ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೀರ ಸುತ್ತಮುತ್ತ

Last Updated 1 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಒಂದು ದಿನ ನನ್ನ ಗೆಳತಿ ಶಾಲಿನಿ ಫೋನ್ ಮಾಡಿ, ಆಕೆಯ ಅಕ್ಕನ ಮಗಳೊಬ್ಬಳಿಗೆ ನನ್ನ ದೂರವಾಣಿ ಸಂಖ್ಯೆ ನೀಡಿರುವುದಾಗಿ ತಿಳಿಸಿದಳು.  ಆಕೆಗೆ ಜೈನಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆಯಂತೆ. ಅದಕ್ಕೆ ನಾನೇ ಸೂಕ್ತ ಎಂದು ಭಾವಿಸಿ ನನ್ನ ದೂರವಾಣಿ ಸಂಖ್ಯೆ ನೀಡಿದಳಂತೆ. ಅವಳು ಫೋನ್ ಇಟ್ಟ ಕೂಡಲೇ ನನ್ನ ಗೆಳತಿಯ ಅಕ್ಕ ಮಾತನಾಡಿ ತನ್ನ ಮಗಳು ಬೆಂಗಳೂರಿನ ಪ್ರಸಿದ್ಧ ಶಾಲೆಯೊಂದರಲ್ಲಿ ಆರನೇ ತರಗತಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವುದಾಗಿ ತಿಳಿಸಿದಳು. ‘ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕಲಿಯುತ್ತಿರುವ ಮಗಳಿಗೆ ಸಮಾಜ ವಿಜ್ಞಾನ ಪುಸ್ತಕದಲ್ಲಿ ಜೈನಧರ್ಮಕ್ಕೆ ಸಂಬಂಧಪಟ್ಟ ಭಾಗದಲ್ಲಿ ಅನೇಕ ಸಂಶಯಗಳಿದ್ದು ಆ ಕುರಿತು ಹೆಚ್ಚಿನ ಮಾಹಿತಿ ಬೇಕೆಂದು ಕೇಳಿದಳು.  ಅವರು ನನ್ನನ್ನು ಕೇಳಿದ ಮೊದಲ ಪ್ರಶ್ನೆ: ‘ನೀವು ಜೈನರು ಅದರಲ್ಲೂ ದಿಗಂಬರರು ಬಟ್ಟೆ ಹಾಕಿಕೊಳ್ಳುತ್ತೀರಾ?’ ನಾನು ಆ ಪ್ರಶ್ನೆ ಕೇಳಿ ಚಕಿತಳಾದೆ. ‘ಹಾಗಂತ ಯಾರು  ಹೇಳಿದ್ದು’ ಎಂದು ಮರು ಪ್ರಶ್ನಿಸಿದೆ. ‘ಬುಕ್ಕಿನಲ್ಲಿ ಹಾಗಿದೆ. ಅಂತರ್ಜಾಲದಲ್ಲಿ ಪರಿಶೀಲಿಸಿದಾಗ ದಿಗಂಬರ ಜೈನಮುನಿಗಳು ವಸ್ತ್ರ ಧರಿಸುವುದಿಲ್ಲ ಅಂತ ಮಾಹಿತಿ ಇತ್ತು. ಅದನ್ನು ನನ್ನ ಮಗಳಿಗೆ ಹೇಳಿದರೆ, ‘ನೀನು ಹೇಳಿದ್ದು ತಪ್ಪು, ನಮ್ಮ ಮ್ಯಾಮ್ ಹೇಳಿಕೊಟ್ಟಿದ್ದೇ ಸರಿ’ ಅನ್ನುತ್ತಾಳೆ. ಅದಕ್ಕೆ ಯಾವುದು ಸರಿ ಅಂತ ಕೇಳಿ ತಿಳಿದುಕೊಳ್ಳೋಣ ಅಂತ ನಿಮಗೆ ಕೇಳಿದ್ದು. ನೀವು ಜೈನರಾದ್ದರಿಂದ ನಿಮಗೆ ಗೊತ್ತಿರುತ್ತದೆ. ಅದಕ್ಕೆ ಕೇಳಿದೆ’ ಎಂದಳು. ನಾನು, ‘ಜೈನರಲ್ಲಿ ದಿಗಂಬರ ಪರಂಪರೆಯಲ್ಲಿ ಬರುವ ಗಂಡಸರು ಮುನಿದೀಕ್ಷೆ ಪಡೆಯುವಾಗ ತಮ್ಮದಲ್ಲದ ಸಂಸಾರವನ್ನು ತೊರೆದಂತೆ ಮೈಮೇಲಿನ ಬಟ್ಟೆಯನ್ನೂ ತೆಗೆದು ದಿಕ್ಕುಗಳನ್ನೇ ಅಂಬರವೆಂದು ಸ್ವೀಕರಿಸುತ್ತಾರೆ. ಜೈನ ಸನ್ಯಾಸಿನಿಯರು (ಆರ್ಯಿಕೆ) ಬಿಳಿ ವಸ್ತ್ರವನ್ನು ಧರಿಸುತ್ತಾರೆ’ ಎಂದು ತಿಳಿಸಿದೆ. ಅದಕ್ಕೆ ಆಕೆ ‘ಪಠ್ಯಪುಸ್ತಕಗಳಲ್ಲೇ ಇಂತಹ ತಪ್ಪು ಮಾಹಿತಿ ಕೊಟ್ಟರೆ ಲಕ್ಷಾಂತರ ಮಕ್ಕಳಿಗೆ ಧರ್ಮದ ಬಗ್ಗೆ ತಪ್ಪು ಹೇಳಿದಂತಾಗುವುದಿಲ್ಲವೇ?’ ಎಂದು ಪ್ರಶ್ನಿಸಿದರು.

ಈ ರೀತಿಯ ಅನುಭವ ನನಗೆ ಆಗುತ್ತಿರುವುದು ಇದೇ ಮೊದಲಲ್ಲ. ಅನೇಕರು ಮಹಾವೀರನೇ ಜೈನಧರ್ಮದ ಸ್ಥಾಪಕ ಎಂದೂ ನನ್ನ ಬಳಿ ಹೇಳಿದ್ದಿದೆ. ನಾನು ಅಲ್ಲ ಎಂದು ವಾದ ಮಾಡಿದರೆ ಅವರು ಕಲಿತುಬಂದ ಪಠ್ಯಪುಸ್ತಕಗಳಲ್ಲಿ ಅದೇ ಇತ್ತೆಂದು ವಾದಿಸಿದ್ದಾರೆ. ಅದು ಹಳೆಯ ಸುದ್ದಿ, ನಾವು ಜೈನರು ಅದನ್ನೆಲ್ಲಾ ಪ್ರತಿಭಟಿಸಿ ಹಳೆಯ ತಪ್ಪುಗಳಾಗದಂತೆ ಸರಿಪಡಿಸಿದ್ದೇವೆ ಎನ್ನುವ ಭ್ರಮೆಯಲ್ಲಿದ್ದ ನನಗೆ ಮತ್ತೆ ಇಂತಹ ಪ್ರಶ್ನೆಗಳು ಧುತ್ತೆಂದು ಬಂದಾಗ ಆ ಪಠ್ಯಪುಸ್ತಕವನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದುಕೊಂಡೆ.

ಸಿಬಿಎಸ್‌ಇಯ ಆರನೇ ತರಗತಿಯಲ್ಲಿ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ  ಸಮಾಜ ವಿಜ್ಞಾನದ ಪಠ್ಯಪುಸ್ತಕವು ಜೈನಧರ್ಮದ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿದೆ. 2014ರಲ್ಲಿ ಮುದ್ರಣಗೊಂಡಿರುವ ಈ ಪಠ್ಯವನ್ನು ಓರಿಯಂಟ್ ಬ್ಲಾಕ್ ಸ್ವಾನ್ ಪ್ರಕಾಶನಗೊಳಿಸಿದೆ. ಪಠ್ಯಪುಸ್ತಕದ ಏಳನೇ ಪಾಠವಾದ ‘ಗ್ರೇಟ್ ಥಿಂಕರ್ಸ್‌...’ ನಲ್ಲಿ ಜೈನಿಸಂ ಬಗ್ಗೆ ವಿವರವಾಗಿ ಬರೆಯುತ್ತಾ 24 ಜಿನರು ಅಥವಾ ತೀರ್ಥಂಕರರು ಒಬ್ಬರ ನಂತರ ಒಬ್ಬರು ಬಂದರೆಂದು ಜೈನಧರ್ಮ ಗುರುತಿಸುತ್ತದೆ ಎಂದು ಹೇಳುತ್ತಲೇ ಮುಂದೆ ಜೈನರು ಅಂದರೆ ಮಹಾವೀರರ ಅನುಯಾಯಿಗಳು ಎನ್ನುತ್ತಾರೆ (ಪುಟ 54–62).  ಇಲ್ಲಿ ಮಕ್ಕಳಿಗೆ ಎಂತಹ ತಪ್ಪು ತಿಳಿವಳಿಕೆ ಕೊಡಲಾಗಿದೆ ಎಂದರೆ 24 ತೀರ್ಥಂಕರರಿದ್ದಾರೆ ಎನ್ನುತ್ತಲೇ, 24ನೇ  ತೀರ್ಥಂಕರರಾದ ಮಹಾವೀರರ ಅನುಯಾಯಿಗಳಿಗೆ ಜೈನರು ಎನ್ನುತ್ತಾರೆ ಎನ್ನಲಾಗಿದೆ.

ಅಂದರೆ  ಇದರ  ಅರ್ಥ ಏನು? ಪಠ್ಯದಲ್ಲಿ ಎಲ್ಲಿಯೂ ಜೈನಧರ್ಮದ ಸ್ಥಾಪಕ ಯಾರು ಎಂಬ ಬಗ್ಗೆ ಸುಳಿವಿಲ್ಲ. ಮಕ್ಕಳು ಕೇಳಿದರೆ ಶಿಕ್ಷಕರು ಮಹಾವೀರನೇ ಸ್ಥಾಪಕ ಎಂದು ತಿಳಿಸುತ್ತಾರಂತೆ. ಆದಿನಾಥ ಅಥವಾ ಋಷಭ ಮೊದಲ ತೀರ್ಥಂಕರ. ಅವನೇ ಜೈನಧರ್ಮದ ಸ್ಥಾಪಕ ಎಂದು ಸೇರಿಸುವಲ್ಲಿ ಇವರಿಗೆ ಯಾವ ಅಡ್ಡಿಯಿತ್ತು? ಸುಮ್ಮನೆ ವಿವಾದಗಳನ್ನು ಸಂದೇಹಗಳನ್ನು ಸೃಷ್ಟಿ ಮಾಡುವುದೇಕೆ? ಮಹಾವೀರರ ತಂದೆಯ ಹೆಸರು  ಸಿದ್ಧಾರ್ಥ ಎಂದಿರಬೇಕಿರುವುದು ಸಿದ್ಧಾಂತ ಎಂದು  ತಪ್ಪಾಗಿದೆ. ಮಹಾವೀರನಿಗೆ 30 ವರ್ಷಗಳಾಗಿದ್ದಾಗ ಮದುವೆಯಾಗಿ ಮಗುವಿತ್ತು ಎಂಬುದಾಗಿ ಪಾಠದಲ್ಲಿದೆ. ಇದಕ್ಕೆ ಮೂಲ, ಶ್ವೇತಾಂಬರ ಪರಂಪರೆಯ ಧಾರ್ಮಿಕ  ಗ್ರಂಥ  ‘ಉತ್ತರಾಧ್ಯಯನ ಸೂತ್ರ’ ಎಂದಿದ್ದು, ಅದು ಮಹಾವೀರರ ಮೂಲ ಸಂದೇಶಗಳನ್ನು ಹೊಂದಿರುವ ಗ್ರಂಥ  ಎನ್ನಲಾಗಿದೆ. ಪಾಠದಲ್ಲಿ ಜೈನಧರ್ಮದ ಎರಡು ವಿಭಾಗಗಳನ್ನು ಹೇಳುವಾಗ ದಿಗಂಬರ ಸಂಪ್ರದಾಯದ ಪ್ರಕಾರ ಮಹಾವೀರರಿಗೆ ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದರು, ಶ್ವೇತಾಂಬರರ ಸಂಪ್ರದಾಯದ ಪ್ರಕಾರ ಆತನಿಗೆ ಮದುವೆಯಾಗಿತ್ತು,  ಮಗಳಿದ್ದಳು ಎಂದು ತಿಳಿಸಬಹುದಿತ್ತಲ್ಲವೇ ಅಥವಾ ಮದುವೆಯ ವಿಚಾರವನ್ನೇ ಕೈಬಿಟ್ಟಿದ್ದರೂ ನಷ್ಟವೇನು ಆಗುತ್ತಿರಲಿಲ್ಲ ಅಲ್ಲವೇ? ಈ ಪಾಠದ ಕೊನೆಯಲ್ಲಿ ಶ್ವೇತಾಂಬರ ಜೈನರು ಇತ್ತೀಚಿನ ದಿನಗಳಲ್ಲಿ ವಿಸ್ತಾರವಾಗಿ ಹರಡಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ. ಪಠ್ಯಪುಸ್ತಕ ರಚನೆಯಲ್ಲಿ ತೊಡಗಿದವರಿಗೆ ಜೈನಧರ್ಮದ ಬಗ್ಗೆ ಮೂಲ ತಿಳಿವಳಿಕೆಯೂ ಇಲ್ಲವೇ?  ಇದೇ ರೀತಿ ಡಿಎಸ್‌ಇಆರ್‌ಟಿ 2012ರಲ್ಲಿ ರಚಿಸಿದ್ದ 8ನೇ ತರಗತಿಯ ಸಮಾಜಶಾಸ್ತ್ರ ಪಠ್ಯಪುಸ್ತಕದಲ್ಲಿಯೂ ಮಹಾವೀರರಿಗೆ ಮದುವೆಯಾಗಿತ್ತು ಎಂಬ ವಿಚಾರ ಬರೆದಾಗ ಅನೇಕ  ವಿಚಾರವಂತರು ಪ್ರತಿಭಟಿಸಿದಾಗ ಆ ತಪ್ಪನ್ನು ಸರಿಪಡಿಸಲಾಯಿತು. ದಿಗಂಬರ ಪರಂಪರೆಯಂತೆಯೇ ಪಠ್ಯ ತಯಾರಿ ಮಾಡಬೇಕೇ? ಶ್ವೇತಾಂಬರ ಪರಂಪರೆಯಂತೆ ಬರೆಯಬಾರದೇ? ಎಂದು  ಕೆಲವರು ಪ್ರಶ್ನಿಸಬಹುದು. ಆದರೆ ನನ್ನ ಉದ್ದೇಶ ಅದಲ್ಲ. ಕೊಟ್ಟರೆ ಎರಡೂ ಪರಂಪರೆಗಳ ಮಾಹಿತಿ ಕೊಡಿ. ಇಲ್ಲವಾದಲ್ಲಿ  ತೀರ್ಥಂಕರರ ಮದುವೆಯಂತಹ ವಿವಾದಗಳನ್ನು ಕೈಬಿಡಿ. ಮಕ್ಕಳಿಗೆ ಬೇಕಾಗಿರುವುದು ಮಹಾವೀರರ ಉಪದೇಶಗಳಾದ ಅಹಿಂಸೆ, ಶಾಂತಿ, ಅಚೌರ್ಯ, ಅಪರಿಗ್ರಹ, ಕರುಣೆ, ಪ್ರಮಾಣಿಕತೆ, ಸತ್ಯವನ್ನೇ ನುಡಿಯುವುದು ಮುಂತಾದವು. ಎಲ್ಲೆಲ್ಲೂ ಹಿಂಸೆ, ಭ್ರಷ್ಟಾಚಾರ, ಸುಳ್ಳು ಹಾಗೂ ತಮ್ಮ ಮೂರು ನಾಲ್ಕು ತಲೆಮಾರುಗಳಿಗೂ ಸಂಗ್ರಹಿಸಿಟ್ಟುಕೊಳ್ಳುತ್ತಿರುವ ಇಂದಿನ ಸಮಾಜಕ್ಕೆ  ಮಹಾವೀರರ ಉಪದೇಶಗಳು ಅತ್ಯಂತ ಅವಶ್ಯಕವಾಗಿವೆ. ಉದಾತ್ತ ವ್ಯಕ್ತಿಗಳ ವೈಯಕ್ತಿಕ ವಿಚಾರಗಳಿಗಿಂತ ಅವರು ಸಮಾಜಕ್ಕೆ ನೀಡಿದ ಸಂದೇಶ, ಕಾರ್ಯಗಳನ್ನು ಇಂದಿನವರಿಗೆ ತಿಳಿಸಬೇಕಲ್ಲವೆ? ವೈಯಕ್ತಿಕ ವಿಚಾರಕ್ಕೆ ಕಡಿಮೆ ಪ್ರಾಶಸ್ತ್ಯ ಕೊಟ್ಟು ಅವರ ಸಂದೇಶಗಳಿಗೆ ಹೆಚ್ಚಿನ ಜಾಗವನ್ನು ಪಠ್ಯದಲ್ಲಿ ಅಳವಡಿಸುವುದು ಸೂಕ್ತವಲ್ಲವೇ? ಇನ್ನು ಮುಂದಾದರೂ ಪಠ್ಯಪುಸ್ತಕ ರಚನಾ ಕಾರ್ಯದಲ್ಲಿ ಒಳಗೊಳ್ಳುವ ಉಪಾಧ್ಯಾಯರು ಯಾವ ತರಗತಿಯ ಮಕ್ಕಳಿಗೆ ಯಾವುದು ಮುಖ್ಯ, ಯಾವುದು ಅಮುಖ್ಯ ಎನ್ನುವುದನ್ನು ತಿಳಿದುಕೊಂಡಿದ್ದರೆ ಒಳಿತು. ಈ ಮಾತು ಎಲ್ಲ ಧರ್ಮಗಳಿಗೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT