ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೈಯಲಿ ಮಾದರಿ ತೋಟ

ಬೆಳೆವ ಸಿರಿ - 7
Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇದು ಬರೀ ಪಾಠ ಶಾಲೆಯಲ್ಲ. ಇಲ್ಲಿ  ಕನ್ನಡ, ಇಂಗ್ಲಿಷ್‌, ಗಣಿತ, ಸಮಾಜ, ವಿಜ್ಞಾನ ಅಂತೆಲ್ಲ ವಿದ್ಯಾರ್ಥಿಗಳ ತಲೆ ತುಂಬಾ ಪಠ್ಯವನ್ನು ತುರುಕು ವುದಿಲ್ಲ.  ಬದಲಿಗೆ ಇವುಗಳೊಂದಿಗೆ ಇಲ್ಲಿ ಕೃಷಿಯ ಪಾಠಗಳನ್ನೂ ಹೇಳಿಕೊಡಲಾಗುತ್ತದೆ. ಪರಿಸರ ಒಡನಾಟವನ್ನು ಮಕ್ಕಳಲ್ಲಿ ಬಿತ್ತಲಾಗುತ್ತಿದೆ. ಹಸಿರಿನ ಜೊತೆ ಮಕ್ಕಳಿಗೆ ಪಾಠ ನಡೆಯುತ್ತದೆ. ಇದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕಂಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ.‌ ‘ಹೆಚ್.ಜಿ.ಗೋವಿಂದೇಗೌಡ ಪ್ರಶಸ್ತಿ ಪುರಸ್ಕೃತ ಶಾಲೆ’ ಎಂದೇ ಇದು ಚಿರಪರಿಚಿತ.

ಗಿಡ- ಮರಗಳ ರಾಶಿ ರಾಶಿ
ಶಾಲೆಯ ಸುತ್ತಲೂ ವೈವಿಧ್ಯಮಯ ಗಿಡಗಳಿವೆ.  ಹಲವು ಬಗೆಯ ಹಣ್ಣು, ಹೂವು, ತರಕಾರಿಗಳ  ಗಿಡಮರಗಳು ಇಲ್ಲಿಯ ಶಿಕ್ಷಕರ ಮತ್ತು ಮಕ್ಕಳ ಕೃಷಿ ಪ್ರೇಮಕ್ಕೆ ಸಾಕ್ಷಿಯಂತೆ ಬೆಳೆದು ನಿಂತಿವೆ. ಮುಖ್ಯಶಿಕ್ಷಕರಾಗಿ ನಿಯೋಜಿತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕ ಕೆ.ಮರೀಗೌಡ ಈ ಶಾಲೆಗೆ ಬಂದು 10 ವರ್ಷಗಳಾಗಿರುವ ನೆನಪಿಗಾಗಿ  ಅವರೇ 10 ತೆಂಗಿನ ಮರಗಳನ್ನು ತಂದು ನೆಟ್ಟಿದ್ದಾರೆ. ಅದರ ಜೊತೆಗೆ ಅಶೋಕ, ಬಸುರಿ ಮರ, ಸಂಪಿಗೆ, ನೇರಳೆ, ಸಿಲ್ವರ್, ಆಲ, ಹೊಂಗೆ, ಬಾಗೆ, ಅರಳಿ ಮರ, ಹಲಸು, ಸೀಬೆ ಮರಗಳೂ ಶಾಲಾ ಆವರಣದಲ್ಲಿವೆ.

ಸೀಬೆಗಿಡ, ಸಪೋಟ, ದಾಳಿಂಬೆ, ನಿಂಬೆ, ಬಾಳೆ ಹಾಗೂ ಬಿಸಿಯೂಟಕ್ಕೆ ನೆರವಾಗುವ ಕೀರೆ ಮಡಿ, ಟೊಮೆಟೊ, ಬದನೆ, ಪಾಲಾಕ್, ಕೊತ್ತಂಬರಿ, ಮೆಂತ್ಯ, ಮೂಲಂಗಿ, ಬೆಂಡೆಕಾಯಿ, ಸಪ್ಸಿಗೆ ಸೊಪ್ಪು, ಕೀರೆಸೊಪ್ಪು, ಹಸಿರು ಮೆಣಸಿನ ಕಾಯಿ, ನುಗ್ಗೆ ಗಿಡಗಳು ಫಸಲು ನೀಡುತ್ತಿವೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಶಾಲೆಯ ಅನುದಾನದಿಂದ ಒಂದು ಗಿಡಕ್ಕೆ 10 ರೂಪಾಯಿಗಳಂತೆ 60 ಪಪ್ಪಾಯಿ ಗಿಡಗಳನ್ನು ತಂದು ಪಪ್ಪಾಯಿ ತೋಟ ನಿರ್ಮಿಸಲಾಗಿದೆ. ಇಂದು ಫಲ ಕೊಡುವ ಹಂತಕ್ಕೆ ಬಂದು, ವಿದ್ಯಾರ್ಥಿಗಳೆಲ್ಲ ನಲಿದಾಡುತ್ತಿದ್ದಾರೆ.

ನೀರಿನ ಸದ್ಬಳಕೆ
ಈ ಶಾಲಾ ಆವರಣದಲ್ಲಿರುವ ನೀರಿನ ಟ್ಯಾಂಕ್ ಭರ್ತಿಯಾದ ನಂತರ ಹರಿದುಬರುವ ನೀರನ್ನು ಸಂಗ್ರಹಿಸಲು ಗುಂಡಿ ಮಾಡಲಾಗಿದೆ. ಇದು ಅಂತರ್ಜಲಕ್ಕೂ ಸಹಕಾರಿಯಾಗಿದೆ. ‌25 ವರ್ಷಗಳ ಹಿಂದೆ  ಎರಡು ಹೆಂಚು ಕೊಠಡಿ ಹೊಂದಿದ್ದ ಈ ಶಾಲೆಯಲ್ಲಿ ಇಂದು 160 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂಲ ಸೌಕರ್ಯವೂ ಇಲ್ಲದೇ ಆರಂಭ ವಾಗಿದ್ದ ಈ ಶಾಲೆಯೀಗ ಸುಸಜ್ಜಿತವಾದ 10 ಕೊಠಡಿಗಳ ತಾರಸಿ ಕಟ್ಟಡ ಹೊಂದಿದೆ.

ಒಂದು ಪ್ರಯೋಗಾಲಯ, ಒಂದು ಕಂಪ್ಯೂಟರ್ ಕೊಠಡಿ, ಒಂದು ಶಿಕ್ಷಕರ ಕೊಠಡಿ, ಒಂದು ಮುಖ್ಯಶಿಕ್ಷಕರ ಕೊಠಡಿ, ಹೆಣ್ಣು ಮಕ್ಕಳ ಆಪ್ತ ಸಲಹಾ ಕೊಠಡಿಗಳನ್ನೂ ಶಾಲೆ ಹೊಂದಿದೆ. ಇವೆಲ್ಲ ಸಾಧನೆಯಿಂದಾಗಿ ಈ ಶಾಲೆ ‘ತಾಲ್ಲೂಕು ಉತ್ತಮ ಶಾಲೆ’ ಎಂಬ ಪ್ರಶಸ್ತಿ ಪಡೆದಿದೆ. ಶ್ರೀ ಹೆಚ್.ಜಿ. ಗೋವಿಂದೇಗೌಡರ ಹೆಸರಿನ ಅತ್ಯುತ್ತಮ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆ, ಕೆ.ಅಮರನಾರಾಯಣ ಉತ್ತಮ ಪರಿಸರ ಮಿತ್ರ ಶಾಲೆ ಪ್ರಶಸ್ತಿಗಳನ್ನೂ ಇದು ತನ್ನದಾಗಿಸಿಕೊಂಡಿದೆ.

ಬುಡಕಟ್ಟು ಮಕ್ಕಳಿಗೆ ಶಿಕ್ಷಣ
ಶಿಕ್ಷಣದಿಂದ ದೂರವೇ ಉಳಿಯುವ ಬುಡಕಟ್ಟು ಸಮುದಾಯದವರ ಮಕ್ಕಳಲ್ಲಿ  ಅಕ್ಷರ ಪ್ರೀತಿಯ ಜೊತೆಗೆ ಕೃಷಿ ಪ್ರೇಮವನ್ನೂ ಮೂಡಿಸುವ ಕಾಯಕ ಮಾಡುತ್ತಿದೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ. ಶಾಲೆಯ ಆವರಣದಲ್ಲಿ ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಬೆಳೆಯ ಲಾಗುತ್ತಿದೆ. ಪರಿಸರದ ಬಗ್ಗೆ ಜಾಗೃತಿ ಉಂಟು ಮಾಡಬೇಕೆಂಬ ಉದ್ದೇಶದಿಂದ ಶಾಲೆಯ ಸುತ್ತಲೂ 160ಕ್ಕೂ ಹೆಚ್ಚು ಗಿಡ ಮರಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.

1896 ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ 234 ವಿದ್ಯಾರ್ಥಿಗಳಿದ್ದು,  9 ಮಂದಿ ಶಿಕ್ಷಕರಿದ್ದಾರೆ. ಶಿಕ್ಷಕರ ಜೊತೆ ಯಲ್ಲಿ ಇಲ್ಲಿನ ಮಕ್ಕಳು ಸಹ ಕೈತೋಟ ವನ್ನು ಮುತುವರ್ಜಿಯಿಂದ ನಿರ್ವಹಿಸು ತ್ತಾರೆ. ಶಾಲೆಯ ಅವಧಿಗೆ ಸ್ವಲ್ಪ ಮುಂಚೆ ಬಂದು ಕೈತೋಟದ ಕೆಲಸಗಳಲ್ಲಿ ಎಲ್ಲರೂ ನಿರತ ರಾಗುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಲೆಯ ಆವರಣ ಬರಡಾಗಿತ್ತು. ಸುತ್ತಲೂ ಕಲ್ಲು ಬಂಡೆಗಳೇ ತುಂಬಿದ್ದವು. ಆದರೆ ಬರಡಾಗಿದ್ದ ಜಮೀನಿನಲ್ಲಿ ಹಸಿರು ಉಕ್ಕಿಸಿದವರು ಐದು ವರ್ಷಗಳ ಹಿಂದೆ ವರ್ಗಾವಣೆಯಾಗಿ ಬಂದ ಮುಖ್ಯ ಶಿಕ್ಷಕ ಮೇಘನಾಥ  ಅವರು.

ಇವರು ಇಲ್ಲಿ ಗಿಡಗಳನ್ನು ನೆಡಬೇಕು ಎಂದುಕೊಂಡಿದ್ದಾಗ, ಯಾವುದೇ ಮರ ಗಿಡಗಳು ಈ ಜಾಗದಲ್ಲಿ ಬೆಳೆಯಲು ಸಾಧ್ಯವಿಲ್ಲವೆಂದು ಹಿಂದಿನ ಶಿಕ್ಷಕರು ಹೇಳಿದ್ದರು. ಆದರೆ ಮೇಘನಾಥ ಅವರು ಈ ಮಾತನ್ನು ಸವಾಲಾಗಿ ಸ್ವೀಕರಿಸಿದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಇದರಿಂದಾಗಿ ಇಂದು ತೆಂಗು, ಹುಣಸೆ, ನುಗ್ಗೆ, ಕರಿಬೇವು, ಸುಬಾಬುಲ್ಲಾ, ಔಡಲ, ಬದನೆ ಗಿಡ, ಸೋರೆ ಬಳ್ಳಿ, ಮೆಣಸಿನ ಕಾಯಿ ಗಿಡ, ಪಾಲಾಕ್‌,  ಮೆಂತ್ಯೆ, ಟೊಮೆಟೊ, ಹೀರೆಕಾಯಿ, ಚವಳಿಕಾಯಿ... ಹೀಗೆ ಹಲವಾರು ಗಿಡ-ಮರ, ಬಳ್ಳಿಗಳು ತುಂಬಿ ತುಳುಕಾಡುತ್ತಿವೆ.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಷ್ಟೆಲ್ಲಾ ಶ್ರಮ ವಹಿಸಿ ದುಡಿಯುತ್ತಿದ್ದರೂ ಇದುವರೆಗೆ ಈ ಶಾಲೆಗೆ ಒಂದು ರಕ್ಷಣಾ ಗೋಡೆಯನ್ನು ಸರ್ಕಾರ ಕಟ್ಟಿಸಿಕೊಟ್ಟಿಲ್ಲ. ಇದರಿಂದಾಗಿ ಮಾಡಿದ ಶ್ರಮವೆಲ್ಲ ವ್ಯರ್ಥವಾಗುತ್ತಿವೆ. ಕಷ್ಟಪಟ್ಟು ಬೆಳೆದು ಗಿಡಗಳೆಲ್ಲ ದನ ಕರುಗಳ ಪಾಲಾಗುತ್ತಿವೆ ಎಂದು ಶಿಕ್ಷಕರು ಬೇಸರದಿಂದ ನುಡಿಯುತ್ತಾರೆ. ಜಾನುವಾರುಗಳು ಬೆಳೆದ ಗಿಡಗಳನ್ನು ತಿನ್ನುತ್ತಿರುವ ಕಾರಣ, ಬಿಸಿ ಯೂಟಕ್ಕೆ ದಿನವೂ ತರಕಾರಿ ಸಿಗುತ್ತಿಲ್ಲ ಎನ್ನುವುದು ಇವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT