ಕೆನರಾ ಹೈಸ್ಕೂಲ್ ಕರ್ಣಾಟಕ ಪಂಡಿತ ಮುಳಿಯ ತಿಮ್ಮಪ್ಪಯ್ಯ ಅವರ ‘ಚಂದ್ರಾವಲಿ ವಿಲಾಸಂ’ ಕೃತಿ 1913ರಲ್ಲಿ ಮಂಗಳೂರಿನ ಶಾರದಾ ಛಾಪಖಾನೆಯಲ್ಲಿ ಮುದ್ರಣಗೊಂಡಿತು.

ಅಷ್ಟ ಕಿರೀಟಾಕಾರದ, 100 ಪುಟಗಳ, ಪ್ರಥಮ ಆವೃತ್ತಿಯ ಈ ಕೃತಿಯ ಅಂದಿನ ಕ್ರಯ ಎಂಟು ಆಣೆ. ಈ ಕೃತಿಯನ್ನು ಮುಳಿಯ ಅವರು ತಮಗೆ ಸಹಾಯಹಸ್ತ ಚಾಚಿದ ಮುನಿಸಿಪಲ್ ಕಮಿಷನರ್ ಪಿ. ಭೋಜರಾವ್ ಅವರಿಗೆ ಅರ್ಪಿಸಿದ್ದಾರೆ.

ದಕ್ಷಿಣ ಕನ್ನಡದ ವಿಟ್ಲದ ಸಮೀಪದ ಮುಳಿಯದಲ್ಲಿ ಹುಟ್ಟಿದ (ಮಾರ್ಚ್ 3, 1888) ತಿಮ್ಮಪ್ಪಯ್ಯನವರು 1950ರ ಜ. 6ರಂದು ತಮ್ಮ 62ನೇ ಪ್ರಾಯದಲ್ಲಿ ಹೃದ್ರೋಗದಿಂದ ಮದರಾಸಿನಲ್ಲಿ ತೀರಿಕೊಂಡರು.

1911ರಿಂದ 1914ರವರೆಗೆ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಅವರು, 1914ರಿಂದ 1948ರವರೆಗೆ ಮಂಗಳೂರಿನ ಸೇಂಟ್ ಅಲೋಸಿಯಸ್ ಕಾಲೇಜ್‌ನಲ್ಲಿ ಕನ್ನಡ ಪಂಡಿತರಾಗಿದ್ದು ನಿವೃತ್ತಿ ಹೊಂದಿದರು.

1914–1919ರವರೆಗೆ ‘ಕನ್ನಡ ಕೋಗಿಲೆ’ ಎನ್ನುವ ಮಾಸಪತ್ರಿಕೆ ನಡೆಸಿದ್ದ ಅವರು, 1931ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.

1941ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಪಂಪನ ಸಹಸ್ರ ಸಾಂವತ್ಸರಿಕೋತ್ಸವದ ಪ್ರತಿಷ್ಠಿತ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಪಂಪ ಮಹಾಕವಿಯನ್ನು ಕುರಿತು ಅಧಿಕಾರವಾಣಿಯಿಂದ ನುಡಿಯಬಲ್ಲ ಕೆಲವೇ ವಿದ್ವಾಂಸರಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರು ಅಗ್ರಗಣ್ಯರು. ‘ನಾಡೋಜ ಪಂಪ’ ಅವರ ಪ್ರಸಿದ್ಧ ಕೃತಿ.

ಮುಳಿಯರು ಎಷ್ಟು ಸಾತ್ವಿಕ ವ್ಯಕ್ತಿಗಳಾಗಿದ್ದರು ಎನ್ನುವುದಕ್ಕೆ ಅವರನ್ನು ಕುರಿತು ದಂತಕತೆಗಳು ಹುಟ್ಟಿಕೊಂಡಿವೆ. ಅವರನ್ನು ಅವರ ಸ್ನೇಹಿತರೆಲ್ಲರೂ ‘ಮುಳಿಯ ತಿಮ್ಮಪ್ಪಯ್ಯ’ ಎನ್ನುವುದಕ್ಕೆ ಬದಲು ‘ತಿಮ್ಮಪ್ಪಯ್ಯ ಮುಳಿಯ’ (ತಿಮ್ಮಪ್ಪಯ್ಯ ಕೋಪಿಸಿಕೊಳ್ಳುವುದಿಲ್ಲ.) ಎಂದೇ ಕರೆಯುತ್ತಿದ್ದರಂತೆ.

ಕೊಡಲಿ (ನೀಡಲಿ) ಎನ್ನುವ ಅರ್ಥದಲ್ಲಿ ಆ ಶಬ್ದವು ಕುಠಾರಪ್ರಾಯವಾದ್ದರಿಂದ ‘ಕೊಡಲಿ’ ಎನ್ನುವ ಶಬ್ದವನ್ನೇ ಮುಳಿಯರು ಪ್ರಯೋಗಿಸುತ್ತಿರಲಿಲ್ಲವಂತೆ. ಹಾಗೆಯೇ ಅವರಿಗೆ ವಿಪರೀತ ಕೋಪ ಬಂದಾಗ ‘ದುರ್ಬುದ್ಧಿ’ ಶಬ್ದವನ್ನು ಬಳಸುತ್ತಿದ್ದರಂತೆ. ಅದು ಅವರು ಪ್ರಯೋಗಿಸುತ್ತಿದ್ದ ಅತ್ಯಂತ ಕೆಟ್ಟ ಬೈಗುಳ!
ಮುಳಿಯರು ಒಟ್ಟು 22 ಕೃತಿಗಳನ್ನು ರಚಿಸಿರುತ್ತಾರೆ.

ಅವುಗಳಲ್ಲಿ ‘ಸೂರ್ಯಕಾಂತಿ ಕಲ್ಯಾಣ’ ಎನ್ನುವ ಯಕ್ಷಗಾನ ಕೃತಿಯು ಇನ್ನೂ ಪ್ರಕಟವಾಗಿಲ್ಲ. ‘ಚಂದ್ರಾವಳಿ ವಿಲಾಸ’, ‘ನಡತೆಯ ನಾಡು’, ‘ಸೊಬಗಿನ ಬಳ್ಳಿ’, ‘ಬಡ ಹುಡುಗಿ’, ‘ಪ್ರೇಮಪಾಶ’, ‘ಹಗಲಿರುಳು’, ‘ಪಶ್ಚಾತ್ತಾಪ’, ‘ಆದಿಪುರಾಣ ಸಂಗ್ರಹ’, ‘ನವನೀತ ರಾಮಾಯಣ’, ‘ನಾಡೋಜ ಪಂಪ’, ‘ಕವಿರಾಜಮಾರ್ಗ ವಿವೇಕ – ಎರಡು ಭಾಗಗಳು’, ‘ಕನ್ನಡ ನಾಡೂ ದೇಸಿ ಸಾಹಿತ್ಯವೂ’– ಇವು ಅವರ ಕೆಲವು ಕೃತಿಗಳು.

ಪ್ರಸಕ್ತ ‘ಚಂದ್ರಾವಲಿ ವಿಲಾಸಂ’ ಕೃತಿಯ ಸ್ವರೂಪ ಬಹಳ ಸಂಕೀರ್ಣವಾದುದು. ಇದರ ಭಾಷೆ ಹಳಗನ್ನಡ. ಪ್ರಕಾರದ ದೃಷ್ಟಿಯಿಂದ ನೋಡಿದರೆ ಕಿರು ಕಾದಂಬರಿ ಅಥವಾ ನೀಳ್ಗತೆ ಅನ್ನಿಸಬಹುದಾದ ವಿಶಿಷ್ಟ ಬರಹ. ವಸ್ತು, ಶೈಲಿ ನಿರೂಪಣೆಯನ್ನು ಗಮನಿಸಿದರೆ ಆಧುನಿಕ ಮನೋಧರ್ಮ.

ಹೀಗಾಗಿ ಇದನ್ನು ‘ನೇತಿ ಪ್ರಕಾರದ ಒಂದು ಮಾದರಿ’ ಎಂದು ಭಾವಿಸಲು ಅಡ್ಡಿಯಿಲ್ಲ. ಮುಳಿಯರು ತಮ್ಮ ಕೃತಿಯನ್ನು ಕುರಿತು ಪ್ರಸ್ತಾವನೆಯಲ್ಲಿ ಹೀಗೆ ನಿರೂಪಿಸುತ್ತಾರೆ: ‘‘ಮಹಾಶಯರೇ! ನಾನು ಅತಿಶಯವಾದ ವೈದಗ್ಧ್ಯವನ್ನೂ, ಕಾವ್ಯರಚನಾ ಕೌಶಲ್ಯವನ್ನೂ ಹೊಂದಿದವನಲ್ಲ;

ಆದರೂ ದೈವವಶಾತ್ ಒದಗಿದ ಅಲ್ಪವಾದ ಕವಿತಾಜ್ಞಾನವನ್ನು ತನ್ಮಾರ್ಗದಲ್ಲಿ ಪ್ರಯೋಗಿಸದಿದ್ದರೆ, ಕಾನನಕೌಮುದಿಯಂತೆ ನಿಷ್ಫಲವಾಗುವುದೆಂದೂ, ಮಹತ್ಪಥಾನುಸರಣವು ಶ್ರೇಯಸ್ಕರವೆಂದೂ ಎಣಿಸಿ, ಶ್ರೀಕೃಷ್ಣನು ಪರದಾರಾಭಿಗಮನವನ್ನು ಮಾಡಿದನೆಂಬ ಅಪರಾಧಾರೋಪನಕ್ಕೆ ಕಿವಿಗೊಡುವವರ ಮನೋರೋಗ ನಿವಾರಣಾರ್ಥವಾಗಿ ಚಂದ್ರಾವಳಿ ವಿಲಾಸಂ ಎಂಬ ಈ ಗ್ರಂಥವನ್ನು ಗದ್ಯರೂಪವಾಗಿ ಬರೆದಿರುವೆನು.

ಇದು ಅದ್ಭುತ ರಾಮಾಯಣ ರಾಮಾಶ್ವಮೇಧಗಳೆಂಬ ಆರಾಮಗಳಲ್ಲಿ ವಿಹರಿಸಲಿಚ್ಛಿಸುವವರಿಗೆ ಪ್ರವೇಶ ದ್ವಾರವಾಗಿದೆ. ಮತ್ತು ಸರಳಪದಗರ್ಭಿತವಾಗಿಯೂ, ಶೃಂಗಾರ ರಸಪ್ರಧಾನವಾಗಿಯೂ, ಪ್ರಥಮಾವಲೋಕನದಲ್ಲೆ ವಾಚಕರ ಮನಸ್ಸಿಗೆ ಅವಗಾಹನವಾಗುವಂತೆಯೂ ಇದೆ’’.

‘‘ಬೆರಲಿಂ ಸಿಡಿಯಲಿ ಪೊಗಳಲಿ | ಧರೆಯೊಳ್ ತಂತಮ್ಮ ಪುಟ್ಟುಗುಣದಂದದೊಳಾ || ನೆರಡರೊಳುಂ ಮುದಮಾಂಪೆಂ | ಇರುಳುಂ ಪಗಲುಂ ನರಂಗೆ ಸುಖಕರಮಲ್ತೆ? || (ಇತಿ ಸಜ್ಜನ ಚರಣಾಬ ಭೃಂಗಃ, ಗ್ರಂಥಕಾರಃ)’’ ಎನ್ನುವ ಕಂದ ಪದ್ಯದಲ್ಲಿ ತಮ್ಮ ಸ್ಥಿಮಿತ ಭಾವವನ್ನು ವ್ಯಕ್ತಪಡಿಸಿ ಈ ಕೃತಿಯು ಮುದ್ದಣನ ಕಾವ್ಯಗಳಿಗೆ ಪ್ರವೇಶದ್ವಾರವೆಂದಿದ್ದಾರೆ.

ಮುದ್ದಣನ ‘ರಾಮಾಶ್ವಮೇಧ’, ಡಿ.ವಿ.ಜಿ ಅವರ ‘ಮ್ಯಾಕ್‌ಬೆತ್’, ಬಿ.ಎಂ.ಶ್ರೀ ಅವರ ‘ಅಶ್ವತ್ಥಾಮನ್’, ಕುವೆಂಪು ಅವರ ‘ಚಿತ್ರಾಂಗದಾ’, ಪು.ತಿ.ನ ಅವರ ‘ಅಹಲ್ಯೆ’ ಹಾಗೂ ಪ್ರಸಕ್ತ ಮುಳಿಯರ ಈ ಕೃತಿ– ಇವುಗಳು ಆಧುನಿಕ ಓದುಗರಿಗೆ ಹಳಗನ್ನಡ ಕಾವ್ಯಗಳ ಪ್ರವೇಶ–ಗ್ರಹಿಕೆ ಹಾಗೂ ಅಧ್ಯಯನಗಳಿಗೆ ಕೀಲಿಕೈ ಆಗಬಹುದು ಎನ್ನುವುದು ನನ್ನ ಗ್ರಹಿಕೆ. ಈ ದೃಷ್ಟಿಯಿಂದ ಈ ಕೃತಿಗೆ ವಿಶೇಷ ಮಹತ್ವವಿದೆ.

ಮುದ್ದಣನ ಕೃತಿಗಳನ್ನು ಕುರಿತು ಎಸ್. ವಿ. ರಂಗಣ್ಣ ಅವರು ‘ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು’ ಎಂದು ವಿಮರ್ಶೆ ಮಾಡಿದ ನಂತರ, ದಕ್ಷಿಣ ಕನ್ನಡದ ಎಲ್ಲ ಲೇಖಕರು ಮುದ್ದಣನನ್ನು ಬಿಟ್ಟುಕೊಡದೆ ಅವನ ಕೃತಿಗಳ ಗುಣಗ್ರಹಣ ವಿಮರ್ಶೆಯ ಕಡೆ ಗಮನವನ್ನು ಕೇಂದ್ರೀಕರಿಸಿದರು.

ಇಂತಹ ಸಂದರ್ಭಕ್ಕೆ ಮುಂಚೆಯೇ ಮುಳಿಯರ ಈ ಕೃತಿಯು ಮುದ್ದಣ ತೀರಿಕೊಂಡ ನಂತರದ ದಶಕದಲ್ಲಿಯೇ ಹುಟ್ಟಿಕೊಂಡಿರುವುದು ಗಮನಾರ್ಹ. ಈ ಕೃತಿಯಲ್ಲಿ ಬರುವ ಕಥೆ ಎಂದರೆ ಶ್ರೀಕೃಷ್ಣನು ಪರದಾರಾಭಿಗಮನವನ್ನು ಮಾಡಿದನೆಂಬ ಅಪವಾದವನ್ನು ನಿವಾರಣ ಮಾಡುವುದು.

ಈ ಪ್ರಕ್ರಿಯೆಯನ್ನು ಐದು ಆಶ್ವಾಸಗಳಲ್ಲಿ ಮುಳಿಯರು ನಿರೂಪಿಸಿದ್ದಾರೆ. ಈ ಕೃತಿಯೊಳಗೆ ಮುಳಿಯರು ಹಳಗನ್ನಡ – ಸಂಸ್ಕೃತದ ಅನೇಕ ಗಾದೆ, ನಾಣ್ನುಡಿ ಹಾಗೂ ಸೂಕ್ತಿಗಳನ್ನು ಸಮಯೋಚಿತವಾಗಿ ಬಳಸಿದ್ದಾರೆ.

ಮೊದಲನೆಯ ಆಶ್ವಾಸದಲ್ಲಿ ಬರುವ ಗಾದೆಗಳು ಹೀಗಿವೆ: ‘ಭಿನ್ನರುಚಿರ್ಹಿಲೋಕಃ’, ‘ವಿಪ್ರವಾಕ್ಯಂ ಜನಾರ್ದನಃ’, ‘ಗಂಡರ ಮನಮೋ ಗುಂಡುಗಲ್ಲೋ’, ‘ತಲೆಯೊಳ್ ಬರೆದುದು ಎಲೆಯೊಳ್ ಪೂಸೆ ಮಾಸುವುದೇ?’, ‘ಕರ್ಬು ಡೊಂಕಾದೊಡೆ ಸೀಯು ಡೊಂಕೆ?’,

‘ರವಿ ಕಾಣದುದಂ ಕವಿ ಕಾಣ್ಬಂ’, ‘ರವಿ ಪುಸಿಯಂ ಕಾಣಂ – ಕವಿ ಪುಸಿಯನುಂ ಕಾಣ್ಬಂ’, ‘ರಾಮಾಯಣಮಂ ಕೇಳ್ದು ಕಡೆಗೆ ರಾಮಂಗುಂ ಸೀತೆಗುಂ ಬಾಂಧವ್ಯಮುಂಟೆ?’, ‘ಅಜೀರ್ಣೇ ಭೋಜನಂ ವಿಷಂ’, ‘ಸಂಕಲ್ಪದೊಳೆ ಪುಣ್ಯಕಾಲಂ ಕಳೆದುದು’,

‘ಅನುಭವರಸಿಕೊ ವಿಜಾನಾತಿ’, ‘ಪೋದೊಡೆ ಕಲ್ಲು ಬಂದೊಡೆ ಪಣ್ಣು’, ‘ಮೆಚ್ಚಿದಂಗೆ ಮಸಣಮುಂ ಸೊಗಂ’, ‘ಕಾಡೊಳ್ ಪುಲಿಯಿರ್ಪುದೆಂದು ನಾಡಿಂದೊಕ್ಕಲಂ ತೆಗೆವುದೆ? ಪರಿಗತ್ತಿಯೆಂದು ಕಲ್ಲಂ ಕಡಿದೊಡೆ ಮಡಿಯದೆ?’, ‘ಕೈನೆಲ್ಲಿಗೆ ಕೈಪಿಡಿಯೇಕೆ?’– ಹೀಗೆ ಐದೂ ಆಶ್ವಾಸಗಳಲ್ಲಿ ಹತ್ತಾರು ಗಾದೆಗಳು ಕಾಣಿಸಿಕೊಂಡು ಮುದ್ದಣನ ದಟ್ಟವಾದ ಪ್ರಭಾವವನ್ನು ಗಮನಿಸಬಹುದು.

ಒಂದು ಶತಮಾನದ ಹಿಂದೆ ಪ್ರಕಟಗೊಂಡಿರುವ ಈ ಕೃತಿ ನಿಶ್ಚಯವಾಗಿಯೂ ಮುದ್ದಣ ಮತ್ತು ಹಳಗನ್ನಡ ಕಾವ್ಯಗಳ ಗ್ರಹಿಕೆ ಹಾಗೂ ಅಧ್ಯಯನಗಳಿಗೆ ಒಂದು ಕೀಲಿಕೈ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.