ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಎಂಬ ಗರಿಯ ಕಳಚಿ...

ವ್ಯಕ್ತಿ
Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

1996ರಲ್ಲಿ ತಮಿಳುನಾಡಿನ ಡಿಜಿಪಿ ಎದುರು ನಿಂತ ಐಪಿಎಸ್‌ ಅಧಿಕಾರಿಯೊಬ್ಬರು ‘ರೇಂಜ್‌ ಡಿಐಜಿ’ ಕೆಲಸಕ್ಕೆ ತನ್ನನ್ನು ನಿಯೋಜಿಸುವಂತೆ ಮನವಿ ಮಾಡಿಕೊಂಡರು. ತಕ್ಷಣ ಆ ಡಿಜಿಪಿ ಕಣ್ಣುಗಳು ತಂತಾವೇ ಅಗಲಗೊಂಡವು. ಎದುರಲ್ಲಿ ಇದ್ದುದು 38 ವರ್ಷದ ಮಹಿಳಾ ಐಪಿಎಸ್‌ ಅಧಿಕಾರಿ ಎನ್ನುವುದೇ ಅವರ ಆ ಪ್ರತಿಕ್ರಿಯೆಗೆ ಕಾರಣ. ಆ ಮಹಿಳೆಯ ಪತಿ ಆಗ ಐಎಎಸ್‌ ಅಧಿಕಾರಿಯಾಗಿದ್ದವರು.

‘ನೆಮ್ಮದಿಯಾಗಿ ಸಂಸಾರ ಮಾಡಿಕೊಂಡಿರುವುದನ್ನು ಬಿಟ್ಟು ಈ ಹೆಣ್ಣು ಮಗಳು ರೇಂಜ್‌ನಲ್ಲಿ ಕೆಲಸ ಮಾಡಲು ಯಾಕೆ ನಿರ್ಧರಿಸಿದ್ದಾಳೆ’ ಎನ್ನುವುದು ಡಿಜಿಪಿ ಮನದಲ್ಲಿ ಆ ಕ್ಷಣಕ್ಕೆ ಎದ್ದ ಪ್ರಶ್ನೆ. ಆ ಅಹವಾಲಿನ ನಂತರ ‘ವೇಲೂರು ರೇಂಜ್‌’ನ ಡಿಐಜಿ ಆಗಿ ಬಲು ಬೇಗ ಅರ್ಚನಾ ರಾಮಸುಂದರಂ ಜವಾಬ್ದಾರಿ ವಹಿಸಿಕೊಂಡರೆನ್ನುವುದು ಬೇರೆ ಮಾತು.

‘ಸಶಸ್ತ್ರ ಸೀಮಾ ಬಲ’ದ (ಎಸ್‌ಎಸ್‌ಬಿ) ಡಿ.ಜಿ. (ಡೈರೆಕ್ಟರ್‌ ಜನರಲ್‌) ಆಗಿ ಅರ್ಚನಾ ಮೊನ್ನೆ ಅಧಿಕಾರ ಸ್ವೀಕರಿಸಿದಾಗ ಅನೇಕರು ‘ಪ್ಯಾರಾಮಿಲಿಟರಿ ಪಡೆಯ ಈ ಸ್ಥಾನಕ್ಕೇರಿದ ಮೊದಲ ಮಹಿಳೆ’ ಎಂದು  ಗರಿ ಸಿಕ್ಕಿಸಲು ಹೊರಟರು. ಆಗ ಅರ್ಚನಾ ಆ ಗರಿಯನ್ನು ನಯವಾಗಿಯೇ ತಿರಸ್ಕರಿಸಿದರು. ‘ಈ ಹುದ್ದೆ ಸಿಕ್ಕಿರುವುದು ನನ್ನ ಅನುಭವ, ವೃತ್ತಿ ಮೇಲಿನ ಶ್ರದ್ಧೆಯಿಂದ; ನಾನು ಹೆಣ್ಣು ಎಂಬ ಕಾರಣಕ್ಕೆ ಅಲ್ಲ’ ಎಂದು ಅವರು ಮುಗುಳ್ನಗುತ್ತಲೇ ಪ್ರತಿಕ್ರಿಯಿಸಿದರು. ಅರ್ಚನಾ ಮನೋಬಲ ಎಂಥದ್ದು ಎನ್ನುವುದಕ್ಕೆ ಇದು ಕನ್ನಡಿ ಹಿಡಿಯುತ್ತದೆ.

1980ರಲ್ಲಿ ಐಪಿಎಸ್‌ ಪಾಸು ಮಾಡಿ, ಹೈದರಾಬಾದ್‌ನಲ್ಲಿ ತರಬೇತಿಗೆಂದು ಹೊರಟಾಗ ಅರ್ಚನಾ ಅವರ ಕಣ್ಣೂ ಅರಳಿತ್ತು; ಬೆರಗಿನಿಂದ ಅಲ್ಲ, ತುಸು ಅಳುಕಿನಿಂದ. ಯಾಕೆಂದರೆ, ಆ ಬ್ಯಾಚ್‌ನಲ್ಲಿ ಇದ್ದ ಏಕೈಕ ಹೆಣ್ಣುಮಗಳು ಅವರು. ನಿಧನಿಧಾನವಾಗಿ ತಮ್ಮ ಕನವರಿಕೆಗಳನ್ನು ನೇವರಿಸಿದರು. ಪೊಲೀಸ್‌ ಇಲಾಖೆಯ ಕೆಲಸಗಳ ಸೂಕ್ಷ್ಮಗಳನ್ನು ಅರಿತರು.

‘ಪೊಲೀಸ್‌ ಇಲಾಖೆಗೆ ಸೇರುವವರ ಬಗ್ಗೆ ಅನೇಕ ಜನರಲ್ಲಿ ಒಂದು ವಿಚಿತ್ರವಾದ ಸಿನಿಮೀಯ ಅಭಿಪ್ರಾಯ ಇರುತ್ತದೆ. ದಪ್ಪ ಮೀಸೆ ಬಿಟ್ಟಿರಬೇಕು, ಕಟ್ಟುಮಸ್ತು ದೇಹ ಇರಬೇಕು ಎಂದೆಲ್ಲಾ ಸಿನಿಮಾಗಳ ಹೀರೊಗಳನ್ನು ನೋಡಿ ಕಲ್ಪಿಸಿಕೊಂಡಿರುತ್ತಾರೆ. ನಾನು ಇಲಾಖೆ ಸೇರಿದಾಗಲೂ ಅನೇಕರು ನೋಡಲು ಪೊಲೀಸ್‌ ತರಹ  ಇಲ್ಲವಲ್ಲ ಎಂದು ನಕ್ಕಿದ್ದರು. ವಾಸ್ತವವೇ ಬೇರೆ. ಈಗ ಇಂಥ ಹುದ್ದೆಗೆ ಏರಿದ ಮೊದಲ ಮಹಿಳೆ ಎಂದು ಹೇಳಿದಾಗ ಹೆಮ್ಮೆ ಎಂದೇನೋ ಅನಿಸುತ್ತದೆ. ತಕ್ಷಣವೇ ನಾನು ಅದೊಂದೇ ಕಾರಣಕ್ಕೆ ಈ ಸ್ಥಾನಕ್ಕೆ ಏರಲಿಲ್ಲವಲ್ಲ ಎಂದೂ ಅನಿಸುತ್ತದೆ’–ಅರ್ಚನಾ ಅವರ ಈ ಪ್ರತಿಕ್ರಿಯೆ ಆಸಕ್ತಿ ಹುಟ್ಟಿಸುವಂತಿದೆ.

ಪ್ಯಾರಾ ಮಿಲಿಟರಿ ಪಡೆಯಲ್ಲಿ ಕೆಲಸ ಮಾಡಲು ಭಾರತದಲ್ಲಿ ಮಹಿಳೆಯರನ್ನು ಮೊದಲು ನಿಯೋಜಿಸಿದ್ದೇ 2007ರಲ್ಲಿ. ಈಗಲೂ ಗಡಿ ಭಾಗಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸಣ್ಣ ಕ್ವಾರ್ಟರ್‌ಗಳಲ್ಲಿ ಪುಟ್ಟ ಕಂದಮ್ಮಗಳನ್ನು ಸಾಕುವುದು ಹೇಗೆ ಎಂಬ ಪ್ರಶ್ನೆ ಹಾಕಿಕೊಂಡೇ ವೃತ್ತಿಬದುಕಿನ ಕುರಿತ ಆತಂಕ ತೋಡಿಕೊಳ್ಳುತ್ತಾರೆ. ಅರ್ಚನಾ ಈಗ ಮಹತ್ವದ ಸ್ಥಾನಕ್ಕೆ ಏರಿರುವುದು ಅಂಥ ಹೆಣ್ಣುಮಕ್ಕಳಿಗೆ ಆಶಾಕಿರಣದಂತೆ ಕಾಣುತ್ತಿದೆ.

‘ಸಶಸ್ತ್ರ ಸೀಮಾ ಬಲ’ದಲ್ಲಿ ಇರುವ ಒಟ್ಟು 72,000 ಮಂದಿಯಲ್ಲಿ ಮಹಿಳೆಯರ ಸಂಖ್ಯೆ ಈಗ ಸುಮಾರು 1000 ಅಷ್ಟೆ. ಶೇಕಡಾವಾರು ಪ್ರಮಾಣದಲ್ಲಿ ಹೇಳುವುದಾದರೆ ಮೂರು. ಈ ಸಂಖ್ಯೆಯನ್ನು ಇನ್ನು ಎರಡು ವರ್ಷಗಳಲ್ಲಿ ಶೇಕಡಾ ಐದಕ್ಕೆ ಏರುವಂತೆ ಮಾಡುವುದು ಅರ್ಚನಾ ಅವರ ಗುರಿ.

ಕಳೆದ ಎರಡು ವರ್ಷಗಳಲ್ಲಿ ಅರ್ಚನಾ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದರು. ಸಿಬಿಐನ ಅಡಿಷನಲ್‌ ಡೈರೆಕ್ಟರ್‌ ಹುದ್ದೆಗೆ ಅನುಭವದ ಆಧಾರದ ಮೇಲೆ ಅವರನ್ನು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ಸಿವಿಸಿ) 2014ರಲ್ಲಿ ಆಯ್ಕೆ ಮಾಡಿತು. ತಮಿಳುನಾಡಿನಲ್ಲಿ ಡಿಜಿಪಿ ರ್‍್ಯಾಂಕ್‌ನ ಅಧಿಕಾರಿಯಾಗಿ ಆಗ ಕಾರ್ಯ ನಿರ್ವಹಿಸುತ್ತಿದ್ದ ಅರ್ಚನಾ ಅವರಿಗೆ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ‘ಬಿಡುಗಡೆ ಪತ್ರ’ (ರಿಲೀವಿಂಗ್‌ ಲೆಟರ್) ನೀಡಲಿಲ್ಲ. ಅದನ್ನು ಪಡೆಯಲು ಅರ್ಚನಾ ನಡೆಸಿದ ಎರಡು ಭೇಟಿಗಳು ಫಲಕಾರಿಯಾಗಲಿಲ್ಲ.

ಮೂರು ತಿಂಗಳು ಕಾಯ್ದು, ಅದೇ ವರ್ಷ  ಮೇ ತಿಂಗಳಲ್ಲಿ ಸಿಬಿಐನ ಹುದ್ದೆಗೆ ಸೇರಿಕೊಂಡರು. ಆಗ ಅವರನ್ನು ತಮಿಳುನಾಡು ಸರ್ಕಾರ ಸೇವೆಯಿಂದ ಅಮಾನತಿನಲ್ಲಿ ಇಟ್ಟಿತು. ಪತ್ರಕರ್ತರೊಬ್ಬರು ಸಿಬಿಐನಲ್ಲಿನ ಅವರ ನೇಮಕಾತಿಯನ್ನು ಪ್ರಶ್ನಿಸಿ ರಿಟ್‌ ಅರ್ಜಿಯೊಂದಿಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಸುಪ್ರೀಂ ಕೋರ್ಟ್‌ ಆ ಅರ್ಜಿಯನ್ನು 2015ರಲ್ಲಿ ಪುರಸ್ಕರಿಸಿ, ಅರ್ಚನಾ ಅವರು ಸಿಬಿಐನ ಅಡಿಷನಲ್‌ ಡೈರೆಕ್ಟರ್‌ ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ ಎಂದು ಆದೇಶ ನೀಡಿತು. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌.ಸಿ.ಆರ್‌.ಬಿ.) ನಿರ್ದೇಶಕರಾಗಿ ಆನಂತರ ಅವರನ್ನು ನೇಮಿಸಲಾಯಿತು.

ಅರ್ಚನಾ ಅವರ ಪತಿ ರಾಮಸುಂದರಂ ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿ ಆಗಿದ್ದವರು. 2011ರಲ್ಲಿಯೇ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. ಡಿಎಂಕೆ ಪಕ್ಷಕ್ಕೂ ಅವರಿಗೂ ನಂಟು ಇದೆ ಎಂಬ ಗುಸುಗುಸು ಆಗ ಇತ್ತು. ಆ ಕಾರಣಕ್ಕೇ ಅರ್ಚನಾ ಅವರನ್ನು ಜಯಲಲಿತಾ  ‘ಆಟ ಆಡಿಸಿದರು’ ಎಂಬ ಧಾಟಿಯ ಸಂದೇಶಗಳು ಆಗ ಫೇಸ್‌ಬುಕ್‌ನಲ್ಲಿ ಹರಿದಾಡಿದ್ದವು. ಖುದ್ದು ರಾಮಸುಂದರಂ ಫೇಸ್‌ಬುಕ್‌ನಲ್ಲಿ ತಮ್ಮ ಪತ್ನಿಗೆ ನ್ಯಾಯ ಸಿಗಬೇಕು ಎಂದು ಪೋಸ್ಟ್‌ ಮಾಡಿದ್ದರು.

ತಮ್ಮೊಟ್ಟಿಗೆ ಕೆಲಸ ಮಾಡುತ್ತಿದ್ದ ಪೊಲೀಸರ ಜೊತೆಗೆ ಚಹಾ ಲೋಟದ ಹಬೆ ಆರಿಸುತ್ತಾ ಕೆಲಸದ ಸೂಕ್ಷ್ಮಗಳನ್ನು ಹೊರಗೆಳೆಯುತ್ತಿದ್ದ ಅರ್ಚನಾ, ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡವರು. ಅವರ ಕೆಲಸದ ಸೂಕ್ಷ್ಮಗಳನ್ನು ನೋಡಿದ್ದ ಇನ್ನೊಬ್ಬ ಅಧಿಕಾರಿ ಆರ್‌.ಕೆ.ರಾಘವನ್‌ ಸಿಬಿಐ ನಿರ್ದೇಶಕರಾಗಿ ಇದ್ದವರು. ಸಿಬಿಐನ ಪ್ರಮುಖ ಹುದ್ದೆ ಅರ್ಚನಾ ಅವರ ಕೈತಪ್ಪಿ ಹೋದಾಗ ರಾಘವನ್‌ ನಿವೃತ್ತರಾಗಿದ್ದರು. ‘ಅಂಥ ದಿಟ್ಟ ಮಹಿಳೆಗೆ ಆ ಹುದ್ದೆ ಸಿಗಬೇಕಿತ್ತು’ ಎಂದು ಅವರು ಸುದೀರ್ಘ ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದರು.

‘ಮದುವೆ, ಮಕ್ಕಳು ಸಂಸಾರ ಎಂದಮೇಲೆ ಮಹಿಳೆಗೆ ಬೇರೆಯದೇ ಸವಾಲು ಎದುರಾಗುತ್ತದೆ. ವೃತ್ತಿಬದುಕಿನ ಒಂದಿಷ್ಟು ಮೆಟ್ಟಿಲುಗಳನ್ನು ಕೆಳಗೆ ಇಳಿದು ಆಗ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ಆಮೇಲೆ ಮೆಟ್ಟಿಲುಗಳನ್ನು ಏರಬೇಕೇ ಹೊರತು ಸುಮ್ಮನೆ ನಿಂತುಬಿಡಬಾರದು’ ಎನ್ನುವುದು ಅರ್ಚನಾ ಕಿವಿಮಾತು. ಪತಿ ಕೊಟ್ಟ ಸಹಕಾರ, ಮಕ್ಕಳನ್ನು ಬೆಳೆಸಿದ ಖುಷಿ ಎಲ್ಲವುಗಳ ಜೊತೆಗೆ ವೃತ್ತಿಬದುಕಿನಲ್ಲಿ ಯಶಸ್ಸಿನ ಏಣಿ ಹತ್ತಿದ ಅವರು ಮಾದರಿಯೇ ಹೌದು.

1957ರ ಅಕ್ಟೋಬರ್ 1ರಂದು ಕೆಳ ಮಧ್ಯಮವರ್ಗದಲ್ಲಿ ಹುಟ್ಟಿದ ಅರ್ಚನಾ ಚಿಕ್ಕಂದಿನಲ್ಲೇ ದೊಡ್ಡ ಕನಸು ಕಂಡು ಬೆಳೆದವರು. ಅವರ ಅಪ್ಪ–ಅಮ್ಮ ಕೂಡ ಮಗಳ ಕನಸಿಗೆ ನೀರೆರೆದವರೇ. 1995ರಲ್ಲಿ ರಾಷ್ಟ್ರಪತಿಗಳ ಪದಕದ ಗೌರವಕ್ಕೆ ಭಾಜನರಾದ ಅವರೀಗ ನೇಪಾಳ ಹಾಗೂ ಭೂತಾನ್‌ ಗಡಿಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂಬ ಕುತೂಹಲ ಅನೇಕರಿಗೆ ಇದೆ.

‘ಹೆಣ್ಣು ಎಂದಕೂಡಲೇ ಸಮಾಜ ಹದ್ದಿನ ಕಣ್ಣಿಡುತ್ತದೆ. ನಮಗೆ ವೃತ್ತಿಯ ಸಹಜ ಒತ್ತಡದ ಜೊತೆಗೆ ಇದು ಇನ್ನೊಂದು ಸವಾಲು. ನನ್ನ ಜೊತೆಗೇ ತರಬೇತಿ ಪಡೆದ ಬಿ.ಡಿ.ಶರ್ಮಾ ಇದೇ ಸ್ಥಾನದಲ್ಲಿ ಇದುವರೆಗೆ ಕೆಲಸ ಮಾಡಿದವರು. ಈಗ ಅವರ ಜಾಗಕ್ಕೆ ನಾನು ಬಂದಿರುವೆ; ಒಂಚೂರು ತಡವಾಗಿ. ಅದಕ್ಕೇ ಈ ಸ್ಥಾನಕ್ಕೇರಿದ ಮೊದಲ ಮಹಿಳೆ ಎನ್ನುವುದು ನನಗೆ ಮುಖ್ಯವೆನ್ನಿಸುತ್ತಿಲ್ಲ.

ಆದರೂ ದೇಶದ ಹೆಣ್ಣು ಮಕ್ಕಳಿಗೆ ಇದು ಹೆಮ್ಮೆಯ ದಿನವಾಗಿದೆ ಎನ್ನುವ ಸಂತಸವಂತೂ ನನಗಿದೆ’ ಎಂದು ಹದವಾಗಿ ಬಣ್ಣ ಮೆತ್ತಿದ ತುಟಿಗಳಲ್ಲಿ ಮುಗುಳ್ನಗು ಸೂಸುವ ಅರ್ಚನಾ ಅವರ ಮುಖದಲ್ಲಿ 58ರ ನಿರಿಗೆಗಳೇನೂ ಇಲ್ಲ. ಅವರ ನುಡಿಗಟ್ಟು ಸ್ಪಷ್ಟ. ಮೆಲುದನಿಯ ಮಾತಿನಲ್ಲಿ ದೃಢಸಂಕಲ್ಪದ ರುಜುವಾತು. 2017ರ ಸೆಪ್ಟೆಂಬರ್‌ 30ರವರೆಗೆ ಅವರು ಈ ಹುದ್ದೆಯಲ್ಲಿ ಏನು ಮಾಡುತ್ತಾರೋ ಎಂದು ಗಮನಿಸುವ ಕಣ್ಣುಗಳು ಈಗ ಅಗಲವಾಗಿರುವುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT