ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಅಭಿವೃದ್ಧಿಯಾಗಲಿ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಅಲ್ಲಲ್ಲಿ ನಿಲ್ಲುತ್ತ ಶುಲ್ಕ ತೆರುತ್ತಲೇ ಹೋಗಬೇಕಿದ್ದ ವಾಣಿಜ್ಯೇತರ ಖಾಸಗಿ ವಾಹನಗಳ ಮಾಲೀಕರ, ಚಾಲಕರ ಕಷ್ಟ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾ­ಲ­ಯದ ಗಮನಕ್ಕೆ ಬಂದಂತಿದೆ. ಹೀಗಾಗಿಯೇ ಅದು ಈಗ ವಾಣಿಜ್ಯ ಉದ್ದೇ­ಶದ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳಿಗೆ ಹೆದ್ದಾರಿ ಸುಂಕದಿಂದ ವಿನಾಯತಿ ನೀಡಲು ಉದ್ದೇಶಿಸಿದ್ದು, ಹೊಸ ನೀತಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ನಿರೀಕ್ಷೆ ಇದೆ. 

ಕಡ್ಡಾಯ ಟೋಲ್ ಮತ್ತು ದುಬಾರಿ ಮೊತ್ತವೇ ಅನೇಕ ಕಡೆ ತೀವ್ರ ಪ್ರತಿಭಟನೆಗಳಿಗೂ ಕಾರಣವಾಗಿತ್ತು. ನಮ್ಮ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆ ಟೋಲ್ ಕೇಂದ್ರಗಳ ಎದುರು ಪ್ರತಿಭಟನೆ, ದಾಳಿ, ಹಿಂಸಾ­ಕೃತ್ಯ­ಗಳೂ ನಡೆದಿದ್ದವು. ಇದನ್ನೆಲ್ಲ ಸಚಿವಾಲಯ ಗಣನೆಗೆ ತೆಗೆದುಕೊಂಡಂತೆ ಕಾಣುತ್ತದೆ. ಪರಿಷ್ಕೃತ ನೀತಿ ಜಾರಿಗೆ ಬಂದರೆ ಟ್ಯಾಕ್ಸಿಗಳು, ಬಸ್, ಲಾರಿ ಮತ್ತಿ­ತರ ವಾಣಿಜ್ಯ, ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಇನ್ನುಳಿದ ವಾಹನ­ಗಳ ಮಾಲೀಕರು ನಿರಾಳವಾಗಿ, ತ್ವರಿತವಾಗಿ ಸಂಚರಿಸಲು ಸಾಧ್ಯ­ವಾಗ­ಲಿದೆ.   ಈಗಾಗಲೆ ನಿರ್ಮಾಣ, ಸ್ವಾಮ್ಯ, ನಿರ್ವಹಣೆ, ಹಸ್ತಾಂತರ (ಬಿಒ­ಒಟಿ) ನೀತಿಯಡಿ ಖಾಸಗಿಯವರು ನಿರ್ಮಿಸಿದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮುಂದುವರಿಯುತ್ತದೆ. ಇದೇ ನೀತಿಯಡಿ ಹೊಸದಾಗಿ ನಿರ್ಮಾಣವಾಗುವ ರಸ್ತೆಗಳಿಗೆ ಮಾತ್ರ ಟೋಲ್ ವಿನಾಯತಿ ಅನ್ವಯ­ವಾ­ಗು­ತ್ತದೆ. ಹೆದ್ದಾರಿ ನಿರ್ಮಾಣಕ್ಕೆ ಹೂಡಿದ ಬಂಡವಾಳ ವಾಪಸ್ ಬಂದ ನಂತ­ರವೂ ಟೋಲ್ ವಸೂಲಿ ಮುಂದುವರಿಸುವುದಕ್ಕೆ ಬಹಳ ಕಾಲದಿಂದಲೂ ತಕರಾರಿತ್ತು. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೂ ಈಗ ಅದಕ್ಕೆ ದನಿಗೂಡಿಸಿದ್ದಾರೆ. ಇಂಥಲ್ಲಿ ಟೋಲ್ ಸ್ಥಗಿತಗೊಳಿಸಬೇಕು ಎಂಬ ಸಲಹೆ ಇಟ್ಟಿದ್ದಾರೆ. ಆದರೆ ಅಧಿಕಾರಿಗಳಿಂದ ಇದಕ್ಕೆ ಆಕ್ಷೇಪ ಇದೆ ಎನ್ನಲಾಗುತ್ತಿದೆ.

ಅಂಕಿಸಂಖ್ಯೆಗಳ ಪ್ರಕಾರ ಟೋಲ್ ಸಂಗ್ರಹದಲ್ಲಿ ವಾಣಿಜ್ಯ ವಾಹನಗಳ ಪಾಲು ಶೇ 80ರಷ್ಟು. ಹೀಗಾಗಿ ಸರ್ಕಾರಕ್ಕೆ ಅಂಥ ಆದಾಯ ನಷ್ಟವಾಗು­ವು­ದಿಲ್ಲ ಎಂಬುದು ಹೆದ್ದಾರಿ ಸಚಿವಾಲಯದ ಚಿಂತನೆ. ಹೀಗಿದ್ದೂ ವರಮಾನ ಖೋತಾ ಆದಲ್ಲಿ ಹೆಚ್ಚುವರಿ ನಿಧಿಯ ಮೂಲಕ ತುಂಬಿಕೊಡುವ ಭರವಸೆ­ಯನ್ನು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಚಿವಾಲಯ ನೀಡಿದೆ. ಮೂಲ­ಸೌಕರ್ಯಗಳ ಅಭಿವೃದ್ಧಿಗೆ ಹಣದ ಕೊರತೆ ಆಗಬಾರದು ಎಂಬು­ದಂತೂ ನಿಜ. ರಸ್ತೆಯಂತಹ ಮೂಲಸೌಕರ್ಯಗಳ ಅಭಿವೃದ್ಧಿಯ ವೇಗ ಹಣದ ಕೊರತೆಯಿಂದ  ಕುಂಠಿತಗೊಳ್ಳುವಂತಾಗಬಾರದು. ಕೆಟ್ಟ ರಸ್ತೆಗ­ಳಿಂದ ಪೆಟ್ರೋಲ್, ಡೀಸೆಲ್ ಹೆಚ್ಚು ವ್ಯಯವಾಗುತ್ತದೆ. ಇದರಿಂದ ಆರ್ಥಿಕತೆಗೂ ಹೊಡೆತ ಬೀಳುತ್ತದೆ ಎಂಬುದು ನಮ್ಮ ಗಮನದಲ್ಲಿರಬೇಕು.

ರಾಷ್ಟ್ರದ ಪ್ರಗ­ತಿಗೆ ರಸ್ತೆಗಳಂತಹ ಮೂಲಸೌಕರ್ಯಗಳು ಅಭಿವೃದ್ಧಿಯಾಗ­ಬೇಕಾ­ದುದು ಅತ್ಯ­ವಶ್ಯ. ಟೋಲ್‌ ಕೊಡುವುದೇನೂ ದೊಡ್ಡದಲ್ಲ. ಆದರೆ ಅದರ ಜತೆ ಕೆಲ ಅನಾನುಕೂಲಗಳೂ ಇವೆ. ಟೋಲ್ ಕೇಂದ್ರಗಳ ಎದುರು ದಟ್ಟಣೆ ಅವಧಿ­ಯಲ್ಲಿ ವಾಹನಗಳ ಉದ್ದನೆಯ ಸಾಲು ತೀರಾ ಸಾಮಾನ್ಯ ಎನ್ನು­ವಂತಾ­ಗಿದೆ. ಇದರಿಂದ ಸಮಯ ವ್ಯರ್ಥ. ಹೆದ್ದಾರಿಗಳ ಉದ್ದೇಶವೇ ವಾಹನಗಳು ತ್ವರಿತವಾಗಿ ತಮ್ಮ ಸ್ಥಾನ ತಲುಪಲಿ ಎಂಬುದು. ಈಗ ಆಧುನಿಕ ತಂತ್ರಜ್ಞಾನ ಲಭ್ಯವಿದೆ. ವಿದೇಶಗಳಲ್ಲಿ ಇರುವಂತೆ ವಾಹನಗಳಿಗೆ ಚಿಪ್ ಅಳವಡಿಸಿ ಟೋಲ್ ಮೂಲಕ ಹಾದು ಹೋದಾಗ ಸ್ವಯಂಚಾಲಿತವಾಗಿ ಶುಲ್ಕ ಕಡಿತ­ಗೊಳ್ಳುವ ವ್ಯವಸ್ಥೆ ಅಳವಡಿಸುವುದು ಕಷ್ಟವೇನಲ್ಲ.ಇಂತಹ ಸುಧಾರಣೆಯೂ ಜಾರಿಗೊಂಡಲ್ಲಿ ಹೆದ್ದಾರಿಗಳಲ್ಲಿನ ಸಂಚಾರದ ಚಿತ್ರಣವೇ ಬದಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT