ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನೇ, ಕನ್ನಡ ಶಾಲೆಗೆ ಸೇರಿಸಿದ್ದಕ್ಕೆ ನನ್ನನ್ನು ಕ್ಷಮಿಸು...

Last Updated 21 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ತ್ತೆ ಬಂದಿದೆ ಕನ್ನಡ ರಾಜ್ಯೋತ್ಸವ. ಕನ್ನಡಪರ ಹೋರಾಟ, ಭಾಷಣ ಗರಿಗೆದರುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕಳುಹಿಸಿದವರು ಕೂಡಾ  ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮಾತೃಭಾಷೆ ಶಿಕ್ಷಣದಿಂದ ಮಾತ್ರ ಸಾಧ್ಯ. ಕನ್ನಡ ಮಾಧ್ಯಮ ಶಾಲೆಗಳಿಗೇ ಮಕ್ಕಳನ್ನು ಕಳಿಸಿ  ಎಂದು ಬೊಬ್ಬಿರಿಯುತ್ತಿದ್ದಾರೆ. ಇಂದಿನ ದಿನಗಳಲ್ಲಿ ಇದು ಎಷ್ಟು ಪ್ರಸ್ತುತ?

ಹೇಳಿಕೇಳಿ ಈಗ ಕಂಪ್ಯೂಟರ್ ಯುಗ. ದೈನಂದಿನ ಜೀವನದಲ್ಲಿ ಇಂಗ್ಲಿಷ್ ಹಿಂದಿ ಗಿಂತಲೂ ಹೆಚ್ಚು ಬೇಕು. ಕನ್ನಡದ ಶ್ರೇಷ್ಠ ಸಾಹಿತಿಗಳ ಮಾತಿನಲ್ಲೂ ಕನ್ನಡಕ್ಕಿಂತ ಇಂಗ್ಲಿಷ್ ಪದಗಳ ಬಳಕೆ ಜಾಸ್ತಿ ಇರುತ್ತದೆ. ಅಡುಗೆ ಮನೆಯಲ್ಲೂ ನೈಫ್, ಫ್ರೂಟ್, ರೈಸ್, ಬನಾನ, ವೆಜಿಟೇಬಲ್, ಫಿಶ್, ಚಿಕನ್ ಹೀಗೆ ಇಂಗ್ಲಿಷ್ ವಿಜೃಂಭಿಸಿ ಕನ್ನಡ ಮಾಯವಾಗಿದೆ.

ನಾನು ಕನ್ನಡ ಮಾಧ್ಯಮದಲ್ಲಿ ಕಲಿತೆ. ಕನ್ನಡಾ ಭಿಮಾನದಿಂದ ಮಗನನ್ನೂ ಕನ್ನಡ ಮಾಧ್ಯಮ ಶಾಲೆಗೇ ಸೇರಿಸಿದೆ. ಅವನು ಈಗ ಸರ್ಕಾರಿ ಶಾಲೆಯೊಂದರಲ್ಲಿ ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಇದೇ ನಾನು ಮಾಡಿದ ತಪ್ಪು. ನಾನು ಕಾಲಕ್ಕೆ ತಕ್ಕ ಕೋಲ ಕಟ್ಟಬೇಕಿತ್ತು.

ಅವನನ್ನು ಇಂಗ್ಲಿಷ್ ಮೀಡಿಯಂಗೆ ಕಳಿಸಬೇಕಿತ್ತು. ಅವನ ಓರಗೆಯವರು ಸ್ವಾಭಿಮಾನದಿಂದ  ಠುಸ್‌ಪುಸ್  ಎಂದು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಅವನು ಮಾತಾಡಲು ಬಾರದೆ ಕೀಳರಿಮೆಯಿಂದ ಬಳಲುತ್ತಿದ್ದಾನೆ. ನನ್ನ ಕೈಯಾರೆ ಅವನ ಭವಿಷ್ಯವನ್ನು ಹಾಳು ಮಾಡಿದೆ ಎಂದು ಈಗ ನನಗೆ ಅನಿಸುತ್ತ ಇದೆ. ಹೀಗೆ ಅನಿಸಲೂ ಕಾರಣಗಳಿವೆ. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ನನಗೆ ಇಂಗ್ಲಿಷ್ ಶಬ್ದ ಗೊತ್ತಿದ್ದರೂ ಸ್ಪೆಲ್ಲಿಂಗ್ ಗೊತ್ತಿಲ್ಲ.

ಮೊಬೈಲಿನಲ್ಲಿ ಒಂದು ಸಂದೇಶ ಬರೆಯಬೇಕಾದರೂ ಶಬ್ದಕೋಶ ಜತೆಯಲ್ಲಿ ಇರಬೇಕಾಗುತ್ತದೆ. ಹೊರಗಿನಿಂದ ಬರುವ ಸಂದೇಶಗಳೂ ಹೆಚ್ಚು ಇಂಗ್ಲಿಷಿನಲ್ಲಿಯೇ ಇರುತ್ತವೆ. ಅವುಗಳ ಅರ್ಥ ಹುಡುಕಲು ಪುನಃ ಶಬ್ದಕೋಶದ ಮೊರೆ ಹೋಗಬೇಕಾಗುತ್ತದೆ.

ಇಂಟರ್‌ನೆಟ್‌ಗೆ ಹೋಗಿ ಯಾವುದೋ ಒಂದು ವಿಷಯದ ಬಗ್ಗೆ ಮಾಹಿತಿ ಪಡೆಯ ಬೇಕೆಂದರೆ ಇಂಗ್ಲಿಷ್ ಚೆನ್ನಾಗಿ ಗೊತ್ತಿಲ್ಲದೆ ಕಷ್ಟಪಡಬೇಕಾಗುತ್ತದೆ. ಹವ್ಯಾಸಿ ಪತ್ರಕರ್ತೆ ಯಾಗಿ ಕನ್ನಡನಾಡಿನ ಯಾವುದೋ ದೊಡ್ಡ ಸಾಧನೆ ಮಾಡಿದ ಒಬ್ಬ ವ್ಯಕ್ತಿಯ ಸಂದರ್ಶನ ಮಾಡಬೇಕೆಂದು ಹೊರಟರೆ ಅವರಿಗೆ ಕನ್ನಡ ಸರಿಯಾಗಿ ಗೊತ್ತಿರುವುದಿಲ್ಲ. ಇಂಗ್ಲಿಷಿನಲ್ಲಿ ಸಂವಹನ ಮಾಡಲು ನನಗೆ ಬರುವುದಿಲ್ಲ. ಆಗೆಲ್ಲ ನನಗೆ ನಾಚಿಕೆಯಿಂದ ಭೂಮಿಯೇ ಬಾಯ್ದೆರೆದು ನನ್ನನ್ನು ನುಂಗಬಾರದೆ ಎಂದು ಅನಿಸಿದ್ದೂ ಇದೆ.

ನಗರಗಳಿಗೆ ಹೋದರೆ ಇಂಗ್ಲಿಷ್ ಜ್ಞಾನದ ಕೊರತೆಯಿಂದ ಅಲ್ಲಿರುವ ಮಾಲ್‌ಗಳಲ್ಲಿ ಬೇಕಾದಂತೆ ಸಾಮಾನು ಖರೀದಿಸಲು ಸಾಧ್ಯವಾಗುವುದಿಲ್ಲ. ‌ಗ್ರಾಮೀಣ ಪ್ರದೇಶದ ನಮ್ಮ ಊರಿನ ಬ್ಯಾಂಕಿನಲ್ಲೂ ವ್ಯವಹಾರ ಮಾಡಲು ಇಂಗ್ಲಿಷೇ ಬೇಕು. ಇಂಗ್ಲಿಷ್ ಸರ್ವಾಂತರ್ಯಾಮಿ. ಈ ಜಾಗತೀಕರಣ ಯುಗದಲ್ಲಿ ಕನ್ನಡ ಬಾರದಿದ್ದರೂ ಬದುಕಬಹುದು.

ಇಂಗ್ಲಿಷ್ ಬಾರದಿದ್ದರೆ ಬದುಕಲು ಸಾಧ್ಯವಿಲ್ಲ. ಇದು ನನ್ನ ಅನುಭವ. ಕನ್ನಡ ನಮ್ಮ ಮಾತೃಭಾಷೆಯಾದುದರಿಂದ ಕಲಿಯಬೇಕೆಂದೇನೂ ಇಲ್ಲ. ಹುಟ್ಟಿನಿಂದಲೇ ಬರುತ್ತದೆ. ಎಮ್ಮೆ ಕರುವನ್ನು ನೀರಿಗೆ ಹಾಕಿದರೆ ಈಜು ಕಲಿಸದಿದ್ದರೂ ಈಜುವಂತೆ. ಇಂಗ್ಲಿಷ್ ಹಾಗಲ್ಲ. ಅದನ್ನು ಕಲಿಯಬೇಕಾಗುತ್ತದೆ.

ಎಳವೆಯಿಂದಲೇ ಕಲಿಯುವ ಅಗತ್ಯವೂ ಇದೆ. ಏಕೆಂದರೆ ಅದು ಇಂದು ಅನ್ನ ಕೊಡುವ ಭಾಷೆಯಾಗಿದೆ. ಕನ್ನಡವನ್ನು ನಾನು ದೂರುವುದಿಲ್ಲ. ಭಾಷೆಗಿಂತ ಜೀವನ ನಿರ್ವಹಣೆ ಮುಖ್ಯ. ಕಾಲಧರ್ಮಕ್ಕೆ ಬದ್ಧವಾಗುವ ಅನಿವಾರ್ಯತೆ ನಮಗೆ ಇದೆ. ಅಂದಿಗೆ ಅದೇ ಸುಖ; ಇಂದಿಗೆ ಇದೇ ಸುಖ.

ಸನಿಹದಲ್ಲಿರುವ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ‘ಮಗನೇ, ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಕ್ಕೆ ನನ್ನನ್ನು ಕ್ಷಮಿಸು’  ಎಂದು ಮಗನಲ್ಲಿ ಕ್ಷಮೆ ಕೇಳುವುದಲ್ಲದೆ ಬೇರೆ ದಾರಿ ನನಗೆ ಕಾಣು ವುದಿಲ್ಲ.
-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT