ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಿಸುವ ‘ಗುತ್ತಿಗೆ’ ಸಮಸ್ಯೆಯ ‘ಸುತ್ತಿಗೆ’ ಆಗದಿರಲಿ

ಅಕ್ಷರ ಗಾತ್ರ

ಮನೆ ಕಟ್ಟಿಸಲು ಹೊರಟಿದ್ದೀರಾ?
ಹೌದು.

ನೀವೇ ಮುಂದೆ ನಿಂತು ಕಟ್ಟಿಸುತ್ತೀರಾ? ಅಥವಾ ಒಟ್ಟು ಗುತ್ತಿಗೆ ಲೆಕ್ಕದಲ್ಲಿ ನಿರ್ಮಾಣದ ಕೆಲಸ ವಹಿಸಿಕೊಡುತ್ತೀರಾ?
ಹಾಗೆಂದರೆ?

ನಿಮ್ಮ ಕನಸಿನ ಮನೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ನೀವೇ ಖರೀದಿಸಿ ತಂದುಕೊಡುತ್ತೀರಿ,  ನಿರ್ಮಾಣದ ವಿವಿಧ ಬಗೆಯ ಕಾಮಗಾರಿಗಳನ್ನು ಅಂದರೆ, ಕಟ್ಟಡ, ಮರಗೆಲಸ, ವಿದ್ಯುತ್‌ ಸಂಪರ್ಕ, ನಲ್ಲಿ  ಜೋಡಣೆ ಕೆಲಸಗಳನ್ನು ಆಯಾ ವಿಭಾಗದಲ್ಲಿ ನುರಿತ ಮೇಸ್ತ್ರಿಗಳು ತಮ್ಮದೇ ಆದ ಕಾರ್ಮಿಕರ ತಂಡದ ಮೂಲಕ ನೆರವೇರಿಸಿಕೊಡುತ್ತಾರೆ. ಆ ಕೆಲಸಗಳಿಗೆ ನೀವು ಚದರ ಅಡಿ ಲೆಕ್ಕ ಅಥವಾ ದಿನದ ಲೆಕ್ಕದಲ್ಲಿ ಕೂಲಿ ಪಾವತಿಸುತ್ತೀರಿ. ಇದು ಮನೆ ನಿರ್ಮಾಣದ ಒಂದು ಬಗೆ. ಇದನ್ನೇ ಸ್ವಂತ ಉಸ್ತುವಾರಿಯಲ್ಲಿ ಮನೆ ನಿರ್ಮಾಣ ಎನ್ನುವುದು.

ಎರಡನೇ ಬಗೆಯ ಕೆಲಸ ‘ಗುತ್ತಿಗೆ ನೀಡುವುದು’. ಅಂದರೆ, ನಮ್ಮ ಮನೆ ಹೀಗಿರಬೇಕು, ಇಷ್ಟು ಉದ್ದ ಅಗಲದ ಹಜಾರ, 2 ಅಥವಾ 3 ಕೊಠಡಿಗಳು, ಮೆಟ್ಟಿಲು ಮನೆ ಒಳಗಿರಬೇಕು, ಇಲ್ಲವೇ ಹೊರಗಿದ್ದರೂ ನಡೆಯುತ್ತದೆ.

ಅಡುಗೆ ಕೋಣೆಗೆ ಚಿಕ್ಕದಾಗಿದ್ದರೂ ಚೊಕ್ಕವಾಗಿರಬೇಕು, ಸ್ನಾನದ ಮನೆಗೆ ಟಬ್‌ ಇರಬೇಕು, ಹಜಾರದಲ್ಲಿ ದೊಡ್ಡ ಷೋಕೇಸು, ದೊಡ್ಡ ಕಿಟಕಿಗಳು, ಮುಂದಿನ ಬಾಗಿಲು ಮತ್ತು ಚೌಕಟ್ಟು  ತೇಗದ ಮರದ್ದೇ ಆಗಿರಬೇಕು... ಹೀಗೆ ನಿಮ್ಮ ಆಸೆ ಕನಸುಗಳನ್ನು ಹೇಳಿದರೆ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ನುರಿತ ಗುತ್ತಿಗೆದಾರರು ಅದರಂತೆಯೇ ನೀಲನಕ್ಷೆ ತಯಾರಿಸಿ ಮನೆಯನ್ನೂ ನಿಗದಿತ ಅವಧಿಯೊಳಗೆ ಕಟ್ಟಿಕೊಡುತ್ತಾರೆ. ಇಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆ, ಮರಳು, ಸಿಮೆಂಟ್, ಮರ, ಕಬ್ಬಿಣ, ಗಾಜು ಮೊದಲಾದ ಸಾಮಗ್ರಿಗಳ ಖರೀದಿ ಹೊಣೆಗಾರಿಕೆಯೂ ಗುತ್ತಿಗೆದಾರರದ್ದೇ ಆಗಿರುತ್ತದೆ.

ತಳಪಾಯ ಅಗೆಯುವವರಿಂದ ಹಿಡಿದು ಮನೆ ನಿರ್ಮಾಣ ಪೂರ್ಣಗೊಳ್ಳುವ ಕೊನೆಯ ಹಂತದ (ಬಣ್ಣ ಬಳಿಯುವುದು) ಕೆಲಸದವರೆಗೂ ಅಗತ್ಯವಾದ ಎಲ್ಲ ವಿಭಾಗದ ಕೆಲಸಗಾರರನ್ನೂ ಈ ಗುತ್ತಿಗೆದಾರರೇ ಹುಡುಕಿ ಕರೆತರುತ್ತಾರೆ. ಅವರೇ ಮುಂದೆ ನಿಂತು ಎಲ್ಲ ಕೆಲಸವನ್ನೂ ಮಾಡಿಸುತ್ತಾರೆ.

ಕಲ್ಲು ಕಟ್ಟಡ ಕಟ್ಟುವವರು, ಇಟ್ಟಿಗೆ ಗೋಡೆ ನಿರ್ಮಿಸಿ ತಾರಸಿ ಹಾಕಿ, ಪ್ಲಾಸ್ಟರಿಂಗ್‌ ಮಾಡುವವರೆಗೂ ಬೇಕಾಗುವ ಗಾರೆ ಕೆಲಸದವರ ತಂಡವನ್ನು ಜತೆಗಿಟ್ಟುಕೊಳ್ಳುವುದು,  ಕಾರ್ಪೆಂಟರ್‌ (ಮರಗೆಲಸದವರು) ಕರೆತಂದು ಬಾಗಿಲು, ಕಿಟಕಿಗಳನ್ನು ಕೆತ್ತಿಸಿ ಜೋಡಿಸುವುದು, ಜತೆಗೆ, ಅಡುಗೆ ಕೋಣೆ ಮತ್ತು ಕೊಠಡಿಗಳಿಗೆ ಅಗತ್ಯವಾದ ಗೋಡೆ ಬೀರು, ಸೆಲ್ಫ್‌ಗಳನ್ನು ನಿರ್ಮಿಸಿ ಅಳವಡಿಸುವ ಕೆಲಸಗಳ ಉಸ್ತುವಾರಿಯೂ ಗುತ್ತಿಗೆದಾರರದ್ದೇ ಆಗಿರುತ್ತದೆ.

ಪ್ಲಂಬರ್‌ (ನಲ್ಲಿ ಕೆಲಸದವರು), ಬಾರ್‌ ಬೆಂಡರ್‌ (ತಾರಸಿ ಉಕ್ಕಿನ ಸರಳುಗಳನ್ನು ನೆರಗೊಳಿಸಿ, ಬಾಗಿಸಿ, ಜೋಡಿಸುವವರು) ಕರೆತರುವುದು, ಅವರಿಂದ ಮನೆ ಕಟ್ಟುವ ವಿವಿಧ ಹಂತಗಳ ಕಾಮಗಾರಿಗಳನ್ನು ಮಾಡಿಸುವುದೂ ಗುತ್ತಿಗೆದಾರರ ಕೆಲಸವೇ ಆಗಿರುತ್ತದೆ. ಎಲೆಕ್ಟ್ರಿಷಿಯನ್‌ (ವಿದ್ಯುತ್‌ ವೈರಿಂಗ್‌ ಕೆಲಸದವರು) ದೀಪ, ಗೀಸರ್‌, ಪವರ್‌ ಪಾಯಿಂಟ್‌ಗಳನ್ನು ಜೋಡಿಸಿಕೊಡುವುದಷ್ಟೇ ಅಲ್ಲ, ಕೆಪಿಟಿಸಿಎಲ್‌ನ ವಿದ್ಯುತ್‌ ಮಾರ್ಗದಿಂದ ಮನೆಗೆ ವಿದ್ಯುತ್‌ ಸಂಪರ್ಕ ಕೊಡಿಸುವ ಕೆಲಸವೂ ಇವರದ್ದೇ ಆಗಿರುತ್ತದೆ. ಹಾಗಾಗಿ, ಮನೆಯ ವೈರಿಂಗ್‌ ಕೆಲಸಕ್ಕೆ ಅಧಿಕೃತ ಗುತ್ತಿಗೆದಾರರನ್ನು ಕರೆತರುವುದು ಉತ್ತಮ.

ಮನೆ ಕಟ್ಟಿಸಿಕೊಳ್ಳುವ ನೀವು ಚದರ ಅಡಿ ಲೆಕ್ಕದಲ್ಲಿ ಹಂತಹಂತವಾಗಿ (ತಳಪಾಯ, ಗೋಡೆ ನಿರ್ಮಾಣ, ಸಜ್ಜಾ, ತಾರಸಿ, ಪ್ಲಾಸ್ಟರಿಂಗ್‌, ಕಾರ್ಪೆಂಟರಿ, ಪ್ಲಂಬಿಂಗ್‌ ಕೆಲಸದ ಸಮಯದಲ್ಲಿ) ಹಣ ಪಾವತಿಸುತ್ತಾ ಬಂದರಾಯಿತು.

ಅಂದರೆ, ಸ್ವತಃ ಉಸ್ತುವಾರಿ ವಹಿಸಿಕೊಂಡು ಮನೆ ನಿರ್ಮಿಸುವುದಾದರೆ ಮನೆಯಲ್ಲಿ ಎರಡು ಮೂರು ಜನರಾದರೂ ನೆರವಿಗೆ ಬರುವವರು ಇರಬೇಕು. ಸಾಮಗ್ರಿಗಳ ಖರೀದಿಗೆ ಅಂಗಡಿ, ಮಾರುಕಟ್ಟೆಗೆ ಅಲೆದಾಡಲು ಸಿದ್ಧರಿರುವವರು ಒಬ್ಬರು, ನಿವೇಶನದ ಬಳಿ ದಿನವಿಡೀ ನಿಂತು ಮನೆ ನಿರ್ಮಾಣದ  ಎಲ್ಲ ಕೆಲಸಗಳನ್ನೂ ಗಮನವಿಟ್ಟು ನೋಡಿಕೊಳ್ಳಲು ಅನುಭವಿಗಳು(ಹಿರಿಯರೊಬ್ಬರಿದ್ದರೆ ಒಳಿತು) ಎಂದು ಇಬ್ಬರಾದರೂ ಇರಲೇಬೇಕು. ಅಲ್ಲದೇ, ಗೋಡೆ, ತಾರಸಿ ಕ್ಯೂರಿಂಗ್‌ ಮಾಡುವ ಕೆಲಸಕ್ಕೂ ಒಬ್ಬರು ಬೇಕಾಗುತ್ತದೆ. ಮೂರು ಮಂದಿ ಇದ್ದರಂತೂ ಕೆಲಸಗಳು ಹೊರೆ ಎನಿಸುವುದಿಲ್ಲ. ಸ್ವಲ್ಪ ಸಲೀಸಾಗಿ ಸಾಗುತ್ತವೆ. ಜತೆಗೆ ನಿವೇಶನದ ಸ್ಥಳದಲ್ಲಿ ಒಬ್ಬ ಕಾವಲುಗಾರನನ್ನು ನೇಮಿಸಬೇಕು.

ಒಬ್ಬರೇ ನಿಂತು ಎಲ್ಲವನ್ನೂ ನಿಭಾಯಿಸಿ ಮನೆ ಕಟ್ಟಿಸುತ್ತೇನೆ ಎಂದರೆ ಅದು ಮಾತ್ರ ಬಹಳ ಶ್ರಮದ ಕೆಲಸ. ಹಾಗೆಂದು ಅಸಾಧ್ಯವೇನೂ ಅಲ್ಲ. ಆದರೆ, ಬಹಳ ಯೋಜಿತ ರೀತಿಯಲ್ಲಿ, ವೇಳಾಪಟ್ಟಿ ಹಾಕಿಕೊಂಡೇ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗಬೇಕು. ಇಲ್ಲವಾದರೆ ಮೈಕೈ ನೋವು, ನಿದ್ರೆಗೆ ಸಮಯ ಸಾಲದು ಎಂದು ಗೊಣಗಬೇಕಾಗುತ್ತದೆ. ‘ಕನಸಿನ ಮನೆ’ ನಿರ್ಮಿಸುವ ಅವಧಿಯ ಸುಖವನ್ನು ಅನುಭವಿಸಲು ಆಗುವುದೇ ಇಲ್ಲ.

ಇಷ್ಟೆಲ್ಲ ಕಷ್ಟಪಟ್ಟು ಮನೆ ನಿರ್ಮಾಣ ಮಾಡುವ ‘ಸ್ವಂತ ಉಸ್ತುವಾರಿ’ ಹೊರೆ ಬೇಡವೇಬೇಡ. ಸ್ವಲ್ಪ ಹಣ ಹೆಚ್ಚು ವೆಚ್ಚವಾದರೂ ಚಿಂತೆ ಇಲ್ಲ. ಗುತ್ತಿಗೆಗೇ ವಹಿಸಿಬಿಡೋಣ ಎಂದೇ ಬಹಳಷ್ಟು ಮಂದಿ ಆಲೋಚಿಸುತ್ತಾರೆ.
ಹಾಗೆಂದು ಅಲ್ಲೇನೂ ಸುಖದ ಸುಪ್ಪತ್ತಿಗೆ ಕಾಯ್ದುಕುಳಿತಿರುವುದಿಲ್ಲ.

ಅಲ್ಲಿಯೂ ಸಹ ಒಂದಷ್ಟು ಕೆಲಸಗಳು, ಜವಾಬ್ದಾರಿಗಳು ನಿಮಗಾಗಿ, ನಿಮ್ಮ ಮನೆಯವರಿಗಾಗಿ ಕಾಯುತ್ತಿರುತ್ತವೆ. ಎಂತಹ ನುರಿತ ಗುತ್ತಿಗೆದಾರರೇ ಆಗಿದ್ದರೂ, ನಿಮಗೆ ಅದೆಷ್ಟೇ ಪರಿಚಯದವರೇ ಆಗಿದ್ದರೂ ಅವರೂ ಲಾಭ ಮಾಡಿಕೊಳ್ಳಬೇಕಲ್ಲವೇ? ಹಾಗಾಗಿ ಅವರು ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ಆದಷ್ಟೂ ಹಣ ಉಳಿಸಲು ಅವಕಾಶಗಳನ್ನು ಹುಡುಕಿಟ್ಟುಕೊಂಡಿರುತ್ತಾರೆ.

ಅದರಲ್ಲೂ ಮುಖ್ಯವಾಗಿ ಸಾಮಗ್ರಿಗಳ ಖರೀದಿಯಲ್ಲಿ ತುಸು ಹೆಚ್ಚೇ ಹಣ ಉಳಿಸಲು ಯತ್ನಿಸುತ್ತಾರೆ. ಅಂದರೆ ನೀವು ನಿಗದಿಪಡಿಸಿದಂತಹ ಸಾಮಗ್ರಿಗಳನ್ನೇ ಖರೀದಿಸಿದರೂ ಕೆಲವೊಮ್ಮೆ ನಿಮ್ಮ ಕಣ್ಣು ತಪ್ಪಿಸಲು ಅವಕಾಶಗಳಿರುತ್ತವೆ.

ಕಳಪೆ ಸಾಮಗ್ರಿಗಳನ್ನು ಬಳಸಿಯೇ ಕೆಲಸ ಮುಗಿಸುವ ಸಂಭವವೂ ಇರುತ್ತದೆ. ಅಂದರೆ, ಕರಾರು ಮಾಡಿಕೊಳ್ಳುವ ಸಂದರ್ಭದಲ್ಲಿ ಹೇಳಿದ್ದೇ ಒಂದು, ಮನೆ ಕಟ್ಟುವಾಗ ಬಳಸಿದ ಸಾಮಗ್ರಿಯೇ ಇನ್ನೊಂದು ಎನ್ನುವಂತಾಗಿರುತ್ತದೆ. ಇದರಿಂದ ವಾಗ್ವಾದ, ಮುನಿಸು, ನೆಮ್ಮದಿ ನಷ್ಟ. ಇಲ್ಲಿಯೂ ನಿಮಗೆ ಮನೆ ಕಟ್ಟಿಸಿದ ಖುಷಿ ತಪ್ಪಿಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಅಂದರೆ, ಮನೆ ನಿರ್ಮಾಣದ ಕಷ್ಟ ಸುಖ ಎನ್ನುವಲ್ಲಿ ಕಷ್ಟದ ಪ್ರಮಾಣವೇ ಅಧಿಕ, ಸುಖ ಎಂಬುದು ಅಲ್ಲಿಷ್ಟು ಇಲ್ಲಿಷ್ಟು ಎಂಬಂತಾಗಿರುತ್ತದೆ. ಹಾಗಾಗಿಯೇ ಮನೆ ಕಟ್ಟಿಸುವುದಕ್ಕೆ ಗುತ್ತಿಗೆ ವಹಿಸಿ ನಂತರದಲ್ಲಿ ಪರಿತಪಿಸುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ. ಇದೇ ವೇಳೆ, ‘ಬಹಳ ಕಷ್ಟ’ ಎನಿಸಿದರೂ ಸ್ವಂತ ಉಸ್ತುವಾರಿಯಲ್ಲಿ ಮನೆ ನಿರ್ಮಿಸಿಕೊಂಡವರು ನಂತರದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವವರೂ ಸಾಕಷ್ಟು ಮಂದಿ ಇದ್ದಾರೆ.
ಹೀಗೆ ಮನೆ ಕಟ್ಟಿಸಿದವರ ಕಥೆ ವ್ಯಥೆಗಳನ್ನು ಮುಂದಿನ ಸಂಚಿಕೆಗಳಲ್ಲಿ ಓದೋಣ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT