ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್‌ಕೆಸ್ ಬರೆದ ಮಹಾಕಾದಂಬರಿ

Last Updated 28 ಏಪ್ರಿಲ್ 2014, 13:20 IST
ಅಕ್ಷರ ಗಾತ್ರ

ಗಾಬ್ರಿಯೇಲ್ ಗಾರ್ಸಿಯಾ ಮಾರ್‌ಕೆಸ್ ಇನ್ನಿಲ್ಲ ಎಂಬ ಸುದ್ದಿ ತಿಳಿದದ್ದೇ ನನ್ನೊಳಗೆ ಅದೆಷ್ಟೋ ನೆನಪುಗಳು ಒಂದರ ನಂತರ ಒಂದರಂತೆ ನುಗ್ಗಿ ಬರತೊಡಗಿದವು. ಅವುಗಳಲ್ಲಿ ಕೆಲವನ್ನಾದರೂ ಇಲ್ಲಿ ದಾಖಲಿಸದೆ ಬಿಡುವಂತಿಲ್ಲ.

1. 1970ರಲ್ಲಿ ಮದರಾಸಿನ ಕನ್ನೆಮಾರ ಲೈಬ್ರರಿಯಲ್ಲಿ ದಪ್ಪ ರಟ್ಟಿನ (ಹಾರ್ಡ್‌ಕವರ್) ಒಂದು ಪುಸ್ತಕ ‘ಹೊಸದಾಗಿ ಬಂದ ಪುಸ್ತಕಗಳು’ ಎಂಬ ಹಣೆಪಟ್ಟಿ ಹೊತ್ತ ರ್‍್ಯಾಕಿನಲ್ಲಿ ಕಂಗೊಳಿಸುತ್ತಿತ್ತು. ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಎಂಬ ಅದರ ಹೆಸರೇ ಕುತೂಹಲ ಹುಟ್ಟಿಸುವಂತಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬರೆದವನು ಗಾಬ್ರಿಯೇಲ್ ಗಾರ್ಸಿಯಾ ಮಾರ್‌ಕೆಸ್. ಲೈಬ್ರರಿಯವರು ಆ ಪುಸ್ತಕವನ್ನು ಎರವಲು ಪಡೆಯಬೇಕಾದರೆ ಹದಿನೈದು ದಿನ ಕಾಯಬೇಕೆಂದರು.

ನಾನು ಅಷ್ಟು ದಿನ ಕಾಯಬೇಕಲ್ಲ ಎಂದು ತಹತಹಿಸುತ್ತ, ಆಗಾಗ ಲೈಬ್ರರಿಯಲ್ಲೇ ಕುಳಿತು ಅದರ ಕೆಲವು ಪುಟಗಳನ್ನು ತಿರುಗಿಸುತ್ತ ಕಡೆಗೂ ನಿಗದಿಗೊಳಿಸಿದ್ದ ದಿನ ಆ ಪುಸ್ತಕವನ್ನು ಪಡೆದು, ಒಂದೇ ವಾರದಲ್ಲಿ ಓದಿ ಮುಗಿಸಿದ್ದುಂಟು. ಇಂದು ಜಗದ್ವಿಖ್ಯಾತವಾಗಿರುವ ಆ ಕಾದಂಬರಿಯ ಹೆಗ್ಗಳಿಕೆಯಿದ್ದದ್ದು ಅದು ಅದ್ಭುತರಮ್ಯವನ್ನೂ (ಮಂತ್ರಗಂಬಳಿ, ನೆಲದಿಂದ ತುಸು ಮೇಲೆಯೇ ತೇಲುವ ಒಬ್ಬ ಪಾದ್ರಿ, ಲ್ಯಾಟಿನ್ ಭಾಷೆಯ ಅರಿವೇ ಇಲ್ಲದವನೊಬ್ಬ ಇದ್ದಕ್ಕಿದ್ದಂತೆ ಮಾತಾಡುವ ಆ ಭಾಷೆ, ಆಕಾಶಕ್ಕೆ ಹಾರಿ ಕಣ್ಮರೆಯಾಗುವ ಒಬ್ಬ ಪರಮಸುಂದರಿ) ಭಯಾನಕತೆಯನ್ನೂ (ಮೂರು ಸಾವಿರಕ್ಕೂ ಹೆಚ್ಚು ಮಂದಿ ಮುಷ್ಕರನಿರತರ ಕಗ್ಗೊಲೆ; ಅಂಥವರು ಅಸ್ತಿತ್ವದಲ್ಲಿದ್ದರೆಂದು ಯಾರೂ ಹೇಳಲಾಗದ ಕಾರಣ ಅವರೆಲ್ಲರೂ ಐತಿಹಾಸಿಕ ದೆವ್ವಗಳಂತಾಗುವುದು) ಪರಸ್ಪರ ಮೇಳೈಸುವುದರಲ್ಲಿ ಹಾಗೂ ಅರ್ಥವಾಗುವಂತಿದ್ದರೂ ಸದಾ ಅಪಾರ್ಥಕ್ಕೇ ಗುರಿಯಾಗುವ ಒಂದು ದೇಶದ ಇತಿಹಾಸವನ್ನು ಧ್ವನಿಪೂರ್ಣವಾಗಿ ಹಿಡಿದುಕೊಡುವುದರಲ್ಲಿ.

ಒಟ್ಟಿನಲ್ಲಿ ಲೌಕಿಕ, ಅಲೌಕಿಕ ಘಟನೆಗಳನ್ನು ಪ್ರತ್ಯೇಕಿಸಲಾಗದಂತೆ ನಿರೂಪಿಸಿದ ಆ ಕಾದಂಬರಿ ನನ್ನನ್ನು ಅದೆಷ್ಟು ಗಾಢವಾಗಿ ಕಲಕಿತೆಂದರೆ ಮುಂದೆ ಹಲವು ತಿಂಗಳು ಅದರ ಗುಂಗಿನಲ್ಲೇ ಇದ್ದೆ; ಗೆಳೆಯರು ಸಿಕ್ಕಿದಾಗಲೆಲ್ಲ ಅದರ ಬಗ್ಗೆ ಹೇಳುತ್ತಲೇ ಇದ್ದೆ.

2. ಎರಡು ವರ್ಷದ ನಂತರ ಆ ಪುಸ್ತಕದ ಪೇಪರ್‌ಬ್ಯಾಕ್ ಆವೃತ್ತಿ ಬಂದಾಗ ಒಂದು ಪ್ರತಿಯನ್ನು ಕೊಂಡುಕೊಂಡು ಮತ್ತೆ ಓದಿದ್ದಲ್ಲದೆ ಕವಿ ಗೋಪಾಲಕೃಷ್ಣ ಅಡಿಗರಿಗೂ ಕೊಟ್ಟು ಓದಿಸಿದೆ. ಅವರು ‘ಇದೊಂದು ಲ್ಯಾಟಿನ್ ಅಮೆರಿಕದ ಮಹಾಭಾರತವಯ್ಯಾ’ ಎಂದು ಹೇಳುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

3. ಒಮ್ಮೆ ನಾನು ಬೆಂಗಳೂರಿನ ಗಾಂಧಿಬಜಾರಿಗೆ ತೀರ ಹತ್ತಿರದಲ್ಲಿದ್ದ ಸುಮತೀಂದ್ರ ನಾಡಿಗರ ಮನೆಗೆ ಹೋದಾಗ ರಾತ್ರಿಯಾಗಿತ್ತು. ಅದೇ ಪುಸ್ತಕವನ್ನು ಓದುವುದರಲ್ಲಿ ತಲ್ಲೀನರಾಗಿದ್ದ ಅವರು ತಮ್ಮ ಓದಿಗೆ ಭಂಗವಾದೀತೆಂದು ಆ ರಾತ್ರಿ ಊಟ ಮಾಡಲಿಲ್ಲ.

4. ಆ ಕಾಲದಲ್ಲಿ ನಾಡಿಗರು ಗಾಂಧಿಬಜಾರಿನಲ್ಲಿ ಒಂದು ಪುಸ್ತಕದಂಗಡಿ ನಡೆಸುತ್ತಿದ್ದರಷ್ಟೆ. ಅವರು ಅದೇ ಪುಸ್ತಕದ ಹಲವು ಪ್ರತಿಗಳನ್ನು ತರಿಸಿ ತಮ್ಮ ಅಂಗಡಿಗೆ ಬರುತ್ತಿದ್ದ ಲೇಖಕರಿಗೆಲ್ಲ ಅದನ್ನು ಶಿಫಾರಸು ಮಾಡುತ್ತಿದ್ದರು. ನಾನು ಅವರಿಂದಲೇ ಹತ್ತು ಹನ್ನೆರಡು ಪ್ರತಿಗಳನ್ನು ಖರೀದಿಸಿ ಯು.ಆರ್. ಅನಂತಮೂರ್ತಿಯವರನ್ನೂ ಒಳಗೊಂಡಂತೆ ಕೆಲವರು ಪ್ರಸಿದ್ಧ ಲೇಖಕರಿಗೆ ಕಳಿಸಿಕೊಟ್ಟೆ. ಗಿರಡ್ಡಿ ಗೋವಿಂದರಾಜರಿಗೂ ಒಂದು ಪ್ರತಿ ಕಳಿಸಿದ್ದೆನೆಂಬ ಸಂಗತಿ ಅವರೇ ನನಗೆ ಇತ್ತೀಚೆಗೆ ತಿಳಿಸಿದಾಗ ಗೊತ್ತಾಯಿತು. 

5. ನಾನು ಯಾರು ಯಾರಿಗೆ ಪುಸ್ತಕ ಕಳಿಸಿದ್ದೆನೋ ಅವರೆಲ್ಲರೂ ನನ್ನ ಅನ್ವೇಷಣೆಯನ್ನು ಮೆಚ್ಚಿಕೊಂಡು ಮಾರ್‌ಕೆಸ್‌ನ ಜೊತೆ ನನ್ನನ್ನೂ ಅಭಿನಂದಿಸಬಹುದೆಂಬ ಆಸೆಯಿಂದ ಒಂದೆರಡು ತಿಂಗಳು ಪ್ರತಿ ದಿನವೂ ಅವರ ಪತ್ರಗಳಿಗಾಗಿ ಎದುರು ನೋಡಿ ನೋಡಿ ನಿರಾಶನಾದದ್ದುಂಟು.

6. ಈ ಮಧ್ಯೆ ಬಿ.ಜಿ. ಪೈ, ಎ.ಎನ್. ಪ್ರಸನ್ನ, ಎಂ.ಎಸ್.ಕೆ. ಪ್ರಭು ಮತ್ತು ಇನ್ನೂ ಕೆಲವು ಮಂದಿ ಲೇಖಕ-ಮಿತ್ರರು ಆ ಕಾದಂಬರಿಯನ್ನು ಓದಿದರು. ಕೆಲವರು ಬರೆದರೆ ಮಾರಕೆಸ್‌ನ ಹಾಗೆ ಬರೆಯಬೇಕೆಂದೂ, ಇನ್ನು ಕೆಲವರು ಹಾಗೆ ಬರೆಯಬಾರದೆಂದೂ ತೀರ್ಮಾನಿಸಿದರು. 

7. ಪಿ.ವಿ. ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಒಮ್ಮೆ ಅವರನ್ನು ಸಂದರ್ಶಿಸಿದವರು ‘ಹಿಂದೂ’ ಪತ್ರಿಕೆಯ ಎನ್. ರಾಮ್. ಅಂದು ನರಸಿಂಹರಾಯರ ಟೇಬಲಿನ ಮೇಲೆ ಅದೇ ಪುಸ್ತಕವನ್ನು ಕಂಡ ರಾಮ್ ಅವರಿಗೆ ಪರಮಾಶ್ಚರ್ಯವಾಯಿತಂತೆ.

8. ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿದ್ದ ಬುದ್ಧದೇವ ಭಟ್ಟಾಚಾರ್ಯ ಟಿ.ವಿ. ಸಂದರ್ಶನವೊಂದರಲ್ಲಿ ತಾವು ಮಾರ್‌ಕೆಸ್‌ನ ಒಂದು ಕಾದಂಬರಿ ಅನುವಾದಿಸಿರುವುದಾಗಿಯೂ ಪುರಸೊತ್ತು ಸಿಕ್ಕಿದರೆ ಅವನ ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಅನುವಾದಿಸ ಬಯಸುವುದಾಗಿಯೂ ಹೇಳಿದರು.

9. ಮಾರ್‌ಕೆಸ್ ಎಡಪಂಥೀಯ; ಕ್ಯೂಬದ ಅಧ್ಯಕ್ಷ ಕ್ಯಾಸ್ಟ್ರೋನ ಪರಮಾಪ್ತ ಗೆಳೆಯ. ಹೀಗಿದ್ದೂ ಅವನು ನಮ್ಮ ಕೆಲವು ಪ್ರಗತಿಶೀಲರ ಹಾಗೆ ಕಮ್ಯೂನಿಸಂಗೆ ನಿಷ್ಠನಾಗಿ, ಕಾರ್ಮಿಕರ ಪರವಾಗಿ ಉಳ್ಳವರ ವಿರುದ್ಧ ತೀರ ವಾಚ್ಯವಾಗಿ ಬರೆಯಲಿಲ್ಲವೇಕೆ ಎಂದು ಸುಮಾರು ವರ್ಷ ನಾನು ಯೋಚಿಸಿದ್ದುಂಟು.

10. ಅಮೆರಿಕದ ಅಧ್ಯಕ್ಷನಾಗಿದ್ದ ಬಿಲ್ ಕ್ಲಿಂಟನ್ ಸ್ವತಃ ಕೊಲಂಬಿಯಕ್ಕೆ ಹೋಗಿ ಮಾರ್‌ಕೆಸ್‌ನನ್ನು ಭೇಟಿಯಾದನಷ್ಟೆ. ಆ ಸಂದರ್ಭದಲ್ಲಿ ಶ್ರೀಲಂಕಾದ ಕವಿ ಇಂದ್ರನ್ ಅಮೃತನಾಯಗಂ ‘ಅಮೆರಿಕನ್ ಆಡಳಿತಕ್ಕೆ ಫಿಡೆಲ್ ಕ್ಯಾಸ್ಟ್ರೊ ಒಬ್ಬ ಶತ್ರು, ಹೌದು. ಆದರೆ ಅವನ ಮಿತ್ರ ಮಾರ್‌ಕೆಸ್ ಶತ್ರುವೇನಲ್ಲವಲ್ಲ’ ಎಂದ ವ್ಯಂಗ್ಯವಾಗಿ.

11. 2002ರಲ್ಲಿ ನಾನು ಅಮೆರಿಕದ ಅಯೋವಾ ನಗರದಲ್ಲಿ ನಡೆಯುವ ಅಂತರರಾಷ್ಟ್ರೀಯ ಲೇಖಕರ ಸಮಾವೇಶದಲ್ಲಿ ಭಾಗವಹಿಸಿದ್ದೆ. ಅದಾಗ ಮಾರ್‌ಕೆಸ್‌ನ ಆತ್ಮಚರಿತ್ರೆಯ ಮೊದಲ ಭಾಗ ಪ್ರಕಟವಾಗಿತ್ತು. (ಮುಂದೆ ಅದು ‘ಲಿವಿಂಗ್ ಟು ಟೆಲ್ ದ ಟೇಲ್’ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಗೊಂಡಿತು). ಕೆಲವೇ ದಿನಗಳಲ್ಲಿ ಕೊಲಂಬಿಯದಲ್ಲಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಆ ಪುಸ್ತಕದ ಪ್ರತಿಗಳನ್ನು ಕೊಂಡೊಯ್ಯುತ್ತಿದ್ದ ನಾಲ್ಕಾರು ಟ್ರಕ್ಕುಗಳನ್ನು ಬಂದೂಕುಧಾರಿ ಓದುಗರೇ ಅಡ್ಡಗಟ್ಟಿ ಅವುಗಳಲ್ಲಿದ್ದ ಪ್ರತಿಗಳನ್ನೆಲ್ಲ ಹೊತ್ತುಕೊಂಡು ಹೋದರೆಂಬ ಸುದ್ದಿ ‘ನ್ಯೂಯಾರ್ಕ್ ಟೈಂಸ್’ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಓದಿದ ಜರ್ಮನ್ ಲೇಖಕ ಮೈಖೇಲ್ ಝೆಲ್ಲರ್ ‘ಮಾರ್‌ಕೆಸ್ ಬಗ್ಗೆ ನನಗೆ ಹೊಟ್ಟೆಕಿಚ್ಚು’ ಎಂದ. ಅದಕ್ಕೆ ಕೊಲಂಬಿಯ ದೇಶದ ಕವಿ, ಕಾದಂಬರಿಕಾರ ಹೂಗೊ ಚಪ್ಪಾರ್ರೊ ವಾಲ್ದೆರ್ರಾಮ– ‘ಹೊಟ್ಟೆಕಿಚ್ಚೇಕೆ? ನಾವೆಲ್ಲ ಬರೆಯಬೇಕಿದ್ದೂ ಬರೆಯಲಾಗದ್ದನ್ನು ಅವನಾದರೂ ಬರೆದನಲ್ಲ ಅಂತ ಸಂತೋಷಪಡಬೇಕಲ್ಲವೆ?’ ಎಂದ.

12. ಮಾರ್‌ಕೆಸ್‌ನ ಅದೇ ಕೃತಿಯಿಂದ ಸ್ಫೂರ್ತಿ ಪಡೆದು ಕಾದಂಬರಿಗಳನ್ನು ರಚಿಸಿರುವ ಅನೇಕ ಲೇಖಕರು ಜಗತ್ತಿನಲ್ಲಿದ್ದಾರಲ್ಲವೆ? ಅಮೆರಿಕದ ವಿಲಿಯಂ ಕೆನೆಡಿ, ಟೋನಿ ಮೋರಿಸನ್, ಆನ್ ಟೈಲರ್, ರಾಬರ್ಟ್ ಕೂವರ್, ಜಾನ್ ಬಾರ್ತ್, ಥಾಮಸ್ ಪಿಂಚಾನ್, ಸಾಂದ್ರಾ ಸಿಸ್ನೆರೋಸ್ ಮೊದಲಾದ ಲೇಖಕ ಲೇಖಕಿಯರಲ್ಲದೆ ಇಟಲಿಯ ಇತಾಲೊ ಕಲ್ವಿನೊ, ಜಪಾನಿನ ಇನೂಯೆ ಹಿಸಾಷಿ, ಭಾರತದ ಸಲ್ಮಾನ್ ರಷ್ದಿ, ಕಿರ್ಘಿಜ್ ಭಾಷೆಯಲ್ಲಿ ಬರೆಯುವ ಚಿಂಗಿಸ್ ಐತ್ಮತೊವ್, ಬ್ರಿಟನ್ನಿನ ಏಂಜೆಲಾ ಕಾರ್ಟರ್, ಜರ್ಮನಿಯ ಪ್ಯಾಟ್ರಿಕ್ ಸ್ಯೂಸ್‌ಕಿಂಡ್, ಇಸ್ರೇಲಿನ ಮೆಯಿರ್ ಶಾಲೆವ್ ಮತ್ತು ಡೇವಿಡ್ ಗ್ರಾಸ್‌ಮನ್, ಚೀನಾದ ಮೊ ಯಾನ್, ಸು ತೋಂಗ್ ಮತ್ತು ಹ್ಯಾನ್ ಶಾವೊಗಾಂಗ್, ಹಾಲೆಂಡಿನ ಸೀಸ್ ನೂಟೆಬೂಮ್, ಐರ್ಲೆಂಡಿನ ತಿಮೊತಿ ಓಗ್ರೇಡಿ, ಸೆರ್ಬಿಯದ ಮಿಲೊರಾದ್ ಪಾವಿಚ್, ಹೀಗೆ ಇನ್ನೂ ಅನೇಕರನ್ನು ಹೆಸರಿಸಬಹುದು. 

ಲ್ಯಾಟಿನ್ ಅಮೆರಿಕದ ಲೇಖಕನೊಬ್ಬ ತನ್ನದೊಂದು ಕಾದಂಬರಿಯಿಂದಲೇ ಪ್ರಪಂಚದ ಹಲವು ಭಾಷೆಗಳ ಲೇಖಕರನ್ನು, ಓದುಗರನ್ನು, ಅಷ್ಟೇಕೆ ಮಂತ್ರಿಮಹೋದಯರನ್ನು ಕೂಡ, ಪ್ರಭಾವಿಸುವಂತಾಯಿತಲ್ಲ, ಅದರಲ್ಲೇನು ವಿಶೇಷವಿದ್ದೀತು? ಅವನ ನಂತರದ ಕೃತಿಗಳಿಗಾಗಿ ಇಡೀ ಜಗತ್ತೇ ತುದಿಗಾಲಲ್ಲಿ ಕಾಯುವಂತಾಯಿತಲ್ಲ, ಅದಕ್ಕೇನು ಕಾರಣವಿದ್ದೀತು? 

‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ (ಒಂದು ನೂರು ವರ್ಷಗಳ ಏಕಾಂತ) ಅಚ್ಚರಿಗಳ ಆಕರ; ಒಂದು ಇಡೀ ದೇಶದ ಇತಿಹಾಸವನ್ನು ಒಳಗೊಂಡ ಪುರಾಣ; ಸೃಷ್ಟಿಮೂಲವನ್ನು (ಜೆನೆಸಿಸ್) ಪಡಿಮೂಡಿಸುವ ಮಹಾ ಗ್ರಂಥ. ಈ ಕಾದಂಬರಿ ಪ್ರಾರಂಭವಾಗುವುದು ವೈಜ್ಞಾನಿಕ ಸಂಶೋಧನೆಯಿಂದ; ಅಂತ್ಯಗೊಳ್ಳುವುದು ಮೂಢನಂಬಿಕೆಗಳಿಂದ. ದಕ್ಷಿಣ ಅಮೆರಿಕದ ಒಂದೇ ಕುಟುಂಬಕ್ಕೆ ಸೇರಿದ, ಐದು ಪೀಳಿಗೆಗಳಿಗೆ ಸಂಬಂಧಿಸಿದ ಈ ಕಾದಂಬರಿ ಕಾಲಕ್ರಮೇಣ ಸಮಾಜದಲ್ಲಿ ಮಾತಾಡಲು ಮತ್ತು ಬದುಕಲು ಕಲಿತ ಮನುಷ್ಯನ ಸಾಮಾಜಿಕ, ರಾಜಕೀಯ  ಅವಿವೇಕಗಳೆಲ್ಲವನ್ನೂ ವರ್ಣಿಸುವ ಮೂಲಕ ಒಂದು ಬೃಹತ್ ಪುರಾಣವಾಗಿಬಿಟ್ಟಿದೆ. ಇದರೊಳಗೆ ಅನೇಕ ಸಣ್ಣ ಸಣ್ಣ ಪುರಾಣಗಳೂ ಇವೆ. ಅಲೆಮಾರಿಗಳು, ದೆವ್ವಗಳು, ಸ್ವರ್ಗಾರೋಹಣ, ಪ್ರಳಯ ಮತ್ತು ಜಲಕ್ಷಾಮ, ಶಕ್ತಿ ಮತ್ತು ಲೈಂಗಿಕತೆ, ಹಾದರ, ಹೂಮಳೆ, ಭಾಷೆಯ ಮಾಂತ್ರಿಕತೆ– ಇವೆಲ್ಲ ಇರುವುದರಿಂದ ಈ ಕಾದಂಬರಿಗೆ ಇತಿಹಾಸವನ್ನು ಒತ್ತರಿಸುವಂಥ ಒಂದು ಆಕೃತಿ ಪ್ರಾಪ್ತವಾಗಿದೆ.  ವಾಸ್ತವ ಜಗತ್ತನ್ನು ಬುಡಮಟ್ಟ ವಿಶ್ಲೇಷಿಸುವ ಮೂಲಕ ಮಾರ್‌ಕೆಸ್ ಇಲ್ಲಿ ಇನ್ನೊಂದೇ ಪ್ರತಿ ವಾಸ್ತವವನ್ನು ಸೃಷ್ಟಿಸುತ್ತಾನೆ.

ಶಾಲೆಗೆ ಹೋಗುವ ಕೊಲಂಬಿಯನ್ ಹುಡುಗನೊಬ್ಬನಿಗೆ ಈ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಜಾದುಗಾರನೂ ಭವಿಷ್ಯ ಹೇಳುವವನೂ ಸಂಸ್ಕೃತಿ ಪ್ರಸಾರಕನೂ ಆದ ಮೆಲ್‌ಕಿಯಾಡಿಸ್ ಮೃತ್ಯುಶಯ್ಯೆಯಲ್ಲಿ ಮಲಗಿಕೊಂಡು ‘ವಾನ್ ಹಂಬೋಲ್ಟ್, ಇದು ವಿಷಮ ಕಾಲ, ವಿಷಮ ಕಾಲ’ ಎಂದು ಹೇಳಿದ್ದೇ ದಕ್ಷಿಣ ಅಮೆರಿಕದ ಆ ಭಾಗವನ್ನು ಕಂಡುಹಿಡಿದ ಅದೇ ಹೆಸರಿನ ಜರ್ಮನ್ ಅನ್ವೇಷಕನ ನೆನಪಾಗುವುದು ಸಹಜ. ವಸಾಹತುಗಳ ವಿಮೋಚನೆಯ ಇತಿಹಾಸದಲ್ಲಿ ವಾನ್ ಹಂಬೋಲ್ಟನ ಪಾತ್ರ ಬಹು ದೊಡ್ಡದು. ಸರ್ವಾಧಿಕಾರಿ ಬೊಲಿವಾರ್‌ಗೆ ವಸಾಹತುಗಳು ವಿಮೋಚನೆಗೆ ಸಿದ್ಧವಾಗಿವೆಯೆಂದು ಹೇಳಿದವನು ಹಂಬೋಲ್ಟನೇ.

ಇನ್ನು ದಕ್ಷಿಣ ಅಮೆರಿಕನ್ನರು ಕೊಲಂಬಿಯದ ಚರಿತ್ರೆಗೆ ಸಮನಾದ ಅನೇಕ ಸಂಗತಿಗಳನ್ನು ಈ ಕೃತಿಯಲ್ಲಿ ಕಾಣಬಲ್ಲರು: ಕೊಲಂಬಿಯವನ್ನು ಕಂಡುಹಿಡಿದದ್ದು, ಜನರು ಅಲ್ಲಿಗೆ ಹೋಗಿ ನೆಲೆಸಿದ್ದು, ಕ್ರಾಂತಿಗಳು, ಬಾಳೆ ತೋಟಗಳು, ಕಾರ್ಮಿಕ ಸಂಘಟನೆ, ಬಾಳೆ ಗಿಡಕ್ಕೆ ತಗಲುವ ಸಿಗಾಬೊಕಾ ಎಂಬ ಸಾಂಕ್ರಾಮಿಕದಿಂದ ಅವನತಿಗೀಡಾದ ಅನೇಕ ಪಟ್ಟಣಗಳು, ಇತ್ಯಾದಿ. ಸ್ಪ್ಯಾನಿಷ್ ಭಾಷೆ ಬಲ್ಲವರಿಗೆ ಈ ಕೃತಿಯ ಪಾತ್ರಗಳ ಹೆಸರುಗಳೂ ಅರ್ಥಪೂರ್ಣ. ‘ಪೆತ್ರೊ ಕೋತೆ’ ಎಂದರೆ ಜಡತ್ವದ ಗೋಜಲು ಎಂದರ್ಥ. ‘ಬುಯೆಂದಿಯಾ’ ಎಂದರೆ ಒಳ್ಳೆಯ ದಿನ; ‘ರೆಮೆದಿಯೊ’ ಎಂದರೆ ಆಶ್ರಯ ಎಂದರ್ಥ. ‘ಅರ್ಕಾದಿಯೊ’ ಎಂದರೆ ಕಂಚಿನ ವಿಗ್ರಹಗಳಿಗೆ ಹೆಸರಾದ ಅರ್ಕಾಡಿಯಾ ಎಂದರ್ಥ. ಸ್ವರ್ಗಕ್ಕೆ ಇನ್ನೊಂದು ಹೆಸರೆನಿಸಿದ ಈ ಊರು ಇತಿಹಾಸದ ಪ್ರಕಾರ ಸೈನ್ಯಕ್ಕೆ ಕೂಲಿ ಸಿಪಾಯಿಗಳನ್ನು ಒದಗಿಸಿ ಕುಪ್ರಸಿದ್ಧವಾಯಿತು.

ಇಡೀ ಕಾದಂಬರಿಯನ್ನೇ ಅನುವಾದಿಸದೆ ಈ ಕೃತಿಯ ಕಥೆ ಹೇಳುವುದಂತೂ ಸಾಧ್ಯವೇ ಇಲ್ಲ. ಒಂದು ನೂರು ವರ್ಷಗಳ ಏಕಾಂತ ಬುಯೆಂದಿಯಾ ಮನೆತನದ ಆರು ಪೀಳಿಗೆಗಳನ್ನು ಒಳಗೊಳ್ಳುತ್ತದೆ:  ಹೋಸೆ ಅರ್ಕಾದಿಯೊ ಬುಯೆಂದಿಯಾ ಮತ್ತು ಉರ್ಸುಲಾ ಇಗುವಾರನ್ ಇವರಿಬ್ಬರ ಮದುವೆಯಿಂದ ಹಿಡಿದು ಹೋಸೆ ಅರ್ಕಾದಿಯೊ ಕೊಲೆಪಾತಕಿಯಾದ ಮೇಲೆ, ಬಹುಶಃ (ಈಡನ್ನಿನಿಂದ) ಅವರು ಬಹಿಷ್ಕೃತರಾಗುವವರೆಗೆ; ಕ್ರಾಂತಿಕಾರಿ ಕರ್ನಲ್ ಔರೇಲಿಯಾನೊ, ಅವನ ತಮ್ಮ ಹೋಸೆ ಅರ್ಕಾದಿಯೊ ಮತ್ತು ತಂಗಿ ಅಮರಾಂತಾವರೆಗೆ; ಅನೇಕಾನೇಕ ಔರೇಲಿಯಾನೋಗಳ, ಅರ್ಕಾದಿಯೋಗಳ, ಉರ್ಸುಲಾಗಳ ಮತ್ತು ಅಮರಾಂತಾಗಳವರೆಗೆ. ಇವರೆಲ್ಲರ ಜೊತೆಜೊತೆಗೇ ಜ್ಯೋತಿಷಿಗಳು, ಹೊಟ್ಟೆಬಾಕರು, ಡ್ಯಾಂಡೀಗಳು, ಟೆಕ್ಸನರು, ಪುರೋಹಿತರು, ಜನರಲ್ಲರು, ಸಾಹಸಿಗಳು, ಬಲಪಂಥೀಯರು, ಎಡಪಂಥೀಯರು ಇದ್ದಾರೆ. ಮತ್ತೆ ಪ್ರಪಂಚವನ್ನು ಸಂಸ್ಕೃತ ಭಾಷೆಯಲ್ಲಿ ಬರೆದಿಡುವ ಮೆಲ್‌ಕಿಯಾದಿಸ್ ಎಂಬ ಜಿಪ್ಸಿ ಇದ್ದಾನೆ.

ಮಾರ್‌ಕೆಸ್ ಸೃಷ್ಟಿಸಿರುವ ಮಕಾಂಡೊ ಕಾಡಿನ ನಡುವೆ ಇರುವ ಒಂದು ಸಣ್ಣ ಊರು. ಆದರೆ ಕಾದಂಬರಿಯಲ್ಲಿ ಈ ಊರು ಇಡೀ ಪ್ರಪಂಚವನ್ನೇ ಪ್ರತಿನಿಧಿಸುವ ಒಂದು ಸಂಕೇತ. ಜಿಪ್ಸಿ ಮೆಲ್‌ಕಿಯಾದಿಸ್ ಈ ಊರಿಗೆ ಬಂದ ತಕ್ಷಣ ಇದು ಕೇವಲ ಒಂದು ಊರಾಗಿ ಉಳಿಯುವುದಿಲ್ಲ. ಮೆಲ್‌ಕಿಯಾದಿಸ್ ನಾಗರಿಕತೆಯ ಸೋಂಕಿಲ್ಲದ ಈ ಊರವರಿಗೆ ತಂದುಕೊಡುವುದು ಜ್ಞಾನವನ್ನು ಮತ್ತು ಸಂಶೋಧನಾ ಸಾಧನಗಳನ್ನು. ಅವುಗಳಿಂದ ಈ ಊರಿನ ಅಧಿಪತಿ (ಪೇಟ್ರಿಯಾರ್ಕ್) ಹೋಸೆ ಅರ್ಕಾದಿಯೊ ಬುಯೆಂದಿಯಾ ಬಹು ಕಷ್ಟಪಟ್ಟು ಮಾನವ ಕುಲದ ಮೂಲ ಸಂಶೋಧನೆಗಳನ್ನು ಮತ್ತೆ ಕಂಡುಹಿಡಿಯುತ್ತಾನೆ. ಭೂಮಿ ಕಿತ್ತಳೆ ಹಣ್ಣಿನಂತೆ ಗುಂಡಾಗಿದೆ ಎಂದು ಕಂಡುಹಿಡಿದಾಗ ಅವನ ಹೆಂಡತಿ ಉರ್ಸುಲಾ ನಿಜಕ್ಕೂ ತಾಳ್ಮೆ ಕಳೆದುಕೊಳ್ಳುತ್ತಾಳೆ.

ಆದರೆ ಹೋಸೆ ಅರ್ಕಾದಿಯೊ ಬುಯೆಂದಿಯಾನ ಪ್ರಾಚೀನ ಪ್ರಯೋಗಶಾಲೆ ಅವನ ಭಾವೀ ಪೀಳಿಗೆಯವರನ್ನು ಯುದ್ಧಕ್ಕೆ ಕಳಿಸುವಂಥ ಅನಾವೃಷ್ಟಿ, ಪ್ಲೇಗು ಮತ್ತು ಇತರ ಸಂಕಷ್ಟಗಳಿಗೆ ಸಿಲುಕಿಸುವ ವಿನಾಶಕಾರಿ ಬೀಜಗಳನ್ನು ಒಳಗೊಂಡಿರುತ್ತದೆ. ಮಕಾಂಡೊ ಎಂಬ ಊರೇ ಸಮೃದ್ಧಿಯಿಂದ ತುಳುಕುತ್ತಿರುವಾಗ ಹೇಗೋ ಹಾಗೆ ಅವನತಿ ಹೊಂದಿದಾಗ ಕೂಡ ತನ್ನ ಸುತ್ತ ಬಿಚ್ಚಿಕೊಳ್ಳುವ ಬೃಹತ್ ಘಟನೆಗಳಿಗೆ ಕೇಂದ್ರವಾಗುತ್ತದೆ.  ಯಾವ ಬದಲಾವಣೆಗೂ ಗಮನ ಕೊಡದ ಊರಿನಲ್ಲಿ ಜನನ, ವಿವಾಹ ಮತ್ತು ಸಾವುಗಳ ಬಗ್ಗೆ ಮೂಢನಂಬಿಕೆಯ ವಿಧಿಗಳು ಮುಂದುವರಿಯುತ್ತವೆ. ಮೊದಲೇ ಸೂಚಿಸಿದಂತೆ ಬುಯೆಂದಿಯಾ ಮತ್ತು ಅವನ ಸಂತತಿಯವರನ್ನು ಕುರಿತ ಈ ಕಾದಂಬರಿ– ಆದಂ, ಈವರನ್ನೂ ಅವರ ಸಂತತಿಯವರನ್ನೂ ಕುರಿತ ಬೈಬಲ್ಲಿನಂತಿದೆ. ಬುಯೆಂದಿಯಾನ ಕುಟುಂಬ ಮಾನವ ಕುಟುಂಬ; ಮೊದಲ ಕುಟುಂಬ. ಅದೇ ಈಡನ್ನಿನ ಜನ, ಜಗತ್ತು. ‘ಮಕಾಂಡೊ ಕನ್ನಡಿಗಳ ಊರು’ ಎನ್ನುತ್ತಾನೆ ಮಾರ್‌ಕೆಸ್. ಉರ್ಸುಲಾ ‘ಕಾಲ ಸರಿಯುತ್ತಿಲ್ಲ.... ಆದರೆ ಒಂದು ವೃತ್ತಾಕಾರದಲ್ಲಿ ತಿರುಗುತ್ತಿದೆ’ ಎಂದು ಕಂಡುಕೊಂಡು ತಲ್ಲಣಿಸುತ್ತಾಳೆ.

ಗಾರ್ಸಿಯಾ ಮಾರ್‌ಕೆಸ್ ಉನ್ನತ ನೀತಿಪ್ರಜ್ಞೆಯುಳ್ಳ ರಾಜಕೀಯ ವ್ಯಕ್ತಿಯೆಂಬುದನ್ನು ಮರೆಯಬಾರದು. ಪುರಾಣವೆನ್ನುವುದು ಕಾಲವನ್ನು, ಘಟನೆಗಳನ್ನು ಒಂದು ವೃತ್ತವಾಗಿ ಪರಿವರ್ತಿಸಿ ಇತಿಹಾಸವನ್ನು ವಿರೋಧಿಸುತ್ತದೆ, ನಿಜ. ಆದರೂ ಅದು ನಾವು ಹೇಗೆ ಬದುಕಿದ್ದೇವೆಂಬುದನ್ನು ಧ್ವನಿಸುತ್ತದೆಯಷ್ಟೆ. ಪುರಾಣ ಹುಟ್ಟುವುದು ಶೂನ್ಯದಲ್ಲಲ್ಲ, ಅನುಭವದ ಆಳದಲ್ಲಿ. ಮಾರ್‌ಕೆಸ್ ಶೋಷಣೆ, ವಸಾಹತುವಾದ ಮತ್ತು ಕ್ರಾಂತಿಗಳ ಬಗ್ಗೆ ಬರೆಯುವುದು ಬಾಲ್ಯದಲ್ಲಿ ತಾತನೊಬ್ಬ ಬೀರಿದ ಪ್ರಭಾವದಿಂದ ಬೆಳೆದ ಅವನ ಮೊಮ್ಮಗನ ದೃಷ್ಟಿಕೋನದಿಂದ. ಈ ಮೊಮ್ಮಗ ಅಮೆರಿಕದ ಬಾಳೆಹಣ್ಣಿನ ವ್ಯಾಪಾರಿಗಳ ಶೋಷಣೆಗೊಳಗಾಗಿ, ಕೊನೆಗೆ ಸ್ವತಂತ್ರಗೊಂಡ ಅರಾಕಾಟಕ ಎಂಬ ಪಟ್ಟಣದಲ್ಲಿ ಕ್ರಾಂತಿವೀರನಾಗಿ ತನ್ನ ಕೊನೆಗಾಲವನ್ನು ಕಳೆದವನು.

ಈ ಕಾದಂಬರಿಯ ಪಾತ್ರಗಳು ತಮ್ಮ ನೂರು ವರ್ಷಗಳ ಏಕಾಂತದಲ್ಲಿ ಎಲ್ಲವೂ ದೂಳು ಮತ್ತು ಕಸದ ಬಿರುಗಾಳಿಯಲ್ಲಿ ನಿರ್ನಾಮವಾಗುತ್ತದೆಯೆಂದು ಪ್ರಾರಂಭದಲ್ಲೇ ನುಡಿಯಲಾದ ಭವಿಷ್ಯವನ್ನು ಸಮರ್ಥಿಸುತ್ತವೆ. ಭವಿಷ್ಯವಾಣಿಯ ಮತ್ತು ರಕ್ತಸಂಬಂಧಗಳ ನಿಯತಿವಾದ, ಅನೇಕ ಪೀಳಿಗೆಗಳ ಜನರ ಅದೇ ಅದೇ ಹೆಸರುಗಳು, ಮಾತುಗಳು ಮತ್ತು ಘಟನೆಗಳು ವಾಸ್ತವಿಕತೆಗೆ ಭ್ರಮಾಲೋಕದ ಬಣ್ಣ ಬಳಿಯುತ್ತವೆ. ಮಾರ್‌ಕೆಸ್ ಸೃಷ್ಟಿಸಿರುವ ಭ್ರಮಾಲೋಕ ವಾಸ್ತವಕ್ಕೆ ತೀರ ಹತ್ತಿರವಾದದ್ದು. ಫ್ಯಾಂಟ್ಯಾಸ್ಟಿಕ್ ಧಾಟಿಯಲ್ಲಿ ಬರೆಯುವ ಲೇಖಕ ಕಣ್ಣಿಗೆ ಕಾಣುವ ವಿವರಗಳನ್ನು ಬರೆಯುವ ಲೇಖಕನಿಗಿಂತ ಹೆಚ್ಚು ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಆ ಧಾಟಿಯ ಪ್ರಬಂಧ ಧ್ವನಿಗೆ ವಾಸ್ತವ ವಿವರಗಳೇ ಭದ್ರ ಬುನಾದಿ. ಮಾರ್‌ಕೆಸ್‌ನದು ಎಂಥ ಅನನ್ಯ ರೀತಿಯ ಬರವಣಿಗೆಯೆಂಬುದಕ್ಕೆ ಈ ಕೆಳಗಿನ ಕೆಲವು ಸಾಲುಗಳೇ ನಿದರ್ಶನ:

ಅನೇಕ ತಿಂಗಳ ಕಾಲ ಅವರೆಲ್ಲರ ಜ್ಞಾಪಕಶಕ್ತಿ ಕಳೆದುಹೋಗದಂತೆ ಮಾಡುವ ಸೂತ್ರವನ್ನು ಕಂಡುಹಿಡಿದವನು ಔರೇಲಿಯಾನೊ. ಅದನ್ನವನು ಕಂಡುಹಿಡಿದದ್ದು ಕೇವಲ ಆಕಸ್ಮಿಕವಾಗಿ.  ನಿದ್ರೆಯಿಲ್ಲದಿರುವಿಕೆಯಲ್ಲಿ ಅತ್ಯಂತ ಪರಿಣತನೂ ಮೊಟ್ಟಮೊದಲಿಗರಲ್ಲೊಬ್ಬನೂ ಆಗಿದ್ದ ಅವನು ಬೆಳ್ಳಿಲೇಪ ಹಾಕುವ ಕಲೆಯನ್ನು ಕರಗತಮಾಡಿಕೊಂಡಿದ್ದ. ಒಂದು ದಿನ ಲೋಹಗಳನ್ನು ಲಟ್ಟಿಸಲು ಬಳಸುವ ಅಡಿಗಲ್ಲನ್ನು ಹುಡುಕುತ್ತಿದ್ದಾಗ ಅವನಿಗೆ ಅದರೆ ಹೆಸರು ನೆನಪಾಗಲಿಲ್ಲ. ಅವನ ತಂದೆ ಅದನ್ನು ಸ್ಟೇಕ್ ಎಂದ. ಔರೇಲಿಯಾನೊ ಚೂರು ಕಾಗದದಲ್ಲಿ ಸ್ಟೇಕ್ ಎಂದು ಬರೆದು, ಅದನ್ನು ಸಣ್ಣ ಅಡಿಗಲ್ಲಿನ ಬುಡಕ್ಕೆ ಅಂಟಿಸಿದ. ಈ ರೀತಿಯಲ್ಲಿ ಅವನು ಮುಂದೆಂದೂ ಅದರ ಹೆಸರನ್ನು ಮರೆಯುವಂತಿರಲಿಲ್ಲ... ಕೆಲವು ದಿನಗಳ ನಂತರ ಅವನಿಗೆ ಪ್ರಯೋಗಶಾಲೆಯ ಪ್ರತಿಯೊಂದು ವಸ್ತುವನ್ನೂ ನೆನಪಿಸಿಕೊಳ್ಳುವುದು ಕಷ್ಟವೆಂದು ತಿಳಿಯಿತು. ಆಮೇಲೆ ಆ ಎಲ್ಲ ವಸ್ತುಗಳ ಮೇಲೂ ಅವುಗಳ ಹೆಸರುಗಳನ್ನು ಬರೆದು ಅಂಟಿಸಿದ. ಈಗ ಆ ವಸ್ತುಗಳನ್ನು ಗುರುತಿಸಲು ಆ ಚೀಟಿಗಳನ್ನು ಓದಿದರೆ ಸಾಕು. 

ಅವನ ತಂದೆ ತನ್ನ ಬಾಲ್ಯಕಾಲದ ಪ್ರತಿಯೊಂದು ಘಟನೆಯನ್ನೂ ಮರೆತುಬಿಟ್ಟಿರುವುದಾಗಿ ಹೇಳಿದಾಗ ಔರೇಲಿಯಾನೊ ಅವನಿಗೆ ತನ್ನ

ವಿಧಾನವನ್ನು ವಿವರಿಸಿದ. ಹೋಸೆ ಅರ್ಕಾದಿಯೊ ಬುಯೆಂದಿಯಾ ಇಡೀ ಮನೆಯಲ್ಲಿ ಆ ವಿಧಾನವನ್ನು ಬಳಕೆಗೆ ತಂದುದಲ್ಲದೆ, ಅದನ್ನು ಇಡೀ ಊರಿನ ಮೇಲೂ ಹೇರಿದ. ಒಂದು ಕುಂಚದಿಂದ ಅವನು ಪ್ರತಿಯೊಂದು ವಸ್ತುವಿನ ಮೇಲೂ ಆಯಾ ಹೆಸರುಗಳನ್ನು ಬರೆದ: ಮೇಜು, ಕುರ್ಚಿ, ಗಡಿಯಾರ, ಬಾಗಿಲು, ಗೋಡೆ, ಹಾಸಿಗೆ, ಕಾವಲಿ, ಕೊಟ್ಟಿಗೆ, ಹೀಗೆ. ಜಾನುವಾರುಗಳ ಹಾಗೂ ಸಸ್ಯಗಳ ಹೆಸರುಗಳನ್ನೂ ಬರೆದ: ಹಸು, ಮೇಕೆ, ಕೋಳಿ, ಮರಗೆಣಸು, ಕಲಾಡಿಯಮ್, ಬಾಳೆ, ಇತ್ಯಾದಿ. ಮರೆವಿನ ಅಪಾರ ಸಾಧ್ಯತೆಗಳನ್ನು ಅಭ್ಯಾಸಮಾಡುತ್ತ ಅವನು ಚೀಟಿಗಳ ಮೂಲಕ ಮಾತ್ರ ವಸ್ತುಗಳ ಹೆಸರುಗಳನ್ನು ಗುರುತಿಸುವಂಥ ದಿನ ಬರಬಹುದೆಂದೂ ಆಗ ಯಾರಿಗೂ ಆ ವಸ್ತುಗಳ ಉಪಯೋಗ ಏನೆಂದು ತಿಳಿಯಲಾರದೆಂದೂ ಅರಿತುಕೊಂಡ. ಆಮೇಲೆ ಇನ್ನಷ್ಟು
ಸ್ಪಷ್ಟವಾಗಿ ವಿವರಗಳನ್ನು ಬರೆಯತೊಡಗಿದ.

ಹಸುವಿನ ಕೊರಳಿಗೆ ಕಟ್ಟಿದ ಈ ಸೂಚನೆಗಳು ಮಕಾಂಡೋದ ನಿವಾಸಿಗಳು ಮರೆವಿನ ವಿರುದ್ಧ ಹೋರಾಡಲು ಸಿದ್ಧರಾದ ರೀತಿಗೆ ನಿಜಕ್ಕೂ ಒಂದು ಅತ್ಯುತ್ತಮ ನಿದರ್ಶನ: ಇದು ಹಸು. ಪ್ರತಿದಿನ ಬೆಳಗ್ಗೆ ಇದರ ಹಾಲು ಕರೆಯಬೇಕು. ಅಂದರೆ ಇದು ಹಾಲು ಕೊಡುತ್ತದೆ. ಹಾಲನ್ನು ಕಾಫಿಗೆ ಬೆರೆಸುವುದಕ್ಕಾಗಿ ಕಾಯಿಸಬೇಕು. ಹೀಗೆ ಅವರು ಬೇಗಬೇಗನೆ ನುಣುಸಿಕೊಳ್ಳುತ್ತಿದ್ದ ವಾಸ್ತವಲೋಕದಲ್ಲಿ ಬದುಕತೊಡಗಿದರು. ಆ ವಾಸ್ತವಲೋಕ ಕೆಲವು ಕ್ಷಣಗಳವರೆಗಾದರೂ ಪದಗಳಲ್ಲಿ ಉಳಿದಿರುತ್ತಿತ್ತೆನ್ನಿ. ಆದರೂ ಅವರು ಬರವಣಿಗೆಯ ಬೆಲೆಯನ್ನೇ ಮರೆತುಹೋದ ಮೇಲೆ ಏನು ಪ್ರಯೋಜನ?

ಈ ಕೃತಿಯಲ್ಲಿ ವಾಸ್ತವ ಮತ್ತು ಅದ್ಭುತಗಳು ನಮ್ಮ ಅರಿವಿಗೇ ಬಾರದ ರೀತಿಯಲ್ಲಿ ಒಂದರೊಳಗೊಂದು ಹಾಸುಹೊಕ್ಕಾಗಿವೆ. ಮೊದಲು ಒಂದು ಕುಟುಂಬ, ನಂತರ ಪುರಾಣ ಕತೆಗಳಿಂದ ತುಂಬಿದ ಅರಾಕಾಟಕ ಎಂಬ ಪುಟ್ಟ ಊರು, ಮೂರನೆಯ ಹಂತದಲ್ಲಿ ಇಡೀ ಕೊಲಂಬಿಯ ದೇಶ, ನಾಲ್ಕನೆಯದಾಗಿ ಇಡೀ ಲ್ಯಾಟಿನ್ ಅಮೆರಿಕ, ಕಡೆಗೆ ಮನುಕುಲದ ಚರಿತ್ರೆ – ಹೀಗೆ ಕಾದಂಬರಿಯ ಭಿತ್ತಿ ತುಂಬ ವಿಶಾಲವಾದದ್ದು. ಒಂದು ಜನಸಮುದಾಯಕ್ಕೇ ಮರೆವಿನ ರೋಗ ತಗಲುವುದು, ಬುಯೆಂದಿಯಾ ಎಂಬ ಪೂರ್ವಜ ನೂರಾರು ವರ್ಷ ಬದುಕುವುದು, ರೆಮಿಡಿಯೋಸ್ ಎಂಬ ಸುಂದರಿ ಆಕಾಶಕ್ಕೆ ಹಾರಿಕೊಂಡು ಹೋಗುವುದು, ಜಗಳದಿಂದಾಗಿ ಸಾಯುವವನೊಬ್ಬನ ರಕ್ತ ಊರನ್ನೆಲ್ಲ ಸುತ್ತಿ ಕಡೆಗೆ ಅವನ ತಾಯಿಯಿರುವ ಮನೆಗೆ ಬರುವುದು, ಅಸಂಬದ್ಧ ಸಾಹಸಗಳು, ಅಲೌಕಿಕ ಎನ್ನಬಹುದಾದ ಘಟನೆಗಳು, ಇವೆಲ್ಲವನ್ನೂ ಓದುವ ನಮಗೆ ನಾವೊಂದು ಅದ್ಭುತಲೋಕದಲ್ಲಿ ಸುತ್ತಾಡಿದ ಅನುಭವವಾಗುತ್ತದೆ.

ಮಾರ್‌ಕೆಸ್ ನೊಬೆಲ್ ಬಹುಮಾನ ಪಡೆದ ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ತನ್ನ ಖಂಡದ ಕೆಲವು ವಿಚಿತ್ರ ಸಂಗತಿಗಳನ್ನು ಪಟ್ಟಿಮಾಡುತ್ತಾನೆ. ಅವುಗಳಲ್ಲಿ ಕೆಲವು:

1. ಪಟಗೋನಿಯಾದಲ್ಲಿ ಮೂಲ ನಿವಾಸಿಯೊಬ್ಬ ಮೊಟ್ಟ ಮೊದಲ ಬಾರಿಗೆ ಕನ್ನಡಿಯಲ್ಲಿ ತನ್ನ ಸ್ವರೂಪವನ್ನು ಕಂಡದ್ದೇ ಭಯಭೀತನಾಗಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ.

2. ಚಿನ್ನದ ನಾಡೆಂದು ಹೆಸರಾದ ಎಲ್‌ದೊರಾದೊ ಎಂಬ ಭ್ರಾಮಕ ಜಗತ್ತು ಎಷ್ಟೋ ವರ್ಷಗಳವರೆಗೆ ನೂರಾರು ಭೂಪಟಗಳಲ್ಲಿ ಕಾಣಿಸಿಕೊಂಡದ್ದುಂಟು. ಭೂಪಟ ಬರೆಯುವವರು ತಮ್ಮ ತಮ್ಮ ಕಲ್ಪನಾ ಶಕ್ತಿಗೆ ಅನುಗುಣವಾಗಿ ಅದನ್ನು ಸ್ಥಳದಿಂದ ಸ್ಥಳಕ್ಕೆ ವರ್ಗಾಯಿಸಿದರು.

3. ಮೆಕ್ಸಿಕೋದಲ್ಲಿ ಮೂರು ಬಾರಿ ಸರ್ವಾಧಿಕಾರಿಯಾಗಿದ್ದ ಜನರಲ್ ಆಂತೋನಿಯೊ ಲೊಪೆಜ್ ದಿ ಸಂತಾನಾ ಯುದ್ಧದಲ್ಲಿ ಕಳೆದುಕೊಂಡ ತನ್ನ ಬಲಗಾಲಿಗಾಗಿ ಇಡೀ ದೇಶವೇ ಹಿಂದೆಂದೂ ಕಂಡರಿಯದಂಥ ವೈಭವೋಪೇತ ಅಂತಿಮಯಾತ್ರೆಯೊಂದನ್ನು ಏರ್ಪಡಿಸಿದ. 
ಮಾರ್‌ಕೆಸ್‌ನ ಪ್ರಕಾರ ಇಂಥ ವಿಚಿತ್ರ, ವಿಲಕ್ಷಣ, ಭ್ರಾಮಕ ವಾಸ್ತವಗಳು ಸೃಜನಶೀಲ ಲೇಖಕರಿಂದ ಬಯಸುವುದು ಕಿಂಚಿತ್ ಕಲ್ಪನೆಯನ್ನಷ್ಟೆ. ಉಳಿದದ್ದೆಲ್ಲ ತನ್ನ ವಸ್ತುಸ್ಥಿತಿಯಿಂದಲೇ ಮಾಂತ್ರಿಕ ವಾಸ್ತವವನ್ನು ಧ್ವನಿಸುತ್ತವೆ.

ಮಾರ್‌ಕೆಸ್ ಪ್ರಭಾವಿತನಾಗಿರುವುದು ಒಂದು ದಿಕ್ಕಿನಲ್ಲಿ ಫ್ರಾಂಝ್ ಕಾಫ್ಕನಂಥವರಿಂದ; ಇನ್ನೊಂದು ದಿಕ್ಕಿನಲ್ಲಿ ಅಮೆರಿಕದ ಮಹಾ ಲೇಖಕ ವಿಲಿಯಂ ಫಾಕ್ನರನಿಂದ. ಅವನಿಗೆ ಕಾಫ್ಕ ವಾಸ್ತವದ ಬೇರೆ ಬೇರೆ ಮಗ್ಗುಲುಗಳನ್ನು ತೋರಿಸಿಕೊಟ್ಟರೆ ಫಾಕ್ನರ್ ಅನುಭವವನ್ನು ಆಕೃತಿಯನ್ನಾಗಿ ಪಡಿಮೂಡಿಸುವ ವಿಧಾನವನ್ನು ಕಲಿಸಿದ.

ಒಮ್ಮೆ ಮಿತ್ರನೊಬ್ಬ ಕೊಟ್ಟ ಕಾಫ್ಕನ ‘ಮೆಟಮಾರ್ಫಸಿಸ್’ (ರೂಪಾಂತರ) ಎಂಬ ಕತೆಯನ್ನು ಓದಿದಾಗ ಮಾರ್‌ಕೆಸ್‌ಗೆ ಇದನ್ನು ಸಾಹಿತ್ಯ ಎಂದು ಕರೆಯುವುದಾದರೆ ನಿಜಕ್ಕೂ ಇದನ್ನು ಬರೆಯಲೇಬೇಕು ಎನ್ನಿಸಿತಂತೆ. ಆಮೇಲೆ ಅವನು ಬರೆದದ್ದು ಕೆಲವು ಕತೆಗಳನ್ನು, ಕಿರು ಕಾದಂಬರಿಗಳನ್ನು. ಒಂದೆಡೆ ತನ್ನ ಬರವಣಿಗೆಯ ಧಾಟಿಯ ಬಗ್ಗೆ ಬರೆಯುತ್ತ ಅವನು, ‘ಅದು ತನ್ನ ಅಜ್ಜಿ ಕತೆಗಳನ್ನು ಹೇಗೆ ಹೇಳುತ್ತಿದ್ದಳೆಂಬುದನ್ನು ನೆನಪಿಸಿಕೊಂಡದ್ದರ ಫಲ’ ಎಂದಿದ್ದಾನೆ. ಆಕೆ ಲೌಕಿಕ, ಅಲೌಕಿಕ, ಅಸಂಗತ, ವಿಲಕ್ಷಣ ಸಂಗತಿಗಳನ್ನು ಎಷ್ಟು ಸ್ವಾಭಾವಿಕವಾಗಿ ಹೇಳುತ್ತಿದ್ದಳೆಂದರೆ, ಆ ಎಲ್ಲ ಸಂಗತಿಗಳೂ ನಿಜವೆಂದೇ ಭಾಸವಾಗುತಿದ್ದವು. 

‘ಒಂದು ನೂರು ವರ್ಷಗಳ ಏಕಾಂತ’ದ ಮೂಲ ಸ್ಪ್ಯಾನಿಷ್ ಆವೃತ್ತಿ ಪ್ರಕಟವಾದದ್ದು 1967ರಲ್ಲಿ, ಅರ್ಜೆಂಟೀನಾದಲ್ಲಿ. ಆಮೇಲೆ ಈ ಕೃತಿಯೂ ಇದರ ಲೇಖಕನೂ ಬಹುಬೇಗ ದಂತಕತೆಯಾದದ್ದುಂಟು. ಸ್ಪ್ಯಾನಿಷ್ ಭಾಷೆಯೊಂದರಲ್ಲೇ ಈ ಕೃತಿಯ 40 ಮಿಲಿಯನ್ ಹೆಚ್ಚು ಪ್ರತಿಗಳು ಖರ್ಚಾಗಿವೆಯಂತೆ. ನಂತರ ಒಂದೆರಡು ವರ್ಷಗಳಲ್ಲೇ ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿತು. ಅಮೆರಿಕದಲ್ಲಿ ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರ್ಪಡೆಯಾದ ಏಕೈಕ ಲ್ಯಾಟಿನ್ ಅಮೆರಿನ್ ಕೃತಿ ಇದು. ಮಕಾಂಡೊ ಎಂಬ ನಾಮಪದವೂ ಅದರ ಸೃಷ್ಟಿಕರ್ತನ ಹೆಸರೂ ಅಂತರರಾಷ್ಟ್ರೀಯ ಸಿನಿಮಾಗಳಲ್ಲಿ, ಕಾರ್ಪೊರೇಟ್ ವಲಯಗಳಲ್ಲಿ, ಜನಪ್ರಿಯ ಸಂಸ್ಕೃತಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳತೊಡಗಿದವು. ಕೊಲಂಬಿಯದ ಸಾಂತಾ ಮಾರ್ತ ಎಂಬಲ್ಲಿ ಮೊಕಾಂಡೊ ಎಂಬ ಹೋಟೆಲೊಂದು ಪ್ರಾರಂಭವಾಯಿತು; ನ್ಯೂಯಾರ್ಕಿನ ಮನ್ಹಾಟನ್‌ನಲ್ಲಿ ಮಕಾಂಡೊ ಎಂಬ ಪುಸ್ತಕದಂಗಡಿ ತಲೆಯೆತ್ತಿತು.   

ಇಂಗ್ಲಿಷ್ ಓದುಗರಿಗೆ  ತನ್ಮೂಲಕ ಭಾರತೀಯ ಓದುಗರಿಗೆ ಕೂಡ – ಮಾರ್‌ಕೆಸ್‌ನ ದೈತ್ಯ ಪ್ರತಿಭೆಯನ್ನು ಪರಿಚಯಿಸಿದ ಕೀರ್ತಿ ಅವನ ಅನುವಾದಕರಾದ ಗ್ರಿಗೊರಿ ರಬಾಸನಿಗೂ ಎಡಿತ್ ಗ್ರಾಸ್‌ಮನ್‌ಗೂ ಸಲ್ಲಬೇಕು.

ಗ್ರಿಗೊರಿ ರಬಾಸನನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯುವ ಅತ್ಯುತ್ತಮ ಲ್ಯಾಟಿನ್ ಅಮೆರಿಕನ್ ಲೇಖಕ ಎಂದು ಮಾರ್‌ಕೆಸನೇ ಒಮ್ಮೆ ಪ್ರಶಂಸಿಸಿದ್ದುಂಟು.  

1980ರಲ್ಲಿ ಲೆಬನಾನಿನಲ್ಲಿ ‘ಒಂದು ನೂರು ವರ್ಷಗಳ ಏಕಾಂತ’ದ ಅರಾಬಿಕ್ ಭಾಷಾಂತರ ಪ್ರಕಟವಾಯಿತು. ಅದನ್ನು ಓದಿದ ವಿಮರ್ಶಕ ಅಬ್ದುಲ್‌ಕಾದರ್ ರಬಿಯಾ– ‘ಅರಾಬಿಕ್ ಭಾಷೆಯಲ್ಲಿ ಈ ಕಾದಂಬರಿಯ ಪುಟಗಳನ್ನು ತೆರೆಯುವುದೆಂದರೆ ಒಂದು ಮನಮೋಹಕ ಜಗತ್ತನ್ನು ಕಂಡುಹಿಡಿದಂತೆ; ಅರಾಬಿಕ್ ಭಾಷೆಯ ಓದುಗನಿಗೆ ಅರೇಬಿಯನ್ ನೈಟ್ಸ್ ಎಂಬ ಅತ್ಯದ್ಭುತ ಲೋಕಾನುಭವವನ್ನು ಮತ್ತೆ ಅನುಭವಿಸಿದಂತೆ’ ಎಂದು ಬರೆದ. ಹೌದು, ಈ ಕಾದಂಬರಿಯಲ್ಲದೆ ಮಾರ್‌ಕೆಸ್‌ನ ಇತರ ಕೃತಿಗಳು ಕೂಡ ‘ಅರೇಬಿಯನ್ ನೈಟ್ಸ್‌’ನ ಷಹಜಾದೆಯ ಕತೆಗಳಂತೆ ಮನಮೋಹಕವಾಗಿವೆ.

ಕನ್ನಡದಲ್ಲಿ ಯಶವಂತ ಚಿತ್ತಾಲರಲ್ಲಿ (ಮುಖ್ಯವಾಗಿ ಅವರು ಪಾತ್ರಗಳ ಮನೋಲೋಕಕ್ಕೆ ಲಗ್ಗೆಯಿಡದಂಥ ಸಂದರ್ಭಗಳಲ್ಲಿ), ಪೂರ್ಣಚಂದ್ರ ತೇಜಸ್ವಿಯವರಲ್ಲಿ, ಕುಂವೀ ಅವರಲ್ಲಿ, ಜಯಂತ ಕಾಯ್ಕಿಣಿಯಲ್ಲಿ, ಅಬ್ದುಲ್ ರಶೀದರಲ್ಲಿ ಮಾರ್‌ಕೆಸ್‌ನ ಸೆಳಕುಗಳನ್ನು ಕಂಡು ನಾನಂತೂ ತುಂಬ ಸಂತೋಷಪಟ್ಟಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT