ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದು ಸೇವನೆ: ಸ್ಪರ್ಧಿಯಿಂದ ಪದಕ ವಾಪಸ್‌

ಚುಟುಕು ಗುಟುಕು
Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂಚೆನ್‌: ವುಶು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಮಲೇಷ್ಯಾದ ಆಟಗಾರ್ತಿ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದುದರಿಂದ ಅವರನ್ನು ಅನರ್ಹಗೊಳಿಸಿ ಪದಕ ವಾಪಸ್ ಪಡೆಯಲಾಗಿದೆ.

ಸೆಪ್ಟೆಂಬರ್‌ 20ರಂದು ನಡೆದ ವುಶು ಸ್ಪರ್ಧೆ ಬಳಿಕ ಉದ್ದೀಪನಾ ಮದ್ದು  ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಮಲೇಷ್ಯಾದ ತಾಯ್‌ ಚೆವು ಕ್ಸಿಯೆನ್‌ ನಿಷೇದಿತ ಮದ್ದು ಸೇವಿಸಿರುವುದು ದೃಢಪಟ್ಟಿದ್ದರಿಂದ, ಅವರಿಂದ ಚಿನ್ನ ಹಾಗೂ ಕಂಚಿನ ಪದಕಗಳೆರಡನ್ನೂ  ವಾಪಸು ಪಡೆಯಲಾಗಿದೆ.

ಇರಾಕ್‌ನ ವೇಟ್‌ಲಿಫ್ಟರ್‌ ಮಹಮದ್‌ ಅಲ್‌ ಐಫುರಿ ಉದ್ದೀಪನಾ ಮದ್ದು ಸೇವಸಿ ಸಿಕ್ಕಿಬಿದ್ದಿದ್ದಾರೆ. 105ಕೆ.ಜಿ ವಿಭಾಗದಲ್ಲಿ ಸ್ವರ್ಧಿಸಿದ್ದ ಅವರು ಏಳನೇ ಸ್ಥಾನ ಪಡೆದುಕೊಂಡಿದ್ದರು.

ತಾಜಿಕಿಸ್ತಾನದ ಫುಟ್‌ಬಾಲ್‌ ಆಟಗಾರ ಮತ್ತು ಕಾಂಬೋಡಿಯಾದ ಸಾಫ್ಟ್‌ ಟೆನಿಸ್‌ ಆಟಗಾರ ಕೂಡ ನಿಷೇದಿತ ಮದ್ದು ಸೇವಿಸಿರುವುದು ದೃಢ ಪಟ್ಟಿದೆ.

ಟೇಬಲ್‌ ಟೆನಿಸ್‌: ಭಾರತಕ್ಕೆ ಶುಭದಿನ
ಇಂಚೆನ್‌:
ಭಾರತದ ಟೇಬಲ್‌ ಟೆನಿಸ್‌ ಆಟಗಾರರು ಮಂಗಳವಾರ ನಡೆದ ಏಷ್ಯನ್‌ ಕೂಟದ ಪಂದ್ಯದಲ್ಲಿ ಎಲ್ಲಾ ವಿಭಾಗಗಳಲ್ಲೂ ಗೆದ್ದು ಸಂಭ್ರಮಿಸಿದ್ದಾರೆ. ಡಬಲ್ಸ್ ಜೋಡಿ ಅಚಂತ ಶರತ್‌ ಕಮಲ್‌ ಮತ್ತು ಅಂತೋಣಿ ಅಮಲರಾಜ್‌ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಅಮಲ್‌ರಾಜ್‌ ಮತ್ತು ಕಮಲ್ ಜೋಡಿ ಮೊದಲ ಗೇಮ್‌ನಲ್ಲಿ ಸೋತರೂ ಬಳಿಕ ತಿರುಗೇಟು ನೀಡಿ  6–11, 11–5, 11–8, 12–10ರಲ್ಲಿ ನೇಪಾಳದ ಪುರುಷೋತ್ತಮ ಬಜರಾಚಾರ್ಯ ಮತ್ತು ಅಮರ್ ಲಾಲ್‌ ಮಲ್ಲ ಎದುರು ಗೆದ್ದರು. ಮುಂದಿನ ಪಂದ್ಯದಲ್ಲಿ ಈ ಜೋಡಿ ಜಪಾನ್‌ ಎದುರು ಪೈಪೋಟಿ ನಡೆಸಲಿದೆ.

ಇನ್ನೊಂದು ಡಬಲ್ಸ್‌ ಜೋಡಿ ಹರ್ಮೀತ್‌ ದೇಸಾಯಿ ಹಾಗೂ ಸೌಮ್ಯಜಿತ್‌ ಘೋಷ್‌ 12–10, 11–5, 11–6ರಲ್ಲಿ ಯೆಮನ್‌ನ ಒಮರ್‌ ಅಹಮದ್‌ ಅಲಿ ಮತ್ತು ಮೊಹಮದ್‌ ಫಹದ್‌ ಗುರ್ಬನ್‌ ಎದುರು ಗೆಲುವಿನ ನಗೆ ಬೀರಿದರು. ಈ ಜೋಡಿ ಮುಂದಿನ ಸುತ್ತಿನಲ್ಲಿ ಚೀನಾ ತಂಡದ ಸವಾಲು ಎದುರಿಸಲಿದೆ.

ಮಿಶ್ರ ಡಬಲ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಮಲ್‌ರಾಜ್‌ ಮತ್ತು ಮಧುರಿಕಾ ಪಟ್ಕರ್‌ 5–11, 13–11, 11–8, 11–4ರಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಹ್ಯಾಂಡ್‌ಬಾಲ್‌: ಮಹಿಳಾ ತಂಡಕ್ಕೆ 8ನೇ ಸ್ಥಾನ
ಇಂಚೆನ್‌ (ಪಿಟಿಐ):
ಪೆನಾಲ್ಟಿ ಶೂಟೌಟ್‌ನಲ್ಲಿ ಎಡವಿದ ಭಾರತ ಮಹಿಳಾ ತಂಡದವರು  ಹ್ಯಾಂಡ್‌ಬಾಲ್‌ ಸ್ಪರ್ಧೆಯಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಏಳು ಮತ್ತು ಎಂಟನೇ ಸ್ಥಾನ ನಿರ್ಧರಿಸಲು ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಭಾರತ ವನಿತೆಯರ ತಂಡ  30–31ರಲ್ಲಿ ಥಾಯ್ಲೆಂಡ್‌ ಎದುರು ಪರಾಭವಗೊಂಡಿತು. ಆರಂಭದಿಂದಲೂ ಗುಣಮಟ್ಟದ ಆಟ ತೋರುವಲ್ಲಿ ಯಶಸ್ವಿಯಾಗಿದ್ದ ಭಾರತದ ವನಿತೆಯರು  ಮೊದಲರ್ಧದ ವೇಳೆಗೆ 14–12ರ ಅಲ್ಪ ಮುನ್ನಡೆ ಗಳಿಸಿ  ದ್ದರು.

ಆ ಬಳಿಕ ಪುಟಿದೆದ್ದ ಥಾಯ್ಲೆಂಡ್‌ ಆಟಗಾರ್ತಿಯರು ಅಮೋಘ ಪ್ರದರ್ಶನ  ನೀಡುವ ಮೂಲಕ  ಪಂದ್ಯದಲ್ಲಿ ಸಮಬಲ ಸಾಧಿಸಿದರು.
ಪೆನಾಲ್ಟಿ ಶೂಟೌಟ್‌ನಲ್ಲೂ ಮಿಂಚಿದ  ಥಾಯ್ಲೆಂಡ್‌  5–4ರಲ್ಲಿ ಭಾರತವನ್ನು ಮಣಿಸಿ ಏಳನೇ ಸ್ಥಾನ ತನ್ನದಾಗಿಸಿಕೊಂಡಿತು.
ಭಾನುವಾರ ಪುರುಷರ ತಂಡ ವಿಭಾಗದ ‘ಕ್ಲಾಸಿಫಿಕೇಷನ್‌’ ಸುತ್ತಿನಲ್ಲಿ  ಭಾರತ ತಂಡ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಎದುರು  ಸೋತು 14ನೇ ಸ್ಥಾನ ಪಡೆದಿತ್ತು.

ಈಕ್ವೆಸ್ಟ್ರೀನ್‌: ಯಶಾನ್‌ಗೆ ನಿರಾಸೆ
ಇಂಚೆನ್‌:
ಕರಾರುವಾಕ್ಕಾಗಿ ಸವಾರಿ ನಡೆಸಲು ವಿಫಲವಾದ  ಭಾರತದ ಯಶಾನ್‌ ಜುಬಿನ್‌ ಖಂಬಾಟ್ಟ ಈಕ್ವೆಸ್ಟ್ರಿನ್‌ ಸ್ಪರ್ಧೆಯಲ್ಲಿ  28ನೇ ಸ್ಥಾನ  ಪಡೆದಿದ್ದಾರೆ. ಡ್ರೀಮ್‌ ಪಾರ್ಕ್‌ ಈಕ್ವೆಸ್ಟ್ರೀನ್‌ನಲ್ಲಿ ಮಂಗಳವಾರ  ನಡೆದ ವೈಯಕ್ತಿಕ ವಿಭಾಗದ ಜಂಪಿಂಗ್‌ ಫೈನಲ್‌ನ  ‘ಎ’ ಸುತ್ತಿನಲ್ಲಿ  ‘ಓಲ್ಗಿ’ ಹೆಸರಿನ ಕುದುರೆಯ ಸವಾರಿ ನಡೆಸಿದ  ಖಾಂಬಾಟ್ಟ 16 ಜಂಪ್‌ಗಳಲ್ಲಿ ಸರಾಸರಿ 18 ಪೆನಾಲ್ಟಿಯೊಂದಿಗೆ ಎರಡು ಬಾರಿ  28ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT