ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೂರಿಗೆ ಕಸ ಸಾಗಾಟ ಸ್ಥಗಿತ

­­­­-ಶುಕ್ರವಾರವೇ ಹಾದಿ ಬದಲಿಸಿದ ಲಾರಿಗಳು; ಹತ್ತು ದಿನ ಮೊದಲೇ ಭರವಸೆ ಈಡೇರಿಸಿದ ಬಿಬಿಎಂಪಿ
Last Updated 21 ನವೆಂಬರ್ 2014, 19:29 IST
ಅಕ್ಷರ ಗಾತ್ರ

ಬೆಂಗಳೂರು: ಗಡುವು ಕೊನೆಗೊಳ್ಳಲು ಇನ್ನೂ ಹತ್ತು ದಿನ ಬಾಕಿ ಇದೆ. ಆದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಮಂಡೂರು ಘಟಕಕ್ಕೆ ತ್ಯಾಜ್ಯ ಸಾಗಿಸುವುದನ್ನು ಶುಕ್ರವಾರದಿಂದ ಸ್ಥಗಿತಗೊಳಿಸಿದೆ. ಸುದ್ದಿ ತಿಳಿಯುತ್ತಿ ದ್ದಂತೆ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

‘ಕಳೆದ 10 ದಿನಗಳಿಂದ ಮಂಡೂರಿಗೆ ನಿತ್ಯ 400 ಟನ್‌ ಕಸವನ್ನಷ್ಟೇ ಕಳುಹಿಸಲಾಗುತ್ತಿತ್ತು. ಶುಕ್ರವಾರ ದಿಂದ ಅದನ್ನೂ ಸ್ಥಗಿತಗೊಳಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಹಾಗೂ ವಿಶೇಷ ಆಯುಕ್ತ (ಘನತ್ಯಾಜ್ಯ) ದರ್ಪಣ ಜೈನ್‌ ತಿಳಿಸಿದರು.

‘ತ್ಯಾಜ್ಯ ಸಾಗಾಟವನ್ನು ಸ್ಥಗಿತಗೊಳಿಸಿದ ಮೇಲೂ ರೂಢಿಯಂತೆ ಕೆಲವು ಲಾರಿಗಳು ಆ ಘಟಕಕ್ಕೆ ಹೋಗುವ ಸಂಭವವಿದೆ. ಡಿಸೆಂಬರ್‌ 1ರಿಂದ ಒಂದೇ ಒಂದು ಲಾರಿಯೂ ಹೋಗದಂತೆ ನೋಡಿಕೊಳ್ಳಲು ಈ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಹೇಳಿದರು.
‘ಎಸ್‌.ಬಿಂಗಿಪುರ, ಟೆರ್ರಾ ಫಾರ್ಮಾ, ಲಕ್ಷ್ಮಿಪುರ ಹಾಗೂ ಮಾವಳ್ಳಿಪುರ ಘಟಕಗಳಿಗೆ ತ್ಯಾಜ್ಯ ಸಾಗಾಟ ಮುಂದುವರಿಯಲಿದೆ.

ದೊಡ್ಡಬಳ್ಳಾಪುರದ ಚಿಗರನಹಳ್ಳಿಯಲ್ಲಿ ಎಂಎಸ್‌ಜಿಪಿ ಘಟಕ ಆರಂಭವಾಗಿದ್ದು ನಿತ್ಯ 500 ಟನ್‌ ತ್ಯಾಜ್ಯ ಸಂಸ್ಕರಣೆ ಮಾಡುತ್ತಿದೆ. ಕೆಸಿಡಿಸಿ ಘಟಕದ ಸಂಸ್ಕರಣಾ ಸಾಮರ್ಥ್ಯವನ್ನು ನಿತ್ಯ 300 ಟನ್‌ನಿಂದ 500 ಟನ್‌ಗೆ ಹೆಚ್ಚಿಸಲಾಗುತ್ತಿದೆ’ ಎಂದು ಪರ್ಯಾಯ ಮಾರ್ಗಗಳ ಬಗೆಗೆ ವಿವರಿಸಿದರು.

‘ಡಿಸೆಂಬರ್‌ 1ರಿಂದ ನಗರದಲ್ಲಿ ಕಡ್ಡಾಯವಾಗಿ ಕಸ ವಿಂಗಡಣೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಈಗಾಗಲೇ 173 ವಾರ್ಡ್‌ಗಳಲ್ಲಿ ಒಣಕಸ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಗಿದೆ. ಅವುಗಳಲ್ಲಿ 50 ಕೇಂದ್ರಗಳು ನಿಷ್ಕ್ರಿಯವಾಗಿದ್ದವು. ವಾರದಲ್ಲಿ ಆ ಕೇಂದ್ರಗಳಿಗೂ ಪುನಶ್ಚೇತನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಏಳು ಹೊಸ ಜಾಗಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಎಲ್ಲ ತಯಾರಿಗಳು ನಡೆದಿವೆ. ಈ ಘಟಕಗಳು 

ಕಾರ್ಯಾರಂಭ ಮಾಡಿದರೆ ಪ್ರತಿದಿನ 2050 ಟನ್‌ ಕಸವನ್ನು ಸಂಸ್ಕರಣೆ ಮಾಡಬಹುದು’ ಎಂದು ಹೇಳಿದರು. ‘ಪೂರ್ವ ವಲಯದಲ್ಲಿ ಉತ್ಪಾದನೆ ಆಗುತ್ತಿರುವ ಕಸ ಅಲ್ಲಿಯೇ ವಿಲೇವಾರಿ ಆಗುತ್ತಿರುವುದು ಹೊರೆಯನ್ನು ಸಾಕಷ್ಟು ಕಡಿಮೆ ಮಾಡಿದೆ’ ಎಂದು ವಿವರಿಸಿದರು.


ರಾತ್ರಿಯೇ ಸ್ಥಗಿತ: ನಗರದಿಂದ ಘನತ್ಯಾಜ್ಯ ಹೊತ್ತು ಬರುತ್ತಿದ್ದ ಕಾಂಪ್ಯಾಕ್ಟರ್‌ ಹಾಗೂ ಲಾರಿಗಳು ಗುರುವಾರ ರಾತ್ರಿ ಕೊನೆಯ ಬಾರಿಗೆ ಘಟಕದಲ್ಲಿ ಕಸ ತಂದು ಸುರಿದಿವೆ. ಶುಕ್ರವಾರ ಬೆಳಗಿನಿಂದ ಒಂದು ಲಾರಿಯೂ ಬಂದಿಲ್ಲ. ಬದಲು ಯಾವುದೇ ಲಾರಿಯೂ ಕಸಹೊತ್ತು ಮಂಡೂರಿಗೆ ಬರುವುದಿಲ್ಲ ಎನ್ನುವ ಸಂದೇಶ ಬಿಬಿಎಂಪಿಯಿಂದ ಗ್ರಾಮಸ್ಥರಿಗೆ ಬಂದಿದೆ.

‘ಇನ್ನುಮುಂದೆ ಮಂಡೂರು ಘಟಕಕ್ಕೆ ಕಸ ಕಳುಹಿಸುವುದಿಲ್ಲ. ಒಂದುವೇಳೆ ಲಾರಿಗಳು ಬಂದರೆ ಚಾಲಕರೊಂದಿಗೆ ವಾದಕ್ಕೆ ಇಳಿಯದೆ ನಮ್ಮ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವರೇ ಲಾರಿಗಳನ್ನು ವಾಪಸು ಕಳುಹಿಸಲಿದ್ದಾರೆ ಎಂಬ ಮಾಹಿತಿಯನ್ನು ವಿಶೇಷ ಆಯುಕ್ತರು ಈಗಾಗಲೇ ನಮಗೆ ನೀಡಿದ್ದಾರೆ’ ಎಂದು ಗ್ರಾಮಸ್ಥ ಗೋಪಾಲ್‌ ರಾವ್‌ ತಿಳಿಸಿದರು. ‘ಮಂಡೂರು ಜನತೆಗೆ ಮಾತು ಕೊಟ್ಟಂತೆ ಬಿಬಿಎಂಪಿ ಈಗ ಕಸ ಒಯ್ಯುವುದನ್ನು ನಿಲ್ಲಿಸಿದೆ. ಇದಕ್ಕೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಅಭಿನಂದನಾರ್ಹರು’ ಎಂದು ಮೇಯರ್‌ ಎನ್‌.ಶಾಂತಕುಮಾರಿ ಹೇಳಿದರು.

‘ನಗರದ ಕಸವನ್ನು ಹೊರೆಯಾಗಿ ಇಟ್ಟುಕೊಳ್ಳದೆ ಸಂಸ್ಕರಣೆ ಕಡೆಗೆ ಗಮನ ಹರಿಸಿದ್ದರಿಂದ ಇನ್ನುಮುಂದೆ ಇಂತಹ ಸಮಸ್ಯೆ  ಪುನರ್‌ಸೃಷ್ಟಿಯಾಗದು’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್‌.ಆರ್‌. ರಮೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಂಡೂರಿಗೆ ಕಸ ತರುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಅಲ್ಲಿನ ಗ್ರಾಮಸ್ಥರು ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಪ್ರತಿಭಟನೆ ತೀವ್ರಗೊಂಡಾಗ ನಗರದ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಬಿಗಡಾಯಿಸಿ ಅಂತರರಾಷ್ಟ್ರೀಯ ಸುದ್ದಿಯಾಗಿತ್ತು.

ಕಸ ಸುರಿವುದನ್ನು ಸ್ಥಗಿತಗೊಳಿಸಲು ಬಿಬಿಎಂಪಿ ಮೇಲಿಂದ ಮೇಲೆ ಗಡುವನ್ನು ವಿಸ್ತರಿಸುತ್ತಲೇ ಬಂದಿತ್ತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ ಗ್ರಾಮಸ್ಥರು ನಾಲ್ಕು ತಿಂಗಳ ಹಿಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಮುಖ್ಯಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಲ್ಲಿ ಡಿಸೆಂಬರ್‌ 1ರಿಂದ ಕಸ ಸಾಗಾಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು. ಈ ಸಂಬಂಧ ಲಿಖಿತ ಹೇಳಿಕೆಯನ್ನೂ ಗ್ರಾಮಸ್ಥರು ಪಡೆದಿದ್ದರು.

ಮಂಡೂರಿಗೆ ಪರ್ಯಾಯವಾಗಿ ಘನ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಒಂದು ಘಟಕ ಸೇರಿದಂತೆ ಆರು ಘನತ್ಯಾಜ್ಯ ಸಂಸ್ಕರಣಾ ಘಟಕಗಳು ಸಿದ್ಧವಾಗಿವೆ’ 

– ರಾಮಲಿಂಗಾರೆಡ್ಡಿ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT