ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುರ ಮಧುರವೀ ಮಂಜುಳ ಗಾನ...

ಗಾಯಕಿ ಬಿ.ಕೆ. ಸುಮಿತ್ರಾ ಬದುಕಿನ ಕೆಲವು ಪುಟಗಳು
Last Updated 7 ಮೇ 2016, 19:33 IST
ಅಕ್ಷರ ಗಾತ್ರ

ಕೊಪ್ಪ ತಾಲ್ಲೂಕಿನ ಪುಟ್ಟ ಹಳ್ಳಿ ಬಿಳಾಲುಕೊಪ್ಪ ನನ್ನೂರು. ಹೊರನಾಡು ಮತ್ತು ಶೃಂಗೇರಿ ನಡುವಿನ ಅಪ್ಪಟ ಮಲೆನಾಡಿನ ಈ ಪರಿಸರವೇ ನನ್ನ ಬದುಕನ್ನು ಕಟ್ಟಿಕೊಟ್ಟಿದ್ದು.

ನಾನಾಗ ಚಿಕ್ಕವಳು. ಬೆಳಗಿನ ಜಾವ ಮೂರು ಗಂಟೆಯವರೆಗೂ ಮನೆಯಲ್ಲಿ ಆಳುಗಳು ಅಡಿಕೆ ಸುಲಿಯುವ, ಬೇಯಿಸುವ ಕೆಲಸ ಮಾಡುತ್ತಿದ್ದರು. ರೇಡಿಯೊ ಬಳಕೆ ಇರಲಿಲ್ಲ.

ಕೆಲಸ ಮಾಡುತ್ತಲೇ ಕಥೆ ಹೇಳುವುದು, ಜಾನಪದ ಹಾಡು ಹೇಳುವುದು ರೂಢಿ. ಈ ಸಂಪ್ರದಾಯ ಇಂದಿಗೂ ಇದೆ. ಈ ಹಾಡುಗಳನ್ನು ಕೇಳಿಸಿಕೊಳ್ಳುತ್ತಾ ಅಡಿಕೆ ಸುಲಿಯುತ್ತ ಬೆಳೆದವಳು ನಾನು. ಬಾಲ್ಯದ ಆ ರಾತ್ರಿಗಳೇ ನನ್ನ ಸಂಗೀತ ಕಲಿಕೆಯ ಆರಂಭದ ದಿನಗಳು. ಅಡಿಕೆ ಸುಲಿಯುತ್ತಾ ಹಾಡು ಕೇಳುತ್ತಾ ನಾನೂ ಗುನುಗುತ್ತಾ ಬೆಳೆದೆ. ನಮ್ಮ ತಂದೆ ಪಟೇಲ್ ಕೃಷ್ಣಯ್ಯ. ಅವರು ಯಕ್ಷಗಾನ ಕಲಾವಿದರು. ಈ ಹಿನ್ನೆಲೆ­ಯಲ್ಲಿ ನೋಡಿದರೆ ಕಲೆ ನನಗೆ ರಕ್ತಗತವಾದುದು.

ನನ್ನ ಬಾಲ್ಯವನ್ನು ನೆನಪಿಸಿಕೊಂಡರೆ ರೋಮಾಂಚನ ಆಗುತ್ತದೆ. ನನ್ನ ಹಳ್ಳಿಯೇ ನನ್ನ ಎಲ್ಲ ಏಳಿಗೆಗಳಿಗೂ ಕಾರಣ ಎನ್ನಿಸುತ್ತದೆ. ಮನೆಯ ಹಿಂಭಾಗ–ಮುಂಭಾಗದಲ್ಲಿ ದಟ್ಟ ಕಾಡಿತ್ತು, ಅಡಿಕೆ ಮರಗಳಿದ್ದವು. ಮನೆಯಿಂದ ಸ್ವಲ್ಪ ಕೆಳಕ್ಕೆ ಇಳಿದರೆ ಗದ್ದೆಯ ಅಂಚು. ಈ ಗದ್ದೆಯಲ್ಲಿ ನವಿಲುಗಳ ನರ್ತನ. ಇರುಳಿನಲ್ಲಿ ನರಿಗಳು ಊಳಿಡುತ್ತಿದ್ದವು.

ಸುಂದರವಾದ ಪರಿಸರ ಅದು. ಇದನ್ನೆಲ್ಲ ಹೇಳುವುದಕ್ಕಿಂತ ಅನುಭವಿಸಬೇಕು. ಆ ಅನುಭವದಿಂದ ಹೊಸತನ್ನು ಪಡೆಯಬಹುದು. ಈ ವಾತಾವರಣ ನನಗೆ ಹುಮ್ಮಸ್ಸು ಮತ್ತು ಶಾಂತಿಯನ್ನು ತಂದುಕೊಟ್ಟಿತ್ತು. ಇಂದಿಗೂ ನನಗೆ ತವರು ಮನೆಯ ಮೋಹ ಬಿಟ್ಟಿಲ್ಲ. ವರುಷಕ್ಕೆ ನಾಲ್ಕಾರು ಬಾರಿಯಾದರೂ ನನ್ನ ಹಳ್ಳಿಗೆ ಹೋಗುತ್ತೇನೆ. ಪ್ರಸ್ತುತ ಅನಿವಾರ್ಯ ಕಾರಣಗಳಿಂದ ನಗರದಲ್ಲಿ ಇದ್ದೇನೆ.

‘ನಮ್ಮೂರೇ ನಮಗೆ ಚಂದ’ ಎನ್ನುವಂತೆ ನನ್ನೂರ ಸೆಳೆತ ಇದ್ದೇ ಇದೆ. ಮನೆಯಿಂದ ನಾಲ್ಕು ಕಿಲೋಮೀಟರ್ ನಡೆದು ಪ್ರಾಥಮಿಕ ಶಾಲೆಗೆ ಹೋಗಬೇಕಿತ್ತು. ನಮ್ಮ ಅತ್ತೆ ಕಾವೇರಮ್ಮ. ಒಂಬತ್ತು ವರುಷಕ್ಕೆ ಮದುವೆಯಾಗಿ ಹನ್ನೊಂದು ವರುಷಕ್ಕೆ ವಿಧವೆಯಾದವರು. ತಲೆಗೂದಲು ತೆಗೆದಿದ್ದ ಆಕೆ ಕೆಂಪು ಸೀರೆ ಉಡುತ್ತಿದ್ದ ಮಡಿವಂತೆ. ಮದುವೆ, ಹಸೆ ಇತ್ಯಾದಿ ಸಂಪ್ರದಾಯದ ಹಾಡುಗಳನ್ನು ಅವರು ಚೆನ್ನಾಗಿ ಹಾಡುತ್ತಿದ್ದರು. ಅದೆಲ್ಲವನ್ನೂ ನಾನು ಅವರಿಂದ ಕಲಿತುಕೊಂಡೆ. ನಮ್ಮ ಮನೆಯ ಕೆಲಸಕ್ಕೆ ಬರುತ್ತಿದ್ದ ಬೈರಿ ಮತ್ತು ಹೂವಿ ಹೇಳುತ್ತಿದ್ದ ಜಾನಪದ ಹಾಡುಗಳೂ ನನಗೆ ಕಂಠಪಾಠವಾದವು. ಅತ್ತೆಯೇ ನನ್ನ ಮೊದಲ ಸಂಗೀತ ಗುರು ಎನ್ನಬಹುದು.

ಅಪ್ಪನೆಂಬ ಆಲದ ಮರ
ನನ್ನ ಬದುಕಿಗೆ ರೂಪುಕೊಟ್ಟಿದ್ದು ಅಪ್ಪ. ‘ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳು ಯಾವುದರಲ್ಲೂ ಕಡಿಮೆ ಇರಬಾರದು. ಹೆಣ್ಣು ಸ್ವತಂತ್ರವಾಗಿ ಬೆಳೆಯಬೇಕು’ ಎಂದು ಆ ಸಮಯದಲ್ಲಿಯೇ ಅವರು ಚಿಂತಿಸುತ್ತಿದ್ದರು.

ಹೆಣ್ಣುಮಕ್ಕಳು ಓದಬೇಕು ಎನ್ನುವುದು ಅಪ್ಪನ ನಿಲುವು. ‘ಪಟೇಲ್ ಕೃಷ್ಣಯ್ಯ, ಹೆಣ್ಣು ಮಕ್ಕಳನ್ನು ಓದಿಸಿ ಏನು ಮಾಡುತ್ತೀರಿ’ ಎಂದು ಕೆಲವರು ಕೇಳುತ್ತಿದ್ದ ಸಮಯಲ್ಲಿ ಅಪ್ಪ ನನ್ನನ್ನು ಶಿವಮೊಗ್ಗದಲ್ಲಿ ಶಾಲೆಗೆ ಸೇರಿಸಿದರು. ಶಿವಮೊಗ್ಗಕ್ಕೂ ನಮ್ಮೂರಿಗೆ ಎಂಬತ್ತು ಕಿಲೋಮೀಟರ್ ಹಾದಿ. ಶಿವಮೊಗ್ಗೆಯಲ್ಲಿ ಮನೆ ಮಾಡಿ, ಅಡುಗೆಗೆ ಒಬ್ಬರನ್ನು ನೇಮಿಸಿ ಶಿಕ್ಷಣ ಕೊಡಿಸಿದರು.

ಅವರು ಶಿವಮೊಗ್ಗದಲ್ಲಿ ಅಡಿಕೆ ಮಂಡಿ ನಡೆಸುತ್ತಿದ್ದರು. ಲಾರಿ ಮತ್ತು ಜೀಪು ಮನೆಯಲ್ಲಿತ್ತು. ನಾವು ಶಾಲೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕುತ್ತಿದ್ದ ಮಕ್ಕಳನ್ನೆಲ್ಲ ಜೀಪಿಗೆ ಹತ್ತಿಸಿಕೊಳ್ಳುತ್ತಿದ್ದೆವು. ಜೋರಾಗಿ ಮಳೆ ಸುರಿದರೆ ರಸ್ತೆ ಕಟ್ ಆಗುತ್ತಿತ್ತು. ಜಡಿ ಮಳೆ ಹಿಡಿದರೆ ಮೂರ್ನಾಲ್ಕು ದಿನಗಳ ಕಾಲ ಸೂರ್ಯನನ್ನೇ ನೋಡುತ್ತಿರಲಿಲ್ಲ. ಆಗಿನ ಮಲೆನಾಡು ಈಗಿಲ್ಲ ಬಿಡಿ. ಅದೆಲ್ಲ ನೆನಪು.

ಅಪ್ಪ ಪ್ರಗತಿಪರವಾಗಿ ಆಲೋಚಿಸುತ್ತಿದ್ದರು. ಮನೆಯಲ್ಲಿ ಜಾತಿಮತದ ಕಟ್ಟುನಿಟ್ಟುಗಳು ತೀವ್ರವಾಗಿ ಇರಲಿಲ್ಲ. ಹರಿಜನರ ಮಕ್ಕಳು ನಮ್ಮ ಹತ್ತಿರ ಬರಲು ಮುಜುಗರಪಡುತ್ತಿದ್ದ ಕಾಲ ಅದು. ಆದರೆ ನನ್ನದು ಅವರ ಜತೆ ಆಟ–ಸ್ನಾನ, ಮರಹತ್ತಿ ಸೀಬೆ ಕಾಯಿ ಕೊಯ್ಯುವಷ್ಟು ಸ್ನೇಹ. ಮನೆಯಲ್ಲಿ ಇದನ್ನು ಪ್ರಶ್ನಿಸುತ್ತಿರಲಿಲ್ಲ. ಅತ್ತೆ ಮಾತ್ರ ಮಡಿವಂತೆ.

ಹೊರಗೆ ಹೋದರೆ– ‘ಸ್ನಾನ ಮಾಡಿಕೊಂಡು ಒಳಗೆ ಬಾ’ ಎನ್ನುತ್ತಿದ್ದರು. ಈಗಲೂ ಹಳ್ಳಿಯ ನಮ್ಮ ಮನೆಯಲ್ಲಿ ಮಡಿ–ಮೈಲಿಗೆಯ ಕಟ್ಟುನಿಟ್ಟುಗಳು ಜಾರಿಯಲ್ಲಿ ಇಲ್ಲ.

ಶಿವಮೊಗ್ಗೆಯ ಸಂಗದಲ್ಲಿ...
ಬದುಕಿನ ಅರ್ಧ ಜೀವನ ಕಳೆದಿದ್ದು ಮತ್ತು ಬದುಕು ಬೆಳೆದಿದ್ದು ಶಿವಮೊಗ್ಗೆಯಲ್ಲಿ. ಟೈಪ್‌ರೈಟಿಂಗ್, ಶಾರ್ಟ್ ಹ್ಯಾಂಡ್ ಕಲಿಕೆ, ಶಿಕ್ಷಣ, ಸಂಗೀತ ಹೀಗೆ ಶಿವಮೊಗ್ಗದಲ್ಲಿ ಬಿಡುವಿಲ್ಲದೇ ನನ್ನ ಕಲಿಕೆ ಸಾಗಿತ್ತು. ‘ನಾಲ್ಕು ದೋಣಿ ಮೇಲೆ ಕಾಲಿಟ್ಟಿದ್ದೀಯಾ ಎಲ್ಲಾದರೂ ಬಿದ್ದು ಹೋಗುತ್ತೀಯಾ’ ಎಂದು ಮನೆಯಲ್ಲಿ ಬೈಯುತ್ತಿದ್ದರು. ಸಾ.ಶಿ. ಮರುಳಯ್ಯ ನನಗೆ ಉಪನ್ಯಾಸಕರಾಗಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ. ಕೃಷ್ಣ ಅವರ ಮಡದಿ ಪ್ರೇಮಾ ನನ್ನ ಸಹಪಾಠಿ. ಮಾಜಿ ಸಚಿವ ಬೇಗಾನೆ ರಾಮಯ್ಯ, ಗಾಯಕ ಶಿವಮೊಗ್ಗ ಸುಬ್ಬಣ್ಣ  ನನ್ನ ಹಿರಿಯ ವಿದ್ಯಾರ್ಥಿಗಳು.

ಶಿವಮೊಗ್ಗಕ್ಕೆ ಬಂದಾಗ ಮಂಜಪ್ಪ ಜೋಯಿಸರ ಬಳಿ ಶಾಸ್ತ್ರೀಯ ಸಂಗೀತದ ಅಭ್ಯಾಸ ನಡೆಸಿದೆ. ಮತ್ತೊಬ್ಬ ಸಂಗೀತದ ಮೇಷ್ಟ್ರು ಪ್ರಭಾಕರ್ ಅವರ ಬಳಿಯೂ ಕಲಿಕೆ ಸಾಗಿತು. ನಟಿ ಪಂಡರೀಬಾಯಿ ಅವರ ಸಹೋದರ ಪ್ರಭಾಕರ್ ಅವರ ಬಳಿ ಜೂನಿಯರ್, ಸೀನಿಯರ್ ಸಂಗೀತಾಭ್ಯಾಸ ಮಾಡಿದೆ. ಶಾಸ್ತ್ರೀಯ ಸಂಗೀತವನ್ನು ಬಿಟ್ಟರೆ ಬೇರೆ ಸಂಗೀತವೇ ಇಲ್ಲ ಎಂದುಕೊಂಡಿದ್ದೆ.

ನನ್ನ ಚಿಕ್ಕಪ್ಪನ ಮಗಳೊಬ್ಬಳನ್ನು ಬಾಂಬೆಗೆ ಕೊಟ್ಟು ಮದುವೆ ಮಾಡಿದ್ದರು. ಅಲ್ಲಿಗೆ ಹೋಗುತ್ತಿದ್ದಾಗ ಆಶಾ ಬೋಸ್ಲೆ ಮತ್ತಿತರರ ಹಾಡುಗಳನ್ನು ಕೇಳುತ್ತಿದ್ದೆ. ಅಭಂಗ್ ಮತ್ತಿತರ ಪ್ರಕಾರಗಳು ನನ್ನ ಅನುಭವಕ್ಕೆ ಬಂದವು. ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ಮಾಡುವವರೆಗೂ ನಾನು ಸಿನಿಮಾಕ್ಕೆ ಹಾಡುತ್ತೇನೆ ಎಂದುಕೊಂಡಿರಲಿಲ್ಲ. ಶಾಸ್ತ್ರೀಯ ಸಂಗೀತಕ್ಕೆ ಜೀವನವನ್ನೇ ಮುಡುಪಾಗಿಟ್ಟು ಸಾಧಿಸಬೇಕು. ಆದರೆ ಆ ವಯಸ್ಸಿನಲ್ಲಿ ನನಗೆ ಪ್ರಬುದ್ಧತೆ ಇರಲಿಲ್ಲ. ಶಾಸ್ತ್ರೀಯ ಸಂಗೀತಕ್ಕೆ ಅದರದ್ದೇ ಆದ ಗತ್ತು ಇರುತ್ತದೆ. ಅದನ್ನು ನಾನು ಮುಂದುವರಿಸದೇ ನಡುವೆಯೇ ಬಿಟ್ಟೆ.

ಎಂದೂ ಮರೆಯದ ಮೊದಲ ಹಾಡು
ಬಿ.ಎಸ್ಸಿ ಪರೀಕ್ಷೆ ಇನ್ನೂ ಮುಗಿದಿರಲಿಲ್ಲ. ಪಂಡರೀಬಾಯಿ ಅವರ ಸಹೋದರ ಪ್ರಭಾಕರ್ ನನ್ನ ಗುರುಗಳು. ನನ್ನ ತಂದೆ ಮತ್ತು ಪಂಡರೀಬಾಯಿ ಅವರ ತಂದೆ ಸ್ನೇಹಿತರು.

ಒಮ್ಮೆ ಮದ್ರಾಸಿನಲ್ಲಿ ಪಂಡರೀಬಾಯಿ ಅವರನ್ನು ಭೇಟಿಯಾಗಲು ಅಪ್ಪ ನನ್ನನ್ನು ಕರೆದುಕೊಂಡು ಹೋಗಿದ್ದರು. ಅದೇ ಸಂದರ್ಭದಲ್ಲಿ ‘ಕವಲೆರಡು ಕುಲವೊಂದು’ ಸಿನಿಮಾದ ರೀರೆಕಾರ್ಡಿಂಗ್ ನಡೆಯುತ್ತಿತ್ತು. ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶಕರು. ‘ಹಾಡುತ್ತೀಯಾ’ ಎಂದು ಕೇಳಿದರು. ಯಾವ ಹುಮ್ಮಸ್ಸಿನಲ್ಲಿಯೋ ಏನೋ ಒಪ್ಪಿದೆ. ಮೂರ್ತಿ ಎನ್ನುವವರ ಜತೆ ಮೊದಲ ಯುಗಳ ಗೀತೆಯನ್ನು ಹಾಡಿದೆ. ಅದು 1964ನೇ ಇಸವಿ.

ನನ್ನ ಮಗಳ ಹೆಸರನ್ನು ರೇಡಿಯೊದಲ್ಲಿ ಕೇಳಬೇಕು ಎನ್ನುವುದು ಅಪ್ಪನ ಆಸೆಯಾಗಿತ್ತು. ಸಿನಿಮಾದಲ್ಲಿ ಹಾಡಿದರೆ ರೇಡಿಯೊದಲ್ಲಿ ಹೆಸರು ಕೇಳಬಹುದು ಎನ್ನುವುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಮದ್ರಾಸಿನಲ್ಲಿ ಮನೆ ಮಾಡಿಕೊಟ್ಟು, ಅಲ್ಲೂ ಅಡುಗೆಯವರನ್ನು ನೇಮಿಸಿ ನನ್ನ ಖರ್ಚುವೆಚ್ಚಗಳನ್ನು ನೋಡಿಕೊಂಡರು. ‘ನೀನು ಎಷ್ಟು ವರುಷ ಹಾಡಬೇಕೋ ಹಾಡು’ ಎಂದು ಬೆನ್ನುತಟ್ಟಿದರು. ನನ್ನ ತಂದೆ ಇಲ್ಲದೆ ಏನೂ ಸಾಧ್ಯವಿರಲಿಲ್ಲ. ಮಲೆನಾಡಿಗರಿಗೆ ಸ್ವಾಭಿಮಾನ ಸ್ವಲ್ಪ ಹೆಚ್ಚು. ನಾನಾಗಿಯೇ ಅವಕಾಶಗಳನ್ನು ಕೇಳಲಿಲ್ಲ. ತಾನಾಗಿಯೇ ಅವಕಾಶಗಳು ಬಂದವು. ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡೆ.

ಜಿ.ಕೆ. ವೆಂಕಟೇಶ್ ಅವಕಾಶಕೊಟ್ಟ ನಂತರ ನಾಲ್ಕಾರು ಸಿನಿಮಾಗಳಲ್ಲಿ ಹಾಡಿದೆ. ಆಗಿನ ಸಮಯದಲ್ಲಿ ವಿಜಯ ಭಾಸ್ಕರ್ ಕನ್ನಡದ ಗಾಯಕಿಯರ ಪರವಾಗಿದ್ದರು. ಪಿ. ಸುಶೀಲಾ, ಎಸ್. ಜಾನಕಿ ಮತ್ತು ಎಲ್‌.ಆರ್. ಈಶ್ವರಿ ಅವರಿಗೆ ಹೆಚ್ಚು ಅವಕಾಶಗಳು ಇದ್ದವು. ಅವರಿಂದ ಅಳಿದು ಉಳಿದಿದ್ದು ಕನ್ನಡಿಗರಿಗೆ ಎನ್ನುವಂಥ ಸಂದರ್ಭ. ಅದಾಗಲೇ ವಿಜಯ್ ಭಾಸ್ಕರ್ ಅವರು ರಜನಿ, ಬೆಂಗಳೂರು ಲತಾ ಅವರಿಂದ ಹಾಡಿಸಿದ್ದರು.

ನಾನು ‘ಗೆಜ್ಜೆಪೂಜೆ’, ‘ಮನೆಯೇ ಬೃಂದಾವನ’ ಮತ್ತಿತರ ಚಿತ್ರಗಳಲ್ಲಿ ಹಾಡಿದೆ. ನಂತರ ರಾಜನ್‌–ನಾಗೇಂದ್ರ ಸಿನಿಮಾಗಳಲ್ಲಿ ಹಾಡಿದೆ. ‘ಮಧುರ ಮಧುರವೀ ಮಂಜುಳ ಗಾನ...’ ಹಾಡು ಹೆಸರು ತಂದುಕೊಟ್ಟಿತು. ನನ್ನ ತರುವಾಯವೂ ಹಲವು ಗಾಯಕಿಯರಿಗೆ ವಿಜಯ್ ಭಾಸ್ಕರ್ ಅವಕಾಶ ನೀಡಿದರು. ನಾನು ಮಹತ್ವಾಕಾಂಕ್ಷಿಯಲ್ಲ. ಆದ ಕಾರಣ ಯಾವ ಕೊರಗುಗಳು ಇರಲಿಲ್ಲ. ಬಂದಿದ್ದರಲ್ಲಿ ತೃಪ್ತಿಪಡುತ್ತ ಸಮಾಧಾನಚಿತ್ತವಾಗಿ ಇರುತ್ತಿದ್ದೆ.

ದುಡಿಮೆ ಹುಟ್ಟಿದ ಕಾಲ
 ಚಿತ್ರನಟರೆಲ್ಲ ಇರುತ್ತಿದ್ದರು. ನಾನು ಪಂಡರೀಬಾಯಿ ಅವರ ನಾಟಕಗಳಲ್ಲಿ ಹಾಡುತ್ತಿದ್ದೆ. ಶ್ರೀನಾಥ್, ಶಿವರಾಮಣ್ಣ, ರತ್ನಾಕರ್ ಮತ್ತಿತರರು ಅಭಿನಯಿಸುತ್ತಿದ್ದರು. ವೆಂಕಟಗಿರಿ ಸತ್ಯಂ ಎನ್ನುವವರು ಕಾಂಚನಾ, ಹೇಮಾಮಾಲಿನಿ ಮತ್ತಿತರ ನಟಿಯರಿಗೆ ಕೂಚುಪುಡಿ ನೃತ್ಯ ಹೇಳಿಕೊಡುತ್ತಿದ್ದರು. ಅಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿತು. ಹೀಗೆ ನಾಟಕಗಳಲ್ಲಿ ಮತ್ತು ಕೂಚುಪುಡಿ ಕಲಿಕೆಯಲ್ಲಿ ಹಾಡುವ ಮೂಲಕ ನನ್ನ ದುಡಿಮೆ ಆರಂಭವಾಯಿತು.

ಚಿಂದೋಡಿ ಲೀಲಾ ಅವರ ತಾಯಿ ಎರಡು ತಿಂಗಳಿಗೆ ಒಮ್ಮೆ ಮದ್ರಾಸಿಗೆ ಬರುತ್ತಿದ್ದರು. ಉತ್ತರ ಕರ್ನಾಟಕದ ಖಡಕ್ ರೊಟ್ಟಿ ಮತ್ತು ಚಟ್ನಿಯನ್ನು ದೊಡ್ಡ ಗಂಟಿನಲ್ಲಿ ತರುತ್ತಿದ್ದರು. ಮದ್ರಾಸಿನಲ್ಲಿದ್ದ ಕನ್ನಡ ಚಿತ್ರರಂಗದ ಎಲ್ಲರ ಮನೆಗೆ ಹಂಚುತ್ತಿದ್ದರು. ಹೀಗೆ ಒಂದು ಕುಟುಂಬದ ವಾತಾವರಣ ಅಲ್ಲಿತ್ತು. ನಂತರ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆರಂಭವಾದವು.

ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪ್ರೀತಿಯ ಒತ್ತಾಯಕ್ಕೆ ‘ಎದ್ದೇಳು ಮಂಜುನಾಥ’ ಚಿತ್ರದ ‘ಆರತಿ ಎತ್ತಿರೇ ಕಳ್ಳ ಮಂಜಂಗೆ...’ ಹಾಡು ಹಾಡಿದೆ. ಅದು ನಾನು ಹಾಡಿದ ಕೊನೆಯ ಸಿನಿಮಾ ಗೀತೆ. ಸಂಗೀತ ಇಲ್ಲದೆ ಬಿ.ಕೆ. ಸುಮಿತ್ರಾ ಶೂನ್ಯ.

ನನ್ನ ಈಗಿನ ಕಾಯಕ ಎಂದರೆ ಸಂಗೀತ ಶಿಬಿರಗಳನ್ನು ನಡೆಸುವುದು. ಕಳೆದ ಹತ್ತು ವರುಷಗಳಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ 552 ಸಂಗೀತ ಶಿಬಿರಗಳನ್ನು ನಡೆಸಿಕೊಟ್ಟಿದ್ದೇನೆ. ಎರಡು ದಿನಗಳ ಈ ಶಿಬಿರದಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆಯವರಗೆ ಸಂಗೀತ ಹೇಳಿಕೊಡಲಾಗುತ್ತದೆ. ನನಗೆ ಹೋಗಿ ಬರುವ ಖರ್ಚು ವೆಚ್ಚ ಮತ್ತು ವಸತಿ ವ್ಯವಸ್ಥೆ ಮಾಡಿದರೆ ಸಾಕು.

ನನ್ನ ಜತೆ ಶ್ರೀನಿವಾಸ ಸಹ ಶಿಬಿರದಲ್ಲಿ ಪಾಲ್ಗೊಳ್ಳುವರು. ನನ್ನೂರಿನಿಂದ 80 ಕಿಲೋಮಿಟರ್ ದೂರದ ಶಿವಮೊಗ್ಗೆಯಲ್ಲಿ ನಾನು ಸಂಗೀತ ಕಲಿತವಳು. ಹಳ್ಳಿಯಲ್ಲಿ ಸಂಗೀತ ಕಲಿಯುವ ಆಸಕ್ತಿಯುಳ್ಳ ಮಕ್ಕಳು ಇದ್ದಾರೆ. ಅವರ ಬಳಿ ತೆರಳುವುದು ನಮ್ಮ ಶಿಬಿರದ ಉದ್ದೇಶ. ಎರಡೇ ದಿನಕ್ಕೆ ಸಂಗೀತವನ್ನು ಪೂರ್ಣವಾಗಿ ಹೇಳಿಕೊಡುತ್ತೇವೆ ಎಂದಲ್ಲ, ಸಂಗೀತ ಮತ್ತು ಸಾಹಿತ್ಯದ ಒಲವು ಬೆಳೆಯಲಿ ಎನ್ನುವುದು ಶಿಬಿರದ ಮುಖ್ಯ ಉದ್ದೇಶ.

ಇದು ಒಂದು ಉತ್ತಮ ಪ್ರಜ್ಞೆಗೆ ನಾಂದಿಯಾಗುತ್ತದೆ. ಇಲ್ಲಿನ ಶಿಬಿರಾರ್ಥಿಗಳು ಎಲ್ಲ ಚಟುವಟಿಕೆಗಳನ್ನು ಕನ್ನಡದಲ್ಲಿಯೇ ಬರೆಯಬೇಕು. ಇದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ನನ್ನ ಕೈಲಾಗುತ್ತಿರುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ವಾಟ್ಸಪ್, ಫೇಸ್‌ಬುಕ್, ಇಮೇಲ್ ಎಲ್ಲವನ್ನು ನಾನು ಬಳಸುತ್ತೇನೆ. ಆಸಕ್ತಿ ಇದ್ದು ಕಲಿಸುವವರು ಇದ್ದರೆ ಅರವತ್ತು ದಾಟಿದರೂ ನನಗೆ ಕಲಿಯುವ ಹುಮ್ಮಸ್ಸಿದೆ. ನಾನಿನ್ನೂ ವಿದ್ಯಾರ್ಥಿನಿ.

‘ರಾಜಕುಮಾರ್ ನೈಟ್‌’ ಹೆಸರಿನಲ್ಲಿ ವರನಟ ಡಾ. ರಾಜಕುಮಾರ್ ಅವರು ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ನಾನು ಆಗ ಗರ್ಭಿಣಿ. ಸಂಗೀತ ಕಾರ್ಯಕ್ರಮಕ್ಕೆ ಬರುತ್ತಿದ್ದ ರಾಜಕುಮಾರ್ ಅವರ ತಾಯಿ ನನ್ನನ್ನು ಉಪಚರಿಸುತ್ತಿದ್ದರು. ನನ್ನ ಮಗ ಸುನೀಲ್ ಹುಟ್ಟಿದ ಸಂದರ್ಭದಲ್ಲಿ ನಾನು ತುಂಬಾ ಬಡಕಲಾಗಿದ್ದೆ. ರಾಜ್ ದಂಪತಿ ಜತೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಾಗ– ‘ಸುಮಿತ್ರಾ ಅವರು ಮಗು ಎತ್ತಿಕೊಂಡರೆ ಮಗುಗೆ ಮೂಳೆ ಚುಚ್ಚುತ್ತದೆ, ನೀನು ಎತ್ತಿಕೊ ಪಾರ್ವತಿ’ ಎಂದು ರಾಜಕುಮಾರ್ ಹೇಳುತ್ತಿದ್ದರು. ನನ್ನ ಮಗ ಸುನೀಲ್ ನೆಮ್ಮದಿ ಅರಸುವುದು ಎರಡೇ ತಾಣಗಳಲ್ಲಿ. ಒಂದು ರಾಜಕುಮಾರ್ ಸಮಾಧಿ ಮತ್ತೊಂದು ಟಿಬೆಟಿಯನ್ ಕಾಲೊನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT