ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳೇ ತೋಟದ ಮಾಲೀಕರು

ಬೆಳೆವ ಸಿರಿ 10
Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಇದೊಂದು ಸರ್ಕಾರಿ ಪ್ರೌಢಶಾಲೆ. ಐದಾರು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡ 100ರ ಸಾಧನೆ. ಇದರ ಔಚಿತ್ಯದ ಬಗ್ಗೆ ವಿದ್ಯಾರ್ಥಿಗಳನ್ನು ಕೇಳಿದರೆ ‘ನಾವು ಶಾಲಾ ಕೊಠಡಿಯಲ್ಲಿ ಕಲಿಯುವುದಕ್ಕಿಂತ ಹೆಚ್ಚು ಕಲಿತದ್ದು ಶಾಲಾ ಆವರಣದಲ್ಲಿರುವ ಪರಿಸರದ ಮಧ್ಯೆ. ಇಲ್ಲಿರುವ ಕೈ ತೋಟದಲ್ಲಿ ಗುಂಪು ಅಧ್ಯಯನವೇ ನಮ್ಮ ಯಶಸ್ಸಿನ ಗುಟ್ಟು’ ಎನ್ನುತ್ತಾರೆ.

ಈ ಶಾಲೆ ಇರುವುದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಜಡೇಕುಂಟೆ ಗ್ರಾಮದ ಬಳಿ. ಇಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸದ ಜೊತೆ ಪರಿಸರ ಜಾಗೃತಿ, ರಕ್ಷಣೆ, ಪ್ರೀತಿಯ ಕಿಚ್ಚು ಹಚ್ಚಿಸಲಾಗಿದೆ. ಶಾಲೆಯ ಎದುರು ಹುಲ್ಲುಹಾಸು, ವಿವಿಧ ಆಲಂಕಾರಿಕ ಗಿಡಗಳನ್ನು ಬೆಳೆಸಿ ಅದರ ನಡುವೆ ದಿನದ ಒಂದೆರಡು ಗಂಟೆಗಳ ಕಾಲ ಪರಿಸರದ ಮಡಿಲಿನಲ್ಲಿ ಕಲಿಸಲಾಗುತ್ತದೆ.

ಇನ್ನೊಂದೆಡೆ, ಗಿಡ ಮರಗಳು ಬಾಡಬಾರದೆಂದು ಬೇಸಿಗೆ ರಜೆಯಲ್ಲೂ  ಅವುಗಳಿಗೆ ನೀರೆರೆದು ಹಸಿರ ಪ್ರೀತಿಯನ್ನು ಚಿಮ್ಮಿಸುತ್ತಿದ್ದಾರೆ ಇದೇ ತಾಲ್ಲೂಕಿನ ಕಾಪರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು.

ಶಾಲೆಯ ದ್ವಾರದೊಳಕ್ಕೆ ಪ್ರವೇಶಿಸುವಾಗಲೇ ಈ ಶಾಲೆಗಳಲ್ಲಿನ ಪರಿಸರದ ಪ್ರೀತಿ ಎದ್ದು ಕಾಣಿಸುತ್ತದೆ. ‘ಪರಿಸರದ ಮಡಿಲಿನಲ್ಲಿ ಕಲಿ, ಜ್ಞಾನವಂತನಾಗುತ್ತೀಯ’, ‘ಗಿಡಗಳನ್ನು ಬೆಳೆಸು-ಉಳಿಸು  ನಿನ್ನನ್ನು ಅವುಗಳು ಉಳಿಸುವವು‘, ‘ಇದು ಸುಂದರ ತೋಟದ ಮಂದಿರ’, ‘ಕಾಡು ರಕ್ಷಣೆಯೇ ನಮ್ಮ ರಕ್ಷಣೆ’... ಹೀಗೆ ಅನೇಕ ಸಂದೇಶಗಳನ್ನು ಸಾರುವ ನಾಮಫಲಕಗಳು ಜಡೇಕುಂಟೆ ಶಾಲೆಯದ್ದಿದ್ದರೆ, ಶಾಲೆಯ ಪ್ರವೇಶ ದ್ವಾರದಲ್ಲಿಯೇ ನೂರಾರು ಬಗೆಯ ಗಿಡ ಮರಗಳನ್ನು ಪೋಷಿಸಿದ್ದಾರೆ ಕಾಪರಹಳ್ಳಿಯ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳೆಲ್ಲ ತಂತಮ್ಮ ತೋಟಗಳ ಮಾಲೀಕರು. ಗಿಡ- ಮರಗಳ ಪೋಷಣೆ ಅವರದ್ದೇ ಜವಾಬ್ದಾರಿ.

ಬಿಸಿಯೂಟಕ್ಕೆ ತಂತಮ್ಮ ಶಾಲೆಗಳಲ್ಲಿಯೇ ಕೆಲವು  ತರಕಾರಿಗಳನ್ನು ಬೆಳೆದುಕೊಳ್ಳುವುದು ಮಾಮೂಲು. ಆದರೆ ಈ ಶಾಲೆಗಳ ಶಿಕ್ಷಕರು ಮಕ್ಕಳಿಗೆ ಈ ತರಕಾರಿಗಳ ಜೊತೆ ಹಲವಾರು ಬಗೆಯ ಗಿಡ- ಮರಗಳನ್ನು ಬೆಳೆಸುವುದನ್ನೂ ಹೇಳಿಕೊಡುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಲೆಯ ಒಳಗೆ ಕೂತು ಆ ಪಾಠ, ಈ ಪಾಠ ಎಂದು ಹೇಳಿಕೊಡುವ ಬದಲು ಕೈತೋಟದ ಪಾಠವನ್ನೂ ಹೇಳಿಕೊಡುತ್ತಿರುವುದು ವಿಶೇಷ.

ಈ ಶಾಲೆಗಳ ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಸಾಕ್ಷಿಯಾಗಿ ಶಾಲೆಯ ಸುತ್ತಲೂ ಹುಣಸೆ, ಮಾವು, ಬೇವು, ನೇರಳೆ, ಆಲ, ಮಲ್ಲಿಗೆ ಬಳ್ಳಿ, ತೆಂಗು, ನುಗ್ಗೆ, ಟೊಮೆಟೊ, ಅಮಟೆ, ದೇವ ಕಮಲ, ಕರಿಬೇವು, ಬಿದಿರು,  ಕಾಡು ಸಾಸಿವೆ, ಸಿಲ್ವರ್, ಹೊಂಗೆ, ಅಶೋಕ, ಸೀಬೆ, ತುಳಸಿ, ಸಂಪಿಗೆ, ಪಪ್ಪಾಯ, ದಾಳಿಂಬೆ, ಮಾವು ಸೇರಿದಂತೆ ವಿವಿಧ ಮರ-ಗಿಡಗಳು ಈ ಶಾಲೆಯಲ್ಲಿ ತುಂಬಿಹೋಗಿವೆ.

‘ಇಂದಿನ ಪೀಳಿಗೆಗೆ ಪರಿಸರ ಜ್ಞಾನ ಕಡಿಮೆಯಾದ ಕಾರಣ ಹಲವಾರು ಜಾತಿಯ ಮರಗಳು ಪ್ರಸ್ತುತ ಕಾಲಮಾನದಲ್ಲಿ ನಮ್ಮೊಂದಿಗೆ ಇಲ್ಲವಾಗಿದೆ . ಅವುಗಳ ಬಗ್ಗೆ ಚಾರ್ಟ್‌್‌ಗಳನ್ನು ತಯಾರು ಮಾಡಿ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಮಾಡುತ್ತಿದ್ದೇವೆ’ ಎನ್ನುತ್ತಾರೆ ಜಡೇಕುಂಟೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನಪ್ಪ, ವಿಜ್ಞಾನ ಶಿಕ್ಷಕರ ಯು.ರಾಜಣ್ಣ.

‘ದಿನನಿತ್ಯ ಒಂದೇ ತೆರನಾದ ಪಾಠ ಕೇಳಿ ಕೇಳಿ ಬೇಸರಗೊಂಡಿರುವ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡಿ ಪುನಃ ಅವರನ್ನು ಪಾಠದತ್ತ ಸೆಳೆಯಲು ಇಲ್ಲಿಯ ಶಿಕ್ಷಕರು ಕಂಡುಕೊಂಡಿರುವ ಮಾರ್ಗ ಪರಿಸರಪಾಠ. ದಿನದ ಒಂದು ಪಿರಿಯಡ್ಡನ್ನು ತೋಟದ ಪಾಲನೆಗೆ ಇಲ್ಲಿ ಮೀಸಲು ಇಡಲಾಗಿದೆ’ ಎನ್ನುತ್ತಾರೆ ಕಾಪರಹಳ್ಳಿ ಶಾಲೆಯ ಮುಖ್ಯಾಧ್ಯಾಪಕಿ ರಂಗಮ್ಮ ಹಾಗೂ ಸಹ ಶಿಕ್ಷಕ ಘಟ್ಟಪ್ಪ.

ಹಲವಾರು ಪ್ರಶಸ್ತಿಗಳು
ಜಡೇಕುಂಟೆ ಶಾಲೆಗೆ ಹಸಿರು ಶಾಲೆ, ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯಿಂದ ಉತ್ತಮ ಪರಿಸರ ಪ್ರಶಸ್ತಿ, ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದರೆ, ಕಾಪರಹಳ್ಳಿ ಶಾಲೆಗೆ ಉತ್ತಮ ಶಾಲಾ ಪ್ರಶಸ್ತಿ, ನಮ್ಮೂರ ಶಾಲೆ ಪ್ರಶಸ್ತಿ, ಜಿಲ್ಲಾ ಮಟ್ಟದ ಪ್ರಶಸ್ತಿ, ತಾಲ್ಲೂಕು ಮಟ್ಟದ ಪ್ರಶಸ್ತಿಗಳು ಲಭಿಸಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT