ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ವಕ್ಕರಿಸಿದ ಕಸದ ಸಮಸ್ಯೆ

ನಗರದ ಹಲವು ರಸ್ತೆಗಳಲ್ಲಿ ಬಿದ್ದಿದೆ ತ್ಯಾಜ್ಯದ ರಾಶಿ
Last Updated 5 ಮಾರ್ಚ್ 2015, 19:33 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಜ್ಯ ವಿಲೇವಾರಿ ಸಮಸ್ಯೆ ನಗರದ ಜನತೆಯನ್ನು ಮತ್ತೆ ಕಾಡಲು ಆರಂಭಿಸಿದ್ದು, ಹಲವು ಬಡಾವಣೆಗಳಲ್ಲಿ ಗುತ್ತಿಗೆದಾರರು ಸಾಗಾಟ ನಿಲ್ಲಿಸಿದ್ದರಿಂದ ರಸ್ತೆಬದಿ ಕಸದ ರಾಶಿಯೇ ಬಿದ್ದಿದೆ.

ಆರ್‌.ಆರ್‌.ನಗರ ಇಲ್ಲವೆ ಯಲಹಂಕದಲ್ಲಿ ಮಾತ್ರವಲ್ಲ; ಜಯನಗರದಲ್ಲೂ ಕಸ ವಿಲೇವಾರಿ ಸಮಸ್ಯೆ ತಲೆದೋರಿದೆ. ಕೋಣನಕುಂಟೆ, ಬಸವನಗುಡಿ, ಕೋಡಿಹಳ್ಳಿ, ಜಿ.ಎಂ.ಪಾಳ್ಯ, ಇಂದಿರಾನಗರ, ಹೊಸಕೇರಿಹಳ್ಳಿ, ಕತ್ರಿಗುಪ್ಪೆ ಮೊದಲಾದ ಭಾಗಗಳಲ್ಲಿ ರಸ್ತೆಬದಿಯಲ್ಲಿ ಬಿದ್ದ ಕಸದ ರಾಶಿಯನ್ನು ಮೇಲೆತ್ತಿಲ್ಲ.

ಮನೆ–ಮನೆ ಕಸ ಸಂಗ್ರಹಿಸಲು ಪೌರಕಾರ್ಮಿಕರೂ ಬರುತ್ತಿಲ್ಲ ಎಂದು ಬಡಾವಣೆ ನಿವಾಸಿಗಳು ದೂರುತ್ತಾರೆ. ‘ಪೌರಕಾರ್ಮಿಕರಿಗೆ ಸಂಬಳ ಆಗಿಲ್ಲವಂತೆ. ದುಡ್ಡು ಕೊಟ್ಟರೆ ಕಸ ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ನಮ್ಮ ಬಡಾವಣೆಯಲ್ಲಿ ಕಳೆದ ಎರಡು ವಾರಗಳಿಂದ ಕಸ ವಿಲೇವಾರಿ ನಿಂತಿದೆ’ ಎಂದು ಹೇಳುತ್ತಾರೆ, ಕೋಣನಕುಂಟೆ ನಿವಾಸಿ ಡಿ.ರಾಜೇಶ್‌.

ಶಿವಾಜಿನಗರದ ಹೇನ್ಸ್‌ ರಸ್ತೆ ನಿವಾಸಿ ಜಾವೇದ್‌ ಅಲಂ ಅವರ ಅನುಭವವೇ ಬೇರೆ. ‘ನಮ್ಮ ಪ್ರದೇಶದಲ್ಲಿ ಕಸ ವಿಲೇವಾರಿ ಸಂಪೂರ್ಣವಾಗಿ ನಿಂತು ಹೋಗಿತ್ತು. ನಾವು ರಾಷ್ಟ್ರೀಯ ಗ್ರಾಹಕರ ವೇದಿಕೆಗೆ ದೂರು ನೀಡಿದೆವು. ಆ ಮೂಲಕ ಬಿಬಿಎಂಪಿ ಅಧಿಕಾರಿಗಳ ಗಮನವನ್ನೂ ಸೆಳೆದವು. ನಂತರವಷ್ಟೇ ಪೌರಕಾರ್ಮಿಕರು ಕಸ ಎತ್ತಲು ಬಂದರು. ಆದರೆ, ಈಗಲೂ ನಿಯಮಿತವಾಗಿ ಕಸ ಹೋಗುತ್ತಿಲ್ಲ’ ಎಂದು ಅವರು ವಿವರಿಸುತ್ತಾರೆ.

‘ಪೌರಕಾರ್ಮಿಕರು 2–3 ದಿನಕ್ಕೊಮ್ಮೆ ಬಂದು ಕಸ ಒಯ್ಯುವುದರಿಂದ ರಸ್ತೆಯ ಎರಡೂ ತುದಿಗಳಲ್ಲಿ ಕಸದ ರಾಶಿಯೇ ಬಿದ್ದಿದೆ’ ಎಂದು ಹೇಳುತ್ತಾರೆ. ಐಟಿಐ ಲೇಔಟ್‌, ಶ್ರೀನಿವಾಸನಗರ, ವಿನಾಯಕನಗರ ಪ್ರದೇಶಗಳ ತ್ಯಾಜ್ಯ ವಿಲೇವಾರಿ ಮೇಲ್ವಿಚಾರಕ ಎಸ್‌. ಮಂಜುನಾಥ್‌ ಅವರನ್ನು ಈ ಬಗೆಗೆ ಕೇಳಿದಾಗ, ‘ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ಸಕಾಲಕ್ಕೆ ಸಂಬಳ ನೀಡದಿರುವ ಕಾರಣ ಸಮಸ್ಯೆ ಉಂಟಾಗಿದೆ. ಕಳೆದ ನಾಲ್ಕು ತಿಂಗಳಿಂದ ಪೌರಕಾರ್ಮಿಕರಿಗೆ ಸಂಬಳವಿಲ್ಲ. ಬಾಡಿಗೆ ನೀಡದಿದ್ದಕ್ಕೆ ಮನೆ ಮಾಲೀಕರು ಅವರನ್ನು ಹೊರ ಹಾಕುತ್ತಿದ್ದಾರೆ. ಸಂಬಳವೇ ಸಿಗದಿದ್ದರೆ ಅವರು ಕೆಲಸ ಮಾಡುವುದು ಹೇಗೆ’ ಎಂದು ಮರುಪ್ರಶ್ನೆ ಹಾಕುತ್ತಾರೆ.

‘ಸಂಬಳಕ್ಕಾಗಿ ಆಗ್ರಹಿಸಿ ಪೌರ ಕಾರ್ಮಿಕರು ಕೆಲವೆಡೆ ನಿರಂತರವಾಗಿ ಪ್ರತಿಭಟನೆ ನಡೆಸಿದ್ದರಿಂದ ತ್ಯಾಜ್ಯ ವಿಲೇವಾರಿ ಆಗಿಲ್ಲ. ಅಲ್ಲದೆ, ಬಿಂಗಿಪುರ ಘಟಕಕ್ಕೆ ಹೆಚ್ಚಿನ ಲಾರಿಗಳು ಕಸ ಸಾಗಾಟ ಮಾಡದಂತೆ ನಿರ್ಬಂಧಿಸಲಾಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.
ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರನ್ನು ಸಂಪರ್ಕಿಸಿದಾಗ, ‘ಪೌರ ಕಾರ್ಮಿಕ ಸಂಬಳವನ್ನು ನೀಡಲು ಮಾರ್ಚ್‌ 3ರಂದೇ ಬಿಬಿಎಂಪಿ ₹118 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದೆ. ಬಾಕಿ ವೇತನವನ್ನು ಹಂತ, ಹಂತವಾಗಿ ಬಿಡುಗಡೆ ಮಾಡುವುದರಿಂದ ಈಗ ಯಾವ ಸಮಸ್ಯೆ ಇಲ್ಲ’ ಎಂದು ಹೇಳುತ್ತಾರೆ.

ಬಿಬಿಎಂಪಿ ಪೌರಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪೋತಣ್ಣ, ‘ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿದೆ ಏನೋ ನಿಜ. ಆದರೆ, ಎಲ್ಲ ಪೌರಕಾರ್ಮಿಕರಿಗೆ ಇದುವರೆಗೆ ವೇತನ ಸಿಕ್ಕಿಲ್ಲ. ಗುತ್ತಿಗೆ ಪೌರಕಾರ್ಮಿಕರಿಗೆ ಸಂಬಳ ನೀಡಲಾಗಿದ್ದರೆ, ಕಾಯಂ ಪೌರಕಾರ್ಮಿಕರ ವೇತನ ಇನ್ನೂ ಬಿಡುಗಡೆಯಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಎಲ್ಲಕ್ಕಿಂತ ಮುಂಚೆ ಪೌರಕಾರ್ಮಿಕರಿಗೆ ಸಂಬಳ ನೀಡಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಅದರ ಪಾಲನೆ ಆಗುತ್ತಿಲ್ಲ’ ಎಂದು ಅವರು ವಿಷಾದದಿಂದ ಹೇಳುತ್ತಾರೆ. ಇತ್ತೀಚೆಗೆ ನಡೆದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲೂ ಅಸಮರ್ಪಕ ಕಸ ವಿಲೇವಾರಿ ಬಗೆಗೆ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪೌರಕಾರ್ಮಿಕರಿಗೆ ಸಂಬಳ ನೀಡದ್ದರಿಂದ ಬಸವನಗುಡಿ ಭಾಗದಲ್ಲಿ ಕಸದ ರಾಶಿ ಹಾಗೇ ಬಿದ್ದಿದೆ ಎಂದು ಶಾಸಕ ರವಿ ಸುಬ್ರಹ್ಮಣ್ಯ ಸಹ ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT