ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಸಮ್ಮೇಳನಕ್ಕೆ ಶತಮಾನ ಸನಿಹ

Last Updated 27 ಜನವರಿ 2015, 11:17 IST
ಅಕ್ಷರ ಗಾತ್ರ

ಹಾಸನ: ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆ ಸಿದ್ಧವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಹಾಸನದಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಈ ಬಾರಿಯ ಸಮ್ಮೇಳನಕ್ಕೆ ವಿಶೇಷ ಮಹತ್ವವೂ ಬಂದಿದೆ.

ಇದರ ಜತೆಗೆ ಮತ್ತೊಂದು ಗಮನಾರ್ಹ ಅಂಶವೂ ಇದೆ. ಹಾಸನ ಜಿಲ್ಲೆಯಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನಕ್ಕೆ ಇನ್ನು 4 ವರ್ಷದಲ್ಲಿ ಶತಮಾನ ತುಂಬಲಿದೆ.

1919ರ ಮೇ 6, 7 ಹಾಗೂ 8ರಂದು ಹಾಸನದಲ್ಲಿ (ಅಖಿಲ ಭಾರತ) 5ನೇ ಸಾಹಿತ್ಯ ಸಮ್ಮೇಳನ ನಡೆದಿತ್ತು. ಕರ್ಪೂರ ಶ್ರೀನಿವಾಸ ರಾವ್‌ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು.

ಶತಮಾನದಷ್ಟು ಹಿಂದೆ ಜಿಲ್ಲೆಯಲ್ಲಿ ನಡೆದ ಸಮ್ಮೇಳನದಲ್ಲಿ ಪಾಲ್ಗೊಂಡವರು ಯಾರೂ ಈಗ ಇರಲಾರರು. ಹೀಗಾಗಿ, ಅಂದಿನ ಸಮ್ಮೇಳನದ ಸ್ವರೂಪ ಹೇಗಿತ್ತು? ಎಂಬುದು ಊಹಿಸುವುದು ಕಷ್ಟ. ಆದರೆ, ಅಧ್ಯಕ್ಷರ ಭಾಷಣದ ದಾಖಲೆಗಳಿರುವುದರಿಂದ ಸಮ್ಮೇಳನದ ಒಟ್ಟಾರೆ ಉದ್ದೇಶ ಏನಿರಬಹುದು? ಎಂಬುದರ ಕಲ್ಪನೆ ಸಿಗುತ್ತದೆ.

ಹಿರಿಯ ಸಾಹಿತಿಗಳೇ ಹೇಳುವಂತೆ ಸಾಹಿತ್ಯ ಸಮ್ಮೇಳನಕ್ಕೆ ಉತ್ಸವ, ಜಾತ್ರೆ ರೂಪ ಬಂದಿದ್ದು ಇತ್ತೀಚಿನ ದಿನಗಳಲ್ಲಿ. ಕೆಲವು ವರ್ಷಗಳಿಂದ ಸಮ್ಮೇಳನ ಬರಿ ಭಾಷೆಗೆ ಸೀಮಿತವಾಗಿ ಉಳಿಯದೆ ನೆಲ, ಜಲದ ಒಟ್ಟಾರೆ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಗೋಷ್ಠಿಗಳಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆಯೂ ಆಗುತ್ತಿದೆ.

ಹಾಸನ ಜಿಲ್ಲೆಯಲ್ಲಿ ನಡೆದ ಮೊದಲ ಸಮ್ಮೇಳನ ಬಹುತೇಕ ಸಾಹಿತ್ಯ ಚರ್ಚೆಗೆ ಮೀಸಲಾಗಿತ್ತು. ‘ಕರ್ನಾಟಕದ ಈಗಿನ ಸ್ಥಿತಿಯು ಸಕಲ ವಿಧಗಳಲ್ಲಿಯೂ ಮೇಲಾಗಬೇಕು. ಹೀಗಾಗಲು ಬಗೆಬಗೆಯ ಪ್ರಯತ್ನ ಅಗತ್ಯ. ಆದರೆ, ಅವುಗಳಲ್ಲಿ ಒಂದನ್ನು ಮಾತ್ರವೇ ನಮ್ಮ ಪರಿಷತ್ತು ಕೈಗೊಳ್ಳುವುದಕ್ಕೆ ಸಾಧ್ಯ. ಅದೇನೆಂದರೆ ಭಾಷಾ ಸೇವೆ. ಎಂದರೆ ಕರ್ನಾಟಕ ಸಾಹಿತ್ಯ ಸಂಪತ್ತು ಹೆಚ್ಚಿಸುವುದು...’ ಎಂದು ಹಾಸನದಲ್ಲಿ ನಡೆದ 5ನೇ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶ್ರೀನಿವಾಸ ರಾವ್‌ ಭಾಷಣ ಮಾಡಿದ್ದರು.

ಅಂದು ಸಾಹಿತ್ಯ ಸಂಪತ್ತು ಹೆಚ್ಚಿಸುವುದೇ ಸಮ್ಮೇಳನ ಮುಖ್ಯ ಉದ್ದೇಶವಾಗಿತ್ತು. ಇಂದು ಸಮ್ಮೇಳನದ ಸ್ವರೂಪ ಬದಲಾಗಿದೆ. ಸಾಹಿತ್ಯದ ಜತೆಗೆ ಸಮ್ಮೇಳನ ಇನ್ನು ಹಲವು ಕೆಲಸ ಮಾಡುತ್ತಿದೆ. ಸಾಹಿತ್ಯ, ಸಂಸ್ಕೃತಿ, ಕಲೆ, ಚಳವಳಿ, ಸಿನಿಮಾ... ಹೀಗೆ ಹಲವು ಕ್ಷೇತ್ರಗಳಲ್ಲಿ ಸಮ್ಮೇಳನ ಹೆಜ್ಜೆ ಇಟ್ಟಿದೆ.

ಮೊದಲ ಸಮ್ಮೇಳನದ ಅಧ್ಯಕ್ಷರು
ಕರ್ಪೂರ ಶ್ರೀನಿವಾಸ ರಾವ್‌ ವೃತ್ತಿಯಿಂದ ಎಂಜಿನಿಯರ್‌ ಆಗಿದ್ದರೂ ಪ್ರವೃತ್ತಿಯಿಂದ ಸಾಹಿತ್ಯಾಭಿಮಾನಿ, ಸಾಹಿತಿ. ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡೆ ಕರ್ಪೂರ ಉರಿಸಿದ್ದ ಕಾರಣಕ್ಕೆ ಇವರ ವಂಶಕ್ಕೆ ‘ಕರ್ಪೂರ’ ಎಂಬ ಬಿರುದು ಅಂಟಿಕೊಂಡಿತ್ತು.

‘ಎಂಜಿನಿಯರಿಂಗ್‌ (ಎಲ್‌ಸಿಇ) ಪದವಿ ಪಡೆದ ಬಳಿಕ ಮುಂಬೈನಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಂತರ ಇವರ ಪ್ರತಿಭೆ ಗುರುತಿಸಿದ ಮೈಸೂರು ಸರ್ಕಾರ ಅವರನ್ನು ಮುಖ್ಯ ಎಂಜಿನಿಯರ್‌ ಆಗಿ ನೇಮಕ ಮಾಡಿತು. ಈ ಕೆಲಸದ ಜತೆಯಲ್ಲೇ ಅವರು ಕನ್ನಡಾಭಿಮಾನವನ್ನೂ ಮೆರೆಸಿ, ಪರಿಷತ್ತಿನಲ್ಲಿ ಶಾಶ್ವತವಾಗಿ ಹೆಸರು ಉಳಿಯುವಂತೆ ಮಾಡಿದರು.

ಬೆಂಗಳೂರಿನಲ್ಲಿರುವ ಕೇಂದ್ರ ಸಾಹಿತ್ಯ ಪರಿಷತ್‌ ಮಂದಿರಕ್ಕೆ 1931ರಲ್ಲಿ ಶಂಕುಸ್ಥಾಪನೆ ಮಾಡಿದ್ದೇ ಶ್ರೀನಿವಾಸ ರಾವ್‌. ಶ್ರೀನಿವಾಸ ರಾವ್‌ ಅವರು ಕನ್ನಡ, ಇಂಗ್ಲಿಷ್‌, ಸಂಸ್ಕೃತ ಹಾಗೂ ಮರಾಠಿ ಭಾಷೆಯಲ್ಲಿ ಪಾಂಡಿತ್ಯ ಪಡೆದಿದ್ದರು. ಕೆಆರ್‌ಎಸ್‌ ನಿರ್ಮಾಣದಲ್ಲಿ ಇವರೂ ಪ್ರಮುಖ ಪಾತ್ರ ವಹಿಸಿದ್ದರು.

ಮೈಸೂರು ಸರ್ಕಾರ ಶ್ರೀನಿವಾಸ ರಾವ್‌ ಅವರಿಗೆ ‘ರಾಜ್ಯಸಭಾ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತ್ತು. 1918ರಿಂದ 1933ರವರೆಗೆ ಸಾಹಿತ್ಯ ಪರಿಷತ್ತ್ ಉಪಾಧ್ಯಕ್ಷರೂ ಆಗಿದ್ದರು. ಎಂಜಿನಿಯರ್‌ ಆಗಿದ್ದರಿಂದ ಅವರೇ ಸಾಹಿತ್ಯ ಪರಿಷತ್‌ ಕಟ್ಟಡದ ನೀಲಿನಕ್ಷೆ ತಯಾರಿಸಿ, ತಾವೇ ನಿರ್ಮಾಣ ಕಾಮಗಾರಿಯ ಮೇಲ್ವಿಚಾರಣೆ ನಡೆಸಿದ್ದರು. ಗಾಂಧೀಜಿ ಅನುಯಾಯಿಯಾಗಿದ್ದ ಇವರು, ಕೊನೆಯವರೆಗೂ ಖಾದಿ ಧಾರಿಯಾಗಿದ್ದರು. ಅಂದಿನ ಕಾಲದಲ್ಲೇ ಉತ್ತಮ ಪುಸ್ತಕಗಳ ಪ್ರಕಟಣೆಗೆಂದು ಒಂದು ಸಾವಿರ ರೂಪಾಯಿ ದೇಣಿಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT