ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಾಧಕರಿಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ

Last Updated 27 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಪ್ರೀತಿ ರಾಜಗೋಪಾಲನ್‌
ಭಾರತದ ಯುವ ಪರಿಸರ ಹೋರಾಟಗಾರ್ತಿ ಪ್ರೀತಿ ರಾಜಗೋಪಾಲನ್‌ ಪ್ರಸಕ್ತ ಸಾಲಿನ ಕಾಮನ್‌ವೆಲ್ತ್‌ ಯೂತ್‌ ಪ್ರಶಸ್ತಿಯನ್ನು  ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಎಂಜಿನಿಯರಿಂಗ್‌ ಪದವಿ ಓದುತ್ತಿರುವ ಪ್ರೀತಿ ಮೂರು ವರ್ಷಗಳ ಹಿಂದೆ ಗೆಳೆಯರ ಸಹಾಯದಿಂದ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು  ಆರಂಭಿಸಿದರು. ಸುಮಾರು 200 ಶಾಲೆ ಮತ್ತು 40 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ತ್ಯಾಜ್ಯ ಮರುಬಳಕ್ಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಿದರು.

ಆಗಿನ್ನು ಪ್ರೀತಿಗೆ ಕೇವಲ 18 ವರ್ಷಗಳು ಮಾತ್ರ. ಸತತ ಮೂರು ವರ್ಷ ದೇಶದ ವಿವಿಧ ಭಾಗಗಳನು ಸುತ್ತಿ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಿಗೆ ತ್ಯಾಜ್ಯವನ್ನು ಗೊಬ್ಬರವಾಗಿ ಹೇಗೆ ಮರುಬಳಕೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು. ಅಲ್ಲದೆ ಅತಿ ಕಡಿಮೆ ವೆಚ್ಚದಲ್ಲಿ ಸೌರಶಕ್ತಿಯಿಂದ ದೀಪಗಳನ್ನು ಉರಿಸುವುದು,  ನೀರು ಶುದ್ದೀಕರಣ ಮಾಡುವ ವಿಧಾನದ ಬಗ್ಗೆ ಯಾಂತ್ರಿಕವಾಗಿ ಹೇಳಿಕೊಟ್ಟ ಹೆಗ್ಗಳಿಕೆ  ಅವರದ್ದು.

ಈ ಯೋಜನೆಯಿಂದ  ಸ್ಫೂರ್ತಿ ಪಡೆದ ಕೇಂದ್ರ ಸರ್ಕಾರ  ಪ್ರಸ್ತುತ  40 ನಗರಗಳಲ್ಲಿ ತ್ಯಾಜ್ಯ ಮರುಬಳಕೆ ಮಾಡುವ ಘಟಕಗಳಿಗೆ ಸಹಾಯಧನ ನೀಡುತ್ತಿದ್ದೆ. ಪ್ರೀತಿ ತಮ್ಮ ಯೋಜನೆಗೆ ಆಫ್ರಿಕಾ, ಯುರೋಪ್‌ ದೇಶಗಳ ವಿವಿಧ ಸಂಘ ಸಂಸ್ಥೆಗಳಿಂದ ಸಹಾಯಧನ ಪಡೆದಿದ್ದಾರೆ. ಕಾಮನ್‌ವೆಲ್ತ್‌ ಯುವ  ಪ್ರಶಸ್ತಿಯಿಂದ ಬಂದ ಹಣವನ್ನು ಸಾವಯವ ಕೃಷಿಯ ಬಗ್ಗೆ ಯುವಕರಿಗೆ ಮತ್ತು ಮಹಿಳೆಯರಿಗೆ ತರಬೇತಿ ನೀಡಲು ವಿನಿಯೋಗಿಸುತ್ತಿದ್ದಾರೆ.

ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ತಮ್ಮ ಪರಿಸರದ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ಮರುಬಳಕೆ ಮಾಡಬೇಕು. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಬೇಕು. ಹಗೆ ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವುದರಿಂದ ಪರಿಸರಕ್ಕೆ  ಹಾನಿ ಯಾಗುವುದಿಲ್ಲ. ಹಾಗೇ ವಾತಾವರಣ ತಾಪಮಾನವು ಹೆಚ್ಚುವುದಿಲ್ಲ.

ಆಗಾ  ನೈಸರ್ಗಿಕ ವಿಕೋಪಗಳು ಸಂಭವಿಸುವುದಿಲ್ಲ ಎಂದು ಪ್ರೀತಿ ಯುವಕರಿಗೆ ಕಿವಿ ಮಾತು ಹೇಳುತ್ತಾರೆ. ಸಾವಯವ ಬೆಳೆ ಮತ್ತು ತ್ಯಾಜ್ಯ ಮರುಬಳಕೆ ಮಾಡುವ ವಿಧಾನದ ಬಗ್ಗೆ    ವಿದ್ಯಾರ್ಥಿಗಳು, ಯುವಕರು ಮತ್ತು  ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದೇ ನನ್ನ ಜೀವನದ ಗುರಿ ಎನ್ನುತ್ತಾರೆ ಪ್ರೀತಿ.
-------------------------------------------------------------------------------------------------------------------

ಹೀನಾ ಹಜಾರತ್

ವಿಶ್ವಸಂಸ್ಥೆ ನೀಡುವ ಪ್ರಸಕ್ತ ಸಾಲಿನ ಬ್ರೋಂಜೆ ಪ್ರಶಸ್ತಿಯನ್ನು ಪಾಕಿಸ್ತಾನದ ಯುವತಿ ಹೀನಾ ಹಜಾರತ್‌ ಅವರಿಗೆ ಲಭಿಸಿದೆ. ಪಾಕಿಸ್ತಾನ ಬುಡಕಟ್ಟು ಪ್ರದೇಶಗಳಲ್ಲಿ ಪೋಲಿಯೊ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ದಶ ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಿದ ಸೇವೆಗೆ ಈ ಪ್ರಶಸ್ತಿ ಒಲಿದಿದೆ.

ಕರಾಚಿ ನಿವಾಸಿಯಾದ ಹೀನಾಗೆ ಇಬ್ಬರು ತಮ್ಮಂದಿರು. ದುರದೃಷ್ಟವಶಾತ್‌ ಇಬ್ಬರೂ ಪೋಲಿಯೊ ಪೀಡಿತರು. ತಮ್ಮಂದಿರ ಕಷ್ಟ ಅರಿತಿದ್ದ ಹೀನಾ ಪೋಲಿಯೊ ತಡೆಗಟ್ಟಲು ಚಿಕ್ಕ ವಯಸ್ಸಿನಲ್ಲೇ ಟೊಂಕಕಟದರು.

ಪೋಲಿಯೊ ನಿರ್ಮೂಲನೆ ಮತ್ತು ಜಾಗೃತಿ ಅಭಿಯಾನ ಸಂಸ್ಥೆ ಹುಟ್ಟುಹಾಕಿದರು. ಕೇವಲ ಮೂರು ವರ್ಷಗಳ ಹಿಂದೆ 200 ಜನ ಕಾರ್ಯಕರ್ತರೊಂದಿಗೆ ಆರಂಭವಾದ  ಈ ಸಂಸ್ಥೆಯಲ್ಲಿ ಇಂದು ಹತ್ತು ಸಾವಿರ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

ಹೀನಾ, 2010ರಲ್ಲಿ 200 ಜನ ಕಾರ್ಯಕರ್ತರೊಂದಿಗೆ ಕರಾಚಿ ಕೊಳೆಗೇರಿಯ ಸುಮಾರು 20, 000 ಸಾವಿರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ವಿಶ್ವದ ಗಮನ ಸೆಳೆದಿದ್ದರು. ನಂತರ ಪಾಕಿಸ್ತಾನದ ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳಿಗೆ ತೆರಳಿ 5 ವರ್ಷದೊಳಗಿನ ಸುಮಾರು ಹತ್ತು  ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಹೊಸ ದಾಖಲೆ ಬರೆದರು. 

ಪೋಲಿಯೊದಿಂದ ಉಂಟಾಗುವ ಶಾಶ್ವತ ಅಂಗವೈಕಲ್ಯದ ಬಗ್ಗೆ ಮನೆ ಮನೆಗೆ ತೆರಳಿ  ಜಾಗೃತಿ ಮೂಡಿಸುವ ಕಾಯಕದಲ್ಲಿ ಹೀನಾ ಮತ್ತು ಕಾರ್ಯಕರ್ತರು ನಿರತರಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪಾಕಿಸ್ತಾನ ಸರ್ಕಾರಕ್ಕೆ  ನೀಡಿರುವ  ಲಸಿಕೆಗಳಿಗಿಂತ ದುಪ್ಪಟ್ಟು ಪೋಲಿಯೊ ಲಸಿಕೆಗಳನ್ನು ಹೀನಾ ಸಂಸ್ಥೆಗೆ ನೀಡಿದೆ.

ಹೀನಾ ಅವರ ನಿಸ್ವಾರ್ಥ ಸೇವೆ, ಸಮಾಜ ಕಾರ್ಯದಲ್ಲಿನ ಪ್ರಾಮಾಣಿಕ ದುಡಿಮೆಯನ್ನು ಪರಿಗಣಿಸಿ ವಿಶ್ವಸಂಸ್ಥೆ ಬ್ರೋಂಜೆ ಪ್ರಶಸ್ತಿ ನಿಡಿದೆ.
ಹೀನಾ ಅವರು ಪಾಕಿಸ್ತಾನದಲ್ಲಿ ಪೋಲಿಯೊ ನಿರ್ಮೂಲನೆಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ.
---------------------------------------------------------------------------------------------------------------------------

ವರುಣ್‌ ಆರೋರ

ವಿಶ್ವಸಂಸ್ಥೆ ಪ್ರತಿ ವರ್ಷ ಯುವಕರಿಗಾಗಿ ಒಂದು ಸಂಶೋಧನಾ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಅದು ತಂತ್ರಜ್ಞಾನದ ಮೂಲಕ ಜಗತ್ತನ್ನೇ ಬದಲಿಸುವಂತಹ ಸಂಶೋಧನೆಯಾಗಿರಬೇಕು.

2013ನೇ ಸಾಲಿನ ಈ ಪ್ರಶಸ್ತಿಗೆ ಭಾರತೀಯ ಯುವಕ ವರುಣ್‌ ಆರೋರ ಆಯ್ಕೆಯಾಗುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ’ಓಪನ್‌ ಕರಿಕುಲಂ’ ಎಂಬ ವೆಬ್‌ಸೈಟ್‌ ವಿನ್ಯಾಸಕ್ಕೆ ದೆಹಲಿ ಮೂಲದ ವರುಣ್‌ಗೆ  ವಿಶ್ವಸಂಸ್ಥೆ ಪ್ರಶಸ್ತಿ ಸಂದಿದೆ.

ವರುಣ್‌ ಸೇರಿದಂತೆ ನಾನಾ ದೇಶಗಳ 10 ಯುವ ಸಂಶೋಧಕರು    ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ವಿಶ್ವಸಂಸ್ಥೆ ನೀಡುವ ಈ ಪ್ರಶಸ್ತಿಗೆ  ಭಾರತ ಸೇರಿದಂತೆ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ರಾಷ್ಟ್ರಗಳ ನಾಗರಿಕರು ಅರ್ಹರು.

ಈ ಭಾರೀ 88 ದೇಶಗಳಿಂದ 600 ಸ್ಪರ್ಧಿಗಳು ಭಾಗವಹಿಸಿದ್ದರು. ಕ್ರಿಯಾತ್ಮಕ ತಂತ್ರಜ್ಞಾನದ ಮೂಲಕ ಜಗತ್ತನ್ನು ಬದಲಿಸಬಹುದು ಎಂಬುದು ಈ ಪ್ರಶಸ್ತಿಯ ಘೋಷವಾಕ್ಯ. ಅದರಂತೆ ಸ್ಪರ್ಧಿಗಳು ತಮ್ಮ ಸುತ್ತಲಿನ ಸಮಾಜವನ್ನು ಕೇಂದ್ರವಾಗಿಟ್ಟುಕೊಂಡು ತಂತ್ರಜ್ಞಾನದ ಮೂಲಕ ಅದನ್ನು ಹೇಗೆ ಬದಲಿಸಬಹುದು ಎಂಬುದನ್ನು ತೋರಿಸಿಕೊಡಬೇಕು ಅಥವಾ ಬದಲಾವಣೆಗೆ ಪೂರಕವಾದ ತಂತ್ರಜ್ಞಾನವನ್ನು  ಕಂಡುಹಿಡಿಯಬೇಕು. 

ಈ ಸ್ಪರ್ಧೆಗೆ ವರುಣ್‌ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಯ್ಕೆ ಮಾಡಿಕೊಂಡರು. ಮುಖ್ಯವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಒತ್ತು ನೀಡಿದರು. ‘ಓಪನ್‌ ಕರಿಕುಲಂ’  ವೆಬ್‌ಸೈಟ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ  ಸಂಪೂರ್ಣ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದರು.

ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾರು ಬೇಕಾದರೂ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಈ ವೆಬ್‌ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಇದು ಓಪನ್‌ ಕರಿಕುಲಂನ ವಿಶೇಷ.
– ಪೃಥ್ವಿರಾಜ್ ಎಂ.ಎಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT