ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸಿನ ಇರುವಿಕೆಯ ಕಾವ್ಯ

Last Updated 7 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕವಿತೆಯೊಂದರಲ್ಲಿ ಕವಿಯ ಮನಸ್ಸಿನ ಇರುವಿಕೆ ಬಹಳ ಮುಖ್ಯ. ಯಾವುದೇ ಕ್ರಿಯಾಶೀಲ ಕೃತಿಯನ್ನೂ ಜಡ ವಸ್ತುವಿನಂತೆ ನೋಡಲಾಗುವುದಿಲ್ಲ. ಒಂದು ಕವಿತೆಯನ್ನು ಓದುತ್ತಿದ್ದಂತೆ, ಕಲಾಕೃತಿಯನ್ನು ನೋಡುತ್ತಿದ್ದಂತೆ, ಅವು ನಮ್ಮಲ್ಲಿ ಜೀವತಳೆಯಲು ಆರಂಭಿಸುತ್ತವೆ.

ಆ ಕಲಾಕೃತಿಯಲ್ಲಿ ಕಲಾವಿದನ ಮನಸ್ಸಿನ ಇರುವಿಕೆಯಿಂದ ಮಾತ್ರ ಇಂಥ ಜೈವಿಕ ಚಟುವಟಿಕೆ ನೋಡುಗನಲ್ಲಿ ಅಥವಾ ಓದುಗನಲ್ಲಿ ಉಂಟಾಗುತ್ತದೆ. ಕವಿ, ಕಲಾವಿದನ ಜಡ ಹಾಜರಿ, ಸಾಕ್ಷಿಯಾಗುವಿಕೆ, ಸೋಮಾರಿತನ ಒಂದು ಉತ್ತಮ ಕೃತಿಯನ್ನು ಸೃಷ್ಟಿಸಲಾರದು.

ಕವಿಯ ಮನಸ್ಸಿನ ಇರುವಿಕೆಯನ್ನು ತೋರುವ ಕವಿತೆಗಳನ್ನು ಕೆ.ಪಿ. ಮೃತ್ಯುಂಜಯ ‘ನನ್ನ ಶಬ್ದ ನಿನ್ನಲಿ ಬಂದು’ ಸಂಗ್ರಹದಲ್ಲಿ ಕೊಟ್ಟಿದ್ದಾರೆ. ಸಂಕಲನದ ಹೆಸರೇ ಒಂದು ಮನಸ್ಸಿನಿಂದ ಇನ್ನೊಂದು ಮನಸ್ಸಿಗೆ ದಾಟುವ ಜೀವಂತ ಕ್ರಿಯೆಯನ್ನು ತೋರುವಂಥದ್ದು. ಅಂಥ ಶಬ್ದಚಿತ್ರಗಳನ್ನು, ರೂಪಕಗಳನ್ನು, ಕವಿಯ ಭಾವ ಭಂಗಿಗಳನ್ನು ಇಲ್ಲಿನ ತಮ್ಮ ಅನೇಕ ಕವಿತೆಗಳ ಮೂಲಕ ದಾಟಿಸಲು ಮೃತ್ಯುಂಜಯ ಅವರು ಪ್ರಯತ್ನಿಸಿದ್ದಾರೆ. ಇದು ಅಹಂಕಾರದ್ದಲ್ಲ, ಬದಲಾಗಿ ಇನ್ನೊಂದು ಮನಸ್ಸನನ್ನು ಮುಟ್ಟಬೇಕೆನ್ನುವ ತಹತಹದ್ದು, ಮಮಕಾರದ್ದು, ತೀವ್ರ ಚಡಪಡಿಕೆ, ತುರ್ತು ಇರುವ ಮನುಷ್ಯನದ್ದು.
ನನ್ನ ಶಬ್ದವೊಂದು ನಿನ್ನಲಿ ಬಂದು ಏನಾಯಿತು ಹೇಳು?

.....
ನಿನ್ನ ಮೌನ ಸುಡುತಿದೆ ನನ್ನ. ಕೇಳು
ಒಂದಾದರೂ ಪ್ರಶ್ನೆ:
ಯಾಕೆ ಕಳಿಸಿದೆ ಅದನು
ಹೃದಯದ ಬಳಿಗೆ?
ಆಯುಷ್ಯವೇ ತೀರಿಹೋದಂತೆ
ನಿನ್ನನು ಪಡೆಯದಿದ್ದರೆ–
ಹಟ ಹಿಡಿಯಿತು ಹೃದಯ.
ಅಲ್ಲಿಂದಲೆ ಅದು ಬಂದುದು ನೋಡು.
(ನನ್ನ ಶಬ್ದ ನಿನ್ನಲಿ ಬಂದು)

ಕವಿಗೆ ಕೇವಲ ತನ್ನ ಮಾತನ್ನು ತನ್ನ ಸಹಜೀವಿಗೆ ಕೇಳಿಸುವ ತವಕವಿಲ್ಲ. ಕವಿಯ, ಕವಿತೆಯ ಮತ್ತು ಬದುಕಿನ ದ್ವಂದ್ವ ಇರುವುದೇ ಇಲ್ಲಿ. ಕೊಟ್ಟಿದ್ದು, ಪಡೆಯಲಾಗದ್ದು ಹಾಗೂ ಮಾತು, ಮೌನದ ನಡುವಣ ದ್ವಂದ್ವವನ್ನು ಕವಿ ಇಲ್ಲಿ ಕಾಣಿಸಿದ್ದಾನೆ. ಇದು ಮಾತಿನಲ್ಲಿರುವ ಮೌನ; ಮೌನದಲ್ಲಿನ ಮಾತು. ಇಂಥ ದ್ವಂದ್ವಮಯ ಗ್ರಹಿಕೆಗಳೇ ಅವರ ಕವಿತೆಗಳಲ್ಲಿ ಕಾಣುತ್ತವೆ. ಆದ್ದರಿಂದಲೇ ಇಲ್ಲಿನ ಕವಿತೆಗಳು ಆಧುನಿಕ ಜಗತ್ತಿನ ತೋರುಬೆರಳಾಗಿವೆ. ಕೇವಲ ತೋರುಬೆರಳನ್ನು ಮಾತ್ರ ನೋಡುವ ಅಪಾಯ ಇರುವುದರಿಂದ ಇಲ್ಲಿನ ಕವಿತೆಗಳು ಕಾಣಿಸುವ ಹಸ್ತವನ್ನು ಮೀರಿ ಕಾವ್ಯದ ಜಗತ್ತನ್ನು ಸಾವಧಾನವಾಗಿ ನೋಡಲು ಒತ್ತಾಯಿಸುತ್ತವೆ.

ಭಾಷೆಯನ್ನು ನಂಬಿ ತನ್ನ ನಂಬಿಕೆಯ ಜಗತ್ತನ್ನು ಕಾಣಿಸುವ ಕವಿಗೆ ಅದೇ ಭಾಷೆ ತೊಡಕೂ ಆಗಬಹುದು. ಅದು ಈ ಸಂಕಲನದ ಕವಿ ಮೃತ್ಯುಂಜಯ ಅವರಿಗೂ ಎದುರಾಗಿದೆ. ನಂಬಿಕೆ ಎನ್ನುವುದು ಯಾವತ್ತೂ ಸತ್ಯವಲ್ಲವಾದ್ದರಿಂದ ಈ ಬಗೆಯ ತೊಯ್ದಾಟದಲ್ಲೇ ತನ್ನ ಒಳಜಗತ್ತನ್ನು ಪ್ರಕಟ ಮಾಡಬೇಕಾದ ಅನಿವಾರ್ಯತೆ ಕವಿಗೆ ಇರುತ್ತದೆ.
ನೀಲಿಯೆಲ್ಲ ಕರಗಿ–
ಆಕಾಶ ಉಳಿಯದಾಗಿ
ತಲುಪಿದ್ದ ಮಾತುಗಳು ಇಗೋ
ಇಳಿಯುತ್ತಿವೆ.

.....
ಆಚಂದ್ರಾರ್ಕ ಉಳಿಯುವ
ಒಂದು ಮಾತು
ಬರೆಯಲಾಗದ ಸಾಲಾಗಿ
ಅಲ್ಲೇ ಉಳಿದಿದೆ.
(ಬರೆಯಲಾಗದ ಸಾಲು)
ಒಂದು ಹೂವು
ಅರಳಿಸುವಂಥ ಮಾತು
ನನ್ನಲ್ಲಿದೆ.
ಹುಡುಕುತ್ತಿರುವೆ...

***
ಒಂದು ಮಾತು ಹುಟ್ಟಲು
ಅಪಾರ ಮೌನ ವೆಚ್ಚವಾಗುತ್ತದೆ.
(ಮತ್ತೂ...)
ದಿನಬಳಕೆಯ ಸವೆದ ಶಬ್ದಗಳನ್ನೇ ಬಳಸಿ, ಅದೇ ಮಾತಿನ ಮಳೆಯ ನಂಬಿ ಭರವಸೆಯ ವ್ಯವಸಾಯ ಮಾಡುವ ರೈತ ಈ ಕವಿ. ಬಹುಕಾಲ ಉಳಿಯುವ ಮಾತುಗಳನ್ನು ಬರೆಯಬೇಕೆನ್ನುವ ಮಹತ್ವಾಕಾಂಕ್ಷೆ, ಅದಕ್ಕೆ ಬೇಕಾದ ಹುಡುಕಾಟ ಈ ಕವಿಯಲ್ಲಿದೆ. ಈಗಿನ ಬಹುಪಾಲು ಕವಿಗಳಲ್ಲಿ ಕಾಣದ, ತನ್ನ ಮಾತುಗಳನ್ನೇ ಜಗದ ಮಾತನ್ನಾಗಿ ಪರಿವರ್ತಿಸುವ, ಮತ್ತು ಅದನ್ನು ಹಿಡಿಯಲಾಗದ ವಿಫಲತೆ ಕೂಡ ಇವರಲ್ಲಿದೆ. ಈ ವ್ಯವಸಾಯದಲ್ಲಿನ ವಿಫಲತೆ ಸೋಲಲ್ಲ ಎಂಬುದನ್ನು ಇಲ್ಲಿನ ಕವಿತೆಗಳು ಮನಗಾಣಿಸುವಂತಿವೆ. ಲೋಕದ ಒಳಸದ್ದುಗಳನ್ನು ಒಳಗೊಳ್ಳಬೇಕಾದ, ಅದನ್ನು ಪಡೆಯುವಲ್ಲಿ ನಡೆಸಿದ ಹುಡುಕಾಟವನ್ನು ಇಲ್ಲಿನ ಕವಿತೆಗಳು ಪ್ರಕಟಿಸುತ್ತವೆ.

ಹರೆಯದ ಕಾವು ಹಿಂದಕ್ಕೆ ಸರಿದ ಕವಿ ತನ್ನ ಸಹಯಾತ್ರಿಯಾದ ಹೆಣ್ಣನ್ನು ಉದ್ದೇಶಿಸಿ ಮಾತನಾಡಿದಂತಿವೆ ಈ ಕವಿತೆಗಳು. ಹಾಗಾಗಿಯೇ ಕವಿಯಲ್ಲಿ ಹುಟ್ಟಿದ ಶಬ್ದ ಅವಳಲ್ಲಿ ಇಳಿದು ಏನಾಗಿದೆ ಎಂಬುದರ ತಪಶೀಲು ಇಲ್ಲಿದೆ. ಸಮಾನ ಮನಸ್ಸುಗಳ ನಡುವಿನ ಮಾತುಕತೆ ಇಲ್ಲಿನ ಬಹುಪಾಲು ಕವಿತೆಗಳಲ್ಲಿದೆ. ಆದರೆ, ಈ ಸಂವಾದ ಏಕಮುಖ ಸಂವಾದ.

ಅದಕ್ಕೆ ಕಾರಣವಾದ ಇನ್ನೊಂದು ಜೀವಿಯ ಪ್ರತಿಮಾತು ಇಲ್ಲಿ ಕೇಳಿಸುವುದಿಲ್ಲ. ಅದು ಇರಬೇಕಾದ ಅಗತ್ಯ ಕೂಡ ಇಲ್ಲ. ಕವಿಯ ನಿವೇದನೆ, ಸಂವೇದನೆ ಪಾರದರ್ಶಕ ಹಾಗೂ ರೂಪಾತ್ಮಕ ಮತ್ತು ಮುಗ್ಧ ಹಂಬಲದಿಂದ ಕೂಡಿದೆ. ಅದು ಅಷ್ಟೇ ಪ್ರಬುದ್ಧವಾಗಿಯೂ ಇದೆ.
‘ಎದೆಯಮೃತವನು ಮೊದಲು ನನಗೇ ಉಣಿಸು./ ನಿನ್ನ ಮುಂಬರುವ ಕೂಸಿಗೂ ಮೊದಲು/ ನೀನು ನನ್ನ ಹಗಲು ಮತ್ತು ಇರುಳು./ ಸಾವಲ್ಲ ಬದುಕು’ (ನಿನ್ನ ಮನಸಿನಾಳದಿ ಚೆಲುವಾದ ಹೂವು), ‘ಮೌನವಿರುವುದೇ ನಿನಗಾಗಿ ಎನುವಂತಿದೆ/ ಕಣ್ಣಲಿ ಬ್ರಹ್ಮಾಂಡವ ಹೊತ್ತವಳೆ./ ಒರಟಾಗೆನು ಒಗಟಾಗೆನು ಹೊಂದುವೆ ನಿನಗೆ/ ಸೋಕಿದ ಹಸ್ತ ಬಿಡಿಸಿ ಹೇಳಲಿಲ್ಲವೇ?’ (ನಿನ್ನ ಹೃದಯಕೆ ಮಾತೇ ಕಲಿಸಿಲ್ಲವೆನಿಸುತ್ತದೆ)– ಈಗಿನ ಹಲವು ಹುಸಿಕವಿಗಳ ಹಸಿಯಾದ ರಮ್ಯಕಲ್ಪನೆಗಿಂತ ಭಿನ್ನವಾದ ಮಾತುಗಳು ಇಲ್ಲಿವೆ. ಇಲ್ಲಿನ ‘ನೀನು’ ಕವಿಯ ಹುಡುಗಿ ಆಗಿರಬೇಕಾದ ಕಾರಣವಿಲ್ಲ. ಅದು ಓದುಗನ ‘ನೀನೂ’ ಆಗಿರಬಹುದು.

ಎಲ್ಲರೂ ಬದುಕುವ ಈ ಬದುಕನ್ನೇ ಕವಿಯೂ ಜೀವಿಸುತ್ತಿರುತ್ತಾನೆ. ಅದನ್ನು ಬೇರೆಯಾಗಿಸುವುದು ಅದರ ಕುರಿತಾದ ಅವನ ವಿಶಿಷ್ಟ ನೋಟ, ಗ್ರಹಿಕೆ. ಕೆ.ಪಿ. ಮೃತ್ಯುಂಜಯ ಅವರ ಕವಿತೆಗಳು ಜಗದ ಮತ್ತು ತಮ್ಮ ಅಂತರಂಗದ ಮಾತುಗಳನ್ನು ಮೂಡಿಸುವ ಸಜೀವ ದನಿಗಳಾಗಿವೆ. ಇದು ಸದ್ದು, ನಿಶ್ಶಬ್ದ ಎರಡನ್ನೂ ಒಟ್ಟಿಗೇ ಹಿಡಿದಿಟ್ಟ ಲೋಕ. ಇವುಗಳಲ್ಲಿ ಒಂದು ಹೆಚ್ಚಾದರೂ ಕವಿತೆಯ ಹದ ಕೆಡಬಹುದು. ಇವುಗಳಲ್ಲಿ ಒಂದನ್ನು ಬಿಟ್ಟು ಒಂದಿಲ್ಲ. ಅಂಥ ತಮ್ಮದೇ ಕಾವ್ಯದ ಸೂಕ್ಷ್ಮ ಲೋಕವನ್ನು ಏಕಾಗ್ರತೆ, ತಾಳ್ಮೆ, ಛಲ, ಹೋರಾಟದ ಮೂಲಕ ತಮ್ಮದೇ ರೀತಿಯಲ್ಲಿ ಕಟ್ಟುತ್ತಿರುವ ವರ್ತಮಾನದ ಕವಿ ಇವರು. ಹೀಗೆ ಕಟ್ಟಿದ ಅವರ ಕಾವ್ಯ ವಿಸ್ತಾರವಾದ ಹಾಗೂ ನವಿರಾದ ಕಂಪನಗಳನ್ನು ಸದಾ ಓದುಗರಲ್ಲಿ ಎಬ್ಬಿಸುತ್ತ ಇರಬಲ್ಲದು ಎಂಬುದೇ ಅವರ ಕಾವ್ಯದ ವೈಶಿಷ್ಟ್ಯವಾಗಿದೆ.

ನನ್ನ ಶಬ್ದ ನಿನ್ನಲಿ ಬಂದು (ಕವಿತೆಗಳು)
ಲೇ:
ಕೆ.ಪಿ. ಮೃತ್ಯುಂಜಯ
ಪು: 114 ; ಬೆ: ರೂ 100
ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್‌ ಹಾಸ್ಟೇಲ್‌, ಗದಗ– 582 101

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT