ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯವಾಗುತ್ತಿದೆಯೇ ಕನ್ನಡದ ಘಮ?

Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡದ ವಾಹಿನಿಗಳಲ್ಲಿ ಅಡುಗೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ನಿರೂಪಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರಿಗೆ ಅಡುಗೆ ವ್ಯಂಜನಗಳ ಹೆಸರು ಕನ್ನಡದಲ್ಲಿ ಹೇಳುವುದು ಕಷ್ಟವಾದರೆ, ಇನ್ನೂ ಕೆಲವರಿಗೆ ಶೆಫ್‌ ಜೊತೆ ಮಾತನಾಡುವಾಗ ಇಂಗ್ಲಿಷ್‌ ಬಳಸುವುದು ಅನಿವಾರ್ಯ ಎನ್ನುತ್ತಾರೆ. ಆದರೆ ಫ್ಲೇವರ್‌, ಟೇಸ್ಟಿ, ಆವ್ಸಮ್‌ ಇಂಥ ಉದ್ಗಾರಗಳಿಗೆಲ್ಲ ಕನ್ನಡ ಪದಗಳನ್ನು ಬಳಸಲಾಗದು ಎಂಬ ಅಸಹಾಯಕತನವನ್ನೂ ವ್ಯಕ್ತ ಪಡಿಸುತ್ತಾರೆ. ಆದರೆ ಬಾಡೂಟದ ಆದರ್ಶ ತಟಪತಿ ಮಾತ್ರ ಅಚ್ಚ ಕನ್ನಡದಲ್ಲಿ ಇಡೀ ಕಾರ್ಯಕ್ರಮ ನಿರೂಪಿಸುತ್ತಾರೆ. ಅವರ ಅಡುಗೆಯ ಘಮ, ಕನ್ನಡದಲ್ಲಿಯೇ ಹರಡುವುದರಿಂದ ಬಲುಬೇಗ ಆಪ್ತರಾಗುತ್ತಾರೆ.
ಅಡುಗೆ ಮನೆಯಲ್ಲಿಯೂ ಕನ್ನಡ ಕಳೆದುಹೋಗುವುದು ಒಂದು ಭಾಷೆಯ ಮಟ್ಟಿಗೆ ಆತಂಕದ ವಿಷಯ. ಇದಕ್ಕಾಗಿ ಹೆಚ್ಚು ಶಬ್ದ ಸಂಪತ್ತಿನ ಅಗತ್ಯವಿಲ್ಲ. ಸರಳ ಮತ್ತು ಸಹಜವಾದ ಪದಗಳನ್ನೇ ಬಳಸಿದರೂ ಕನ್ನಡ ಘಮಘಮಿಸೀತು. ಆ ಬಗ್ಗೆ ದೃಢ ನಿರ್ಧಾರ ಮತ್ತು ಪ್ರಯತ್ನಗಳು ಹೆಚ್ಚಾಗಬೇಕು ಅಷ್ಟೆ. ಅಡುಗೆಯ ಹದ, ಕನ್ನಡದ ಪದ ಎರಡೂ ಕೂಡಿದಾಗಷ್ಟೇ ಊಟ ಸೊಗಸು. ಇದು ಬರೀ ಭಾಷೆಗಷ್ಟೇ ಸೀಮಿತವಲ್ಲ ಸಂಸ್ಕೃತಿಗೂ ಅನ್ವಯವಾಗುತ್ತದೆ ಎನ್ನುವ ಎಚ್ಚರ ಇರಬೇಕು.

ಇತ್ತೀಚೆಗೊಮ್ಮೆ ಏನೋ ಕೆಲಸ ಮಾಡುತ್ತಲೇ ಟಿವಿಯಲ್ಲಿ ಅಡುಗೆ ಕಾರ್ಯಕ್ರಮವೊಂದನ್ನು ನೋಡ್ತಾ ಇದ್ದೆ (ಕೇಳ್ತಾ ಇದ್ದೆ ಎಂದರೆ ಸರಿಹೋದೀತು). ಒಬ್ಬರು ಹೊಸ ರುಚಿಯೊಂದನ್ನು ಮಾಡಿ ತೋರಿಸಿದ ನಂತರ, ಕಾರ್ಯಕ್ರಮದ ನಿರೂಪಕಿ ಕೊನೆಯಲ್ಲಿ ಆ ಪದಾರ್ಥ ಮಾಡಲು ಏನೇನು ಬೇಕು ಎಂದು ಹೇಳುತ್ತ, ‘ಹಾಫ್‌ ಟೀ ಸ್ಪೂನ್  ಕ್ಯುಮಿನ್ ಸೀಡ್ಸ್, ಹಾಫ್‌ ಟೀ ಸ್ಪೂನ್ ಮಸ್ಟರ್ಡ್, ಒನ್‌ ಟೀ ಸ್ಪೂನ್‌ ಧನಿಯಾ ಪೌಡರ್, ಹಲ್ದಿ, ಜಿಂಜರ್‌ ಗಾರ್ಲಿಕ್ ಪೇಸ್ಟ್, ಕೊರಿಯಾಂಡರ್, ಗ್ರೀನ್ ವೆಜಿಟಬಲ್ಸ್’ ಎಂದೆಲ್ಲ ಉಲಿಯುತ್ತಿದ್ದರೆ ನನಗೆ ಅರೆಕ್ಷಣ ನಾನು ನಮ್ಮ ಅಚ್ಚ ಕನ್ನಡದ ಚಾನಲ್‌ ಅಲ್ಲದೇ ಬೇರೆ ಯಾವುದಾದರೂ ಇಂಗ್ಲಿಷ್‌ ಚಾನಲ್‌ ಒತ್ತಿ, ಮಾಸ್ಟರ್‌ಶೆಫ್‌ ಕುಕಿಂಗ್ ಶೋ ನೋಡ್ತೀದ್ದಿನಾ ಅಂತ ಗಾಭರಿ! ಆದರೆ ಹಾಗೇನಿರಲಿಲ್ಲ, ನಾನು ನಮ್ಮ ಕನ್ನಡದ ಚಾನಲ್‌ ಒಂದರಲ್ಲಿ ಬರುತ್ತಿದ್ದ ಹೊಸರುಚಿ ಕಾರ್ಯಕ್ರಮವನ್ನೇ ನೋಡ್ತಿದ್ದೆ. ಟಿವಿ ಆಫ್ ಮಾಡಿದ ನಂತರ ಫಕ್ಕನೆ ಕ್ಯುಮಿನ್‌ ಎಂದರೆ ಜೀರಿಗೆಯಾ, ಮೆಂತ್ಯವಾ ಎಂದು ನೆನಪಾಗದೇ, ಗೂಗಲಿಸಿ (ಅಂದರೆ ಗೂಗಲ್‌ನಲ್ಲಿ ಹುಡುಕುವುದು) ನೋಡಿದ್ದಾಯ್ತು.

ನಿಜ, ಅಡುಗೆ ಕಾರ್ಯಕ್ರಮಗಳ ನಿರೂಪಕರು ಸ್ಪಿನಾಚ್, ಮಿಂಟ್, ಮೇಥಿ ಇತ್ಯಾದಿ ಲೀಫ್ ವೆಜಿಟಬಲ್ಸ್‌ ಎನ್ನುತ್ತ, ಕುಕುಂಬರ್, ಕ್ಯಾಪ್ಸಿಕಂ, ಆಲೂ, ಮಟರ್‌ ಇತ್ಯಾದಿ ವೆಜಿಟಬಲ್ಸ್‌ ಹೆಸರುಗಳನ್ನು ಪಟಪಟಿಸುತ್ತ, ಇದರ ಮೇಲೆ  ಸಾಲ್ಟ್ ಟು ಟೇಸ್ಟ್‌ ಎಂದು ಉಲಿಯುತ್ತಾರೆ. ಲೆಮನ್ ಜ್ಯೂಸ್‌ ಹಾಕಿ, ಗಾರ್ನಿಷ್‌ ವಿತ್‌ ಕೊರಿಯಾಂಡರ್‌ ಲೀವ್ಸ್‌, ರೆಡಿ ಟೂ ಈಟ್‌’ ಅಂತಾರೆ.
ಕಾರ್ಡಮಮ್, ಕ್ಲೋವ್, ಸಿನಾಮನ್, ಪೆಪ್ಪರ್, ಗ್ರೀನ್‌ ಚಿಲ್ಲಿ ಅಥವಾ ರೆಡ್ಡಿಚಿಲ್ಲಿ, ಇತ್ಯಾದಿ ಸ್ಪೈಸ್‌ ಸೇರಿಸಿ ಎಂದು ಹೇಳುವುದು ಹೆಚ್ಚಿನ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿದೆ. ಅಲ್ಲಿಗೆ ಅವರು ಹೇಳಿದ ಮಸಾಲೆಗಳನ್ನೆಲ್ಲ ಅನುವಾದಿಸುವುದರಲ್ಲಿ ಅಡುಗೆಯ ಘಮ ಘ್ರಾಣಿಸುವುದೇ ಆಗುವುದಿಲ್ಲ.

ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳಿಗೆ ಅಥವಾ ಕಚೇರಿಗೆ ತೆರಳುವ ದೊಡ್ಡವರಿಗೆ ಊಟದ ಡಬ್ಬಿ ಅಥವಾ ಬುತ್ತಿಡಬ್ಬಿಯ ಬದಲಿಗೆ ಲಂಚ್ ಬಾಕ್ಸ್ ಸಿದ್ಧವಾಗುತ್ತದೆ. ಲಂಚ್ ಬಾಕ್ಸಿನಲ್ಲಿ ಕರ್ಡ್‌ರೈಸ್, ಲೆಮನ್‌ರೈಸ್, ಪುಲಾವ್‌ ಇತ್ಯಾದಿ ಬಾತ್‌ಗಳು, ಪರೋಟ ಅಥವಾ ರೋಟಿ, ಭಾಜಿಯಲ್ಲದೇ ಮೊಸರನ್ನ, ರೊಟ್ಟಿ, ಚಪಾತಿ, ಪಲ್ಯ ಇತ್ಯಾದಿಗಳನ್ನು ಯಾರಾದರೂ ಒಯ್ಯುವುದುಂಟೇ? ಸಂಜೆ ಮನೆಗೆ ಮರಳಿದ ನಂತರ ಲೈಟಾಗಿ ಸ್ನ್ಯಾಕ್ಸ್‌ ತಿನ್ನುವುದಕ್ಕೆ ಮಕ್ಕಳಿಂದ ಹಿಡಿದು ದೊಡ್ಡವರೂ ಕಾತರಿಸುತ್ತಾರೆ. ಮಲೆನಾಡಿನಲ್ಲಿ ಹಿಂದೆಲ್ಲ ಹೀಗೆ ಸಂಜೆ ತಿನ್ನುವ ಕುರುಕಲು ತಿಂಡಿಗೆ ‘ಬಾಯಿಬಡಿಗೆ’ ಎನ್ನುತ್ತಿದ್ದರು. ಈಗ ಕುರುಕಲುಗಳಿಗೆ ಕನ್ನಡದ ಬಾಯಿ ಬಂದಾಗಿದೆ ಎನ್ನಬಹುದು. ಎಳೆಮಕ್ಕಳಿಗೆ ಅನ್ನ, ಬೇಳೆ, ತರಕಾರಿ, ನುರಿದು ಮೆತ್ತಗೆ ಮಾಡಿ ತಿನ್ನಿಸುವ ಬದಲಿಗೆ ‘ಪೇಸ್ಟ್’ ಮಾಡಿ ತಿನ್ನಿಸುವುದರೊಂದಿಗೆ ನಮ್ಮ ಇಂಗ್ಲಿಷ್ ವ್ಯಾಮೋಹ ಶುರುವಾಗುತ್ತದೆ. 

ತೊವೆ, ಬೇಳೆಸಾರು, ಉತ್ತರ ಕರ್ನಾಟಕದ ಖಾರಬ್ಯಾಳಿ ಬದಲಿಗೆ ‘ದಾಲ್- ಚಾವಲ್’; ಪಲ್ಯ, ಗೊಜ್ಜುಗಳ ಜಾಗದಲ್ಲಿ ‘ರೋಟಿ–ಸಬ್ಜಿ’ಗಳು ತಟ್ಟೆಯಲ್ಲಿ ಅಲಂಕೃತವಾಗುತ್ತಿವೆ. ದಕ್ಷಿಣ ಕರ್ನಾಟಕದ ಕೋಸುಂಬರಿ, ಉತ್ತರ ಕರ್ನಾಟಕದ ಪಚಡಿ ಬದಲಿಗೆ ‘ಗ್ರೀನ್‌ಸಲಾಡ್’ಗಳ ಅವತಾರವಾಗಿದೆ. ಮಲೆನಾಡಿನ ಸಾಸಿವೆ ಅಥವಾ ಉತ್ತರ ಕರ್ನಾಟಕದ ಮೊಸರುಬಜ್ಜಿಯ ಬದಲಿಗೆ ‘ರಾಯತಾ’ ಎಂದು ರಾಗವೆಳೆದು ತಿನ್ನುವುದು ನಮಗೀಗ ಹೆಚ್ಚು ರುಚಿ ಎನಿಸ್ತಾ ಇದೆ.

ಈಗೆಲ್ಲ ಒರಳಿನಲ್ಲಿ ರುಬ್ಬುವುದಾಗಲೀ, ಬೀಸುವುದಾಗಲೀ ಅಥವಾ ಮಂಗಳೂರಿನ ಕಡೆಯವರು ಹೇಳುವಂತೆ ಕಡೆಯುವುದಾಗಲೀ ಯಾರು ಮಾಡುತ್ತಾರೆ ಹೇಳಿ. ಈಗ ಏನಿದ್ದರೂ ಮಿಕ್ಸಿಯಲ್ಲಿ ಅಥವಾ ವೆಟ್‌ಗ್ರೈಂಡರಿನಲ್ಲಿ ಪೇಸ್ಟ್ ಮಾಡುವುದು, ಕುಟ್ಟಿ ಪುಡಿ ಮಾಡಿಕೊಳ್ಳುವ ಬದಲಿಗೆ ಪೌಡರ್ ಮಾಡುವುದು. ಪರಿಶ್ರಮದ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ಕೆಲಸಗಳಿಗೆ ಯಂತ್ರಗಳನ್ನು ಬಳಸಬಾರದು ಎಂಬರ್ಥದಲ್ಲಿ ನಾನು ಹೇಳುತ್ತಿಲ್ಲ, ಯಂತ್ರ ಬಳಕೆ ಮಹಿಳೆಯರ ಬದುಕನ್ನು ಸುಗಮಗೊಳಿಸಿದೆ ಮತ್ತು ಕಡಿಮೆ ಶ್ರಮ ಸಾಕಾಗುತ್ತದೆ. ಆದರೆ ಯಂತ್ರ ಬಳಕೆಯೊಂದಿಗೇ ನಮ್ಮ ಅಪಾರ ಪದಸಂಪತ್ತೂ ಮರೆಯಾಗುತ್ತಿದೆ, ಭಾಷಾ ಶ್ರೀಮಂತಿಕೆ ಬಡವಾಗುತ್ತಿದೆ,ಇದು ಆಗಕೂಡದು.

ಹಳ್ಳಿಗಳ ಅಡುಗೆ ಮನೆಯಲ್ಲಿಯೂ ಆಧುನಿಕತೆ ಇಣುಕಿದೆ, ಒರಳು, ರುಬ್ಬುಗುಂಡುಗಳು ಮಾಯವಾಗುತ್ತಿದೆ. ರುಬ್ಬುವ, ಮೊಸರು ಕಡೆಯುವ ಯಂತ್ರಗಳು ದಾಂಗುಡಿಯಿಟ್ಟಿವೆ, ಕಟ್ಟಿಗೆ ಒಲೆಯ ಬದಲಿಗೆ ಗ್ಯಾಸ್ ಒಲೆ ಉರಿಯುತ್ತಿದೆ. ಆದರೂ ಹಳ್ಳಿ ಅಡುಗೆ ಮನೆಗಳಲ್ಲಿ ಕನ್ನಡದ ಸೊಗಡು ಇನ್ನೂ ಉಳಿದಿದೆ ಎನ್ನುವುದು ಸ್ವಲ್ಪ ಸಮಾಧಾನದ ವಿಷಯವೇ.

ಬೇರೆ ಬೇರೆ ಪ್ರದೇಶಗಳ ಬಗೆಬಗೆಯ ಅಡುಗೆಗಳ ಹೊಸರುಚಿ ಪ್ರಯೋಗವನ್ನು ಮಾಡಬಾರದು ಎಂದಲ್ಲ. ಹಲವು ಬಗೆಯ ಸಂಸ್ಕೃತಿಗಳಿಗೆ, ಹಲವು ಬಗೆಯ ಆಸ್ವಾದಗಳಿಗೆ ನಾವು ಮುಕ್ತ ಮನಸ್ಸಿನಿಂದ ತೆರೆದುಕೊಳ್ಳಬೇಕು, ನಿಜ. ಆದರೆ ಅದರರ್ಥ ಕನ್ನಡದ ಕಂಪನ್ನು ಪ್ರಯತ್ನ ಪೂರ್ವಕವಾಗಿ ಹತ್ತಿಕ್ಕ ಬೇಕು ಎಂದಲ್ಲ. ಹೊಸ ರುಚಿ ಮೆಲ್ಲುವ ನಾಲಿಗೆ ಕನ್ನಡ ಉಲಿಯಲು ಕಷ್ಟಪಡುವುದೇಕೆ? ಅಡುಗೆ ಮನೆಯಲ್ಲಿ ಬಳಸುವ ಎಲ್ಲ ಸಾಮಗ್ರಿಗಳಿಗೂ ಕನ್ನಡದ್ದೇ ಆದ ಹೆಸರುಗಳಿವೆ, ಅಡುಗೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳಿಗೂ ಕನ್ನಡದಲ್ಲಿ ಅರ್ಥಪೂರ್ಣ ಪದಗಳಿವೆ, ಅವುಗಳನ್ನು ಬಳಸುವುದಕ್ಕೆ ಸಮಸ್ಯೆಯೇನಿದೆ..? ಸಮಸ್ಯೆ ಇರುವುದು ನಮ್ಮ ಮನೋಧರ್ಮದಲ್ಲಿ.

ಅಮಿತಾಭ್ ಬಚ್ಚನ್‌ ಅವರ ಕೌನ್ ಬನೇಗ ಕರೋಡ್‌ ಪತಿ ಅಥವಾ ಅಮೀರ್‌ಖಾನ್‌ ಅವರ ಸತ್ಯಮೇವ ಜಯತೆ ನೋಡಿದವರಿಗೆ ಒಂದು ಅಂಶ ಸ್ಪಷ್ಟವಾಗುತ್ತದೆ, ಅಂತಹ ಕಾರ್ಯಕ್ರಮಗಳಲ್ಲಿ ಅಮಿತಾಭ್‌, ಅಮೀರ್‌ ಅವರಂತಹ ತಾರಾ ನಟರು ಅಥವಾ ಬೇರೆ ನಿರೂಪಕರು ಶುದ್ಧ ಹಿಂದಿಯಲ್ಲಿ ಮಾತನಾಡುತ್ತಾರೆ, ಅವರ ನಿರೂಪಣೆಯಲ್ಲಿ ಮಧ್ಯ ಮಧ್ಯೆ ಇಂಗ್ಲಿಷ್ ಪದಗಳು ಇಣಕುವುದಿಲ್ಲ. ಆಗೀಗ ಒಂದು ಇಡೀ ವಾಕ್ಯ ಇಂಗ್ಲಿಷ್‌ನಲ್ಲಿ ಮಾತನಾಡಬಹುದು, ನಿಜ. ಆದರೆ ಹಿಂದಿಯಲ್ಲಿ ಮಾತನಾಡುವಾಗ ಸ್ಪಷ್ಟ, ಶುದ್ಧ ಹಿಂದಿಯೇ ಇರುತ್ತದೆ. ಹಾಗಾದರೆ ನಮ್ಮ ಟಿವಿ ಕಾರ್ಯಕ್ರಮಗಳ ನಿರೂಪಕರಿಗೆ ಯಾಕೆ ಇದು ಸಾಧ್ಯವಾಗುವುದಿಲ್ಲ? ಅಡುಗೆ ಕುರಿತ ಕಾರ್ಯಕ್ರಮಗಳಲ್ಲಿ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುವುದು ಕಷ್ಟದ ಸಂಗತಿಯೇನಲ್ಲ. ಮುಖ್ಯವಾಗಿ ನಮಗೆ ಆ ಮನೋಧರ್ಮವಿಲ್ಲ ಅಷ್ಟೆ.

ನಾಟಿ ತರಕಾರಿಗಳು ಹಿತ್ತಲಿನಿಂದ ಮರೆಯಾಗುತ್ತ, ಹೈಬ್ರಿಡ್ ತರಕಾರಿಗಳ ಅವತಾರವಾದಂತೆ ಕನ್ನಡ ಸೊಲ್ಲಿನ ಸೊಗಡೂ ಅರಿವಿದ್ದೋ, ಅರಿವಿಲ್ಲದೆಯೋ ಮಾಯವಾಗುತ್ತಿದೆ. ನಗರೀಕರಣದ ಹಲವು ಪರಿಣಾಮಗಳು ಒಂದರ್ಥದಲ್ಲಿ ಅನಿವಾರ್ಯವೆನ್ನಿಸಬಹುದು. ಆದರೆ ನಗರೀಕರಣಕ್ಕೆ ಪಕ್ಕಾಗಿಯೂ, ನಮ್ಮ ಅಸ್ಮಿತೆಯನ್ನು, ನಮ್ಮತನವನ್ನು ಉಳಿಸಿಕೊಳ್ಳುವುದು ಖಂಡಿತಾ ಸಾಧ್ಯವಿದೆ. ಭಾಷೆ ಅದಕ್ಕೊಂದು ಹೊಸ ಬೆಳಕಿಂಡಿಯನ್ನು ತೆರೆಯುತ್ತದೆ. ಮಕ್ಕಳಿಗೆ ಕನ್ನಡದ ಸೊಗಡಿನ ಅರಿವನ್ನು ಅಡುಗೆ ಮನೆಯಿಂದಲೇ ಶುರು ಮಾಡೋಣ. ಭಾಷಾ ದುರಭಿಮಾನ ನಮಗೆ ಬೇಡ. ಆದರೆ ನಮ್ಮದೇ ಭಾಷೆಯ ಬಗ್ಗೆ ಅತಿಯೆನ್ನಿಸುವ ನಿರಭಿಮಾನ ಕೂಡ ಸಲ್ಲದು. 

ಕನ್ನಡ ಬಿಡದ ಹುಬ್ಬಳ್ಳಿಯಾಂವ
‘ನಾನು ಹುಬ್ಬಳ್ಳಿ ಮೂಲದವನು, ಬೆಳೆದದ್ದು ಅಲ್ಲೆ. ಓದಿದ್ದೆಲ್ಲಾ ಕನ್ನಡ ಮಾಧ್ಯಮದಲ್ಲೇ. ಹಾಗಾಗಿ ಕಾರ್ಯಕ್ರಮ ನಿರೂಪಣೆ ಮಾಡುವಾಗ ಕನ್ನಡ ಪದಗಳನ್ನು ಬಳಸಲು ಕಷ್ಟವಾಗಲಿಲ್ಲ. ಪಿಯುಸಿ ನಂತರ ಹೋಟೆಲ್‌ ಉದ್ಯಮದಲ್ಲೇ ಕೆಲಸ ನಿರ್ವಹಿಸಿದೆ. ರಾಜಸ್ತಾನದಲ್ಲಿ ಐಟಿಸಿ ವೆಲ್‌ಕಮ್‌ ಗ್ರೂಪ್‌ ಹೋಟೆಲ್‌ನಲ್ಲಿ ಕೆಲಸ ಮಾಡಿದೆ. ನಂತರ ಬಹರೇನ್‌ನಲ್ಲಿ ಶೆರಟಾನ್‌ ಹೋಟೆಲ್‌ನಲ್ಲಿ ಬಾಣಸಿಗನಾಗಿ ದುಡಿದಿದ್ದೇನೆ. ನಂತರ ಜರ್ಮನಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದೆ. ಲಂಡನ್‌ನಲ್ಲಿ ಡಿಪ್ಲೊಮಾ ಇನ್‌ ಕಲನರಿ ಆರ್ಟ್ಸ್ ಅಭ್ಯಾಸ ಮಾಡಿದೆ. ಒಟ್ಟು 20 ವರ್ಷಗಳ ಹೋಟೆಲ್‌ ಉದ್ಯಮದಲ್ಲಿ ದುಡಿದ ಅನುಭವ ಹಾಗೂ ಅಮ್ಮ ಮಾಡುತ್ತಿದ್ದ ಅಡುಗೆಯನ್ನು ಕಣ್ಣಾರೆ ಕಂಡ ನನಗೆ ಅಡುಗೆ ಕಾರ್ಯಕ್ರಮ ನಡೆಸಿಕೊಡಲು ಅನುಕೂಲವಾಯಿತು. ಜೊತೆಗೆ ಪಾರಂಪರಿಕ ಅಡುಗೆ ವಿಧಾನವನ್ನು ಪರಿಚಯಿಸಲು ಸಹಕಾರಿ ಆಯಿತು. ಹಾಗಾಗಿ ನಮ್ಮ ಭಾಷೆ ಸೊಗಡನ್ನು ಬಿಡಲಾಗದು. 7 ವರ್ಷಗಳಿಂದ ‘ಭಾನುವಾರದ ಬಾಡೂಟ’ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದೇನೆ. ‘ರಂಗೇ ಗೌಡ್ರು’ ಪಾತ್ರದ ಮೂಲಕ ಮನೆಮನೆಗೂ ಅಡುಗೆ ರುಚಿಯನ್ನು ಪರಿಚಯಿಸುವ ಉದ್ದೇಶ ಕಾರ್ಯಕ್ರಮದ್ದಾಗಿದೆ’

–ಆದರ್ಶ ತಟಪತಿ, ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುವ
‘ಭಾನುವಾರದ ಬಾಡೂಟ’ ನಿರೂಪಕ

ಇಂಗ್ಲಿಷ್‌ ಬಳಕೆ ಅನಿವಾರ್ಯ
‘ರಸ್ತೆ ಬದಿ ತಳ್ಳುಗಾಡಿಗಳಿಂದ ಪಂಚತಾರಾ ಹೋಟೆಲ್‌ಗಳ ವಿಶೇಷ ಅಡುಗೆ ರುಚಿಯನ್ನು ಪರಿಚಯಿಸುವುದೇ ನಮ್ಮ ಕಾರ್ಯಕ್ರಮದ ಉದ್ದೇಶ. ನಾವು ನಿರೂಪಣೆ ಮಾಡುವಾಗ ಕೆಲವೊಮ್ಮೆ ಇಂಗ್ಲಿಷನ್ನು ಅನಿವಾರ್ಯವಾಗಿ ಬಳಸಬೇಕಾಗುತ್ತದೆ. ಪಂಚತಾರಾ ಹೋಟೆಲ್‌ಗಳ ಕೆಲ ಬಾಣಸಿಗರನ್ನು ಮಾತನಾಡಿಸುವಾಗ ಇಂಗ್ಲಿಷ್‌ ಉಪಯೋಗಿಸಲೇಬೇಕಾಗುತ್ತದೆ. ವೀಕ್ಷಕರಿಗೆ ಪ್ರಶ್ನೆಗಳನ್ನು ಕೇಳುವಾಗ ಕನ್ನಡದಲ್ಲೇ ಕೇಳುತ್ತೇವೆ. ಈಗ ಕೆಲವೊಂದು ಪದಗಳನ್ನು ಇಂಗ್ಲಿಷ್‌ನಲ್ಲೇ ಮಾತನಾಡಬೇಕಾದ ಅನಿವಾರ್ಯ, ಪ್ಯಾಷನ್‌ ಕೂಡ ಆಗಿದೆ. ಕೆಲವು ಅಡುಗೆ ಪದಾರ್ಥಗಳನ್ನು ಇಂಗ್ಲಿಷ್‌ನಲ್ಲೇ ಹೇಳಬೇಕಾಗುತ್ತದೆ, ಇಲ್ಲವಾದರೇ ಬಹಳಷ್ಟು ಮಂದಿಗೆ ಅರ್ಥವಾಗುವುದಿಲ್ಲ. ಉಪಯೋಗಿಸಿ ಎಂಬುದಕ್ಕೆ ಯೂಸ್ ಎನ್ನುತ್ತೇವೆ. ಕೆಲವು ಹೋಟೆಲ್‌ಗಳಲ್ಲಿನ ವಿವಿಧ ಪ್ರದೇಶಗಳ ತಿನಿಸುಗಳ ಹೆಸರನ್ನು ಕನ್ನಡದಲ್ಲಿ ಹೇಳಲು ಬರುವುದಿಲ್ಲ. ಆದ್ದರಿಂದ ಇಂಗ್ಲಿಷ್‌ ಪದಗಳ ನುಸುಳುವಿಕೆಯಾಗುತ್ತದೆ.
–ಅಂಚನ್ ಗೀತಾ, ಕಸ್ತೂರಿ ಸುದ್ದಿ ವಾಹಿನಿಯಲ್ಲಿ
ಪ್ರಸಾರವಾಗುವ ‘ಕಸ್ತೂರಿ ಖಾನಾವಳಿ’ ಕಾರ್ಯಕ್ರಮ ನಿರೂಪಕಿ

ಶುದ್ಧ ಕನ್ನಡ ಬಳಸಿದ್ರೆ ಜನ ನಗ್ತಾರೆ
ಇಂಗ್ಲಿಷ್‌ ನಮ್ಮ ಭಾಷೆಯೊಂದಿಗೆ ಸೇರಿಕೊಂಡಿದೆ. ಕಾರ್ಯಕ್ರಮ ನಡೆಸಿಕೊಡುವಾಗ ಶುದ್ಧ ಕನ್ನಡದಲ್ಲಿ ಮಾತನಾಡಿದರೆ ಜನ ನಗುತ್ತಾರೆ. ಉದಾಹರಣೆಗೆ ಕಪ್‌, ಬೌಲ್‌ ಎಂಬುದನ್ನು ಕನ್ನಡದಲ್ಲಿ ಹೇಳಿದರೆ ಹೇಗಿರುತ್ತದೆ?. ಇನ್ನೂ ಚಿಲ್ಲಿ ಚಿಕನ್ ಎಂಬುದನ್ನು ಮೆಣಸಿನಕಾಯಿ ಕೋಳಿ ಎಂದು ಹೇಳಬೇಕಾಗುತ್ತದೆ. ಕೆಲವೊಂದು ಅಡುಗೆ ಪದಾರ್ಥಗಳ ಹೆಸರನ್ನು ಇಂಗ್ಲಿಷಿನಲ್ಲೇ ಹೇಳಬೇಕಾಗುತ್ತದೆ. ಬೆಂಗಳೂರಿನವನಾದ ನನಗೆ ಕಾರ್ಯಕ್ರಮ ಮುಗಿಯುವವರೆಗೂ ಕನ್ನಡದಲ್ಲೇ ಮಾತನಾಡುವುದಕ್ಕೇ ನಾಚಿಕೆ ಆಗುವುದಿಲ್ಲ. ಇದುವರೆಗೂ ‘ಒಗ್ಗರಣೆ ಡಬ್ಬಿ’ 450 ಕಂತುಗಳನ್ನು ಪೂರೈಸಿದೆ. 
–ಮುರಳೀಧರ್‌, ಜೀ ಕನ್ನಡ ವಾಹಿನಿಯಲ್ಲಿ
ಪ್ರಸಾರವಾಗುವ ‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮ ನಿರೂಪಕ
ನಿರೂಪಣೆ: ರಮೇಶ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT