ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಮದುವೆ ಸಂಭ್ರಮದಲ್ಲಿ ಶಿವಣ್ಣ

Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಸೋಮವಾರ ಬೆಳಿಗ್ಗೆ 10 ಗಂಟೆ, ತುಲಾ ಲಗ್ನದ ಶುಭ ಮುಹೂರ್ತ ಪೂರ್ಣಗೊಂಡರೆ ನಟ ಶಿವರಾಜ್ ಕುಮಾರ್ ಮತ್ತೊಂದು ಹಂತ ಪ್ರವೇಶಿಸುವರು. ನೂರು ಸಿನಿಮಾ ಗಡಿ ದಾಟಿರುವ, ಸಾಲು ಸಾಲು ಸಿನಿಮಾಗಳಿಗೆ ಬುಕ್‌ ಆಗಿರುವ 54ರ ಹರೆಯದ, ತಾರಾ ವರ್ಚಸ್ವಿ ಹ್ಯಾಟ್ರಿಕ್ ಹೀರೊಗೆ ಮತ್ತೊಂದು ಹಂತವೇ? ಅದಾವುದು ಎಂದು ಅಚ್ಚರಿ ಬೇಡ!

ಇದು ಅವರ ವೈಯಕ್ತಿಕ ಬದುಕಿನ ಜವಾಬ್ದಾರಿ ನಿಭಾವಣೆಯ ಹಂತ. ಅಂದಹಾಗೆ, ಶಿವರಾಜ್ ಕುಮಾರ್ ಮಾವನ ಸ್ಥಾನ ಅಲಂಕರಿಸುತ್ತಿರುವುದೇ ಈ ಹೊಸ ಜವಾಬ್ದಾರಿ. ಅವರ ಪುತ್ರಿ ನಿರುಪಮಾ ಮತ್ತು ದಿಲೀಪ್ ವಿವಾಹ ಸೋಮವಾರ ಬೆಳಿಗ್ಗೆ ನೆರವೇರಲಿದ್ದು, ಶಿವಣ್ಣ ಕನ್ಯಾಪಿತನ ಸಾಂಪ್ರದಾಯಿಕ ಪೋಷಾಕಿನಲ್ಲಿ ಕಂಗೊಳಿಸಲಿದ್ದಾರೆ. ಅದೇ ದಿನ ಸಂಜೆ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಆರತಕ್ಷತೆಯೂ ನಡೆಯಲಿದೆ. ಈ ಶುಭ ಸಂಭ್ರಮ ಹಲವು ತಾರಾ ಕಲಾವಿದರ ಸಮಾಗಮಕ್ಕೆ ವೇದಿಕೆಯಾಗಲಿರುವುದಂತೂ ಸತ್ಯ.

ನಿಶ್ಚಿತಾರ್ಥದ ನಂತರದ ದಿನದಿಂದಲೇ ಗೀತಾ ಮತ್ತು ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ. ರಜನೀಕಾಂತ್, ಚಿರಂಜೀವಿ, ಕಮಲ ಹಾಸನ್ ಮತ್ತಿತರ ದಕ್ಷಿಣ ಭಾರತದ ಖ್ಯಾತನಾಮರು ಮತ್ತು ಸ್ಯಾಂಡಲ್‌ವುಡ್ ನಟರಿಗೆ ಮದುವೆಯ ಕರೆಯೋಲೆಯನ್ನು ಖುದ್ದು ದಂಪತಿಯೇ ನೀಡಿದ್ದಾರೆ. ಜ್ಯೇಷ್ಠ ಪುತ್ರಿಯ ವಿವಾಹ ಸಂಭ್ರಮದ ಪುಳಕದಲ್ಲಿರುವ ಶಿವಣ್ಣ ದಂಪತಿ ಕಳೆದ ಎರಡು ದಿನಗಳ ಹಿಂದೆ ತಮ್ಮ ಮೂಲ ನೆಲೆ ಗಾಜನೂರಿನಲ್ಲಿ ಕಳಸ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ.

ನೀವೂ ಹಾರೈಸಿ
ರಾಜ್ಯದ ನಾನಾ ಭಾಗಗಳಲ್ಲಿರುವ ಶಿವಣ್ಣನ ಅಭಿಮಾನಿಗಳಿಗೆ ಈ ಅದ್ದೂರಿ ವಿವಾಹವನ್ನು ಕಣ್ತುಂಬಿಕೊಳ್ಳುವ ಆಸೆಯಂತೂ ಇದೆ. ಆದರೆ ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆಯೋ ಗೊತ್ತಿಲ್ಲ. ಹಾಗಾಗಿಯೇ shivannamagalamaduve.com ಇಲ್ಲವೆ smmaduve.com ಅಂತರ್ಜಾಲ ಪುಟವನ್ನು ತೆರೆದಿದ್ದು, ಅಲ್ಲಿ ಯಾರು ಬೇಕಾದರೂ ವಧು–ವರರಿಗೆ ಶುಭಕೋರಬಹುದು. ಇದು ಅಭಿಮಾನಿಗಳಿಗಾಗಿಯೇ ರೂಪಿಸಿರುವ ತಾಲತಾಣ.
ಭಾನುವಾರ (ಆಗಸ್ಟ್ 30) ಮಧ್ಯಾಹ್ನದ ನಂತರ ಈ ಜಾಲದ ಬಾಗಿಲು ತೆರೆದುಕೊಳ್ಳಲಿದೆ.

ಸಹಜವಾಗಿ ಮದುವೆ ಸಂಭ್ರಮದಲ್ಲಿ ಅಭಿಮಾನಿಗಳು, ಬಂಧು ಬಳಗ, ಗಣ್ಯರು ಸೇರಿದಂತೆ ಜನಸಂದಣಿ ಹೆಚ್ಚಲಿದೆ. ಮಾಧ್ಯಮಗಳು ಸಂಭ್ರಮವನ್ನು ಕವರೇಜ್‌ ಮಾಡಲಿವೆ. ವಧು–ವರರಿಗೆ ಶುಭಕೋರಲು ವೇದಿಕೆಗೆ ಗಣ್ಯರ ದಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಅನಾನುಕೂಲ ವಾಗದಂತೆ ಪ್ರತ್ಯೇಕ ಮಾಧ್ಯಮ ಕೇಂದ್ರ ಸಹ ತೆರೆಯಲಾಗಿದೆ. 12ರಿಂದ 15 ಅತ್ಯುತ್ತಮ ಕ್ಯಾಮೆರಾಗಳ ಮೂಲಕ ಸಮಾರಂಭ ಸೆರೆ ಹಿಡಿದು ಪರದೆಯಲ್ಲಿ ಕಾಣಿಸುವ ಪ್ರಯತ್ನವೂ ನಡೆದಿದೆ.

ವಿವಾಹ ಮಹೋತ್ಸವದ ಚಿತ್ರಗಳು ಪ್ರತಿ 10–15 ನಿಮಿಷಕ್ಕೆ ಜಾಲತಾಣಕ್ಕೆ ಅಪ್‌ಲೋಡ್ ಆಗಲಿದ್ದು, ಅಲ್ಲಿಂದಲೂ ಮಾಧ್ಯಮಗಳು ಛಾಯಾಚಿತ್ರಗಳನ್ನು ಪಡೆದುಕೊಳ್ಳಬಹುದು. ಆಗಾಗ್ಗೆ ವಿಡಿಯೊ ತುಣುಕುಗಳು ವೆಬ್‌ನಲ್ಲಿ ಲಭ್ಯ. ಮೀಡಿಯಾ ಕೇಂದ್ರದಿಂದಲೇ ಮತ್ತೊಂದು ಕಡೆಗೆ ಚಿತ್ರಗಳನ್ನು ಮತ್ತು ಮಾಹಿತಿಯನ್ನು ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆಯಂತೆ.

‘ಬದುಕೇ ಒಂದು ಸಿನಿಮಾ. ಮಾಧ್ಯಮಗಳ ಮಂದಿ ನನ್ನ ತಪ್ಪಿದ್ದರೆ ತಿದ್ದಿ ಈ ಮಟ್ಟಿಗೆ ಬೆಳೆಸಿದ್ದೀರಿ. ಮದುವೆ ಕಾರ್ಯಕ್ರಮಗಳನ್ನು ಮತ್ತಿತರ ವ್ಯವಸ್ಥೆಯನ್ನು ಹೇಗೆ ನಡೆಸಲಾಗಿದೆ ಎಂದು ನನಗೆ ಹೇಳಲು ಬರುವುದಿಲ್ಲ. ನಾನು ನಟಿಸುತ್ತೇನೆ ಅಷ್ಟೇ. ಅಭಿಮಾನಿಗಳು ಮದುವೆಗೆ ಬನ್ನಿ. ಸಾಧ್ಯವಾಗದಿದ್ದರೆ ವೆಬ್‌ಪುಟದಲ್ಲಿ ಶುಭಕೋರಿ’ ಎಂದು ಮಗಳ ಮದುವೆ ಸಂಭ್ರಮಕ್ಕೆ ಅಭಿಮಾನಿಗಳಿಗೆ ಕರೆಯೋಲೆ ನೀಡುವರು ಶಿವರಾಜ್ ಕುಮಾರ್.

ಕೆಲವು ದಿನಗಳಿಂದ ಕಾಲಿಗೆ ಚಕ್ರ ಸುತ್ತಿಕೊಂಡವರಂತೆ ಮಗಳ ಮದುವೆ ತಯಾರಿ ನಡೆಸಿದ್ದ ಶಿವರಾಜ್ ಕುಮಾರ್ ಮೊಗದಲ್ಲಿ ಮಗಳ ಮದುವೆಯ ಖುಷಿ ಇಣುಕುತ್ತದೆ.
*
ಬಂಗಾರಪ್ಪ ಅವರ ಮೊಮ್ಮಕ್ಕಳಲ್ಲಿ ಮೊದಲ ಮದುವೆ ಇದು. ಅಕ್ಕನ ಮಗಳ ಮತ್ತು ನನ್ನ ಸೊಸೆಯ ಶುಭಕಾರ್ಯ. ನಮ್ಮ ನಿಮ್ಮ ಸಂಬಂಧ ನೆಂಟರು (ಮಾಧ್ಯಮಗಳು) ಬೀಗರ ರೀತಿಯ ಸಂಬಂಧ. ನಿಮ್ಮನ್ನು ಸರಿಯಾದ ರೀತಿಯಲ್ಲಿ ಸತ್ಕರಿಸುವುದು ನಮ್ಮ ಕರ್ತವ್ಯ. ರಾಜಕುಮಾರ್ ಮತ್ತು ಶಿವಣ್ಣನನ್ನು ಬೆಳೆಸಿದ ಅಭಿಮಾನಿಗಳಲ್ಲಿ ಕೆಲವರಿಗೆ ಜನಜಂಗುಳಿ ಎಂದುಕೊಂಡು ಮದುವೆಗೆ ಬರಲು ಸಾಧ್ಯವಾಗದಿರಬಹುದು. ಈ ಅಭಿಮಾನಿಗಳು ಶುಭಕೋರಲೆಂದೇ ವೆಬ್ ವ್ಯವಸ್ಥೆ ಮಾಡಲಾಗಿದೆ.
–ಮಧು ಬಂಗಾರಪ್ಪ,
ನಿರುಪಮಾ ಸೋದರ ಮಾವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT