ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಾದಿನವೇ ತಟ್ಟಿದ ಮುಷ್ಕರದ ಬಿಸಿ

ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರ ಬಿಗಿಪಟ್ಟು: ಡಿಪೊಗಳಲ್ಲೇ ಉಳಿದ ಬಸ್‌ಗಳು, ಪ್ರಯಾಣಿಕರ ಪರದಾಟ
Last Updated 24 ಜುಲೈ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆಲವು ಬಿಎಂಟಿಸಿ ಡಿಪೊಗಳಲ್ಲಿ ಭಾನುವಾರವೇ  ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ.  ಕೆಲವು ಡಿಪೊಗಳಿಂದ ಹೊರಡುವ  ಬಸ್‌ಗಳು ದಿಢೀರ್‌ ಸಂಚಾರ ಸ್ಥಗಿತಗೊಳಿಸಿದ್ದರಿಂದ ನಗರದಲ್ಲಿ ಪ್ರಯಾಣಿಕರಿಗೆ ಒಂದು ದಿನ ಮುನ್ನವೇ   ಮುಷ್ಕರದ ಬಿಸಿ ತಟ್ಟಿತು. 
ಮೆಜೆಸ್ಟಿಕ್ ಬಸ್‌ನಿಲ್ದಾಣದಲ್ಲಂತೂ ರಾತ್ರಿ 8 ಗಂಟೆ ಸುಮಾರಿಗೆ ಬಸ್‌ಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. 

‘ರಾತ್ರಿ 8 ಗಂಟೆಗೆ ಕರ್ತವ್ಯದ ಪಾಳಿ ಬದಲಾಗುತ್ತದೆ. ಇದಕ್ಕೆ ಹಾಜರಾದರೆ ಸೋಮವಾರವೂ ಕೆಲಸ ಮುಂದುವರಿಸುವಂತೆ ಅಧಿಕಾರಿಗಳು ಅವರ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ  ಚಾಲಕರು ಹಾಗೂ ನಿರ್ವಾಹಕರು ಭಾನುವಾರವೇ ಕೆಲಸಕ್ಕೆ ಹಾಜರಾಗಿಲ್ಲ’ ಎಂದು ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಬೆಳಿಗ್ಗೆಯಿಂದಲೇ ಬಸ್ ಇಲ್ಲ:  ಸಾಮಾನ್ಯ ಪಾಳಿಯ ನೌಕರರ ಗೈರು ಹಾಜರಿಯಿಂದಾಗಿ ಹುಸ್ಕೂರು ಗೇಟ್‌ 38ನೇ ಡಿಪೊ, ಎಲೆಕ್ಟ್ರಾನಿಕ್‌ ಸಿಟಿಯ 19ನೇ ಡಿಪೊ, ಚಂದಾಪುರದ 32ನೇ ಡಿಪೊ ಹಾಗೂ ಕೆಂಗೇರಿಯ 12ನೇ ಡಿಪೊಗಳಿಂದ ಹೊರಡಬೇಕಾದ ಬಹುತೇಕ ಬಸ್‌ಗಳು ಬೆಳಿಗ್ಗೆಯಿಂದಲೇ ಸಂಚಾರ ಸ್ಥಗಿತಗೊಳಿಸಿದ್ದವು.

ನಗರದ ಹೆಚ್ಚಿನ ಡಿಪೊಗಳಲ್ಲಿ ಮಧ್ಯಾಹ್ನದ ಪಾಳಿಯ ನೌಕರರ ಹಾಜರಾತಿಯೂ ಎಂದಿಗಿಂತ ಕಡಿಮೆ ಇತ್ತು. ಹಾಗಾಗಿ ಸಂಜೆ ವೇಳೆ ನಗರದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರವೂ ಗಣನೀಯವಾಗಿ ಕಡಿಮೆ ಇತ್ತು. ಮೆಜೆಸ್ಟಿಕ್‌ನಿಂದ ಹೊರಟ ಹೆಚ್ಚಿನ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದವು. ಕೆಲವು ಬಸ್‌ಗಳಲ್ಲಿ  ಪ್ರಯಾಣಿಕರು ನಿಲ್ಲುವುದಕ್ಕೂ ಜಾಗ ಇರಲಿಲ್ಲ. ಕೆಲವರು ಫುಟ್‌ಬೋರ್ಡ್‌ನಲ್ಲಿ  ನೇತಾಡಿಕೊಂಡೇ ಪ್ರಯಾಣಿಸಿದರು.

ಪ್ರಯಾಣಿಕರು ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ತಾಸುಗಟ್ಟಲೆ ಕಾದರು.  ನಗರದ ಇತರ ಬಸ್‌ನಿಲ್ದಾಣಗಳಲ್ಲೂ   ಮಧ್ಯಾಹ್ನದ ಬಳಿಕ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಂಗಳೂರಿನಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಹಾಗೂ ಹೊರರಾಜ್ಯಗಳಿಗೆ ತೆರಳುವ ಬಸ್‌ಗಳು ರಾತ್ರಿ 10 ಗಂಟೆವರೆಗೆ ಎಂದಿನಂತೆಯೇ ಸಂಚರಿಸಿದವು. ಕೆಲವು ಬಿಎಂಟಿಸಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ   ದೂರದ ಊರುಗಳಗೆ ಪ್ರಯಾಣಿಸಬೇಕಾದವರು ಸಮಸ್ಯೆ ಎದುರಿಸಬೇಕಾಯಿತು. ಮೆಜೆಸ್ಟಿಕ್‌, ಮೈಸೂರು ರಸ್ತೆ ಹಾಗೂ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ತಲುಪಲು ಪ್ರಯಾಣಿಕರು ಪರದಾಡಿದರು. ಕೆಲವರು ಅನಿವಾರ್ಯವಾಗಿ ಆಟೊರಿಕ್ಷಾ ಹಾಗೂ ಟ್ಯಾಕ್ಸಿಗಳ ಮೊರೆ ಹೋಗಬೇಕಾಯಿತು.

ಮೆಟ್ರೊಗೆ ಮೊರೆ:  ಮೆಜೆಸ್ಟಿಕ್‌ ಬಸ್‌ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆಯೂ ಕಡಿಮೆ  ಇದ್ದುದರಿಂದ ಪ್ರಯಾಣಕರು ಮೆಟ್ರೊ ರೈಲಿನ ಮೊರೆ ಹೋದರು.  ಸಂಜೆ ವೇಳೆ ಮೆಜೆಸ್ಟಿಕ್‌ ಮೆಟ್ರೊ ರೈಲು ನಿಲ್ದಾಣ  ಪ್ರಯಾಣಿಕರಿಂದ ಗಿಜಿಗುಡುತ್ತಿತ್ತು.  ಪ್ರಯಾಣಿಕರನ್ನು ನಿಯಂತ್ರಿಸಲು ಸಿಬ್ಬಂದಿ ಪರದಾಡಿದರು. ರಾತ್ರಿ 7 ಗಂಟೆ ಸುಮಾರಿಗೆ ಮೆಜೆಸ್ಟಿಕ್‌ ಮೆಟ್ರೊ ನಿಲ್ದಾಣದ ಹೊರಗೂ ಪ್ರಯಾಣಿಕರು  ಸಾಲುಗಟ್ಟಿ ನಿಂತಿದ್ದರು.  

ಪಟ್ಟು ಬಿಡದ ಕಾರ್ಮಿಕ ಸಂಘಟನೆಗಳು:  ಮುಷ್ಕರ ನಡೆಸುವ ಬಗ್ಗೆ 2015ರ ನವೆಂಬರ್‌ನಲ್ಲೇ ಸರ್ಕಾರಕ್ಕೆ ತಿಳಿಸಿದ್ದೆವು. ನಮ್ಮ 44 ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಇದುವರೆಗೂ ಯಾವ  ಪ್ರಯತ್ನವನ್ನೂ ನಡೆಸಿಲ್ಲ. ಮಾತುಕತೆಗೂ ಸರ್ಕಾರ ಸಿದ್ಧವಿಲ್ಲ. ಹಾಗಾಗಿ ಸೋಮವಾರದಿಂದ ನಡೆಯುವ ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾಸಮಿತಿ ಸ್ಪಷ್ಟ ಪಡಿಸಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಯಾಸಮಿತಿಯ ಸಂಚಾಲಕರಾದ ಕೆಎಸ್‌ಆರ್‌ಟಿಸಿ ಸಿಬ್ಬಂದಿ  ಮತ್ತು ನೌಕರರ ಒಕ್ಕೂಟದ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್‌,  ‘ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಸಾರಿಗೆ ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ 23 ಸಾವಿರಕ್ಕೂ ಅಧಿಕ ಸರ್ಕಾರಿ ಬಸ್‌ಗಳು ಸಂಚರಿಸುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವೇ? ಸರ್ಕಾರ ಜನರ ದಾರಿ ತಪ್‍ಪಿಸುವ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.

‘ವೇತನದಲ್ಲಿ ಶೇಕಡ 35ರಷ್ಟು ಹೆಚ್ಚಳ ಮಾಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ. ಇದಕ್ಕೆ ಒಪ್ಪಿದರೆ, ಇನ್ನುಳಿದ ಬೇಡಿಕೆಗಳನ್ನು  ಚರ್ಚೆ ಮೂಲಕ ಬಗೆಹರಿಸಿಕೊಳ್ಳಬಹುದು. ಸರ್ಕಾರ ಕೇವಲ ಶೇಕಡ 10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳುತ್ತಿದೆ. ಇದರಿಂದ ನೌಕರರ ಮಾಸಿಕ ವೇತನ ಸರಾಸರಿ  ₹ 2,500ರಷ್ಟು ಮಾತ್ರ ಹೆಚ್ಚಾಗುತ್ತದೆ. ದಿನದಲ್ಲಿ ಸರಾಸರಿ 12ರಿಂದ 16 ತಾಸು ಕೆಲಸ ಮಾಡುವ ನೌಕರರ ಪರಿಶ್ರಮಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ. ನೌಕರರಿಗೆ ಒಪ್ಪಿಗೆಯಾಗುವಷ್ಟು ವೇತನ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದರೆ ಒಪ್ಪಬಹುದು’ ಎಂದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಅಧ್ಯಕ್ಷ ಕೆ.ಎಸ್‌.ಶರ್ಮ ಮಾತನಾಡಿ, ‘ಸಂಸ್ಥೆ ನಷ್ಟದಲ್ಲಿದೆ ಎಂದು ಸಾರಿಗೆ ಸಚಿವರು ಹೇಳುತ್ತಿದ್ದಾರೆ. ಇದಕ್ಕೆ ನೌಕರರು ಕಾರಣರಲ್ಲ. ಸೋರಿಕೆ ತಡೆಗಟ್ಟುವ ಬದಲು, ಇಂಧನ ಬಳಕೆ ಹೆಚ್ಚಾಗಿದೆ ಎಂದು, ನಿಗದಿತ ಆದಾಯ ಬಂದಿಲ್ಲ ಎಂಬೆಲ್ಲ ನೆಪ ಹೇಳಿ  ನೌಕರರ ವೇತನದಿಂದ ಶೇ 10ರಿಂದ 20ರಷ್ಟು ಮೊತ್ತವನ್ನು  ಮುರಿದುಕೊಳ್ಳಲಾಗುತ್ತಿದೆ. ಸಂಸ್ಥೆಯಲ್ಲಿ ನೌಕರರ ಮೇಲೆ ನಾನಾ ರೀತಿಯ ದಬ್ಬಾಳಿಕೆಗಳು ನಡೆಯುತ್ತಿವೆ. ಇವೆಲ್ಲವೂ ನಿಲ್ಲಬೇಕು’ ಎಂದು ಒತ್ತಾಯಿಸಿದರು.

ಮಂಡಳಿಯ ಉಪಾಧ್ಯಕ್ಷ ಜಯದೇವ ರಾಜೇ ಅರಸ್‌ ಮಾತನಾಡಿ, ‘1994ರಿಂದ 2012ರವರೆಗೆ ರಾಜ್ಯ ಸರ್ಕಾರಿ ನೌಕರರ ವೇತನವನ್ನು ನಾಲ್ಕು ಬಾರಿ ಹೆಚ್ಚಳ ಮಾಡಲಾಗಿದ್ದು,  ವೇತನದಲ್ಲಿ ಒಟ್ಟು   ಶೇ 79ರಷ್ಟು ಹೆಚ್ಚಳ ಆಗಿದೆ. ನಮ್ಮ ವೇತನವನ್ನು ಆರು ಬಾರಿ ಹೆಚ್ಚಳ ಮಾಡಲಾಗಿದ್ದರೂ, ಕೇವಲ ಶೇಕಡ 52ರಷ್ಟು ಹೆಚ್ಚಳ ಆಗಿದೆ. ಈ ಬಾರಿ ಶೇ 10ರಷ್ಟು ವೇತನ ಹೆಚ್ಚಿಸಿದರೂ  ನಮಗೂ ಅವರಿಗೂ ವೇತನದಲ್ಲಿ ಶೇ 19ರಷ್ಟು ವ್ಯತ್ಯಾಸ ಇರಲಿದೆ’  ಎಂದರು.

ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ಪದಾಧಿಕಾರಿಗಳು  (ಸಿಐಟಿಯು ಬೆಂಬಲಿತ)  ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌. ಮಂಜುನಾಥ್‌ ಮಾತನಾಡಿ, ‘ನಾವು 52 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು. ಪ್ರಮುಖ ಬೇಡಿಕೆಯಾದ ವೇತನ ಹೆಚ್ಚಳದ ಬಗ್ಗೆ ಸರ್ಕಾರ ನಡೆದುಕೊಂಡ ರೀತಿ ಬೇಸರ ತರಿಸಿದೆ. ಆಂಧ್ರಪ್ರದೇಶದಲ್ಲಿ ನಮ್ಮಲ್ಲಿಗಿಂತ ಶೇ 25ರಷ್ಟು ಹೆಚ್ಚು ವೇತನ ಸಿಗುತ್ತಿದೆ’ ಎಂದರು.

ಬೆಂಗಳೂರು ವಿ.ವಿ. ಪರೀಕ್ಷೆ ಮುಂದಕ್ಕೆ
ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದಾಗಿ ಸೋಮವಾರ ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ.  ‘ಇದೇ 26ರಂದು ನಡೆಯಬೇಕಿರುವ ಪರೀಕ್ಷೆಗಳ ಮುಂದೂಡಿಕೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಕುರಿತು ಸೋಮವಾರ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಮುಂದೂಡಿದ ಪರೀಕ್ಷೆಗಳ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು  ಕುಲಸಚಿವ (ಮೌಲ್ಯಮಾಪನ)  ಪ್ರೊ.ಸುರೇಶ್ ನಾಡಗೌಡರ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳಿಗೆ 2 ದಿನ ರಜೆ
‘ಬೆಂಗಳೂರು ನಗರದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ಸೋಮವಾರ ಹಾಗೂ ಮಂಗಳವಾರ ರಜೆ ಘೋಷಿಸಲಾಗಿದೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಕೇಂದ್ರೀಯ ವಿದ್ಯಾಲಯಗಳಿಗೂ  ರಜೆ ನೀಡಲಾಗಿದೆ. ಸೋಮವಾರ ಹಾಗೂ ಮಂಗಳವಾರ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

* ಮುಷ್ಕರ ಬೆಂಬಲಿಸುವುದಿಲ್ಲ ಎಂದು ಹೇಳಿರುವ ಸಂಘಟನೆ ಮುಷ್ಕರಕ್ಕೆ ಕರೆ ಕೊಟ್ಟಿಲ್ಲ. ಸೋಮವಾರ­ದಿಂದ  ಸರ್ಕಾರಿ ಬಸ್‌ ರಸ್ತೆಗಿಳಿಯುವುದಿಲ್ಲ

ಎಚ್‌.ವಿ.ಅನಂತ ಸುಬ್ಬರಾವ್‌, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾಸಮಿತಿ ಸಂಚಾಲಕ

* ₹17 ಕೋಟಿ ಸಿಬ್ಬಂದಿ ಮುಷ್ಕರದಿಂದಾಗಿ ದಿನವೊಂದಕ್ಕೆ ನಾಲ್ಕು ನಿಗಮಗಳಿಗೆ ಆಗುವ ನಷ್ಟ

ಯಾರ ಬೆಂಬಲ
* ಕೆಎಸ್‌ಆರ್‌ಟಿಸಿ ಸಿಬ್ಬಂದಿ  ಮತ್ತು ನೌಕರರ ಒಕ್ಕೂಟ (ಎಐಟಿಯುಸಿ ಬೆಂಬಲಿತ)

* ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ
* ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ  (ಐಎನ್‌ಟಿಯುಸಿ)
* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ
* ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ

ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಹಲ್ಲೆಗೆ ಯತ್ನ 
ಬೆಂಗಳೂರು: ರಾಜ್ಯದಾದ್ಯಂತ ಜುಲೈ 25ರಂದು ‘ಬಸ್‌ ಬಂದ್‌’ಗೆ ಕರೆ ನೀಡಿದ್ದು, ಅದರ ಮುನ್ನಾದಿನವಾದ ಭಾನುವಾರ ಕರ್ತವ್ಯಕ್ಕೆ ಹೋಗುತ್ತಿದ್ದ ಚಾಲಕನ ಮೇಲೆ ಸಂಘಟನೆಯೊಂದರ ಸದಸ್ಯರು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

‘ಚಿಕ್ಕಮಗಳೂರಿಗೆ ಹೋಗುತ್ತಿದ್ದ ವೇಳೆ ಬಸ್‌ ತಡೆದ ಕೆಲವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ ಕೆಎಸ್‌ಆರ್‌ಟಿಸಿ ಚಾಲಕ ಮೂಡಲಯ್ಯ ಎಂಬುವರು ಸಂಪಂಗಿರಾಮನಗರ ಠಾಣೆಗೆ ದೂರು ನೀಡಿದ್ದಾರೆ.

‘ಮೂರನೇ ಡಿಪೊದಲ್ಲಿ ಸೇವೆ ಸಲ್ಲಿಸುತ್ತಿರುವ ಮೂಡಲಯ್ಯ, ಹಲವು ತಿಂಗಳಿನಿಂದ ಚಿಕ್ಕಮಗಳೂರು ಮಾರ್ಗದ ಬಸ್‌ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ನೀಡಿದ ದೂರಿನಡಿ ಪ್ರಕರಣ ದಾಖಲಿಸಿಕೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

‘ಸಂಜೆ 6ರ ಸುಮಾರಿಗೆ    ಮೂಡಲಯ್ಯ,  ಶಾಂತಿನಗರ ನಿಲ್ದಾಣದಿಂದ ಮೆಜೆಸ್ಟಿಕ್‌ ನಿಲ್ದಾಣದತ್ತ ಹೋಗುತ್ತಿದ್ದರು. ರಿಚ್ಮಂಡ್‌ ವೃತ್ತ ಸಮೀಪ  ಸಂಘಟನೆಯೊಂದರ ಹೆಸರು ಹೇಳಿಕೊಂಡ ನಾಲ್ವರು, ಬಸ್‌ ತಡೆದು ನಿಲ್ಲಿಸಿದ್ದರು. ಈ ವೇಳೆ ಬಸ್ಸಿನಿಂದ ಇಳಿದಿದ್ದ ಮೂಡಲಯ್ಯ, ಅವರ ವರ್ತನೆಯನ್ನು ಪ್ರಶ್ನಿಸಿದ್ದರು. ಆಗ ವಾಗ್ವಾದಕ್ಕಿಳಿದ ಆರೋಪಿಗಳು, ‘ರಾಜ್ಯದಾದ್ಯಂತ ಬಸ್‌ ಬಂದ್ ಇದೆ. ನೀನು ಮಾತ್ರ ಬಸ್‌ ತೆಗೆದುಕೊಂಡು ಹೋಗುತ್ತಿದ್ದೀಯಾ. ಬಸ್‌ ವಾಪಸ್‌ ತೆಗೆದುಕೊಂಡು ಹೋಗಿ ಡಿಪೊದಲ್ಲಿ ನಿಲ್ಲಿಸು’ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಗಲಾಟೆ ಗಮನಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಹೊರಗೆ ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಿಎಂಟಿಸಿ ನಿಲ್ದಾಣಕ್ಕೆ ಖಾಸಗಿ ವಾಹನಗಳು
ಮೆಜೆಸ್ಟಿಕ್‌ ಬಿಎಂಟಿಸಿ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಭಾನುವಾರ ಸಂಜೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ, ನಿಲ್ದಾಣದೊಳಗೆ ಖಾಸಗಿ ವಾಹನಗಳು  ಪ್ರವೇಶಿಸಿದವು.

ಎಲ್ಲ ಬಸ್‌ಗಳನ್ನು ಡಿಪೊದಲ್ಲಿ ನಿಲ್ಲಿಸಿದ್ದರಿಂದ ನಿಲ್ದಾಣ ಖಾಲಿಯಾಗಿತ್ತು. ಇದೇ ವೇಳೆಯಲ್ಲಿ ನಿಲ್ದಾಣದೊಳಗೆ ಹೋದ ಖಾಸಗಿ ಬಸ್‌ಗಳು ಹಾಗೂ ಇತರ ವಾಹನಗಳು,  ನಗರದ ವಿವಿಧೆಡೆ ಹೋಗುತ್ತಿದ್ದ ಪ್ರಯಾಣಿಕರನ್ನು ಕರೆದೊಯ್ದವು. 

‘ಬಿಎಂಟಿಸಿಗಿಂತ ಹೆಚ್ಚಿನ ದರವನ್ನು ಖಾಸಗಿಯವರು ಕೇಳುತ್ತಿದ್ದಾರೆ. ಅನಿವಾರ್ಯವಾಗಿ ಅವರು ಕೇಳಿದಷ್ಟು ಹಣ ನೀಡಿ ಮನೆಗೆ ಹೋಗುತ್ತಿದ್ದೇವೆ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.  

ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲು ನಿರ್ಧಾರ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರ ದಟ್ಟಣೆ ಗಮನಿಸಿ ನಿತ್ಯ ಸಂಚರಿಸುತ್ತಿರುವ ರೈಲುಗಳಿಗೆ ಅಗತ್ಯ ಇರುವಲ್ಲಿ ಹೆಚ್ಚುವರಿ ಬೋಗಿ ಅಳವಡಿಸಲು ನಿರ್ಧರಿಸಲಾಗಿದೆ.

‘ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೆ ನಿಗದಿತ ವೇಳಾಪಟ್ಟಿ ಪ್ರಕಾರ ಪ್ಯಾಸೆಂಜರ್‌ ರೈಲುಗಳು ಸಂಚರಿಸುತ್ತವೆ. ಪ್ರಯಾಣಿಕರ ದಟ್ಟಣೆ ಗಮನಿಸಿ ಒಂದು ಅಥವಾ ಎರಡು ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುವುದು. ಇದಕ್ಕಾಗಿ ಬೋಗಿಗಳನ್ನು ಮೀಸಲಿಡಲಾಗಿದೆ’ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಬೇಡಿಕೆ ಆಧರಿಸಿ ಮೆಟ್ರೊ ಟ್ರಿಪ್‌ ಹೆಚ್ಚಳಕ್ಕೆ ಚಿಂತನೆ
ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಪ್ರಯಾಣಿಕರಿಂದ ಬರುವ ಬೇಡಿಕೆಯನ್ನು ಆಧರಿಸಿ ಮೆಟ್ರೊ ರೈಲುಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು ನಿರ್ಧರಿಸಿದೆ.

‘ಮೆಟ್ರೊ ಸಂಚಾರ ಬೆಳಿಗ್ಗೆ 6 ಗಂಟೆ ಯಿಂದ ಆರಂಭವಾಗಲಿದೆ. ಪ್ರಯಾಣಿಕರಿಂದ ಬೇಡಿಕೆ ಬಂದರೆ ಬೆಳಿಗ್ಗೆ ಮತ್ತು ಸಂಜೆ ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸುತ್ತೇವೆ.  ಅಗತ್ಯಬಿದ್ದರೆ,   ಪ್ರತೀ ಆರು ನಿಮಿಷಕ್ಕೊಂದು  ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ನೇರಳೆ ಮಾರ್ಗದಲ್ಲೂ ರಾತ್ರಿ 11 ಗಂಟೆಯವರೆಗೆ ಪ್ರಯಾಣದ ಅವಧಿಯನ್ನು ವಿಸ್ತರಿಸುತ್ತೇವೆ’ ಎಂದು ನಿಗಮದ ವಕ್ತಾರ ವಸಂತ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ಪ್ರಯಾಣ ಬಸ್‌ ಪ್ರಯಾಣಕ್ಕಿಂತ ಭಿನ್ನ. ನಿಲ್ದಾಣದಲ್ಲಿ ರೈಲು  30 ಸೆಕೆಂಡ್‌ಗಿಂತ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಪ್ರಯಾಣಿಕರು ಸಾಲಿನಲ್ಲಿ ನಿಂತು ರೈಲು ಪ್ರವೇಶಿಸುವ ಮೂಲಕ ಗೊಂದಲಕ್ಕೆ ಅವಕಾಶ ನೀಡಬಾರದು’ ಎಂದು ಅವರು ಮನವಿ ಮಾಡಿಕೊಂಡರು. 

ಬೈಕ್‌ ಸೇವೆ:  ‘ಬೈಯಪ್ಪನಹಳ್ಳಿ ನಿಲ್ದಾಣವೂ ಸೇರಿದಂತೆ ಐದು ನಿಲ್ದಾಣಗಳಲ್ಲಿ ಮೆಟ್ರೊ ಪ್ರಯಾಣಿಕರನ್ನು ಅವರು ಬಯಸಿದ ಸ್ಥಳಕ್ಕೆ ತಲುಪಿಸಲು ಖಾಸಗಿ ಬೈಕ್‌ ಸೇವೆ ಲಭ್ಯವಿದೆ. ಮುಷ್ಕರ ಇರುವ ದಿನಗಳಲ್ಲಿ ಇಲ್ಲಿ 80 ಬೈಕ್‌ಗಳನ್ನು  ಹೆಚ್ಚುವರಿಯಾಗಿ ಪೂರೈಸುವಂತೆ ಬೈಕ್‌ ಸೇವೆ ಒದಗಿಸುವ ವಿಕೆಡ್‌ ರೈಡ್‌ ಸಂಸ್ಥೆಯನ್ನು ಕೋರಿದ್ದೇವೆ’ ಎಂದರು.

‘ಪ್ರತಿಭಟನೆಯಿಂದಾಗಿ ಗೊಂದಲ ಉಂಟಾಗುವುದನ್ನು ತಡೆಯಲು ಮೆಟ್ರೊ ನಿಲ್ದಾಣಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗುವುದು. ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವ ನಿರೀಕ್ಷೆ ಇದೆ. ಹಾಗಾಗಿ ಪ್ರತಿ ನಿಲ್ದಾಣದಲ್ಲಿ ನಿತ್ಯ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಸಹಕರಿಸಲು  ಅಧಿಕಾರಿಗಳನ್ನು  ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ’ ಎಂದು ಅವರು ತಿಳಿಸಿದರು.

3,717 ಪೊಲೀಸರು
‘ಬೆಂಗಳೂರಿನಲ್ಲಿ ನಾಲ್ವರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳ ನೇತೃತ್ವದಲ್ಲಿ ಏಳು ಡಿಸಿಪಿ, 21 ಎಸಿಪಿ, 106 ಇನ್‌ಸ್ಪೆಕ್ಟರ್, 174 ಎಸ್‌ಐ, 368 ಎಎಸ್‍ಐ, 956 ಹೆಡ್‌ ಕಾನ್‌ಸ್ಟೆಬಲ್‌, 1,950 ಕಾನ್‌ಸ್ಟೆಬಲ್‌, 140 ಮಹಿಳಾ ಸಿಬ್ಬಂದಿ ಸೇರಿ 3,717 ಪೊಲೀಸರು ಹಾಗೂ 1 ಸಾವಿರ ಗೃಹರಕ್ಷಕರನ್ನು ಬಂದೋಬಸ್ತ್ ಕೆಲಸಕ್ಕೆ ನಿಯೋಜಿಸಲಾಗಿದೆ. ಅಲ್ಲದೆ, ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ನ 60 ತುಕಡಿಗಳು ಭದ್ರತೆ ಒದಗಿಸಲಿವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್‌.ಎಸ್.ಮೇಘರಿಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT