ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ವರ್ಚಸ್ಸಿಗೆ ಅಗ್ನಿಪರೀಕ್ಷೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಟಿಎಂಸಿಗೆ ಮತ್ತೆ ಅವಕಾಶ ಸಿಗುವುದೇ?
Last Updated 23 ಮಾರ್ಚ್ 2016, 19:44 IST
ಅಕ್ಷರ ಗಾತ್ರ

ನವದೆಹಲಿ: ಐದು ವರ್ಷದ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆದಾಗ ಸುಮಾರು 34 ವರ್ಷಗಳ ಕಮ್ಯುನಿಸ್ಟರ ಆಡಳಿತ ಕೊನೆಗೊಳ್ಳುವ ಸುಳಿವು ಸಿಕ್ಕಿತ್ತು. ಆದರೆ, ಏಕಾಂಗಿಯಾಗಿ ಹೋರಾಡಿದ ಮಮತಾ ಬ್ಯಾನರ್ಜಿ ಅವರ  ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಅಷ್ಟೊಂದು ಅಭೂತಪೂರ್ವ ಜನ ಬೆಂಬಲ ದೊರೆಯಬಹುದೆಂದು ಯಾರೂ ಊಹಿಸಿರಲಿಲ್ಲ. ಆಗ ರಾಜಕೀಯ ಎದುರಾಳಿಗಳನ್ನು ದೂಳೀಪಟ ಮಾಡಿ ಅಧಿಕಾರ ಹಿಡಿದ ಟಿಎಂಸಿ ಐದು ವರ್ಷ ಪೂರ್ಣಗೊಳಿಸಿ ಮತ್ತೆ ಮತದಾರರ ಮುಂದೆ ಹೋಗುತ್ತಿದೆ.

ಆದರೆ ಹಿಂದಿಗಿಂತ ಈಗಿನ ಚುನಾವಣೆ ಕೊಂಚ ಭಿನ್ನವಾಗಿದೆ. ಟಿಎಂಸಿ ಕೊರಳಿಗೆ ‘ಭ್ರಷ್ಟಾಚಾರ’ದ ಕುಣಿಕೆ ಸುತ್ತಿಕೊಂಡಿದೆ. ‘ನಾರದ ಸುದ್ದಿ ಪೋರ್ಟಲ್‌’ ನಡೆಸಿದ ಮಾರುವೇಷದ ಕಾರ್ಯಾಚರಣೆ ಬಲೆಯಲ್ಲಿ ಅನೇಕ ಮಂತ್ರಿಗಳು, ಶಾಸಕರು ಮತ್ತು ಸಂಸದರು ಸಿಕ್ಕಿಕೊಂಡಿದ್ದಾರೆ.

ಇದಕ್ಕೂ ಮೊದಲೇ ‘ಶಾರದಾ ಚಿಟ್‌ಫಂಡ್‌ ಹಗರಣ’ದ ಕೆಸರೂ ಅದಕ್ಕೆ ಮೆತ್ತಿಕೊಂಡಿದೆ. ಈ ಹಗರಣದ ಆರೋಪಿ ಮತ್ತು ಟಿಎಂಸಿ
ಸರ್ಕಾರದಲ್ಲಿ ಸಚಿವರಾಗಿದ್ದ ಮದನ್ ಮಿತ್ರ ಜೈಲು ಸೇರಿದ್ದಾರೆ.

ಟಿಎಂಸಿ ವಿರುದ್ಧದ ಆರೋಪಗಳಿಂದ ಲಾಭ ಪಡೆಯಲು ಎಡ ಪಕ್ಷಗಳು, ಕಾಂಗ್ರೆಸ್‌, ಬಿಜೆಪಿ ಪೈಪೋಟಿಗಿಳಿದಿವೆ. ಈ  ಹಗರಣಗಳನ್ನು ಬಿಜೆಪಿ ಜನರ ಮುಂದಿಡುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರ ಹಗರಣ ಕುರಿತು ತನಿಖೆ ಮಾಡದೆ ಮಮತಾ ಬಗ್ಗೆ ಮೃದು ನಿಲುವು ತಳೆದಿದೆ ಎಂದು ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಪ್ರಚಾರ ನಡೆಸಿವೆ. ಸಂಸತ್‌ ಬಜೆಟ್‌ ಅಧಿವೇಶನದಲ್ಲಿ ಟಿಎಂಸಿ ಮೇಲಿನ ಆರೋಪ ಕುರಿತು ತನಿಖೆ ನಡೆಸುವಂತೆ ಎರಡೂ ಪಕ್ಷಗಳು ಗದ್ದಲವೆಬ್ಬಿಸಿದ್ದವು. ಆದರೆ ಕೇಂದ್ರ ಸರ್ಕಾರ ವಿವಾದದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ.

ಶಾರದಾ ಮತ್ತು ನಾರದ ಹಗರಣಗಳ ಅಡಕತ್ತರಿಯಲ್ಲಿ ಸಿಕ್ಕಿಕೊಂಡು ‘ಸ್ಯಾಂಡ್‌ವಿಚ್‌’ ಆಗಿದ್ದರೂ, ಪಶ್ಚಿಮ ಬಂಗಾಳದಲ್ಲಿ ಮಮತಾ ಅವರ ಪ್ರಭಾವ ಕಡಿಮೆಯಾದಂತೆ ಕಾಣುವುದಿಲ್ಲ. ಈ ಹಗರಣಗಳು ಸ್ವಲ್ಪಮಟ್ಟಿಗೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪರಿಣಾಮ ಬೀರಬಹುದಾದರೂ, ಗ್ರಾಮೀಣ ಪ್ರದೇಶದಲ್ಲಿ ಅವರ ಜನಪ್ರಿಯತೆಗೇನೂ ಧಕ್ಕೆಯಿಲ್ಲ ಎಂಬುದು ದೆಹಲಿ ಮೂಲದ ಬಂಗಾಳಿ ಪತ್ರಕರ್ತರ ವಿಶ್ಲೇಷಣೆ.

ಸಿಪಿಎಂ ಬಲ ಕುಸಿತ:  ಲೋಕಸಭೆ ಚುನಾವಣೆಯಲ್ಲಿ ಸಿಪಿಎಂ ಬೆಂಬಲ ಇನ್ನಷ್ಟು ಕುಸಿದಿದೆ. ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ 8ರಷ್ಟು ಮತಗಳು ಕಡಿಮೆ ಆಗಿವೆ. ಈ ಮತಗಳು ಬಿಜೆಪಿಗೆ ವರ್ಗಾವಣೆಯಾಗಿರುವುದು ಕಂಡು ಬರುತ್ತದೆ. ಟಿಎಂಸಿ ಹಾಗೂ ಕಾಂಗ್ರೆಸ್‌ ಮತಗಳಲ್ಲೂ ಕೊಂಚ ಏರಿಕೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಉಳಿದ ರಾಜ್ಯಗಳಂತೆ ಬಂಗಾಳದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕೆಲಸ ಮಾಡಿದೆ.

ಬಿಜೆಪಿ ಬಲ ಹೆಚ್ಚಬಹುದೇ: ಈ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲೆ ವಿಸ್ತರಿಸುವುದೇ ಎಂಬ ಕುತೂಹಲ ಹುಟ್ಟಿಕೊಂಡಿದೆ. ಬಂಗಾಳದಲ್ಲಿ ಎಡ ಪಕ್ಷಗಳು ಅಥವಾ ಟಿಎಂಸಿಗೆ ಇರುವಂತಹ ಸಂಘಟನಾ ಶಕ್ತಿ ಬಿಜೆಪಿಗೆ ಇಲ್ಲ. ಕಾರ್ಯಕರ್ತರ ಪಡೆಯೂ ಇಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಸೂಕ್ತ ನಾಯಕರಿಲ್ಲ. ಮೋದಿ ಸರ್ಕಾರದ 22 ತಿಂಗಳ ಆಡಳಿತವೂ ಅನುಕೂಲವಾಗುವಂತೆ ಕಾಣುವುದಿಲ್ಲ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಸಿಪಿಎಂ ಮತ್ತು ಕಾಂಗ್ರೆಸ್‌ ಪರಿಸ್ಥಿತಿಯೂ ಹೆಚ್ಚೂಕಡಿಮೆ ಹೀಗೇ ಇದೆ. ಮೂರೂವರೆ ದಶಕ ಆಡಳಿತ ನಡೆಸಿದ ಸಿಪಿಎಂ ಸಮರ್ಥ ನಾಯಕರ ಕೊರತೆ ಎದುರಿಸುತ್ತಿದೆ. ಜ್ಯೋತಿಬಸು ಹಾಗೂ ಬುದ್ಧದೇವ ಭಟ್ಟಾಚಾರ್ಯ ಅವರಂತ ಪ್ರಭಾವಿಗಳು ಮುಖ್ಯಮಂತ್ರಿಯಾಗಿದ್ದ ಸ್ಥಾನಕ್ಕೆ ಈಗ ಯಾರನ್ನು ಬಿಂಬಿಸಬೇಕೆಂಬ ಗೊಂದಲದಲ್ಲಿದೆ. ಅದರ ಕಾರ್ಯಕರ್ತರ ಪಡೆಯೂ ಕದಲಿಹೋಗಿದೆ. ಬಹುತೇಕರು ಮಮತಾ ಅವರಿಗೆ ನಿಷ್ಠೆ ಬದಲಿಸಿದ್ದಾರೆ. ಅಧಿಕಾರ ಕಳೆದುಕೊಳ್ಳುವ ಪಕ್ಷಕ್ಕೆ ಎದುರಾಗುವ ಸಾಮಾನ್ಯ ಸಮಸ್ಯೆ ಇದು. ಪಕ್ಷದ ಕಾರ್ಯಕರ್ತರು ಅಥವಾ ನಾಯಕರ ಪಕ್ಷಾಂತರ ಮಾಮೂಲು. ಆದರೆ, ಎಡ ಪಕ್ಷಗಳಿಗೂ ಇಂಥ ದುರ್ಗತಿ ಬಂದಿರುವುದು ವಿಪರ್ಯಾಸ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೇರೆ, ಬೇರೆಯಾಗಿ ಸ್ಪರ್ಧಿಸಿದ್ದ ಎಡ ಪಕ್ಷಗಳೀಗ ಕಾಂಗ್ರೆಸ್‌ ಜತೆಗೂಡಿವೆ. ಎಡ ಪಕ್ಷಗಳ ಜತೆಗಿನ ಮೈತ್ರಿಗೆ ಬಂಗಾಳ ಕಾಂಗ್ರೆಸ್‌ ಮುಖಂಡರು ಒಲವು ತೋರಿದ್ದರು. ಸ್ಥಳೀಯ ನಾಯಕರ ಅಭಿಪ್ರಾಯಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಮನ್ನಣೆ ಕೊಟ್ಟಿದೆ. ಎಡ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡರೆ ಅಧಿಕಾರಕ್ಕೆ ಬರಬಹುದೆಂದು ಸ್ಥಳೀಯ ನಾಯಕರು ಭಾವಿಸಿದ್ದಾರೆ.

ಬಲಾಬಲ: ವಿಧಾನಸಭೆಯ 294 ಕ್ಷೇತ್ರಗಳ ಪೈಕಿ ಸುಮಾರು 225 ಕ್ಷೇತ್ರಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಉಳಿದವು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹರಡಿಕೊಂಡಿವೆ. ದಕ್ಷಿಣ ಬಂಗಾಳ ಟಿಎಂಸಿ ಭದ್ರಕೋಟೆ. ಉತ್ತರ ಬಂಗಾಳದಲ್ಲಿ ಎಡ ಪಕ್ಷಗಳ ಪ್ರಾಬಲ್ಯವಿದೆ.

ಮಧ್ಯ ಬಂಗಾಳ ಕಾಂಗ್ರೆಸ್‌ ನಿಯಂತ್ರಣದಲ್ಲಿದೆ. ಬಡವರು ಹಾಗೂ ಗ್ರಾಮೀಣ ಪರವಾದ ಯೋಜನೆಗಳಿಂದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗ್ರಾಮೀಣ ಪ್ರದೇಶದಲ್ಲಿ ಪ್ರಶ್ನಾತೀತ ನಾಯಕಿ. ಅವರ ಜನಪ್ರಿಯತೆ ಮೇಲೆ ಟಿಎಂಸಿ ಭವಿಷ್ಯ ನಿಂತಿದೆ.

ಐದು ವರ್ಷದಿಂದ ಅಧಿಕಾರವಿಲ್ಲದೆ, ನೀರಿನಿಂದ ಹೊರ ಬಿದ್ದ ಮೀನಿನಂತೆ ಒದ್ದಾಡುತ್ತಿರುವ ಎಡ ಪಕ್ಷಗಳು ಮಾತ್ರ ‘ಬಂಗಾಳದಲ್ಲಿ ಮತ್ತೆ ಪರಿವರ್ತನೆ ಗಾಳಿ ಬೀಸಬಹುದು’ ಎಂಬ ನಿರೀಕ್ಷೆಯಲ್ಲಿವೆ. ಆ ಕಾರಣಕ್ಕೆ ಅವು ಕಾಂಗ್ರೆಸ್‌ ಜತೆಗೂಡಿವೆ. ಆದರೆ, ಮೂರೂವರೆ ದಶಕಗಳ ಅದರ ಆಡಳಿತದ ವಿರುದ್ಧದ ಕೋಪವನ್ನು ಜನ ಮರೆತಿದ್ದಾರೆಯೇ ಎಂಬ ಪ್ರಶ್ನೆಗೆ ಚುನಾವಣೆಯೇ ಉತ್ತರ ಕೊಡಬೇಕು. ಪಶ್ಚಿಮ ಬಂಗಾಳ ಮತದಾರರು ಪ್ರಬುದ್ಧರು. ಜಾತಿ ರಾಜಕಾರಣಕ್ಕೆ ಇಲ್ಲಿ ಅವಕಾಶವಿಲ್ಲ. ಆದರೆ, ರಾಜ್ಯದ ಜನಸಂಖ್ಯೆಯಲ್ಲಿ ಶೇ 30 ರಷ್ಟಿರುವ ಮುಸ್ಲಿಮರು ವಿಧಾನಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಖಚಿತ.

ಸುಮಾರು ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯವನ್ನು ಅಲ್ಪಸಂಖ್ಯಾತರು ತೀರ್ಮಾನಿಸಲಿದ್ದಾರೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶೇ 40ಕ್ಕಿಂತ ಹೆಚ್ಚು, 30 ಕ್ಷೇತ್ರಗಳಲ್ಲಿ ಶೇ 30ಕ್ಕಿಂತ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಮುಸ್ಲಿಂ ಮತದಾರರನ್ನು ಸೆಳೆಯಲು ಟಿಎಂಸಿ, ಕಾಂಗ್ರೆಸ್‌– ಎಡ ಪಕ್ಷಗಳ ಮೈತ್ರಿಕೂಟ ಪ್ರಯತ್ನಿಸುತ್ತಿದೆ. ಐದು ವರ್ಷದ ಆಡಳಿತ ಅವಧಿಯಲ್ಲಿ ಮಮತಾ  ತಾವು ಮುಸ್ಲಿಮರ ಪರ ಎಂಬ ಸಂದೇಶ ರವಾನಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದಿಂದ ಅಂತರ ಕಾಯ್ದುಕೊಳ್ಳುವ ಕೆಲಸವನ್ನು ಜಾಣ್ಮೆಯಿಂದ ಮಾಡಿದ್ದಾರೆ.

‘ಮುಖ್ಯಮಂತ್ರಿಯಾಗಿ ಮಮತಾ ಐದು ವರ್ಷಗಳಲ್ಲಿ ನಿರೀಕ್ಷಿಸಿದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಯುವಕರಿಗೆ ಹೊಸ ಉದ್ಯೋಗ ಸೃಷ್ಟಿಸಿಲ್ಲ. ಉದ್ಯಮಗಳ ಸ್ಥಾಪನೆಗೆ ಒತ್ತು ಕೊಡುವುದಿರಲಿ, ಬಂಗಾಳದಲ್ಲಿದ್ದ ಕೆಲವು ಉದ್ಯಮಗಳೇ ಜಾಗ ಖಾಲಿ ಮಾಡಿವೆ’ ಎಂಬ ಆಕ್ಷೇಪ ನಗರ ಪ್ರದೇಶಗಳಲ್ಲಿದೆ. ಟಿಎಂಸಿ ಪುನಃ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಒತ್ತು ಕೊಡುವುದಾಗಿ ಮಮತಾ  ಭರವಸೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಮೈತ್ರಿಯಿಂದ ಉಭಯ ಬಣಗಳಿಗೆ ಲಾಭ ಆಗಲಿದೆ. ಎರಡೂ ಕಡೆಗೂ ಮತಗಳ ವರ್ಗಾವಣೆ ಆಗಲಿದೆ. ಅದು ಸೀಟುಗಳಾಗಿ ಪರಿವರ್ತನೆ ಆಗುವುದೇ ಎಂದು ಈಗಲೇ ಅಂದಾಜಿಸುವುದು ಕಷ್ಟ.  ಒಟ್ಟಿನಲ್ಲಿ ಅಲ್ಲಿನ ಚುನಾವಣೆ ಕುತೂಹಲ ಕೆರಳಿಸಿದೆ.

ಮತದಾರರು ಟಿಎಂಸಿಗೆ ಮತ್ತೊಂದು ಅವಕಾಶ ಕೊಡುತ್ತಾರೆಯೇ ಅಥವಾ ಕಾಂಗ್ರೆಸ್‌– ಎಡಪಕ್ಷಗಳ ಮೈತ್ರಿ ಕೂಟ ಬೆಂಬಲಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಖಾತೆ ತೆರೆದಿರುವ ಬಿಜೆಪಿಗೆ ಎಷ್ಟು ಸ್ಥಾನಗಳು ಸಿಗಲಿವೆ ಎಂಬ ಪ್ರಶ್ನೆಗೂ ಮೇ 19ರಂದು ಉತ್ತರ ಸಿಗಲಿದೆ.

ಪಕ್ಷಗಳ ಬಲಾಬಲ
294 ಸದಸ್ಯ ಬಲದ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ 184, ಎಡ ಪಕ್ಷಗಳ ಒಕ್ಕೂಟ 65, ಕಾಂಗ್ರೆಸ್‌ 42 ಸ್ಥಾನಗಳನ್ನು ಗೆದ್ದಿವೆ.  ಬೇರೆಯವರಿಗೆ ಸಿಕ್ಕಿದ್ದು ಬರೀ 3 ಸ್ಥಾನಗಳು. ಟಿಎಂಸಿ ಶೇ 38.93, ಸಿಪಿಎಂ

ಶೇ  30.8ರಷ್ಟು ಮತ ಗಳಿಸಿವೆ. ಆದರೆ, 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸಿಕೊಂಡಿದೆ. ಶೇ 17ರಷ್ಟು ಮತಗಳನ್ನು ಪಡೆದು, ಎರಡು ಸ್ಥಾನಗಳನ್ನು ಮಡಿಲಿಗೆ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT