ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಕಟ್ಟಿದ ಚಂದ್ರಗಿರಿ...

ರಂಗಭೂಮಿ
Last Updated 24 ಡಿಸೆಂಬರ್ 2015, 6:50 IST
ಅಕ್ಷರ ಗಾತ್ರ

‘ಚಂದ್ರಗಿರಿ ತೀರದಲ್ಲಿ’ ಹಿರಿಯ ಸಾಹಿತಿ ಸಾರಾ ಅಬೂಬಕರ್ ಅವರ ಕೃತಿ. ಧರ್ಮದ ಆಚರಣೆಗಳಲ್ಲಿನ ಕರ್ಮಠತನಗಳನ್ನು, ಈ ಕರ್ಮಠತನಗಳು ಹೆಣ್ಣಿನ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳನ್ನು ಮನಸ್ಸು ಕಲಕುವಂತೆ ಕಟ್ಟಿಕೊಡುವ ಕೃತಿ. ನಾದಿರ ಪ್ರಮುಖ ಪಾತ್ರ. ಈ ಕೃತಿ ನಾಟಕ ರೂಪಕ್ಕೆ ಇಳಿದಿದ್ದು ನಗರದಲ್ಲಿ ನಡೆಯುತ್ತಿರುವ ‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ನಾಳೆ (ಡಿ. 25) ಪ್ರದರ್ಶನಗೊಳ್ಳಲಿದೆ. ಮಹಿಳಾ ಸಂವೇದನೆಯನ್ನು ಕಾಣಿಸುವ ಕೃತಿಯನ್ನು ನಾಟಕ ರೂಪದಲ್ಲಿ ಕಟ್ಟುತ್ತಿರುವುದೂ ಮಹಿಳೆಯರೇ ಎನ್ನುವುದು ಇಲ್ಲಿನ ವಿಶೇಷ.

ಅಂದಹಾಗೆ ನಯನಾ ಜೆ. ಸೂಡ ‘ಚಂದ್ರಗಿರಿ ತೀರದಲ್ಲಿ’ ಪ್ರಯೋಗ ನಿರ್ದೇಶಿಸುತ್ತಿದ್ದಾರೆ. ರೂಪಾ ಕೋಟೇಶ್ವರ, ಶ್ವೇತಾ, ಸಂಗೀತ, ಪ್ರಶಾಂತಿ ಮತ್ತಿತರರು ಅವರ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. ನೇಪಥ್ಯದಲ್ಲಿ ಗಂಡು ಮಕ್ಕಳು ಕೆಲಸ ಮಾಡುತ್ತಿದ್ದರೂ ಪ್ರಮುಖ ಹೊಣೆ ಮತ್ತು ನಾಟಕದ ಕಟ್ಟುವಿಕೆ ಮಹಿಳೆಯರದ್ದೇ.

ಈ ಪ್ರಯತ್ನ–ಪ್ರಯೋಗದ ಬಗ್ಗೆ ನಯನಾ ಹೇಳುವುದಿಷ್ಟು: ‘ಕಾಲೇಜಿನಲ್ಲಿ ಓದುವಾಗ ಚಂದ್ರಗಿರಿ ತೀರದಲ್ಲಿ ಕೃತಿಯನ್ನು ಓದುವಂತೆ ಯಾರೋ ಹೇಳಿದ್ದರು. ಓದಿದೆ. ಕೃತಿಗೆ ಸಂಬಂಧಿಸಿದ ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡೆ. ಆಗಲೇ ಇದನ್ನು ನಾಟಕ ರೂಪಕ್ಕೆ ತರಬೇಕು ಎನ್ನುವ ಆಸೆ ಬಂದಿತು. ಕೆಲವರು ಅದಾಗಲೇ ನಾವು ಅನುಮತಿ ಪಡೆದಿದ್ದೇವೆ ಎಂದರು. ಮತ್ತೆ ಕೆಲವರು ಅನುಮತಿ ಸಿಕ್ಕಿಲ್ಲ ಎಂದರು. ಸಾರಾ ಮೇಡಂ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಪ್ರಸ್ತಾಪಿಸಿ ನಾಟಕ ರೂಪಕ್ಕೆ ಅನುಮತಿ ಪಡದೆವು. 40 ವರುಷಗಳ ಹಿಂದೆ ಅವರು ಬರೆದ ಈ ಕೃತಿ ಈಗಲೂ ಸಲ್ಲುತ್ತದೆ.

ಮುಸ್ಲಿಂ ಹೆಣ್ಣು ಮಕ್ಕಳ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಪ್ರಗತಿಪರ ಬದಲಾವಣೆಗಳಾಗಿದ್ದರೂ ಬುರ್ಖ ತೊಡುವುದು ಸೇರಿದಂತೆ ಕೆಲವು ಕಟ್ಟಪಾಡುಗಳು ಪ್ರಬಲವಾಗಿಯೇ ಉಳಿದಿವೆ. ಇತ್ತೀಚೆಗೆ ನಾನೇ ಒಂದು ಘಟನೆಯ ಬಗ್ಗೆ ಕೇಳಿದೆ. ಒಬ್ಬ ಹೆಣ್ಣುಮಗಳು ಸಂದರ್ಶನಕ್ಕೆ ತೆರಳಬೇಕಿತ್ತು. ನಮ್ಮ ಅಮ್ಮನಿಗೆ ಹುಷಾರಿಲ್ಲ ಎಂದು ಅವರ ಅತ್ತೆಗೆ ಹೇಳಿ ಬಂದಿದ್ದಳಂತೆ. ಕೆಲವು ಆಚರಣೆಗಳನ್ನು ಬದಲಾಯಿಸಿಕೊಳ್ಳಿ ಎಂದು ಆ ಸಮುದಾಯಕ್ಕೆ ಹೇಳುವುದು ಕಷ್ಟ. ಆದರೆ ನಾಟಕ ನೋಡಿದವರು ಧರ್ಮ–ಹೆಣ್ಣಿನ ವಿಷಯದಲ್ಲಿ ಕೊಂಚ ಮನಸ್ಸು ಪರಿವರ್ತನೆಯಾಗಲಿ ಎನ್ನುವುದೇ ಪ್ರಮುಖ ಆಶಯ’ ಎನ್ನುತ್ತಾರೆ.

ನಾಟಕದಲ್ಲಿ ರಾಜ್‌ಗುರು ಹೊಸಕೋಟೆ ಸೇರಿದಂತೆ ಕೆಲವು ಯುವಕರು ತಾಂತ್ರಿಕ ಕೆಲಸಗಳಲ್ಲಿ ತೊಡಗಿದ್ದಾರೆ. ಆದರೆ ಅವರಿಗೂ ಮಾರ್ಗದರ್ಶನ ನೀಡುವುದು ಹೆಣ್ಣು ಮಕ್ಕಳೇ. ರಂಗರೂಪಕ್ಕಿಳಿಸಿರುವುದು, ಪ್ರಸಾಧನ, ಪ್ರಚಾರ, ಅತಿಥಿಗಳ ಆಹ್ವಾನ ಹೀಗೆ ನಾಟಕ ಕಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ಹೆಣ್ಣು ಮಕ್ಕಳದ್ದೇ.

‘ಹೆಣ್ಣು ಮಕ್ಕಳು ತಂಡ ಕಟ್ಟಿ ನಾಟಕ ಮಾಡುವುದೇ ದೊಡ್ಡ ಸವಾಲು. ಇಲ್ಲಿ ಪ್ರಮುಖವಾಗಿ ರಂಗಪಯಣ ಮತ್ತು ಸಾತ್ವಿಕ ರಂಗತಂಡದ ಹೆಣ್ಣು ಮಕ್ಕಳು ಕೆಲಸ ಮಾಡಲಿದ್ದಾರೆ. ಶಿಲ್ಪಾ, ಶ್ವೇತಾ, ಪ್ರಶಾಂತಿ ಮತ್ತಿತರರು ಪ್ರಮುಖರು. ಬಹು ಮಂದಿ ಹೊಸಮುಖಗಳು. ಗಜಲ್–ಕವಿತೆ ಸೇರಿದಂತೆ ನಾಟಕ ಸಂಗೀತ ಪ್ರಧಾನವಾದ್ದರಿಂದ ರಾಜ್‌ಗುರು ಸಂಗೀತ ನೀಡುತ್ತಿದ್ದಾರೆ. ಬೆಳಕಿನ ವಿನ್ಯಾಸ, ವೇದಿಕೆ ಇತ್ಯಾದಿಯನ್ನು ಪುರುಷರು ನಿರ್ವಹಿಸಿದರೂ ಅದಕ್ಕೆ ಮಾರ್ಗದರ್ಶನ ನೀಡುವುದು ಹೆಣ್ಣು ಮಕ್ಕಳೇ. ಈ ಹಿಂದೆ ನಾಟಕ ಮಾಡಲು ಒಬ್ಬರಿಗೆ ಅನುಮತಿ ನೀಡಲಾಗಿದ್ದು, ಅವರು ಚೆನ್ನಾಗಿ ಮಾಡಿಲ್ಲ ಎಂದು ಸಾರಾ ಮೇಡಂ ಹಕ್ಕುನ್ನು ವಾಪಸು ಪಡೆದಿದ್ದರು. ಬ್ಯಾರಿ ಭಾಷೆಯನ್ನು ಮೊದಲ ಬಾರಿಗೆ ನಾವು ಬಳಸುತ್ತಿದ್ದೇವೆ. ಪೂರ್ಣವಾಗಿ ಪ್ರೇಕ್ಷಕರಿಗೆ ಅರ್ಥವಾಗದಂತೆ ಇರುವುದಿಲ್ಲ. ಸರಳವಾಗಿ ಅರ್ಥಮಾಡಿಸಲಾಗುತ್ತದೆ. ಕೃತಿಯಲ್ಲಿನ ನಾದಿರ ರೀತಿಯ ಹೆಣ್ಣು ಮಕ್ಕಳು ನಮ್ಮ ನಡುವೆ ಸಾವಿರಾರು ಮಂದಿ ಇದ್ದಾರೆ.

ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ಧರ್ಮ–ದೇವರನ್ನು ಅಪಾರವಾಗಿ ಅನುಸರಿಸಿದರೂ ನಾದಿರಳ ಸ್ಥಿತಿ ಅಸಹಾಯಕವಾದದ್ದು. ಇಲ್ಲಿ ನಾದಿರ ಪಾತ್ರದ ಮೂಲಕ ಕರ್ಮಠತನಗಳಿಗೆ ಉತ್ತರವನ್ನು ಕೊಡುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ಕೊನೆಯಲ್ಲಿ ಆಕೆಯ ಪಾತ್ರ ತುಂಬಾ ಕಾಡುತ್ತದೆ. ಇಲ್ಲಿ ಮುಸ್ಲಿಂ ಮಹಿಳೆಯರ ಸಂವೇದನೆಗಳಷ್ಟೇ ಅಲ್ಲ ಎಲ್ಲ ಧರ್ಮದ ಒಟ್ಟಾರೆ ಹೆಣ್ಣಿನ ಸಂವೇದನೆಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ‘ಚಂದ್ರಗಿರಿ ತೀರದಲ್ಲಿ’ ಪ್ರಯೋಗದ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡುವರು ನಯನಾ.

ನಾಟಕಕ್ಕಾಗಿ ಒಂದೂವರೆ ತಿಂಗಳಿನಿಂದ ತಾಲೀಮು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತಾರಗೊಳ್ಳುವ ಮಾತುಗಳು ಅವರಿಂದ ಕೇಳುತ್ತವೆ. ‘ಚಂದ್ರಗಿರಿ ತೀರದಲ್ಲಿ’ ಪ್ರಯೋಗ ಒಂದೂಮುಕ್ಕಾಲು ಗಂಟೆ ಅವಧಿಯದ್ದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT