ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಯಂತ್ರ ಸಂಗ್ರಹ ಕೊಠಡಿಗೆ ಅರೆ ಸೇನಾ ಭದ್ರತೆ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ನಂತರ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಇಡುವ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಂ) ಸುರಕ್ಷತೆಗೆ ಕೇಂದ್ರ ಅರೆಸೇನಾ ಪಡೆಯ ಸಿಬ್ಬಂದಿ ನಿಯೋಜಿಸಲಾಗು­ವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌­ಕುಮಾರ್‌ ಝಾ ತಿಳಿಸಿದರು.

ಬೆಂಗಳೂರು ವರದಿಗಾರರ ಕೂಟ ಮತ್ತು ಪ್ರೆಸ್‌ ಕ್ಲಬ್‌ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರಿಗೂ ‘ಭದ್ರತಾ ಕೊಠಡಿ’ ಮೇಲೆ ಕಣ್ಗಾವಲು ಇಡಲು ಅವಕಾಶ ಕಲ್ಪಿಸಲಾಗಿದೆ . ಮೇ 16ರಂದು 28 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ‘ಭದ್ರತಾ ಕೊಠಡಿ’ಗೆ  ಸಿ.ಸಿ ಟಿ.ವಿ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಇಡುವಾಗ ಹಾಗೂ ಎಣಿಕೆ ದಿನ ಹೊರ ತೆಗೆಯುವಾಗ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ. ಕೊಠಡಿಗೆ ರವಾನಿಸಿ ಬೀಗಮುದ್ರೆ ಹಾಕಲಾ­ಗುತ್ತದೆ. ಮೇ 16ರವರೆಗೂ ಅದನ್ನು ತೆಗೆಯಲು ಅವಕಾಶ ಇಲ್ಲ. ಮತಗಟ್ಟೆಗಳಲ್ಲಿ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡ ಲಾಗುತ್ತದೆ. ಮತಗಟ್ಟೆಯಿಂದ 200 ಮೀಟರ್‌ ದೂರದಲ್ಲಿ ರಾಜಕೀಯ ಪಕ್ಷದವರು ಪೆಂಡಾಲ್‌, ಟೇಬಲ್‌, ಕುರ್ಚಿ ಹಾಕಿಕೊಳ್ಳಬಹುದು ಎಂದು ವಿವರಿಸಿದರು.

ಏರಿಕೆ: ಚುನಾವಣಾ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಇದುವರೆಗೆ ಕನಿಷ್ಠ ರೂ.100ರಿಂದ ಗರಿಷ್ಠ ರೂ.250 ನೀಡಲಾಗುತ್ತಿತ್ತು. ಈಗ ಅದನ್ನು ಕನಿಷ್ಠ ರೂ.175ರಿಂದ ಗರಿಷ್ಠ ರೂ. 350ಕ್ಕೆ ಏರಿಸಲಾಗಿದೆ ಎಂದರು. ಕಾಸಿಗಾಗಿ ಸುದ್ದಿ ಪ್ರಕಟಿಸಿರುವ ಬಗ್ಗೆ 44 ದೂರುಗಳು ಬಂದಿವೆ. 29 ಪ್ರಕರಣಗಳಲ್ಲಿ ನೋಟಿಸ್‌ ನೀಡಲಾಗಿದೆ. ಮೂವರು ಅಭ್ಯರ್ಥಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ಅಭ್ಯರ್ಥಿಯ ಲೆಕ್ಕಕ್ಕೆ ಆ ವೆಚ್ಚವನ್ನು ಸೇರಿಸಲಾಗುತ್ತದೆ. ಸುದ್ದಿ ಪ್ರಕಟಿಸಿದ ಪತ್ರಿಕೆಗೆ ನೋಟಿಸ್‌ ನೀಡುವುದಿಲ್ಲ ಎಂದು ತಿಳಿಸಿದರು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ 4.36 ಕೋಟಿ ಮತದಾರರು ಇದ್ದರು. ಈ ಬಾರಿ 4.62 ಕೋಟಿಗೆ ಏರಿದೆ. ವಿಧಾನಸಭಾ ಚುನಾವಣೆಯಲ್ಲಿ ಶೇ 72ರಷ್ಟು ಮತದಾನ ಆಗಿತ್ತು. ಆದರೆ, ಸಾಮಾನ್ಯವಾಗಿ ಲೋಕಸಭಾ ಚುನಾವಣೆ­ಯಲ್ಲಿ ಮತದಾನ ಪ್ರಮಾಣ ಕಡಿಮೆ ಇರುತ್ತದೆ ಎಂದರು.

ಗುರುತು ಚೀಟಿ
ಚುನಾವಣಾ ಆಯೋಗದ ಗುರುತಿನ ಚೀಟಿ ಇಲ್ಲದೆ ಇದ್ದರೂ ಈ ಕೆಳಗಿನ 11 ಪರ್ಯಾಯ ಗುರುತಿನ ಚೀಟಿಗಳ ಪೈಕಿ ಯಾವುದಾದರೂ ಒಂದನ್ನು ತೋರಿಸಿ ಮತ ಚಲಾಯಿಸಬಹುದು.

ಪಾಸ್‌ಪೋರ್ಟ್‌, ವಾಹನ ಚಾಲನಾ ಪರವಾನಗಿ, ಭಾವಚಿತ್ರ ಇರುವ ಬ್ಯಾಂಕ್‌ಪಾಸ್‌ ಪುಸ್ತಕ, ಪ್ಯಾನ್‌ಕಾರ್ಡ್‌, ಆಧಾರ್ ಕಾರ್ಡ್‌, ನರೇಗಾ ಕಾರ್ಡ್‌, ಆರೋಗ್ಯವಿಮಾ ಗುರುತಿನ ಚೀಟಿಗಳು, ಭಾವಚಿತ್ರ ಇರುವ ಪಿಂಚಣಿ ಕಾರ್ಡ್‌, ವೋಟರ್ ಸ್ಲಿಪ್‌, ಎನ್‌ಪಿಆರ್ ಸ್ಮಾರ್ಟ್‌ಕಾರ್ಡ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು ನೌಕರರಿಗೆ ನೀಡಿರುವ ಗುರುತಿನ ಚೀಟಿ.

ನಕಲಿ ಮತದಾನಕ್ಕೆ ಶಿಕ್ಷೆ
ಬೇರೆಯವರ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಪ್ರಯತ್ನಿಸಿದರೆ, ಒಮ್ಮೆ ಮತ ಚಲಾಯಿಸಿದ ನಂತರ ಮತ್ತೊಂದು ಕಡೆ ಮತದಾನ ಮಾಡಲು ಯತ್ನಿಸಿದರೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ.

ಮೊಬೈಲ್‌ ನಿಷೇಧ
ಮತಗಟ್ಟೆಗಳಿಗೆ ಮೊಬೈಲ್‌ ತೆಗೆದುಕೊಂಡು ಹೋಗುವಂತಿಲ್ಲ. ಅಲ್ಲದೆ ಮತದಾನ ಮಾಡುವ ಸಂದರ್ಭದಲ್ಲಿ ಸ್ವಯಂ ಆಗಿ ಛಾಯಾಚಿತ್ರ ತೆಗೆಯಲು ಅವಕಾಶ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT