಂತೂ ಅತ್ಯುತ್ತಮ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದು. ಜನರು ಬೆಂಕಿಯನ್ನು ಹಚ್ಚಿಕೊಂಡು ಶಾಖ ಪಡೆಯುವುದನ್ನು, ರಸ್ತೆಬದಿಯ ಡಬ್ಬಿ ಅಂಗಡಿಗಳಲ್ಲಿ ಚಹಾ ಸವಿಯುವುದನ್ನು, ಸ್ವೆಟರ್ ಹಾಕಿಕೊಂಡರೂ ನಡುಗುತ್ತ ಶಾಲೆಯ ಬಸ್‌ಗಾಗಿ ಕಾಯುತ್ತಿರುವ ಪುಟಾಣಿ ಮಕ್ಕಳನ್ನು ಕಾಣಬಹುದು.
ಸಮೀಪದ ನಂದಿ ಬೆಟ್ಟ, ಸ್ಕಂದಗಿರಿ ಬೆಟ್ಟ ಮುಂತಾದ ಕಡೆ ಹೋಗಿಬಿಟ್ಟರಂತೂ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಬೆಟ್ಟಗುಡ್ಡಗಳಲ್ಲಿ ಮಧ್ಯಾಹ್ನವಾದರೂ ಮಂಜು ಕರಗುವುದಿಲ್ಲ.

ಇತರ ದಿನಗಳಿಗಿಂತ ಚಳಿಗಾಲದಲ್ಲಿ ನಗರದ ಸೊಬಗು ಭಿನ್ನ. ಬಿಸಿಬಿಸಿಯಾದ ಬಜ್ಜಿ, ಬೋಂಡಾ, ವಡೆಗೆ ಹೋಟೆಲ್–ಪೆಟ್ಟಿಗೆ ಅಂಗಡಿಗಳಲ್ಲಿ ಹೆಚ್ಚು ಬೇಡಿಕೆ ಎಂದು ನಗರದ ಕೃಷ್ಣಮೂರ್ತಿ ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT