ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾತೀತ, ಅಂಧಶ್ರದ್ಧೆ ಅತೀತ ಪಠ್ಯ ಅಗತ್ಯ

ಮೂಢ ನಂಬಿಕೆಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಕಾನೂನು ಶಾಲೆ ಸಲಹೆ
Last Updated 31 ಅಕ್ಟೋಬರ್ 2013, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಯುವ ಮನಸ್ಸುಗಳಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮ­ಬೆಳೆಸಲು ಶಾಲೆಗಳಲ್ಲಿ ಜಾತ್ಯತೀತ, ಮತಾತೀತ ಮತ್ತು ಅಂಧಶ್ರದ್ಧೆಗಳಿಗೆ ಅತೀತವಾದ ಪಠ್ಯ ರೂಪಿಸಬೇಕಾದ ಅಗತ್ಯವಿದೆ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಅಧ್ಯಯನ ಕೇಂದ್ರವು (ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿ) ಅಭಿಪ್ರಾಯ­ಪಟ್ಟಿದೆ.

ಮೂಢ ನಂಬಿಕೆಗಳ ಆಚರಣೆ ನಿಯಂತ್ರಣ ಮತ್ತು ನಿಷೇಧ ಕಾನೂನು ತರಲು ಹೊರಟ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಕಾನೂನು ಶಾಲೆಯ ಈ ಅಧ್ಯಯನ ಕೇಂದ್ರವು ಮಸೂದೆ ಸ್ವರೂಪದ ಕುರಿತಂತೆ ಹಲವು ಸಲಹೆಗಳನ್ನು ನೀಡಿದೆ.

ಅಧ್ಯಯನ ಕೇಂದ್ರದಿಂದ ರಚಿಸಲಾದ ರಾಜ್ಯದ ಹಿರಿಯ ಚಿಂತಕರು, ಸಾಹಿತಿ­ಗಳು, ವಕೀಲರು, ವಿಚಾರವಾದಿ­ಗಳನ್ನು ಒಳಗೊಂಡ ಸಮಿತಿಯು ಈ ಮಸೂದೆ ಸ್ವರೂಪವನ್ನು ಸಿದ್ಧಪಡಿಸಿದೆ.

ಮಸೂದೆಯಲ್ಲಿ ಅಳವಡಿಸಲು ಮಾಡಲಾದ ಮುಖ್ಯ ಶಿಫಾರಸುಗಳು ಹೀಗಿವೆ:

*ಪ್ರಜಾತಾಂತ್ರಿಕ ಸಮಾಜದಲ್ಲಿ ಜನರು ನಂಬಿಕೆಗಳನ್ನು ಇಟ್ಟುಕೊಳ್ಳು­ವುದಕ್ಕೇ ಅಪರಾಧ ಎನ್ನುವ ವ್ಯಾಖ್ಯಾನ ಮಾಡ ಬಾರದು. ಹಾಗೆಯೇ ಜನ ವೈಚಾರಿಕತೆ ಬೆಳೆಸಿಕೊಳ್ಳುವುದಕ್ಕೆ ಪೂರಕ­ವಾದ ಅವಕಾಶಗಳನ್ನು ನೀಡುವುದು ಕೂಡ ಅದರ ಕರ್ತವ್ಯವಾಗಿರಬೇಕು.

*ಜನಸಾಮಾನ್ಯರ ಧಾರ್ಮಿಕ ನಂಬಿಕೆಗಳನ್ನು ಶೋಷಣೆ ಸಾಧನವನ್ನಾಗಿ ಮಾಡಿಕೊಳ್ಳುವ ಧೋರಣೆಗಳನ್ನು ಅಳಿಸಿಹಾಕಬೇಕು.

*ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಗಳನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಕೊಡುಗೆಯೆಂದು ಕೆಲವರು ಹಳಿಯುವುದುಂಟು. ಆದರೆ, ಭಾರತದ ಸಾಂಸ್ಕೃತಿಕ ಪರಂಪರೆಯೊಳಗೇ ವೈಚಾರಿಕ ನೆಲೆಗಟ್ಟಿನ ಅನೇಕ ತತ್ವ ಚಿಂತನೆ, ದರ್ಶನಗಳು ಇತಿಹಾಸ­ದುದ್ದಕ್ಕೂ ಹಾಸುಹೊಕ್ಕಾಗಿವೆ. ಜನಪದ ಸಮಾಜ ಸುಧಾರಕರ ಪ್ರಯತ್ನಗಳು ಗಮನಾರ್ಹವಾಗಿವೆ ಎಂಬುದನ್ನು ನೆನಪಿಡಬೇಕು.

*೧೯೮೬ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನಕ್ಕೆ, ವೈಚಾರಿಕ ಚಿಂತನೆಗೆ ಪ್ರಾಮುಖ್ಯತೆ ನೀಡಲಾಗಿದ್ದು, ಅಂತಹ ವೈಜ್ಞಾನಿಕ ಮನೋಧರ್ಮ­ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಪ್ರಗತಿ ಸಾಧಿಸಬೇಕು.

*ವೈಜ್ಞಾನಿಕ ಮನೋಧರ್ಮವನ್ನು ರೂಪಿಸುವ ಹೊಣೆಯನ್ನು ಸೀಮಿತ ಸಂಖ್ಯೆಯಲ್ಲಿರುವ ಪ್ರಗತಿಪರ ಚಿಂತಕರು, ಪ್ರಗತಿಪರ ಹೋರಾಟಗಾರರು ಮಾತ್ರ ಹೊತ್ತು ಕೊಂಡರೆ ಸಾಲದು. ಸರ್ಕಾರದ ಸಕಲ ಆಡಳಿತ ಯಂತ್ರಗಳೂ ಅದರ ಹೊಣೆ ಹೊರಬೇಕು. 

*ಪ್ರಜಾಪೀಡಕ ಕಂದಾಚಾರಗಳು ಮತ್ತು ಶೋಷಣೆಗಳು ಎಲ್ಲ ಧರ್ಮದಲ್ಲೂ ಇರುವುದರಿಂದ, ಎಲ್ಲ ಧರ್ಮೀಯರೂ ಈ ವ್ಯವಸ್ಥೆಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಪ್ರಸ್ತುತ ಮಸೂದೆ ಅಂತಹ ಎಲ್ಲ ರೀತಿಯ, ಎಲ್ಲ ಧರ್ಮದ ಮೂಢನಂಬಿಕೆ ಆಚರಣೆ­ಗಳನ್ನು ತನ್ನ ವ್ಯಾಪ್ತಿಯಲ್ಲಿ ತರಬೇಕು.

*ಎಲ್ಲ ಮೂಢನಂಬಿಕೆಯ ಆಚರಣೆಗಳೂ ಹಾನಿಕಾರಕ ವಲ್ಲ. ಆದರೆ, ಇಂಥ ನಂಬಿಕೆ ಬಳಸಿಕೊಂಡು ಜನರನ್ನು ಹಿಂಸಿಸುವ ಆಚರಣೆಗಳನ್ನು (ಮಾಯ, ಮಾಟ, ಬಾನಾಮತಿ, ಫಲಜ್ಯೋತಿಷ್ಯ, ಜಾತಕಫಲ, ಶಕುನ, ಕಾಲನಿರ್ಣಯ (ಕಾಲಜ್ಞಾನ), ನ್ಯೂಮ­ರಾಲಜಿ, ವಾಸ್ತುಶಾಸ್ತ್ರ, ಪವಾಡ, ಯಕ್ಷಿಣಿ ವಿದ್ಯೆ, ಜಾದುಗಾರಿಕೆ, ವಶೀಕರಣ, ವಾಮಾಚಾರ) ನಿಷೇಧಿಸ­ಬೇಕು ಅಥವಾ ನಿಯಂತ್ರಣಕ್ಕೆ ಒಳಪಡಿಸಬೇಕು.

*ಜನರ ನಂಬಿಕೆ- ಆಚರಣೆ-–ಸಂಪ್ರದಾಯಗಳನ್ನು ಬಳಸಿ ಕೊಂಡು ಅವರ ಪ್ರಶ್ನೆಗಳಿಗೆ ಪರಿಹಾರಗಳನ್ನು ಒದಗಿಸುವ ನೆಪ ದಲ್ಲಿ ಶೋಷಿಸುವ (ವಾಸ್ತುದೋಷ ನಿವಾರಣೆ, ಜಾತಕ­ದೋಷ ನಿವಾರಣೆ, ಗ್ರಹಗತಿ ನಿವಾರಣೆ ಇತ್ಯಾದಿ) ಪರಿಪಾಠಕ್ಕೆ ಅಂತ್ಯ ಹಾಡಬೇಕು. 

*ಯಾವುದೇ ಸಂಘ–-ಸಂಸ್ಥೆ, ವ್ಯಕ್ತಿ ಅಥವಾ ಬಣ ಅಥವಾ ಟ್ರಸ್ಟ್ ಮೌಢ್ಯವನ್ನು ಆಚರಿಸುತ್ತಿದ್ದರೆ ಅಥವಾ ಬೆಂಬಲ ನೀಡುತ್ತಿದ್ದರೆ, ಪ್ರಚಾರ ಮಾಡುತ್ತಿದ್ದರೆ ಅಥವಾ ಇಂಥದಕ್ಕೆ ಸಹಕರಿಸುತ್ತಿದ್ದರೆ (ದೂರದರ್ಶನ ವಾಹಿನಿಗಳು, ರೇಡಿಯೊ, ಚಲನಚಿತ್ರ, ಅಂತರ್ಜಾಲ ತಾಣ, ಪುಸ್ತಕ ಪ್ರಕಟಣೆ, ಪತ್ರಿಕೆಗಳು ಮುಂತಾದ ಪ್ರಸಾರ ಮಾಧ್ಯಮಗಳೂ ಸೇರಿದಂತೆ) ಅದನ್ನು ಕಾನೂನು ಬಾಹಿರ ವರ್ತನೆಯೆಂದು ಪರಿಗಣಿಸಬೇಕು.

*ಸಂಪ್ರದಾಯ ಮತ್ತು ಆಚರಣೆಗಳ ಅಪಗ್ರಹಿಕೆ, ಧಾರ್ಮಿಕ ಅಪಕಲ್ಪನೆ ಮತ್ತು ಅಂಧಶ್ರದ್ಧೆಯಿಂದ ಮನುಜರನ್ನು ದೇವರೆಂದು ಅಥವಾ ದೇವಮಾನವರೆಂದು ಬಿಂಬಿಸುವ, ಅದಕ್ಕೆ ಸಂಬಂಧಿಸಿದಂತೆ ನಂಬಿಕೆಗಳನ್ನು ಹುಟ್ಟಿಹಾಕುವ, ಮತಮೌಢ್ಯದ ಕಂದಾಚಾರಗಳನ್ನು ನಿಷೇಧಿಸಬೇಕು.

*ಉದ್ದೇಶಪೂರ್ವಕವಾಗಿ ಅನ್ಯ ಧರ್ಮೀಯರ ಆಚ ರಣೆ-, ಸಂಪ್ರ­ದಾಯ-, ನಂಬಿಕೆಗಳನ್ನು ನಿಂದಿಸುವುದು, ಅವಮಾ ನಿಸುವುದು ಅಥವಾ ತುಚ್ಛೀಕರಿಸುವುದು, ಆಸೆ, -ಆಮಿಷಗಳ­ನ್ನೊಡ್ಡುವ ಮೂಲಕ ಬಲವಂತದ ಮತಾಂತರಕ್ಕೆ ಪ್ರೇರೇಪಿಸು ವುದು ಈ ಕಾನೂನು ಪ್ರಕಾರ ಶಿಕ್ಷಾರ್ಹವಾಗಬೇಕು.

*ಮೂಢನಂಬಿಕೆ ಆಚರಣೆಗಳಿಗೆ ಸಂಬಂಧಿಸಿದಂತೆ ರೂಪಿ ಸುವ ಪ್ರಸ್ತುತ ಮಸೂದೆಯಲ್ಲಿ ಅಪರಾಧಿಗಳಿಗೆ ವಿಧಿಸುವ ಶಿಕ್ಷೆ ಸ್ವರೂಪ ಮತ್ತು ಪ್ರಮಾಣ ಗಂಭೀರವಾಗಿರಬೇಕೇ ವಿನಃ ನಗೆಪಾಟಲಿಗೆ ಈಡಾಗು­ವಂತಿರ­ಬಾರದು. ಮಹಾರಾಷ್ಟ್ರ ಸರಕಾರ ರೂಪಿಸಿರುವ ಇಂಥ ಮಸೂದೆಯಲ್ಲಿ ಅಪರಾಧಿಗಳಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ₨ ೫೦,೦೦೦ ಜುಲ್ಮಾನೆ ಎಂದು ಶಿಫಾರಸು ಮಾಡಲಾಗಿತ್ತು. ಆದರೆ ಅಂತಿಮವಾಗಿ ಕಾನೂನು ಜಾರಿಗೆ ಬಂದಾಗ ಜುಲ್ಮಾನೆ ಅಷ್ಟೇ ವಿಧಿಸಲಾಗಿದ್ದು ಶಿಕ್ಷೆಯ ಅವಧಿಯನ್ನು ಆರರಿಂದ  ಏಳು ತಿಂಗಳು ಎಂದು ನಿಗದಿ ಮಾಡಲಾಗಿದೆ. ಇಂತಹ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕು.

ರಾಷ್ಟ್ರೀಯ ಕಾನೂನು ಶಾಲೆಯಿಂದ ನಡೆಸಲಾದ ಸಭೆಗಳಲ್ಲಿ ಡಾ.ಜಿ. ರಾಮಕೃಷ್ಣ, ಡಾ.ಕೆ.ಮರುಳಸಿದ್ದಪ್ಪ, ಡಾ.ಸಿದ್ದಲಿಂಗಯ್ಯ, ಡಾ.ಅರವಿಂದ ಮಾಲಗತ್ತಿ, ಎ.ಎಸ್. ನಟರಾಜ್, ಡಾ.ಎಂ.ಎನ್.ಕೇಶವರಾವ್, ನಗರಗೆರೆ ರಮೇಶ್, ಆರ್.ನಿತಿನ್ ರಮೇಶ್, ಡಾ. ಸಿ.ಎಸ್.ಹನು ಮಂತಪ್ಪ, ಬಿ.ಟಿ.ಲಲಿತಾ ನಾಯಕ್, ಡಾ.ಸಿ.ಎಸ್. ದ್ವಾರಕಾ ನಾಥ್, ಡಾ.ಜಿ.ಎಸ್. ವಿಶ್ವನಾಥ್, ಕೆ.ಎಸ್.ವಿಮಲ, ಡಾ. ಮಲ್ಲಿಕಾ ಘಂಟಿ, ಶಿವಸುಂದರ್, ಡಾ.ವಸುಂಧರಾ ಭೂಪತಿ, ನಗರಿ ಬಾಬಯ್ಯ, ಅಗ್ರಹಾರ ಕೃಷ್ಣಮೂರ್ತಿ, ಡಾ.ವಡ್ಡಗೆರೆ ನಾಗರಾಜಯ್ಯ, ಡಾ. ವಿ.ಪಿ.ನಿರಂಜನಾರಾಧ್ಯ, ಡಾ.ವಿ.ಎಸ್. ಶ್ರೀಧರ, ಡಾ.ಬಾಲಗುರುಮೂರ್ತಿ, ಡಾ.ಎಸ್.ಜಾಫೆಟ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT