ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಗೆ ಇಂಧನ ಸ್ವಾವಲಂಬನೆಯ ಕನಸು

ಸಂಘ–ಸಂಗಡ
Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆಯು ನವೀಕರಿಸಬಹುದಾದ ಇಂಧನ, ಪರಿಸರ ಸಂರಕ್ಷಣೆ, ಘನತ್ಯಾಜ್ಯ ವಿಲೇವಾರಿ ಕುರಿತು ಅರಿವು ಮೂಡಿಸುತ್ತಿದೆ. ಒಂದಲ್ಲ ಒಂದು ತರಬೇತಿಗಳು ಇಲ್ಲಿ ನಡೆಯುತ್ತಿರುವುದೇ ಈ ಸಂಸ್ಥೆಯ ಸಕ್ರಿಯತೆಗೆ ಸಾಕ್ಷಿ.

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಅಭಿವೃದ್ಧಿ ಸಂಸ್ಥೆ (ಎಂಜಿಐಆರ್‌ಇಡಿ) ಹೆಸರೇ ಸೂಚಿಸುವಂತೆ ಇದು ಗ್ರಾಮೀಣ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಬಗ್ಗೆ ಅರಿವು ಮೂಡಿಸುವುದಲ್ಲದೆ ಪರ್ಯಾಯ ಶಕ್ತಿ ಸಂಪನ್ಮೂಲಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಈ ಸಂಸ್ಥೆ ಬೆಂಗಳೂರಿನ ಜಕ್ಕೂರು ಸಮೀಪದ ಶ್ರೀರಾಂಪುರದಲ್ಲಿದೆ. ಆದರೆ ಇದರ ಕಾರ್ಯವ್ಯಾಪ್ತಿ ರಾಜ್ಯದ ಮೂಲೆ ಮೂಲೆಗಳಿಗೆ ವ್ಯಾಪಿಸಿದೆ. ಗ್ರಾಮೀಣ ಪ್ರದೇಶದ ಜನರಿಗೆ ಈ ಸಂಸ್ಥೆಯು ಹಲವು ರೀತಿಯಲ್ಲಿ ಪರ್ಯಾಯ ಇಂಧನ ಬಳಕೆಗೆ ನೆರವಾಗಿದೆ. ಬಡವರ ಕುಟುಂಬದಲ್ಲಿ ಬೆಳಕು ಮೂಡಿಸಿದ ಕೀರ್ತಿ ಇದಕ್ಕಿದೆ.

ಶಕ್ತಿ ಸಂಪನ್ಮೂಲಗಳ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಪರಿಸರ ರಕ್ಷಣೆ, ಅರಣ್ಯೀಕರಣ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ  ತೊಡಗಿಕೊಂಡಿದೆ. ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ   ಕ್ಷೇತ್ರದಲ್ಲಿ ತಿಳಿವಳಿಕೆ ನೀಡುವುದು, ಸಂಶೋಧನೆ ಮತ್ತು ವಿಸ್ತರಣೆಯನ್ನು ಎಂಜಿಐಆರ್‌ಇಡಿ ಪ್ರಮುಖ ಗುರಿಯಾಗಿರಿಸಿಕೊಂಡಿದೆ.

ಈ ಸಂಸ್ಥೆಯನ್ನು 2000ರಲ್ಲಿ ಕೇಂದ್ರ ಸರ್ಕಾರದ ಹೊಸ ಮತ್ತು ನವೀಕರಿಸಬ ಹುದಾದ ಇಂಧನ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಸಹಕಾರದೊಂದಿಗೆ ಆರಂಭಿಸಲಾಯಿತು. ಸಮಗ್ರ ಗ್ರಾಮೀಣ ಇಂಧನ ಕಾರ್ಯಕ್ರಮದ (ಐಆರ್‌ಇಪಿ) ಅಡಿ 1989–90ರಲ್ಲಿ ಯೋಜನಾ ಆಯೋಗ ಐದು ಐಆರ್‌ಇಪಿ ತರಬೇತಿ ಮತ್ತು ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ಮಂಜೂರು ಮಾಡಿತು. 

ಬಾಕೋಲಿ (ದೆಹಲಿ), ಚಿನ್‌ಹಟ್ (ಲಖನೌ), ಅಮ್ರೋಲಿ, ಶಿಲ್ಲಾಂಗ್ (ಮೇಘಾಲಯ) ಜತೆ  ಜಕ್ಕೂರು (ಬೆಂಗಳೂರು) ಕೇಂದ್ರಗಳನ್ನು ಏಕಕಾಲಕ್ಕೆ ಆರಂಭಿಸಲಾಯಿತು. ಈ ಕೇಂದ್ರಗಳು  ತಮ್ಮ ಸ್ವಂತ ರಾಜ್ಯವಲ್ಲದೆ ನೆರೆಯ ರಾಜ್ಯಗಳಲ್ಲೂ ತಮ್ಮ ಚಟುವಟಿಕೆ ವಿಸ್ತರಿಸಲು ಅವಕಾಶ ನೀಡಲಾಯಿತು.

ಬೆಂಗಳೂರಿನ ಸಂಸ್ಥೆಗೆ ಸದ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್‌.ಕೆ.ಪಾಟೀಲ್‌ ಮುಖ್ಯಸ್ಥರು. ಇದರ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಿರುತ್ತಾರೆ. ಸಂಸ್ಥೆಗೆ ಸದ್ಯ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಡಾ.ಟಿ.ವಿ.ಮೋಹನ್‌ ದಾಸ್‌ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದಾರೆ. ಈ ಹಿಂದೆ ಪುನತಿ ಶ್ರೀಧರ್‌ ಕಾರ್ಯನಿರ್ವಹಿಸುತ್ತಿದ್ದರು.

ಎಂಜಿಐಆರ್‌ಇಡಿ 10 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿದೆ.  ಇಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳಿವೆ. ಎರಡು ಪ್ರದರ್ಶನ ಸಭಾಂಗಣಗಳು. ಇಂಧನ ಉದ್ಯಾನ, ತರಬೇತಿಗೆ ಬರುವ ಪ್ರಶಿಕ್ಷಣಾರ್ಥಿಗಳು ಉಳಿದುಕೊಳ್ಳಲು 24 ಕೊಠಡಿಗಳ ಹಾಸ್ಟೆಲ್‌ ಇದೆ.

ತರಬೇತಿ
ಎಂಜಿಐಆರ್‌ಇಡಿ ಪ್ರಮುಖ ಚಟುವಟಿಕೆಯಲ್ಲಿ ತರಬೇತಿ ಮುಖ್ಯವಾದುದು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯತ್‌ ರಾಜ್‌ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಹಿಡಿದು ಸರ್ಕಾರದ ಉನ್ನತ ಅಧಿಕಾರಿಗಳವರೆಗೆ ಹಲವರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈವರೆಗೆ ಸಂಸ್ಥೆ 1092 ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ. ತರಬೇತಿ ಮತ್ತು ಪ್ರದರ್ಶನ 73 ಸಾವಿರ ಜನರನ್ನು ತಲುಪಿದೆ ಎಂಬ ಹೆಮ್ಮೆ ಸಂಸ್ಥೆಯದು.

ಸಂಸ್ಥೆಯಲ್ಲಿ ಪ್ರದರ್ಶಿಸಿರುವ ಉಪಕರಣಗಳು
ಸೋಲಾರ್ ಲಾಟೀನ್‌, ಒಲೆ, ವಾಟರ್‌ ಪಂಪ್‌, ಸೋಲಾರ್ ಡ್ರೈಯರ್‌, ಪವನಶಕ್ತಿ ಜನರೇಟರ್‌, ಸುಧಾರಿತ ಎತ್ತಿನಗಾಡಿ, ಎನರ್ಜಿ ಡ್ರಂ, ಬಯೋಮಾಸ್‌ ಗ್ಯಾಸಿಫಯರ್‌, ಮಳೆ ಸಂಗ್ರಹದ ವಿವಿಧ ಮಾದರಿ ಸೇರಿದಂತೆ ಹತ್ತು ಹಲವು ಮಾದರಿಗಳು ಇಲ್ಲಿವೆ.

ಸಂಸ್ಥೆಯ ಸಾಧನೆಗಳು
* ಪ್ರತಿ ವರ್ಷ 170 ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ. ಈವರೆಗೆ ಒಟ್ಟು 3500 ಮಂದಿ ಪಾಲ್ಗೊಂಡಿದ್ದಾರೆ.

* ಒಟ್ಟು 152 ಮನೆಗಳಿಗೆ ಸೋಲಾರ್‌ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.

* 9 ಮನೆಗಳಿಗೆ ಪಿಕೊ ಜಲ ವಿದ್ಯುತ್‌ ಯೋಜನೆ (ಸಣ್ಣ ಪ್ರಮಾಣದ ವಿದ್ಯುತ್‌) ಮೂಲಕ ಗೃಹ ಬಳಕೆ ಬೆಳಕಿನ ಸೌಲಭ್ಯ ನೀಡಲಾಗಿದೆ.

* ಗ್ರಾಮೀಣ ಪ್ರದೇಶದ ಮನೆಗಳಿಗೆ 600 ಹೊಗೆರಹಿತ ಒಲೆಗಳನ್ನು ನೀಡಲಾಗಿದೆ.

ಪ್ರಮುಖ ಚಟುವಟಿಕೆಗಳು
* ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳು, ಸಿಇಒಗಳು, ರಾಜ್ಯದಲ್ಲಿನ ಆಡಳಿತ ಸೇವೆ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ತರಬೇತಿ.

* ಜೈವಿಕ ಅನಿಲ ಸ್ಥಾವರ ಸ್ಥಾಪನೆ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರ.

* ಮನೆಯಲ್ಲೇ ಅಡುಗೆ ಅನಿಲ ಉತ್ಪಾದನೆ ವಿಧಾನ ಕುರಿತ ಕಾರ್ಯಾಗಾರ.

* ಸೌರ ಬೆಳಕು ಯೋಜನೆ ಜಾರಿಯಾದ ಜಿಲ್ಲೆಗಳಲ್ಲಿ ಗ್ರಾಮೀಣ ಯುವಕರಿಗೆ ತರಬೇತಿ ಇತ್ಯಾದಿ.

* ನವೀಕರಿಸಬಹುದಾದ ಇಂಧನ ಮತ್ತು ಸಂರಕ್ಷಣೆಗೆ ತರಬೇತಿ ಮತ್ತು ಕೌಶಲ ಅಭಿವೃದ್ಧಿ.

* ಮಳೆ ನೀರಿನ ಸಂಗ್ರಹ, ಘನತ್ಯಾಜ್ಯ ನಿರ್ವಹಣೆ, ಜೈವಿಕ ಇಂಧನ, ಸುಧಾರಿತ ಒಲೆಗಳ ಬಳಕೆಗೆ ಪ್ರೇರಣೆ.

* ವಿದ್ಯುತ್‌ ಜಾಲ ಇಲ್ಲದ ಗ್ರಾಮೀಣ ಭಾಗಕ್ಕೆ ಸೌರ ಬೆಳಕು ಒದಗಿಸುವುದು.

* ಶಾಲೆ ಮತ್ತು ಕಾಲೇಜುಗಳಲ್ಲಿ ಎನರ್ಜಿ ಕ್ಲಬ್‌ ಆರಂಭಿಸುವುದು.

ಭವಿಷ್ಯದ ಯೋಜನೆಗಳು
* ಸೋಲಾರ್ ಬೀದಿ ದೀಪ ಮತ್ತು ಗೃಹ ಬಳಕೆ ಸೋಲಾರ್ ದೀಪಗಳ ನಿರ್ವಹಣೆ ಬಗ್ಗೆ ಗ್ರಾಮೀಣ ಯುವಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ.

* ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪವನ, ಪಿಕೊ ಹೈಡ್ರೊ ಮತ್ತು ಸೌರ ಬೆಳಕು ತಂತ್ರಜ್ಞಾನದ ಬಗ್ಗೆ ತರಬೇತಿ.

* ಸ್ವಚ್ಛ ಮತ್ತು ನವೀಕರಿಸಬಹುದಾದ  ಇಂಧನಗಳು ಗ್ರಾಮೀಣ ಪ್ರದೇಶದ ಜನರಿಗೆ ದೊರೆಯುವಂತಾಗಲು ಸಂಶೋಧನೆ ಹಾಗೂ ಅಭಿವೃದ್ಧಿ ಯೋಜನೆ.

* ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲಗಳ ಬಳಕೆಗೆ ಪ್ರೋತ್ಸಾಹ ನೀಡುವುದು.

* ವಿದ್ಯುತ್ ಕಾಣದ ಗ್ರಾಮಗಳನ್ನು ಗುರುತಿಸಿ ಬೆಳಕಿನ ಸೌಲಭ್ಯ ಒದಗಿಸುವುದು.

** *** **
ಇಂಧನ ರಕ್ಷಣೆಗೆ ಒತ್ತು

ಸಮಗ್ರ ಗ್ರಾಮೀಣ ಇಂಧನ ಕಾರ್ಯಕ್ರಮದ ಅಡಿ ಕೇಂದ್ರ ಸರ್ಕಾರ ಸಂಸ್ಥೆಯನ್ನು ಸ್ಥಾಪಿಸಿದೆ. ರಾಜ್ಯ ಸರ್ಕಾರ ನಮ್ಮ  ಸಂಸ್ಥೆಗೆ ಅಗತ್ಯ ಹಣಕಾಸು ಮತ್ತು ಸಲಹೆಯನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ತರಬೇತಿ ಮತ್ತು ವಿಸ್ತರಣಾ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಮುಖ್ಯವಾಗಿ ಗ್ರಾಮೀಣ ಜನರನ್ನೇ ಕೇಂದ್ರಿಕರಿಸಿಕೊಂಡು ಸಂಸ್ಥೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ನವೀಕರಿಸಬಹುದಾದ ಇಂಧನ ಮತ್ತು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ.
- ಡಾ.ಟಿ.ವಿ.ಮೋಹನ್‌ ದಾಸ್‌, ಕಾರ್ಯನಿರ್ವಾಹಕ ನಿರ್ದೇಶಕ, ಎಂಜಿಐಆರ್‌ಇಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT