ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೆಯ ಸಾಧ್ಯತೆ

ಬೆಳದಿಂಗಳು
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಬದುಕು ಬಹಳ ವಿಚಿತ್ರ. ಇದಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯ ದೃಷ್ಟಾಂತವೊಂದಿದೆ. ಮೂರೇ ವಾಕ್ಯಗಳ ದೃಷ್ಟಾಂತ ಹೇಳುವುದಿಷ್ಟೇ. ‘ನನ್ನೊಂದಿಗಿನ ಸಂಬಂಧ ಕೊನೆಗೊಳಿಸುವ ವಿಚಾರ ಹೇಳಲು ನನ್ನ ಪ್ರಿಯತಮೆ ಕಚೇರಿಗೆ ಬಂದಿದ್ದಳು. ನನ್ನ ಬಾಸ್ ಅದನ್ನು ಕಂಡು ಕೆಲಸದಿಂದ ತೆಗೆದ.

ಕೊಟ್ಟ ಕಾರಣ ಸರಳ: ಕಚೇರಿಯ ವೇಳೆ ಗೆಳತಿಯೊಂದಿಗೆ ಸಂಭಾಷಣೆಯಲ್ಲಿದ್ದದ್ದು’ ಕೆಲಸ ಕಳೆದುಕೊಂಡವನ ದೃಷ್ಟಿಯಲ್ಲಿ ಇದನ್ನು ನೋಡಿದರೆ ನಮಗೆ ತಿಳಿಯುವುದು ಜೀವನದ ವೈಚಿತ್ರ್ಯದ ಬಗ್ಗೆ ಮಾತ್ರ.

ಕಚೇರಿಗೆ ಬಂದು ಅದನ್ನು ಹೇಳಬೇಕೆನಿಸಿದ ಗೆಳತಿಯ ದೃಷ್ಟಿಯಲ್ಲಿ ಅಥವಾ ನೌಕರನನ್ನು ಕೆಲಸದಿಂದ ತೆಗೆದ ಬಾಸ್‌ನ ದೃಷ್ಟಿಯಲ್ಲಿ ಇಡೀ ಪ್ರಕರಣ ಏನನ್ನು ಹೇಳುತ್ತಿದೆ? ನಾವ್ಯಾರೂ ಇಂಥದ್ದೊಂದು ದೃಷ್ಟಿಕೋನದಲ್ಲಿ ಈ ಪ್ರಕರಣವನ್ನು ನೋಡುವುದೇ ಇಲ್ಲ. ಆದರೆ ಬದುಕಿನಲ್ಲಿ ಆ ಗೆಳತಿಯಂಥ ಹಾಗೆಯೇ ಆ ಬಾಸ್‌ನಂಥ ಕೃತ್ಯಗಳನ್ನು ನಾವು ಎಸಗುತ್ತಿರುತ್ತೇವೆ.

ಪ್ರತ್ಯಕ್ಷವಾಗಿ ಕಂಡದ್ದನ್ನು ಪ್ರಮಾಣಿಸಿ ನೋಡು ಎಂಬಂಥ ಗಾದೆ ಹುಟ್ಟಿಕೊಂಡದ್ದು ಇದೇ ಕಾರಣಕ್ಕೆ ಅನ್ನಿಸುತ್ತದೆ. ಅಂದರೆ ನಮ್ಮ ನಿರ್ಧಾರಗಳೆಲ್ಲವಕ್ಕೂ ನಮ್ಮದೇ ಆದ ಕಾರಣಗಳಿರುತ್ತವೆ. ಈ ಕಾರಣಗಳನ್ನು ನಾವು ಅನುಮಾನವೇ ಇಲ್ಲದಂತೆ ನಂಬಿರುತ್ತೇವೆ.

ಸಮಾಜವೊಂದು ಹೆಚ್ಚು ಹೆಚ್ಚು ವೃತ್ತಿಪರರಿಂದ ತುಂಬಿ ಹೋಗುವ ಈ ದಿನಗಳಲ್ಲಿ ಸೂಕ್ಷ್ಮವಾಗಿ ಆಲೋಚಿಸುವ ಪ್ರವೃತ್ತಿ ಇಲ್ಲವಾಗುತ್ತದೆ. ಏಕೆಂದರೆ ಎಲ್ಲವೂ ಕಾರ್ಯ ಕಾರಣಗಳ ಸೀಮಿತ ಪರಿಧಿಯಲ್ಲೇ ಜರುಗುತ್ತವೆ ಎಂಬುದು ಸಮಾಜದ ನಂಬಿಕೆಯಾಗಿಬಿಟ್ಟಿರುತ್ತದೆ. ರಾಷ್ಟ್ರೀಯತೆಯಿಂದ ತೊಡಗಿ ಧಾರ್ಮಿಕ ನಂಬಿಕೆ ತನಕದ ಎಲ್ಲಾ ವಿಚಾರಗಳಲ್ಲೂ ಸಂಭವಿಸುವುದು ಇದುವೇ.

ನಮ್ಮ ಪೂರ್ವಗ್ರಹಗಳನ್ನು ಸಮರ್ಥಿಸುವ ಕಾರಣಗಳನ್ನು ನಾವು ಹುಡುಕುತ್ತಾ ಹೊರಟು ಬಿಡುತ್ತೇವೆಯೇ ಹೊರತು ನಮ್ಮ ನಿಲುವೂ ತಪ್ಪಾಗಿರಬಹುದು ಎಂಬ ಸಂಶಯ ನಮ್ಮನ್ನು ಕಾಡುವುದೇ ಇಲ್ಲ.

ದೇವರಿದ್ದಾನೆಯೇ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂಬ ಬುದ್ಧನ ಸರಳ ಉತ್ತರವನ್ನು ಅರ್ಥ ಮಾಡಿಕೊಳ್ಳಬೇಕಾಗಿರುವುದು ಚಿಂತನೆಯ ವೈವಿಧ್ಯ ಎಂಬ ಅರ್ಥದಲ್ಲಿ.

ಇದ್ದಾನೆ ಅಥವಾ ಇಲ್ಲ ಎಂಬ ಎರಡೂ ಉತ್ತರಗಳು ಪ್ರಶ್ನೆ ಕೇಳಿದವನ ಪೂರ್ವಗ್ರಹಿಕೆಗಳಲ್ಲಿ ಒಂದನ್ನು ಸಮರ್ಥಿಸುತ್ತದೆಯೇ ಹೊರತು ಮೂರನೇ ಸಾಧ್ಯತೆಯನ್ನು ಆಲೋಚಿಸುವಂತೆ ಮಾಡುವುದಿಲ್ಲ ಎಂಬುದು ಬುದ್ಧನಿಗೆ ತಿಳಿದಿತ್ತು.

ಗೊತ್ತಿಲ್ಲ ಎಂಬ ಉತ್ತರ ಕೇಳುಗನನ್ನು ಚಿಂತನೆಗೆ ಹಚ್ಚುವಂಥದ್ದು. ತನ್ನ ಉತ್ತರವನ್ನು ತಾನೇ ಕಂಡುಕೊಳ್ಳುವ ಹಾದಿಯಲ್ಲಿ ಆತನಿಗೊಂದು ಪ್ರೇರಣೆ ನೀಡುವಂಥದ್ದು.

ಗೆಳತಿ ಜೊತೆಗೆ ಮಾತನಾಡುತ್ತಾ ನಿಂತಿದ್ದ ನೌಕರನನ್ನು ಕೆಲಸದಿಂದ ತೆಗೆಯುವ ಮೊದಲು ಏನಾಯಿತು ಎಂದು ನೌಕರನಿಗೆ ಪ್ರಶ್ನೆ ಕೇಳಿದ್ದರೆ ಇಡೀ ಘಟನೆ ಬೇರೊಂದು ಸ್ವರೂಪ ಪಡೆಯುತ್ತಿತ್ತು.

ಪ್ರೇಮವನ್ನು ಕೊನೆಗೊಳಿಸಲು ಬಂದಾಕೆಯ ನಿಲುವು ಬದಲಾಗುವ ಸಾಧ್ಯತೆಗಳಿರಲಿಲ್ಲ. ಆದರೆ ನೌಕರ ಮತ್ತು ಮಾಲೀಕನ ಸಂಬಂಧ ಬೇರೆಯೇ ಆಯಾಮವೊಂದನ್ನು ತಳೆಯುತ್ತಿತ್ತಲ್ಲವೇ?

ನಮ್ಮ ನಿತ್ಯದ ಅನೇಕ ನಿರ್ಧಾರಗಳು ನಮ್ಮದೇ ಪೂರ್ವಗ್ರಹಗಳನ್ನು ಅವಲಂಬಿಸಿರುತ್ತವೆ ಎಂಬುದನ್ನೇ ಅರ್ಥ ಮಾಡಿಕೊಳ್ಳು­ವುದೇ ಮೂರನೆಯ ಸಾಧ್ಯತೆಯತ್ತ ಆಲೋಚಿಸುವಂತೆ ಮಾಡುತ್ತವೆ. ಇದಕ್ಕೆ ನಾವು ನಮ್ಮ ಮಿತಿಗಳನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT