ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಹೊಳೆಯಲ್ಲಿ ಪಾನ ನಿಷೇಧದ ರಾಜಕಾರಣ

Last Updated 14 ಮೇ 2016, 19:37 IST
ಅಕ್ಷರ ಗಾತ್ರ

ಚೆನ್ನೈ: ‘ಟಾಸ್‌ಮ್ಯಾಕ್’ ಎಂಬುದು ‘ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಷನ್’ನ ಸಂಕ್ಷಿಪ್ತ ರೂಪ. ಇದು ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ಅತಿ ಹೆಚ್ಚು ಬಾರಿ ಪ್ರಸ್ತಾಪವಾದ ಸರ್ಕಾರಿ ಸಂಸ್ಥೆಯ ಹೆಸರು.

ಇಡೀ ರಾಜ್ಯದ ಮದ್ಯ ಮಾರಾಟದಲ್ಲಿ ಏಕಸ್ವಾಮ್ಯವನ್ನು ಹೊಂದಿರುವ ಈ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಖರೀದಿಸಿದ ಬಿಯರ್‌ನ ಪ್ರಮಾಣ ಮಾಮೂಲು ಖರೀದಿಗಿಂತ ಶೇಕಡಾ 40ರಷ್ಟು ಹೆಚ್ಚಿತ್ತು. ಉಳಿದಂತೆ ಬ್ರಾಂಡಿ, ಜಿನ್, ವೊಡ್ಕಾ, ವಿಸ್ಕಿಯಂಥ ಭಾರತೀಯ ತಯಾರಿಕೆಯ ವಿದೇಶಿ ಮದ್ಯದ ಪ್ರಮಾಣವೂ ಮಾಮೂಲಿಗಿಂತ ಶೇಕಡಾ 19ರಷ್ಟು ಹೆಚ್ಚಿತ್ತು.

ವಿಪರ್ಯಾಸವೆಂದರೆ ತಮಿಳುನಾಡಿನ ಎಲ್ಲಾ ಪ್ರಮುಖ ರಾಜಕಾರಣಿಗಳೂ ತಮ್ಮ ಭಾಷಣಗಳಲ್ಲಿ ‘ಟಾಸ್‌ಮ್ಯಾಕ್‌’ನ ಹೆಸರನ್ನು ಪ್ರಸ್ತಾಪಿಸುವುದು,  ‘ತಾವು ಅಧಿಕಾರಕ್ಕೆ ಬಂದರೆ ಈ ಅಂಗಡಿಗಳನ್ನು ಮುಚ್ಚಿಬಿಡುತ್ತೇವೆ. ಯುವ ವಿಧವೆಯರನ್ನು ಸೃಷ್ಟಿಸುತ್ತಿರುವ ಮದ್ಯವೆಂಬ ಪೀಡೆಯನ್ನು ಇಲ್ಲವಾಗಿಸಿಬಿಡುತ್ತೇವೆ’ ಎಂದು ಹೇಳುವುದಕ್ಕೆ.

ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳೂ ಏಕಕಂಠದಲ್ಲಿ ಪ್ರಸ್ತಾಪಿಸಿರುವ ಒಂದು ವಿಷಯ, ‘ಪಾನ ನಿಷೇಧ’. ಡಿಎಂಕೆ ಒಂದು ವರ್ಷ ಮೊದಲೇ, ತಾನು ಅಧಿಕಾರಕ್ಕೆ ಬಂದರೆ ಪಾನ ನಿಷೇಧ ಜಾರಿಗೆ ತರುತ್ತೇನೆ ಎಂದಿತ್ತು.

ವಿಜಯಕಾಂತ್ ನೇತೃತ್ವದ ಮಕ್ಕಳ್ ನಲ ಕೂಟ್ಟಣಿ (ಪೀಪಲ್ಸ್ ವೆಲ್ಫೇರ್ ಫ್ರಂಟ್) ಎಐಎಡಿಎಂಕೆ ಮತ್ತು ಡಿಎಂಕೆಗಳೆರಡರ ವಿರುದ್ಧ ದಾಳಿ ಮಾಡುವುದಕ್ಕೂ ಟಾಸ್‌ಮ್ಯಾಕ್ ಅಂಗಡಿಗಳನ್ನೇ ಬಳಸಿಕೊಳ್ಳುತ್ತದೆ. ಪಾಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಸಂಪೂರ್ಣ ಪಾನ ನಿಷೇಧದ ಬಗ್ಗೆ ಹೇಳಲು ಆರಂಭಿಸಿ ವರ್ಷಗಳೇ ಉರುಳಿದವು. ನಾಮ್ ತಮಿಳರ್ ಪಕ್ಷ ತಮಿಳು ಅನನ್ಯತೆಯನ್ನು ಪ್ರತಿಪಾದಿಸುವ ಅದೇ ಉತ್ಸಾಹದಲ್ಲಿ ಟಾಸ್‌ಮ್ಯಾಕ್ ಅಂಗಡಿಗಳ ಅನಾಹುತಗಳನ್ನೂ ಹೇಳುತ್ತಿದೆ.

ಪಾನ ನಿಷೇಧ ತಮಿಳುನಾಡಿಗೆ ಹೊಸ ವಿಷಯವೇನೂ ಅಲ್ಲ. 1937ರಲ್ಲಿಯೇ ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ಸೇಲಂ ಜಿಲ್ಲೆಯಲ್ಲಿ ಪಾನ ನಿಷೇಧವನ್ನು ಜಾರಿಗೆ ತಂದಿತ್ತು.

ಅದನ್ನು ನಿಧಾನವಾಗಿ ರಾಜ್ಯದ ಇತರ ಪ್ರದೇಶಗಳಿಗೂ ವಿಸ್ತರಿಸಿತ್ತು. ರಾಜಾಜಿ ಎಂದೇ ಹೆಸರಾಗಿರುವ ಸಿ.ರಾಜಗೋಪಾಲಾಚಾರಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಇದನ್ನು ಮುಂದುವರಿಸಿತ್ತು. ಇದರಿಂದಾಗುವ ನಷ್ಟವನ್ನು ಭರಿಸುವುದಕ್ಕೆ ಮದ್ಯಪಾನಿಗಳಿಗೆ ಪರ್ಮಿಟ್ ನೀಡುವ ವ್ಯವಸ್ಥೆಯೊಂದನ್ನು ಜಾರಿಗೆ ತಂದಿತ್ತು.

ಈ ನಿಷೇಧ 1952ರಲ್ಲಿಯೂ ಮುಂದುವರಿಯಿತು. 1971ರಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ ಸರ್ಕಾರ, ‘ನೆರೆಯ ರಾಜ್ಯಗಳಲ್ಲಿ ನಿಷೇಧವಿಲ್ಲ. ಭಾರತಾದ್ಯಂತ ನಿಷೇಧ ಜಾರಿಯಾಗುವ ತನಕ ತಮಿಳುನಾಡಿನಲ್ಲಿ ಮಾತ್ರ ಇದನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ’ ಎಂದು ನಿಷೇಧವನ್ನು ತೆರವುಗೊಳಿಸಿತು. ಆದರೆ 1974ರಲ್ಲಿ ಅದೇ ಸರ್ಕಾರ ಮತ್ತೆ ನಿಷೇಧವನ್ನು ಜಾರಿಗೆ ತಂದಿತು.

ಎಂ.ಜಿ.ರಾಮಚಂದ್ರನ್ ನೇತೃತ್ವದ ಎಐಎಡಿಎಂಕೆ ಸರ್ಕಾರ 1981ರಲ್ಲಿ ಮತ್ತೆ ನಿಷೇಧವನ್ನು ತೆರವುಗೊಳಿಸಿತು. 1983ರಲ್ಲಿ ಮದ್ಯ ಮಾರಾಟ ಮಾಡುವುದಕ್ಕಾಗಿ ಟಾಸ್‌ಮ್ಯಾಕ್ ಎಂಬ ಸಂಸ್ಥೆಯನ್ನೂ, ಮದ್ಯ ತಯಾರಿಕೆಗಾಗಿ ತಮಿಳುನಾಡು ಸ್ಪಿರಿಟ್ ಕಾರ್ಪೊರೇಷನ್ (ಟಾಸ್ಕೊ) ಎಂಬ ಸಂಸ್ಥೆಯನ್ನೂ ಸ್ಥಾಪಿಸಿತು.

1987ರ ವೇಳೆಗೆ ಟಾಸ್ಕೋವನ್ನು ಬರ್ಖಾಸ್ತು ಮಾಡಿ ಖಾಸಗಿ ಉತ್ಪಾದಕರಿಂದಲೇ ಮದ್ಯ ಖರೀದಿಸಿ ಮಾರಾಟ ಮಾಡುವ ಪರಿಪಾಠ ಆರಂಭವಾಯಿತು. 2003ರಲ್ಲಿ ಜಯಲಲಿತಾ ಅವರ ಸರ್ಕಾರ ಇಡೀ ರಾಜ್ಯದಲ್ಲಿನ ಚಿಲ್ಲರೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ಟಾಸ್‌ಮ್ಯಾಕ್‌ಗೆ ವಹಿಸಿಕೊಟ್ಟಿತು.

2003ರಲ್ಲಿ  ₹2828 ಕೋಟಿಗಳಷ್ಟು ವ್ಯವಹಾರ ನಡೆಸುತ್ತಿದ್ದ ಟಾಸ್‌ಮ್ಯಾಕ್ ಕಳೆದ ಆರ್ಥಿಕ ವರ್ಷದಲ್ಲಿ ನಡೆಸಿದ ವ್ಯವಹಾರದ ಪ್ರಮಾಣ ₹26,118 ಕೋಟಿಗಳು. ರಾಜ್ಯವ್ಯಾಪಿಯಾಗಿ ಇರುವ 11 ಡಿಸ್ಟಿಲರಿಗಳಿಂದ 211 ಬ್ರಾಂಡ್‌ಗಳ ಮದ್ಯವನ್ನು ಟಾಸ್‌ಮ್ಯಾಕ್ ಖರೀದಿಸುತ್ತದೆ.

2010ರಿಂದ 2015ರ ನಡುವಣ ಅವಧಿಯಲ್ಲಿ ಡಿಎಂಕೆಯ ಜೊತೆಗೆ ಸಂಬಂಧ ಹೊಂದಿರುವ ಗೋಲ್ಡನ್ ವ್ಯಾಟ್ ಎಂಬ ಕಂಪೆನಿಯ ಉತ್ಪನ್ನದ ಮಾರಾಟ ದುಪ್ಪಟ್ಟಾಗಿದ್ದರೆ ಮತ್ತು ಎಐಎಡಿಎಂಕೆ ಜೊತೆಗೆ ಸಂಬಂಧ ಹೊಂದಿರುವ ಮಿದಾಸ್ ಎಂಬ ಕಂಪೆನಿಯ ಉತ್ಪನ್ನದ ಮಾರಾಟ ಮೂರೂವರೆ ಪಟ್ಟು ಹೆಚ್ಚಾಗಿದೆ ಎಂಬುದನ್ನು ರಾಷ್ಟ್ರೀಯ ಇಂಗ್ಲಿಷ್ ದೈನಿಕವೊಂದು ಏಪ್ರಿಲ್‌ನಲ್ಲಿ ವರದಿ ಮಾಡಿತ್ತು. ಇದೇ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿರದ ಮಾಲೀಕರಿರುವ ಕಂಪೆನಿಗಳ ವ್ಯವಹಾರ ಕಡಿಮೆಯೂ ಆಗಿತ್ತು.

ಟಾಸ್‌ಮ್ಯಾಕ್ ಅಂಗಡಿಗಳು ಸರ್ಕಾರದ್ದು ಎಂಬುದೇನೋ ನಿಜ. ಆದರೆ ಇವುಗಳಿಗೆ ಹೊಂದಿಕೊಂಡಂತೆಯೇ ಕುಡಿಯುವರಿಗೆ ಬೇಕಿರುವ ವ್ಯವಸ್ಥೆ ಮಾಡಿಕೊಡುವ ‘ಬಾರ್’ ಖಾಸಗಿಯವರದ್ದು. ಈ ‘ಬಾರ್‌’ಗಳನ್ನು ನಡೆಸುವವರು ಸಾಮಾನ್ಯವಾಗಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಸಂಬಂಧವಿಟ್ಟುಕೊಂಡವರೇ. ‘ಜಯಲಲಿತಾ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಬಗೆಯ ಅಂಗಡಿಗಳ ಸಂಖ್ಯೆ 1,800ರಿಂದ 6000ಕ್ಕೆ ಏರಿತು.

ಇವುಗಳಿಗೆ ಹೊಂದಿಕೊಂಡಿರುವ ಬಾರ್ ಯಾರ ಕೈಯಲ್ಲಿದೆ ಎಂಬುದನ್ನು ಹೇಳುವ ಅಗತ್ಯವಿದೆಯೇ’ ಎಂಬ ಮಧುರೈನ ಪಿಯುಸಿಎಲ್ ಪದಾಧಿಕಾರಿ ಮುರಳಿ ಅವರ ಪ್ರಶ್ನೆ ಎಲ್ಲವನ್ನೂ ಹೇಳುತ್ತದೆ.

ಇನ್ನು ಮದ್ಯಪಾನ ನಿಷೇಧದ ಬಗ್ಗೆ ಮಾತನಾಡುತ್ತಿರುವ ಪಕ್ಷಗಳಿಗೂ ಅವುಗಳದ್ದೇ ಆಸಕ್ತಿಗಳಿವೆ. ಡಿಎಂಕೆಯ ಮಟ್ಟಿಗೆ ಇದು ಜಯಲಲಿತಾ ವಿರುದ್ಧ ಪ್ರಯೋಗಿಸಲು ಸಿಕ್ಕಿರುವ ಅಸ್ತ್ರ. ಪಶ್ಚಿಮ ತಮಿಳುನಾಡಿನಲ್ಲಿ ಮದ್ಯಕ್ಕೆ ಬಲಿಯಾದವರಲ್ಲಿ ಬಹುಸಂಖ್ಯೆಯ ತೇವರ್‌ಗಳಿರುವುದು ಪಿಎಂಕೆಗೆ ಮದ್ಯನಿಷೇಧದ ಕುರಿತು ಆಸಕ್ತಿ ಹುಟ್ಟಿಸಿದೆ.

ಪೀಪಲ್ಸ್ ವೆಲ್ಫೇರ್‌ ಫ್ರಂಟ್‌ನಲ್ಲಿ ಇರುವ ಎಲ್ಲಾ ಅಂಗ ಪಕ್ಷಗಳಿಗೂ ಇದು ಜಯಲಲಿತಾ ಮತ್ತು ಡಿಎಂಕೆ ವಿರುದ್ಧ ದಾಳಿ ನಡೆಸುವುದಕ್ಕೆ ಬೇಕಿರುವ ಆಯುಧವನ್ನು ಒದಗಿಸಿದೆ.

ಎಐಎಡಿಎಂಕೆ ಕೂಡಾ ಪಾನ ನಿಷೇಧದ ವಿಚಾರದಲ್ಲಿ ಉಳಿದವರಿಗಿಂತ ಹಿಂದೆ ಬಿದ್ದಿಲ್ಲ. ಅದರ ಪ್ರಣಾಳಿಕೆಯೂ ಬಹಳ ‘ಪ್ರಾಯೋಗಿಕ’ವಾದ ಹಂತ ಹಂತದ ಪಾನ ನಿಷೇಧವನ್ನು ಪ್ರಸ್ತಾಪಿಸಿದೆ.

ತಂದೈ ಪೆರಿಯಾರ್ ದ್ರಾವಿಡ ಕಳಗಂನ ಪ್ರಧಾನ ಕಾರ್ಯದರ್ಶಿ ಕೆ. ರಾಮಕೃಷ್ಣ ತಿರುಕ್ಕುರಳ್‌ನ ಸಾಲುಗಳಲ್ಲಿ ವಿವರಿಸಿದರು: ‘ಗುಟ್ಟಾಗಿ ಕುಡಿದು ಕಣ್ಣ ಭಾರ ಮಾಡಿಕೊಂಡವರ ರಹಸ್ಯವೂ ಊರವರೆಲ್ಲರ ಬಾಯಲ್ಲಿ ಗೇಲಿಗೊಳಗಾಗುತ್ತದೆ ಎಂಬರ್ಥದ ಕುರಳ್ ಒಂದಿದೆ. ಪಾನ ನಿಷೇಧದ ಬಗ್ಗೆ ಮಾತನಾಡುತ್ತಿರುವವರ ಬಗ್ಗೆ ಸದ್ಯಕ್ಕೆ ಜನರಿಗನ್ನಿಸುತ್ತಿರುವುದೂ ಇದುವೇ. ಹೇಗಾದರೂ ಸರಿ ಪೀಡೆಯೊಂದು ತೊಲಗಲಿ ಎಂಬುದು ಎಲ್ಲರ ಒಳಆಸೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT