ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃದುಲಾ ಮಾತು

Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಯಾವುದು ಬೋಲ್ಡ್‌? ಹಸಿಬಿಸಿ ಕಾಮದ ಬಗ್ಗೆ ಬರೆಯವುದು ಅಲ್ಲವೇ ಅಲ್ಲ. ಬೋಲ್ಡ್‌ ಎಂದರೆ ವ್ಯವಸ್ಥೆಯ ವಿರುದ್ಧ ಬರೆಯುವುದು. ಬಂಡೇಳುವುದು. ಬೇರುಬಿಟ್ಟ ನಂಬಿಕೆಗಳ ವಿರುದ್ಧ ಅವುಡುಕಚ್ಚಿ ಬರೆಯುವುದು ಬೋಲ್ಡ್‌ ಎನಿಸಿಕೊಳ್ಳುತ್ತದೆ. ಈ ನಡುವೆ ಅತಿ ರಂಜಿತ ಕಾಮವನ್ನು ಬೋಲ್ಡ್‌ ಎಂದು ಕರೆಯುತ್ತಾರೆ, ಇದನ್ನಂತೂ ಒಪ್ಪಲಾರೆ. 76 ವರ್ಷದ ಮೃದುಲಾ ಗರ್ಗ್‌ ಆಧುನಿಕ ಸಾಹಿತ್ಯದಲ್ಲಿ ಬೋಲ್ಡ್‌ ಎಂದು ಕರೆಯಲಾಗುವ ಸಾಹಿತ್ಯದ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಈಚೆಗೆ ಜೈನ್‌ ಶಿಕ್ಷಣ ಸಂಸ್ಥೆಯಲ್ಲಿ ‘ನನ್ನ ಬರಹ, ನನ್ನ ಜೀವನ’ ವಿಷಯದ ಬಗ್ಗೆ ಮಾತನಾಡಿದ ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದು ಇಷ್ಟು.

‘ಬರಹ ಆಕರ್ಷಣೀಯವಾಗಿರಬೇಕು ಎನ್ನುವ ಕಾರಣಕ್ಕೆ ಹಸಿಬಿಸಿ ಕಾಮ, ಭಾವೋದ್ವೇಗವನ್ನು ತುಂಬುವುದು ಯಾವುದೇ ಭಾಷೆಯ ಸಾಹಿತ್ಯಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಕಾಮ ಮತ್ತು ಪ್ರೇಮ ಎರಡೂ ಅತೀ ಖಾಸಗಿಯಾದವು. ಬರಹ ಮನಸಿಗೆ ತಂಪೆರೆಯಬೇಕು. ಚಿಂತನೆಗೆ ಪ್ರೇರಣೆ ನೀಡಬೇಕು. ಉದ್ವೇಗ ಉದ್ರೇಕ ಹುಟ್ಟಿಸುವಂಥದ್ದನ್ನೇ ಬರಹ ಎಂದುಕೊಂಡರೆ ಅದು ಅಗ್ಗದ ಸಾಹಿತ್ಯವಾಗುತ್ತದೆ ಅಷ್ಟೆ.

ಒಬ್ಬ ಲೇಖಕ ತನ್ನ ಆತ್ಮಕತೆಯನ್ನು ಬರೆಯುತ್ತಿದ್ದಾನೆ ಎಂದರೆ ಅವನೆಲ್ಲೋ ತನ್ನ ಬರಹದಲ್ಲಿ ಎಲ್ಲವನ್ನೂ ಹೇಳಿಲ್ಲ ಎಂದರ್ಥ. ಹೇಳಲಾಗಿಲ್ಲ, ಹೇಳಲು ಅಸಮರ್ಥನಾದ ಬರಹಗಾರ ಎಂದೇ ಅರ್ಥ. ಲೇಖಕನ ಅನುಭೂತಿ, ಆತಂಕ, ಸಂವೇದನೆಗಳೆಲ್ಲವೂ ಅವರ ಬರಹದಲ್ಲಿ ಅಭಿವ್ಯಕ್ತಿಯಾಗಿರುತ್ತವೆ. ಆ ಮೂಲಕವೇ ಅವರೇನು ಎನ್ನುವುದನ್ನು ಅರಿಯಬಹುದು. ಈಗ ಬರುತ್ತಿರುವ ಆತ್ಮಕತೆಗಳೆಲ್ಲ ಅತಿಯಾದ ಆತ್ಮರತಿಯಿಂದ ಕೂಡಿರುತ್ತವೆ. ಇಲ್ಲವೇ ಆತ್ಮಾನುಕಂಪದಿಂದ ಕೂಡಿರುತ್ತವೆ. ಬರಹಗಾರರ ಆತ್ಮಕತೆಗಳು ಇಂಥ ಘಟನೆಗಳ ದಾಖಲಾತಿಯಾಗಬಾರದು. ಒಬ್ಬ ಬರಹಗಾರ ತನ್ನ ಆತ್ಮಕತೆ ಬರೆಯುತ್ತಿದ್ದಾನೆ ಎಂದರೆ ಅಲ್ಲಿಗೆ ಅವನಲ್ಲಿ ಬರೆಯುವ ಸರಕು ಮುಗಿಯಿತೆಂದೇ ಅರ್ಥ.

ಮೃದುಲಾ ಗರ್ಗ್‌
2013ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ. ಹಿಂದಿ ಲೇಖಕಿ. ಕಾದಂಬರಿ ಹಾಗೂ ಸಣ್ಣ ಕತೆಗಳನ್ನು ಬರೆದಿರುವ ಮೃದುಲಾ ಗರ್ಗ್‌ ಅವರಿಗೆ ಅತಿಯಾಗಿ ಕಾಡಿದ್ದು ದೇಶದ ವಿಭಜನೆ. ಅದನ್ನೇ ಕೇಂದ್ರವಾಗಿಟ್ಟುಕೊಂಡು ಬರೆದ ಕಾದಂಬರಿ ‘ಮಿಲ್‌ಝುಲ್‌ ಮನ್‌’. ಜರ್ಮನಿ, ಇಂಗ್ಲಿಷ್‌ ಇನ್ನಿತರ ಭಾಷೆಗೆ ಇವರ ಕಾದಂಬರಿಗಳು ತರ್ಜುಮೆಗೊಂಡಿವೆ. ಕೋಲ್ಕತ್ತ ಮೂಲದ ಮೃದುಲಾ ಅವರು ಓದಿದ್ದು ಅರ್ಥಶಾಸ್ತ್ರ. ಮೂರು ವರ್ಷ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಆದರೆ ದಲಿತ ಚಳವಳಿಯ ಮೊದಲ ಪೀಳಿಗೆಯವರಿಗೆ ಆತ್ಮಕತೆ ಒಂದು ಅಸ್ತ್ರವಾಯಿತು. ಅವರ ಕಥನ, ಕಾವ್ಯಗಳಿಗಿಂತಲೂ ಮನಮುಟ್ಟುವ ಸಾಹಿತ್ಯ ಬಂದಿದ್ದು ಆತ್ಮಕತೆಗಳಲ್ಲಿ. ಕಾರಣ ಅಲ್ಲಿ ಬದುಕಿನ ಎಲ್ಲ ಭಾವಗಳೂ ಮಡುಗಟ್ಟಿವೆ. ಬರಹಗಾರರಲ್ಲದವರು ಮೊದಲು ಆತ್ಮಕತೆಯಿಂದಲೇ ಆರಂಭಿಸುವುದು ಒಳಿತು. ನಾನಂತೂ ನನ್ನ ಆತ್ಮಕತೆಯನ್ನು ಬರೆಯಲಾರೆ. ಒಂದೊಂದು ಕಾದಂಬರಿಯಲ್ಲಿಯೂ ಕೃತಿಯಲ್ಲಿಯೂ ನನ್ನ ಬದುಕು ಇಣುಕಿದೆ.

ಇತ್ತೀಚಿನ ಅತ್ಯಾಚಾರದ ಪ್ರಕರಣಗಳನ್ನು ಗಮನಿಸಿದರೆ ಮಾನವ ಕುಲದ ಮೇಲೆಯೇ ಹೇಸಿಗೆ ಹುಟ್ಟುತ್ತದೆ. ಹುಡುಗಿಯರ ಉಡುಗೆ, ತೊಡುಗೆಗಳನ್ನು ಟೀಕಿಸುತ್ತಿದ್ದವರು, ಮಗುವಿನ ಮೇಲೆ ಆಗುವ ವಿಕೃತಿಗೆ ಏನುತ್ತರ ಹೇಳಿಯಾರು?

ಇದಕ್ಕೆ ಎರಡು ಕಾರಣ. ಒಂದು ನಾವು ನಮ್ಮ ಮಕ್ಕಳಿಗೆ ಸದ್ಯಕ್ಕೆ ಅಗತ್ಯವಿರುವ ಸಂಸ್ಕಾರಗಳನ್ನು ನೀಡಲಾಗದೇ ಇರುವುದು. ಇನ್ನೊಂದು ಅವರ ಪುರುಷ ಅಹಂಕಾರವನ್ನು ಪೋಷಿಸುತ್ತಲೇ ಇರುವುದು. ಒಂದೆಡೆ ಪುರುಷ ಅಹಂಕಾರವನ್ನು ಪೋಷಿಸುತ್ತೇವೆ. ಇನ್ನೊಂದೆಡೆ ಅವರಿಗೆ ಪ್ರತಿಸ್ಪರ್ಧಿಯಾಗಿರುತ್ತೇವೆ. ಈ ಎರಡೂ ವ್ಯತಿರಿಕ್ತಗಳನ್ನು ನುಂಗಿಕೊಳ್ಳಲು ಪುರುಷ ಹೆಣ್ಣುಮಕ್ಕಳಷ್ಟು ಗಟ್ಟಿಯಾಗಿರುವುದಿಲ್ಲ. ಆ ಸ್ಪರ್ಧೆಗೆ ಬದಲಾಗಿ ಆಕ್ರೋಶ ಹುಟ್ಟಿರುತ್ತದೆ. ಮನದೊಳಗಿನ ಆಕ್ರೋಶ ದ್ವೇಷವಾಗಿ ಬದಲಾಗುತ್ತದೆ.

ಪ್ರತಿಸ್ಪರ್ಧಿ ಯಾರಾದರೇನು? ಪ್ರತೀಕಾರ ಹೆಣ್ಣುಮಕ್ಕಳ ಮೇಲೆ ತೀರಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಪರಿಹಾರ ಮನೆಯಿಂದಲೇ ಆರಂಭವಾಗಬೇಕು. ಎಳವೆಯಲ್ಲಿಯೇ ಹೆಣ್ಣು ಗಂಡುಗಳೆಂಬ ತರತಮವಿಲ್ಲದೇ ಬೆಳೆಸಬೇಕು. ಸಹಜೀವಿಗಳೆಂಬ ಭಾವ ಬರಬೇಕು. ಕೆಲಸಗಳ ಹಂಚಿಕೆ, ಹೊಗಳಿಕೆ, ತೆಗಳಿಕೆ ಎಲ್ಲಿಯೂ ಲಿಂಗತ್ವ ಇಣುಕಬಾರದು. ಆ ಸಂಸ್ಕಾರ ಬೆಳೆದರೆ ಖಂಡಿತವಾಗಿಯೂ ಉತ್ತಮ ಪೀಳಿಗೆಯೊಂದು ಬೆಳೆಯುತ್ತದೆ.

ಇನ್ನು ಮಕ್ಕಳ ಮೇಲೆ ಮುನಿಸು ತೋರುವುದು, ಪುರುಷ ಅಹಂಕಾರ ಪ್ರತಿಷ್ಠಾಪಿಸಲು ಪ್ರಯತ್ನಿಸುವುದು ಇವೆರಡೂ ವಿಕೃತಿಗಳಾಗಿವೆ. ವಿಕೃತಿಗೆ ಪರಿಹಾರವೆಂದರೆ ಉಗ್ರವಾದ ಶಿಕ್ಷೆ. ಇಂಥ ವಿಕೃತರಿಗೆ ಅತ್ಯುಗ್ರ ಶಿಕ್ಷೆಯಾಗಬೇಕು. ಶಿಕ್ಷೆಯ ಭಯದಿಂದಲೇ ವಿಕೃತರು ತಮ್ಮ ಭಾವಾತಿರೇಕವನ್ನು ಹತ್ತಿಕ್ಕಬೇಕು. ಶಿಕ್ಷೆಯೊಂದಿಗೆ ಶಿಕ್ಷಣ ದೊರೆಯಬೇಕು ಎನ್ನುವ ವಾದವನ್ನು ನಾನು ಒಪ್ಪುವುದಿಲ್ಲ. ಶಿಕ್ಷೆಯೇ ಅವರಿಗೆ ಪಾಠವಾಗಬೇಕು. ವಿಕೃತಿಯನ್ನು ಬದಲಿಸುವುದು ಅಸಾಧ್ಯ. ಹೆಣ್ಣುಮಕ್ಕಳ ಬದುಕು ಹಿಂದೆಂದಿಗಿಂತಲೂ ಸಾಹಸಮಯ ಮತ್ತು ಸವಾಲುಗಳಿಂದ ಕೂಡಿರುವುದು ಇವೇ ಕಾರಣಗಳಿಂದ’ ಎನ್ನುತ್ತಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT