ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಅಳ್ಳೊಳ್ಳಿ ಬಂತು ಕಳ್ಳೊಳ್ಳಿ
(ಶಿಶುಗೀತೆಗಳು)

ಲೇ : ಈಶ್ವರ ಹತ್ತಿ
ಪು: 102 ; ಬೆ: ರೂ. 80
ಪ್ರ: ಎಸ್‌.ಎಚ್‌.ಐ ಪ್ರಕಾಶನ
‘ಶರಣಬಸವ ನಿಲಯ’,
ಇಂದ್ರಕೀಲ ನಗರ, ಗದಗ ರಸ್ತೆ,
ಕೊಪ್ಪಳ ಜಿಲ್ಲೆ

ಮಕ್ಕಳ ಮನಸ್ಸಿಗೆ ಹತ್ತಿರವಾಗುವ ಕೆಲವು ಶಿಶುಗೀತೆಗಳನ್ನು ಈಶ್ವರ ಹತ್ತಿ ಈ ಸಂಕಲನದಲ್ಲಿ ಕೊಟ್ಟಿದ್ದಾರೆ. ಮಕ್ಕಳ ಮುಗ್ಧ ಕಣ್ಣುಗಳಿಗೆ ನಿಲುಕುವ ವಸ್ತು ಪ್ರಪಂಚ ಇಲ್ಲಿದೆ. ಹತ್ತಾರು ವಿಷಯಗಳನ್ನು ಇಲ್ಲಿ ಅಡಕಗೊಳಿಸಿ, ಭಾರವಾಗದಂತೆ, ಅದೊಂದು ಬೋಧನೆಯಾಗದಂತೆ ತಮ್ಮ ಶಿಶುಗೀತೆಗಳನ್ನು ಅವರು ನಿರ್ವಹಿಸಿದ್ದಾರೆ. ಇವಕ್ಕೆ ಲಯಬದ್ಧ ಹಾಡಿನ ರೂಪ ಇದೆ. ಆದ್ದರಿಂದ ಇವು ಹಾಡಿದರೆ ಕಣ್ಣಮುಂದೆ ತೆರೆದುಕೊಳ್ಳುವ ಭಾವಪ್ರಪಂಚವಾಗಿದೆ.

‘ನಿದ್ದೆಯೆ ನನ್ನ ಮುದ್ದಿನ ಗೆಳೆಯನು/ ಬಂದೇ ಬರುವನು ಓದುತ ಕೂಡಲು/ ಹುಡುಕುತ ಗೆಳೆಯ ತಪ್ಪದೇ ಬರುವನು/ ಅಮ್ಮನು ಬೈಯಲು ಗೊರಕೆ ಹೊಡೆಯುವನು’ (ನಿದ್ದೆ). ಇದು ಮಕ್ಕಳ ನಿತ್ಯದ ಅನುಭವವಾದ್ದರಿಂದ ಅವರ ಮನವನ್ನು ಸೆಳೆಯಬಲ್ಲದು. ಆನೆ, ಮಲ್ಲಿಗೆ, ದೇಶ, ಭಾಷೆ, ಮದುವೆ ಆಟ, ಸರ್ಕಸ್‌, ಕಪ್ಪೆ, ಮೀಸೆ, ಬೆಣ್ಣೆ ದೋಸೆ, ಗಣಿತ– ಹೀಗೆ ಹಲವು ವಸ್ತುವಿನ ಗೀತೆಗಳು ಸರಳ ನುಡಿಗಟ್ಟಿನಲ್ಲಿ ನಿರೂಪಿತವಾಗಿವೆ. ಇಲ್ಲಿನ ಗೀತೆಗಳಿಗೆ ಕೊಂಚ ನಾಟಕೀಯ ಗುಣ ಇರುವುದರಿಂದ ಇವು ಮಕ್ಕಳಿಗೆ ಪ್ರಿಯವಾಗಬಹುದು. ಇದರಲ್ಲಿ ಲೇಖಕರು ಬರೆದಿರುವ ಪ್ರಸ್ತಾವನೆಯಲ್ಲಿ ಶಿಶು ಸಾಹಿತ್ಯದ ಬಗ್ಗೆ ವಿವೇಚನೆ ಇದೆ. ಈ ಶಿಶುಗೀತೆಗಳ ಹಿಂದೆ ಈ ಲೇಖಕರ ಚಿಂತನೆ, ಗಂಭೀರವಾದ ತೊಡಗಿಕೊಳ್ಳುವಿಕೆ ಇದೆ. ಅದು ಶಿಶು ಸಾಹಿತ್ಯದ ಕುರಿತ ಅವರ ಕಳಕಳಿಯನ್ನು ಸೂಚಿಸುವಂತಿದೆ.

ವಿಷ್ಣು ನಾಯ್ಕ ಸಾಹಿತ್ಯಕೃತಿ ಸಮೀಕ್ಷೆ
ಸಂ : ಜೆ. ಪ್ರೇಮಾನಂದ
ಪು : 422 ; ಬೆ : ರೂ. 350
ಪ್ರ : ಕವಿತಾ ವಿಷ್ಣು ನಾಯ್ಕ
‘ಪರಿಮಳ’,
ಅಂಬಾರಕೊಡ್ಲ,
ಅಂಕೋಲೆ– 581314
ಉತ್ತರ ಕನ್ನಡ ಜಿಲ್ಲೆ

ಕನ್ನಡ ಕವಿ, ಪತ್ರಕರ್ತ, ನಾಟಕಕಾರ, ಕಾದಂಬರಿಕಾರ, ಪ್ರಕಾಶಕ ಹೀಗೆ ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುವ ವಿಷ್ಣು ನಾಯ್ಕ ಅವರ ಈವರೆಗಿನ ಸಾಹಿತ್ಯದ ಬಗ್ಗೆ ನಾಡಿನ ಲೇಖಕರು ಆಗೀಗ ಬರೆದ ಲೇಖನಗಳನ್ನು ಪ್ರಸ್ತುತ ಸಂಗ್ರಹ ಒಳಗೊಂಡಿದೆ. ಇದನ್ನು ಸಂಪಾದಿಸಿರುವ ಜೆ. ಪ್ರೇಮಾನಂದ ಈ ಲೇಖಕರ ವೈವಿಧ್ಯಮಯ ಸಾಹಿತ್ಯದ ಬಗ್ಗೆ ಅನೇಕ ಹಲಬಗೆಯ ನೋಟಗಳಿರುವ ಲೇಖನಗಳನ್ನು ಇಲ್ಲಿ ಕಲೆಹಾಕಿದ್ದಾರೆ. ಈಗಾಗಲೇ ವಿಷ್ಣು ನಾಯ್ಕ ಅವರ ಬರವಣಿಗೆಗೆ ಅರ್ಧಶತಮಾನ, ಅವರ ಕೃತಿಗಳ ಸಂಖ್ಯೆಯೂ 50ನ್ನು ದಾಟಿದೆ. ಆದ್ದರಿಂದ ಈ ಪುಸ್ತಕ ಸಕಾಲಿಕ ಕೂಡ.

ಅಭಿನಂದನ ಗ್ರಂಥವಾಗುವ ಯಾವ ಹಂಬಲ, ಭಾರ ಇಲ್ಲದೇ ಅವರ ಕೃತಿಗಳನ್ನೇ ಮುಖ್ಯವಾಗಿಟ್ಟುಕೊಂಡ ಇಲ್ಲಿನ ಅನೇಕ ಬರಹಗಳು ಕೃತಿನಿಷ್ಠವಾಗಿವೆ. ಅವರ ಕಾವ್ಯ, ಕಥೆ, ಕಾದಂಬರಿ, ಅಂಕಣ ಬರಹಗಳ ಕುರಿತಾಗಿ ಸು.ರಂ. ಎಕ್ಕುಂಡಿ, ಆರ್‌.ವಿ. ಭಂಡಾರಿ, ಜಯಂತ ಕಾಯ್ಕಿಣಿ, ಕುಂ. ವೀರಭದ್ರಪ್ಪ, ಎಚ್.ಎಸ್‌. ವೆಂಕಟೇಶಮೂರ್ತಿ, ಗಿರಡ್ಡಿ ಗೋವಿಂದರಾಜ, ಪುರುಷೋತ್ತಮ ಬಿಳಿಮಲೆ, ಮತ್ತಿತರ ಲೇಖಕರು ಕಾಲಕಾಲಕ್ಕೆ ಪ್ರತಿಕ್ರಿಯಿಸಿದ್ದಾರೆ. ಇಲ್ಲಿನ ಬಹುಪಾಲು ಬರಹಗಳು ಓದುಗನೊಬ್ಬನ ಸಂವೇದನೆಗೆ ಹೊಳೆದ ತಕ್ಷಣದ ಪ್ರತಿಕ್ರಿಯೆಗಳಾಗಿವೆ. ಸಮಾಜವಾದಿಗಳಾದ ದಿನಕರ ದೇಸಾಯಿ, ಗಿರಿ ಪಿಕಳೆ ಅವರ ನೇತೃತ್ವದಲ್ಲಿ ಅಂಕೋಲೆಯಲ್ಲಿ ನಡೆದ ರೈತಹೋರಾಟದ ಸಂಶೋಧನೆಯ ಪುಸ್ತಕ ‘ದುಡಿಯುವ ಕೈಗಳ ಹೋರಾಟದ ಕತೆ’ಯ ಕುರಿತಂತೆ ಬರೆದಿರುವ ವಿಮರ್ಶಕರಾದ ಜಿ.ಎಚ್‌. ನಾಯಕ, ರಹಮತ್‌ ತರೀಕೆರೆ ಅವರ ಬರಹಗಳು ಹೊಸ ಒಳನೋಟಗಳಿಂದ ಕೂಡಿವೆ. ಇಲ್ಲಿನ ಅನೇಕ ಬರಹಗಳು ವಿಷ್ಣು ನಾಯ್ಕ ಅವರ ಬರವಣಿಗೆಯನ್ನು, ಅದರ ಹಿಂದಿನ ಕಸುಬುದಾರಿಕೆಯನ್ನು ಒಂದಲ್ಲ ಒಂದು ರೀತಿಯಲ್ಲಿ ದರ್ಶಿಸುತ್ತ ಹೋಗುತ್ತವೆ.

ಚುಕ್ಕಿ ಜಿಂಕೆ
(ಮಲಯಾಳಂ ಕಥೆಗಳು)

ಮೂಲ: ಎಸ್‌.ಕೆ. ಪೊಟ್ಟೆಕ್ಕಾಟ್‌
ಕನ್ನಡಕ್ಕೆ : ಕೆ.ಕೆ. ನಾಯರ್‌
ಡಾ. ಅಶೋಕ್‌ ಕುಮಾರ್‌
ಪು : 160 ; ಬೆ : ರೂ. 90
ಪ್ರ: ಹೇಮಂತ ಸಾಹಿತ್ಯ,
ನಂ. 972 ‘ಸಿ’, 4ನೇ ‘ಇ’ ವಿಭಾಗ, 10ನೇ ‘ಎ’ ಮುಖ್ಯ ರಸ್ತೆ, ರಾಜಾಜಿನಗರ, ಬೆಂಗಳೂರು– 560010

ಮಲಯಾಳಂನ ಮಹತ್ವದ ಸಾಹಿತಿ ಎಸ್‌.ಕೆ. ಪೊಟ್ಟೆಕ್ಕಾಟ್‌ ಅವರ ಹನ್ನೊಂದು ಕಥೆಗಳನ್ನು ಕೆ.ಕೆ. ನಾಯರ್‌, ಡಾ. ಅಶೋಕ್‌ ಕುಮಾರ್‌ ಈ ಸಂಕಲನದಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಜಗತ್ತಿನ ಹಲವು ಭಾಗಗಳಲ್ಲಿ ಇಲ್ಲಿನ ಕಥೆಗಳು ನಡೆಯುತ್ತವೆ. ಪ್ರಾದೇಶಿಕವಾಗಿ ಒಂದೇ ಸ್ಥಳಕ್ಕೆ ಕಟ್ಟುಬೀಳದ ಲೇಖಕ ಪೊಟ್ಟೆಕ್ಕಾಟ್‌. ‘ಚುಕ್ಕಿ ಜಿಂಕೆ’ ಎಂಬ ಇಲ್ಲಿನ ಮೊದಲ ಕಥೆ ಕರ್ನಾಟಕದ ಕೊಡಗಿನಲ್ಲಿ ನಡೆಯುವಂಥದ್ದು. ಹಲವು ರೀತಿಯ ಜನರು, ವಿವರಗಳಿಂದ ಇಡಿಕಿರಿದಿರುವ ಈ ಕಥೆಗಳು ಹತ್ತಾರು ಜೀವನವನ್ನು ಒಳಗೊಂಡಿವೆ. ಪೊಟ್ಟೆಕ್ಕಾಟ್‌ ಅವರ ಸಂಗ್ರಹವಾದ, ಸಂಕೀರ್ಣ ಗದ್ಯ, ಬಿಗುವಾದ ಬರವಣಿಗೆಯ ಕಟ್ಟಡ ಅವರ ಕತೆಗಳ ಪ್ರಮುಖ ಲಕ್ಷಣಗಳಾಗಿವೆ.

ಕನ್ನಡದ ಇಬ್ಬರು ಅನುವಾದಕರು ಪೊಟ್ಟೆಕ್ಕಾಟ್‌ರ ಕತೆಗಳನ್ನು ಅನುವಾದಿಸಿದ್ದಾರೆ. ಇವರಿಬ್ಬರ ಅನುವಾದದ ವೈವಿಧ್ಯ, ಶೈಲಿ, ವಿಶಿಷ್ಟಗುಣವನ್ನು ಅರಿಯಲು ಈ ಸಂಗ್ರಹ ಅನುವು ಮಾಡಿಕೊಡುತ್ತದೆ. ಮನುಷ್ಯ ಸಂಬಂಧಗಳ ಒಳಸುಳಿಗಳನ್ನು ವಿಸ್ತಾರವಾಗಿ ತೆರೆದಿಡುವ ಇಲ್ಲಿನ ಕಥೆಗಳನ್ನು ಈ ಅನುವಾದಕರು ಮೂಲಕ್ಕೆ ನಿಷ್ಠರಾಗಿಯೇ ಕನ್ನಡಕ್ಕೆ ತಂದಿದ್ದಾರೆ. ಸಂಕಲನದ ಕಥೆಗಳಾದ ‘ಹೆಣ್ಣು’, ‘ಕಾಡು ಸಂಪಿಗೆ’, ‘ಹೊಳೆಯ ದಂಡೆಯಲ್ಲಿ’, ‘ಸಾವಿರ ಬೆಳ್ಳಿ ಮತ್ತು...’, ‘ಕಡವು ದೋಣಿ’, ‘ಕಲೆಯ ಕಣ್ಣುಗಳು’ನಂತಹ ಕಥೆಗಳು ಪೊಟ್ಟೆಕ್ಕಾಟ್‌ ಅವರ ಕಥೆಗಾರಿಕೆಯ ಮಾಂತ್ರಿಕತೆ, ಲೇಖಕನೊಬ್ಬನ ಜೀವನವನ್ನು ಸ್ಪರ್ಶಿಸಿದ ಬಗೆಯನ್ನು ತೋರಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT