ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದಿಂದ ನೇಪಥ್ಯಕ್ಕೆ ಸರಿದ ಸಿ.ಆರ್‌. ಸಿಂಹ

Last Updated 28 ಫೆಬ್ರುವರಿ 2014, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಉದುರುದುರಾದ ಬಿಸಿ­ಬಿಸಿ ಅನ್ನ. ಡಬ್ಬಿಯಲ್ಲಿದ್ದ ಬಾಳ­ಕದ ಮೆಣಸಿನ­ಕಾಯಿ ತೆಗೆದು ಪುಡಿ­ಪುಡಿ ಮಾಡಿ, ಅನ್ನದ ಮೇಲೆ ಹಾಕಿದೆ. ಎರಡು ಚಮಚ ಎಣ್ಣೆ. ನನ್ನ ರುಚಿಗೆ ತಕ್ಕಷ್ಟು ಉಪ್ಪು. ಕಲಸಿ­ಕೊಂಡು ಹೊಡೆದಾಗ... ಆಹಾ ಮಜವೋ ಮಜ’.

ಸಿ.ಆರ್‌. ಸಿಂಹ ಬಾಳಕದ ಮೆಣ­ಸಿನ­ಕಾಯಿಯ ರುಚಿ ಹೇಳಲು ಇಂಥ­ದ್ದೊಂದು ಅನುಭವವನ್ನು ವರ್ಣಿ­ಸಿದ್ದು ನಾಟಕೀಯವಾಗಿಯೇ. ಅವರು ಘಟನೆ, ಅನುಭವಗಳನ್ನು ಬಣ್ಣಿಸು­ತ್ತಿದ್ದದ್ದೇ ಹೀಗೆ. ಒಂದಿಷ್ಟು ನಾಟಕ, ಸಿನಿಮಾ, ಧಾರಾವಾಹಿ ಶೈಲಿ­ಯನ್ನು ಬೆರೆಸಿದಂತೆ. ಅದನ್ನು ಖುದ್ದು ಹೇಳಿಕೊಂಡೇ ಅವರು ಮಾತಿಗೆ ಕೂರುತ್ತಿದ್ದರು ಅಥವಾ ನಿಲ್ಲುತ್ತಿ­ದ್ದರು. ನಾಟಕ, ಸಿನಿಮಾ, ಧಾರಾವಾಹಿ ಮೂರೂ ಮಾಧ್ಯಮ­ಗಳಲ್ಲಿ ಪಳಗಿ­ಸಿಕೊಂಡ ಸಿಂಹ, ತಮ್ಮ ವಿಶಿಷ್ಟ ಕಂಠದಿಂದಲೇ ಗುರುತಾದ ಕೆಲವೇ ನಟರಲ್ಲಿ ಒಬ್ಬರು.

1942ರಲ್ಲಿ ಹುಟ್ಟಿದ ಸಿ.ಆರ್‌. ಸಿಂಹ ಚಿಕ್ಕಂದಿ­ನಿಂ­ದಲೇ ರಂಗಾಸಕ್ತಿ ಬೆಳೆಸಿ­ಕೊಂಡವರು. 12ನೇ ವಯಸ್ಸಿ­ನ­ಲ್ಲಿಯೇ ನಾಟಕಗಳಿಗೆಂದು ಬಣ್ಣ­ಹಚ್ಚಿದ್ದರು. ನ್ಯಾಷ­ನಲ್‌ ಕಾಲೇಜು ವಿದ್ಯಾರ್ಥಿ­ಯಾಗಿದ್ದಾಗ ಅವರ ಆಸ­ಕ್ತಿಗೆ ರೆಕ್ಕೆಪುಕ್ಕ ಮೂಡಿತು. ಅಲ್ಲಿದ್ದ ‘ಹಿಸ್ಟ್ರಿಯಾನಿಕ್ಸ್‌ ಕ್ಲಬ್‌’ನ ಸದಸ್ಯರಾಗಿದ್ದ ಸಿಂಹ, ‘ಮನವೆಂಬ ಮರ್ಕಟ’ ನಾಟಕದ ಅಭಿನಯದಿಂದ ಗಮನ ಸೆಳೆದವರು.

ಮಾವನ ಮಗಳಾದ ಶಾರದಾ ಅವರನ್ನು 1970­ರಲ್ಲಿ ಪ್ರೇಮಿಸಿ, ಮದುವೆ­ಯಾದ ಸಿಂಹ, ರಂಗತಂಡ ಕಟ್ಟಿದ್ದು ಆಮೇಲೆ. ಕಪ್ಪಣ್ಣ, ಲೋಕೇಶ್‌ ಮತ್ತಿತರ ಸಮಾನ­ಮನಸ್ಕರ ಜೊತೆ­ಗೂಡಿ ಅವರು ‘ನಟರಂಗ’ ತಂಡ ಕಟ್ಟಿದ್ದು. ಮಗಳು ಅಖಿಲಾ ಹುಟ್ಟಿದ ವರ್ಷವೂ ಅದೇ. ಮಗಳು, ರಂಗತಂಡ ಎರಡನ್ನೂ ಒಟ್ಟೊಟ್ಟಿಗೆ ಬೆಳೆ­ಸಿ­ದೆವು ಎಂದು ಹೆಮ್ಮೆಯಿಂದ ಹೇಳಿಕೊ­ಳ್ಳುತ್ತಿದ್ದರು.

‘ಕಾಕನಕೋಟೆ’, ‘ತುಘಲಕ್‌’, ‘ಸಂಕ್ರಾಂತಿ’ ಈ ಮೂರು ‘ನಟರಂಗ’ದ ಸಿಗ್ನೇಚರ್‌ ನಾಟಕಗಳು. ಅದ­ರಲ್ಲೂ ತುಘಲಕ್‌ ಎಂದೊಡನೆ ಸಿಂಹ ಆ ಪಾತ್ರ­ದೊಟ್ಟಿಗೇ ಕಣ್ಣಿಗೆ ಕಟ್ಟುತ್ತಾರೆ. ಸಿಂಹ ಅವರ ಅಭಿನಯ ಕೌಶಲವನ್ನು ಕೆಲವರು ಇಂಗ್ಲಿಷ್‌ ಶೈಲಿ ಎಂದು ಬಣ್ಣಿಸಿದ್ದಿದೆ. ಶೇಕ್ಸ್‌ಪಿಯರ್‌ನ ‘ಮಿಡ್‌ ಸಮ್ಮರ್ ನೈಟ್ಸ್‌ ಡ್ರೀಮ್‌’ ಹಾಗೂ ‘ಒಥೆಲೊ’ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿ, ಅವರು ಪ್ರದರ್ಶಿಸಿದ್ದೇ ದೇಶದ ವಿವಿಧೆಡೆ ಅವರ ಹೆಸರು ಹಬ್ಬಿತು.

ಇಂಗ್ಲಿಷ್‌ ನಾಟಕಗಳ ಮೋಹ: ಇಂಗ್ಲಿಷ್‌ ನಾಟಕ­ಗಳಲ್ಲಿ ನಟಿಸುವ ಅವಕಾಶದ ಕದ ತೆರೆದುಕೊಂಡಿದ್ದು 1960ರಲ್ಲಿ ಅವರು ‘ಬೆಂಗಳೂರು ಲಿಟ್ಲ್‌ ಥಿಯೇ­ಟರ್‌’ (ಬಿಎಲ್‌ಟಿ) ಸದ್ಯಸರಾದ ಮೇಲೆ.  ಮೋಲಿ­ಯರ್‌, ಬರ್ನಾಡ್‌ ಷಾ, ನೀಲ್‌ ಸಿಮ್ಸನ್‌, ಎಡ್ವರ್ಡ್‌ ಆಲ್ಬಿ ಮೊದಲಾದವರ ಇಂಗ್ಲಿಷ್‌ ನಾಟಕಗಳ ಮೋಹಕ್ಕೆ ಅವರು ಬಿದ್ದರು. ಕೆಲವು ನಾಟಕಗಳನ್ನು ನಿರ್ದೇಶಿ­ಸಿದರು. ಹಲವು ಪಾತ್ರಗಳನ್ನು ನಿರ್ವಹಿಸಿ­ದರು. ದೆಹಲಿ, ಚೆನ್ನೈ, ಕೋಲ್ಕತ್ತ, ಮುಂಬೈ ಮೊದ­ಲಾದ ಕಡೆ­ಗಳಲ್ಲಿ  ಸಿಂಹ ಪಾತ್ರದ ಗತ್ತಿಗೆ ಪ್ರೇಕ್ಷಕರ ಚಪ್ಪಾಳೆ ಸಂದಿತು.

1983ರಲ್ಲಿ ‘ವೇದಿಕೆ’ ರಂಗತಂಡ­ವನ್ನು ಕಟ್ಟಿದ ಸಿಂಹ, ‘ಟಿಪಿಕಲ್‌ ಟಿ.ಪಿ. ಕೈಲಾಸಂ’ ಎಂಬ ಏಕವ್ಯಕ್ತಿ ನಾಟಕದ ಮೂಲಕ ಹೊಸ ರುಜು ಮಾಡಿದರು. ಕೈಲಾಸಂ ಪಾತ್ರವನ್ನು ಅವರು ನಿರ್ವಹಿಸಿದ ಪರಿ ನೋಡಿದ­ವರಿಗೆ ನಿಜಕ್ಕೂ ಕೈಲಾಸಂ ಹಾಗೆಯೇ ಇದ್ದರೇನೋ ಎನಿಸಿಬಿಟ್ಟಿತ್ತು. ಅಮೆರಿಕ, ಕೆನಡಾ, ಇಂಗ್ಲೆಂಡ್‌­ನಲ್ಲೂ ಪ್ರದರ್ಶನ ಕಂಡ ಆ ನಾಟಕ ಸಿಂಹ ವರ್ಚ­ಸ್ಸನ್ನು ಹೆಚ್ಚಿಸಿತು. ವಿದೇಶದಲ್ಲಿ ಪ್ರದರ್ಶಿತ­ಗೊಂಡ ಹವ್ಯಾಸಿ ತಂಡದ ಮೊದಲ ನಾಟಕ ಎಂಬ ಅಗ್ಗಳಿಕೆ ‘ಟಿಪಿಕಲ್‌ ಟಿ.ಪಿ. ಕೈಲಾಸಂ’  ನಾಟಕದ್ದು.

‘ಮೀಸೆ ಬಂದೋರು’, ‘ಭೈರವಿ’, ‘ರಸಋಷಿ ಕುವೆಂಪು’, ‘ಮದುವೆ ಮದುವೆ’, ‘ಹಾವು ಏಣಿ’, ‘ಮ್ಯಾಕ್‌ಬೆತ್‌’, ‘8/15’ ಮೊದಲಾದ ನಾಟಕಗಳು ‘ವೇದಿಕೆ’ ತಂಡದ ಕೊಡುಗೆಗಳು. 2010ರಲ್ಲಿ ‘ರಸ­ಋಷಿ ಕುವೆಂಪು’ ನಾಟಕವನ್ನು ಸಿಂಹ ಸಿನಿಮಾ ಮಾಡುವ ಯತ್ನಕ್ಕೆ ಕೈಹಾಕಿದರು. ಅವರ ಮಗ ಋತ್ವಿಕ್‌ ಸಿಂಹ ಅದನ್ನು ನಿರ್ದೇಶಿಸಿದರು. ಅದರಲ್ಲಿ ಕುವೆಂಪು ಪಾತ್ರದಲ್ಲಿ ಖುದ್ದು ಸಿಂಹ ಅಭಿನಯಿ­ಸಿದರು. ಆ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಂದಿತು.

ಸಿ.ಅಶ್ವತ್ಥ್‌ ಅವರ ಬಾಲ್ಯದ ಗೆಳೆಯರಾಗಿದ್ದ ಸಿಂಹ, ನಾಲಗೆಯ ಮೇಲೆ ಕನ್ನಡದ ಹೆಸರಾಂತ ಕವಿಗಳ ಪದ್ಯ­ಗಳು ಕುಣಿಯುತ್ತಿದ್ದವು. ಅವರು ಪದ್ಯಗಳನ್ನು ಓದುತ್ತಿ­ರ­ಲಿಲ್ಲ, ಹಾಡುತ್ತಿ­ರಲಿಲ್ಲ; ಅಭಿನಯಿಸಿ ತೋರುತ್ತಿದ್ದರು. ಅವನ್ನು ಕೇಳುತ್ತಲೇ ಎಷ್ಟೋ ಸಲ ಅಶ್ವತ್ಥ್‌ ರಾಗ ಸಂಯೋ­ಜನೆ ಮಾಡಿದ ಉದಾಹರಣೆಗಳಿವೆ. ಸಿಂಹ ಅವರ ಪತ್ನಿಯ ಹೆಸರು ಶಾರದಾ. ಹಾಗಾಗಿ ಕೆ.­ಎಸ್‌.­­ನರ­ಸಿಂ­ಹ­­­­ಸ್ವಾಮಿ ಅವರ ‘ಬಾರೆ ನನ್ನ ಶಾರದೆ’ ಕವನ ಹಾಡಾದ­ದ್ದರಲ್ಲಿ  ಅವರ ಕಾಣ್ಕೆ­ಯೂ ಇದೆ.

‘ಸಂಸ್ಕಾರ’, ‘ಬರ’, ‘ಚಿತೆಗೂ ಚಿಂತೆ’, ‘ಅನುರೂಪ’ ಮೊದ­ಲಾದ ಪರ್ಯಾಯ ಚಿತ್ರಗಳಲ್ಲಿ ಅಭಿನಯಿಸಿದ್ದ ಸಿಂಹ, ಕಮರ್ಷಿಯಲ್‌ ಚಿತ್ರಗಳಲ್ಲೂ ತಮ್ಮ ಸಿರಿಕಂಠ­ದಿಂದಲೇ ಗುರುತಾ­ದವರು. ‘ಇಂದಿನ ರಾಮಾಯಣ’, ‘ನೀ ಬರೆದ ಕಾದಂಬರಿ’, ‘ನೀ ತಂದ ಕಾಣಿಕೆ’, ‘ಪರಮೇಶಿ ಪ್ರೇಮಪ್ರಸಂಗ’, ‘ರಾಯರು ಬಂದರು ಮಾವನ ಮನೆಗೆ’ ಮೊದಲಾದ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಜನಮನ­ದಲ್ಲಿವೆ.

ಸಿನಿಮಾ ನಿರ್ದೇಶಕನ ಟೋಪಿ­ಯನ್ನೂ ತೊಟ್ಟ ಅವರು ‘ಕಾಕನಕೋಟೆ’, ‘ಶಿಕಾರಿ’, ‘ಸಿಂಹಾಸನ’, ‘ಅಶ್ವ­ಮೇಧ’, ‘ಅಂಗೈಯಲ್ಲಿ ಸಪ್ಸರೆ’  ಚಿತ್ರಗಳಿಗೆ ಆ್ಯಕ್ಷನ್‌, ಕಟ್‌ ಹೇಳಿದರು. ಆ ಇನಿಂಗ್ಸ್‌ನಲ್ಲೂ ಭಾಗಶಃ ಗೆಲುವು ಅವರಿಗೆ ಸಂದಿತೆನ್ನಬೇಕು. ಟಿ.ವಿ. ಮಾಧ್ಯಮಕ್ಕೂ ಒಲ್ಲೆ ಎನ್ನದ ಅವರು ‘ಮಾಲ್ಗುಡಿ ಡೇಸ್‌’ ಧಾರಾವಾಹಿಯಲ್ಲಿ ನಟಿಸಿದರು. ‘ಅಮೆರಿಕದಲ್ಲಿ ಗೊರೂರು’ ಪ್ರವಾಸ ಕಥನವು ‘ಗೊರೂರು ಇನ್‌ ಅಮೆರಿಕ’ ಎಂದು ಇಂಗ್ಲಿಷ್‌ ಧಾರಾವಾಹಿಯಾಗಿ ಮೂಡಿಬಂದಿತು. ಅದರಲ್ಲಿ ಗೊರೂರರ ಪಾತ್ರ ನಿರ್ವಹಿಸಿದ್ದು ಸಿಂಹ. 

ಮಾತಿನಲ್ಲಿ, ಬರವಣಿಗೆಯಲ್ಲಿ ಇಂಗ್ಲಿಷ್‌ ಬಳಸು­ವುದನ್ನು ತಮ್ಮ ಶೈಲಿಯೇ ಆಗಿಸಿಕೊಂಡಿದ್ದ ಸಿಂಹ, ಪತ್ರಿಕಾ ಅಂಕಣಕಾರರಾಗಿಯೂ ಜನಪ್ರಿಯ­ರಾಗಿದ್ದರು. ಅವರ ಅಂಕಣ ಬರಹಗಳು ‘ನಿಮ್ಮ ಸಿಮ್ಮ’ ಕೃತಿ ರೂಪದಲ್ಲೂ ಪ್ರಕಟಗೊಂಡಿವೆ.

ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹಲವು ಹಿರಿಮೆ ಗರಿಮೆಗಳು ಅವರ ಕಿರೀಟವನ್ನು ಅಲಂಕರಿ­ಸಿದ್ದವು. ಬನಶಂಕರಿಯಲ್ಲಿನ ‘ಗುಹೆ’ ಹೆಸರಿನ ತಮ್ಮ  ಭವ್ಯವಾದ ಮನೆಯಲ್ಲಿ ಆಕಾಶವ­ನ್ನು ಚೆಂದವಾಗಿ ಕಾಣಿಸು­ವಂಥ ‘ಸ್ಕೈಲೈಟ್‌’ ಅವರಿಗೆ ಬಹಳ ಅಚ್ಚು­ಮೆಚ್ಚಾಗಿತ್ತು. ಆ ಮನೆಯಲ್ಲಿ ತಮ್ಮ ಜೊತೆಗೆ ಚಾರ್ಲಿ ಚಾಪ್ಲಿನ್‌ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಎಂದು ಅವರು ಹೇಳಿಕೊಂಡಿದರು.

ಸದಾ ಗತ್ತಿನಿಂದ ಕೂಡಿದ ಅವರ ಮಾತು ಕಳೆದ ಕೆಲವು ವರ್ಷಗಳಿಂದ ತೊದಲು ದನಿಯಿಂದ ಕಳೆಗುಂ­ದುತ್ತಾ ಬಂದಿತ್ತು. ಆದರೆ ಅವರ ಆತ್ಮವಿಶ್ವಾಸ ಮಾತ್ರ ಹಾಗೆಯೇ ಇತ್ತು. ಸಾಹಿತ್ಯ, ಸಾಹಿತಿಗಳು, ನಾಟಕ, ಸಿನಿಮಾ ಎಲ್ಲರನ್ನೂ ಎಲ್ಲವನ್ನೂ ಮನದುಂಬಿ ಅನುಭ­ವಿ­ಸುತ್ತಿದ್ದ ಅವರು, ಕೊನೆಯ ಕೆಲವು ವರ್ಷಗಳು ಅನಾ­ರೋ­ಗ್ಯದ ವಿರುದ್ಧ ಹೋರಾಡಬೇಕಾಗಿ ಬಂದದ್ದು ದುರಂತ. ಸಿಂಹಕಂಠ ಇನ್ನು ಕೇಳು­ವುದಿಲ್ಲ, ಅದರ ನೆನಪು ಮಾತ್ರ ಅನು­ರಣಿಸುತ್ತಲೇ ಇರುತ್ತದೆ.

ಹಿರಿಯ ರಂಗಕರ್ಮಿ ಸಿ.ಆರ್‌.ಸಿಂಹ ಇನ್ನಿಲ್ಲ
ಬೆಂಗಳೂರು: ಹಿರಿಯ ರಂಗಕರ್ಮಿ, ಚಲನಚಿತ್ರ ನಟ ಸಿ.ಆರ್‌.ಸಿಂಹ (72) ಶುಕ್ರವಾರ ನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ನಿಧನರಾದರು. ಒಂದು ವರ್ಷದಿಂದ ಪ್ರಾಸ್ಟೆಟ್‌ ಗ್ರಂಥಿ  ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು  ಗುರುವಾರ ತೀವ್ರ ಅಸ್ವಸ್ಥಗೊಂಡು, ಪ್ರಜ್ಞಾಶೂನ್ಯ ಸ್ಥಿತಿಗೆ ಜಾರಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವಿಧಿವಶರಾದರು.

ಮೃತರು  ಪತ್ನಿ ಶಾರದಾಮಣಿ, ಪುತ್ರ ಋತ್ವಿಕ್‌ ಸಿಂಹ, ಸೊಸೆ ಜಸ್ಲಿನ್‌, ಪುತ್ರಿ ಅಖಿಲಾ, ಅಳಿಯ ದಿನೇಶ್‌ ರವಿರಾಜ್‌, ಸಹೋದರ ನಟ ಶ್ರೀನಾಥ್‌ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ.

ಸಿ.ಆರ್‌.ಸಿಂಹ ಅವರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿ­ಸಿದ್ದರು. ‘ಸಂಸ್ಕಾರ’, ‘ಸಂಕಲ್ಪ’,  ‘ಬರ’ ಪ್ರಶಸ್ತಿ ವಿಜೇತ ಚಿತ್ರಗಳು. ‘ಕಾಕನಕೋಟೆ’, ‘ಶಿಕಾರಿ’, ‘ಅಶ್ವಮೇಧ’, ‘ಅಂಗೈಯಲ್ಲಿ ಅಪ್ಸರೆ’ ಚಲನಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ‘ತುಘಲಕ್‌‘ ನಾಟಕದಲ್ಲಿನ ಅಮೋಘ ಅಭಿನಯದ ಮೂಲಕ  ಪ್ರಸಿದ್ಧಿ ಪಡೆದಿದ್ದರು.  ‘ಕಾಕನಕೋಟೆ’ ಚಿತ್ರನಿರ್ದೇಶನಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಬಂದಿತ್ತು. ನಾಟಕ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ರಾಷ್ಟ್ರಪ್ರಶಸ್ತಿ ದೊರಕಿತ್ತು.

ಶನಿವಾರ ಅಂತ್ಯಕ್ರಿಯೆ: ಸಿ.ಆರ್‌.ಸಿಂಹ ಅವರ ಪಾರ್ಥಿವ ಶರೀರವನ್ನು ಶನಿವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆಯ­ವರೆಗೆ  ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ  ಇಡಲಾ­ಗುವುದು. ಸಂಜೆ 5 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಟ ‘ಮುಖ್ಯಮಂತ್ರಿ’ ಚಂದ್ರು, ಹಿರಿಯ ಕವಿ ಡಾ. ಎಚ್‌.ಎಸ್‌.­ವೆಂಕಟೇಶ್‌ಮೂರ್ತಿ, ನಾಟಕಕಾರ ಗಿರೀಶ್ ಕಾನಾರ್ಡ್‌, ರಂಗಕರ್ಮಿ ಪ್ರಕಾಶ್‌ಬೆಳವಾಡಿ, ಹಿರಿಯ ನಟಿ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿದರು. ರಂಗಕರ್ಮಿ ಸಿ.ಆರ್‌.ಸಿಂಹ ಅವರ ವೈದ್ಯಕೀಯ ವೆಚ್ಚವನ್ನು ಸರ್ಕಾರ­ದಿಂದಲೇ ಭರಿಸಲಾಗುವುದು ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಸಿಂಹ ಪ್ರೇಮಪತ್ರ ಬರೆದುಕೊಡುತ್ತಿದ್ದ

ನನ್ನ  ಮತ್ತು ಸಿ.ಆರ್‌.ಸಿಂಹನ ಸ್ನೇಹಕ್ಕೆ  50 ವರ್ಷಗಳ ಇತಿಹಾಸವಿದೆ. ಆತ ಸ್ನೇಹಜೀವಿ ಮಾತ್ರವಲ್ಲ, ಅಪ್ಪಟ ಚುರುಕಿನ ಮನುಷ್ಯ. ಸದಾ ಪ್ರಯೋಗಶೀಲ ಮನಸ್ಸು ಆತನದ್ದು. ಸಿಂಹ ವಾರ್ತಾ ಇಲಾಖೆಯಲ್ಲಿ ಕೆಲ ಕಾಲ ಕಾರ್ಯನಿರ್ವಹಿಸಿದ್ದ.

1969ರಲ್ಲಿ ಪ್ರದರ್ಶನಗೊಂಡ ‘ತುಘಲಕ್‌’ ನಾಟಕದಿಂದ ನಮ್ಮಿಬ್ಬರ ಸ್ನೇಹ ಗಟ್ಟಿಯಾಯ್ತು. ಆತ ಅದರಲ್ಲಿ ‘ತುಘಲಕ್‌’ ಪಾತ್ರ  ಮಾಡಿದ್ದರೆ, ನಾನು ಆ ನಾಟಕಕ್ಕೆ ಬೆಳಕಿನ ಸಂಯೋಜನೆಯ ಹೊಣೆ ಹೊತ್ತಿದ್ದೆ. ಆ ನಂತರ  1972ರಲ್ಲಿ ಸಿ.ಅಶ್ವತ್ಥ್‌, ಲೋಕೇಶ್‌ ಹಾಗೂ ಸಿ.ಆರ್‌.ಸಿಂಹನ ಜತೆಯಾಗಿ ‘ನಟರಂಗ’ ತಂಡವನ್ನು ಕಟ್ಟಿದೆವು. ಬರೊಬ್ಬರಿ ಮೂವತ್ತು ವರ್ಷಗಳ ಕಾಲ ಕನ್ನಡ, ಇಂಗ್ಲಿಷ್‌ ನಾಟಕಗಳ ಪ್ರದರ್ಶನ ನೀಡಿದೆವು. ಆತನ ಬಹುತೇಕ ನಾಟಕಗಳಿಗೆ ಬೆಳಕಿನ ವಿನ್ಯಾಸ ಮಾಡಿರುವ ಬಗ್ಗೆ ಖುಷಿಯಿದೆ. ನಾಟಕ­­ಗಳಲ್ಲಿ ಅಭಿನಯಿಸು­ತ್ತಿ­ರುವಾಗಲೇ ಪ್ರೀತಿಯಲ್ಲಿ ಬಿದ್ದೆ. ಆಗ ನನಗೆ ಸಹಾಯ ಮಾಡಿದ್ದು ಸಿ.ಆರ್‌.ಸಿಂಹನೇ. ಆತ ಬರೆದ ಪ್ರೇಮಪತ್ರಗಳನ್ನು ನಕಲು ಮಾಡಿ ನಾನು ನನ್ನ ಹುಡುಗಿಗೆ ನೀಡುತ್ತಿದ್ದೆ. ನನ್ನ ಮದುವೆಯಲ್ಲಿ ಆತ ಹಿರಿಯಣ್ಣನಂತೆ ಓಡಾಡಿದ್ದ.  ತುಂಬಾ ಓದಿಕೊಂಡಿದ್ದ, ಸಂಯಮ­ಶೀಲ ಹೃದಯ ಅವನದ್ದು. ತುಘಲಕ್‌, ಕುವೆಂಪು, ಚೆಗೆವಾರ ಸೇರಿದಂತೆ ಜೀವನದಲ್ಲಿ ನೆನಪಿಡುವಂತಹ ನಾಯಕರ ಪಾತ್ರಗಳಲ್ಲಿ ಅಭಿನಯಿಸಿದ್ದ ಆತ ಇಲ್ಲವೆಂಬುದನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತಿದೆ’
– ಶ್ರೀನಿವಾಸ ಜಿ.ಕಪ್ಪಣ್ಣ, ಹಿರಿಯ ರಂಗಕರ್ಮಿ


ಸಿಂಹ ನನ್ನ ಗುರು
>

‘ನಾನು ರಂಗಪ್ರವೇಶ ಮಾಡಿದ್ದೇ ಸಿ.ಆರ್‌.ಸಿಂಹ ಅವರ ತುಘಲಕ್‌ ನಾಟಕದಲ್ಲಿ.  ರಂಗಭೂಮಿ ಸೂತ್ರ, ನಟನೆಯ ಪಟ್ಟುಗಳನ್ನು ಕಲಿಸಿದ ಗುರು. ಅವರು ‘ತುಘಲಕ್‌’ನ ಪಾತ್ರ ಮಾಡುತ್ತಿದ್ದರೆ, ನಾನು ಎರಡನೇ ಪ್ರಮುಖ ಪಾತ್ರ  ‘ಅಜೀಜ್‌’ ಅನ್ನು  ನಿರ್ವಹಿಸಿದ್ದೆ.

ವೇದಿಕೆಯ ಮೇಲೆ ‘ತುಘಲಕ್‌’ ಪಾತ್ರದಲ್ಲಿ ಪರಕಾಯ ಪ್ರವೇಶ ಪಡೆದು ಸಿ.ಆರ್‌.ಸಿಂಹ ನಟಿಸುತ್ತಿದ್ದರೆ, ತೆರೆಯ ಪಕ್ಕದಲ್ಲಿದ್ದ ‘ಅಜೀಜ್‌’ ಪಾತ್ರದಲ್ಲಿ ನಾನು ಭಾವಪರವಶನಾಗಿ ಬಿಡುತ್ತಿದ್ದೆ. ಅವರಿಗಿಂತ ನಾನು ವಯಸ್ಸಿನಲ್ಲಿ ತುಂಬಾ ಚಿಕ್ಕವನಾಗಿದ್ದರೂ, ನನ್ನೊಂದಿಗೆ ಸಲುಗೆಯಿಂದ ಮಾತನಾಡಿಸುತ್ತಿದ್ದರು.

  ಸ್ವತಃ ಸಿಂಹ ಅವರೇ ‘ತುಘಲಕ್‌’ ಪಾತ್ರದಿಂದ ಹೊರಬರಲು  ಕಷ್ಟಪಡಬೇಕಾಯಿತು. ಈ ಪಾತ್ರದ ಮೂಲಕ ರಂಗಭೂಮಿಯನ್ನು ನಿಜ ಅರ್ಥದಲ್ಲಿ ಆಳಿದರು. ಕನ್ನಡ ರಂಗಭೂಮಿಯಲ್ಲಿ ಬಹುಕಾಲ  ಪ್ರಚಲಿತದಲ್ಲಿದ್ದ ‘ಸಿಂಹೀಸಂ’ ಸೂತ್ರದಿಂದ ಇತರೆ ರಂಗಕರ್ಮಿಗಳು ಪ್ರಭಾವಿತರಾಗಿದ್ದರು.
ಒಬ್ಬ ಒಳ್ಳೆಯ ಗುರು, ಗೆಳೆಯನನ್ನು ಕಳೆದುಕೊಂಡಿದ್ದೇನೆ. ಸಾಹಿತ್ಯ, ಸಂಗೀತ, ವಿಜ್ಞಾನ, ಕಾವ್ಯ, ಅಧ್ಯಾತ್ಮ ಹೀಗೆ ಎಲ್ಲ ವಿಚಾರಗಳ ಬಗ್ಗೆ ಹರಟಿದ್ದೇವೆ. ಉತ್ತಮ ಬರಹಗಾರ,  ನಟನಾ ಚತುರ, ಅದ್ಭುತ  ಮಾತುಗಾರನನ್ನು ಕಳೆದುಕೊಂಡಿದ್ದೇವೆ.
– ಟಿ.ಎನ್‌.ಸೀತಾರಾಂ, ಕಿರುತೆರೆ ನಿರ್ದೇಶಕ

ಕತೆ ಹೇಳುವ ಶೈಲಿಯೇ ಚಂದ

ಸಿ.ಆರ್‌.ಸಿಂಹ ಅವರ ನಿರ್ದೇಶನದ ನಾಟಕ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸುವುದೇ ಒಂದು ದೊಡ್ಡ ಖುಷಿಯಾಗಿತ್ತು. ಪ್ರತಿಯೊಬ್ಬ ಕಲಾವಿದರನ್ನು ಮಕ್ಕಳಂತೆ ಕೂಡಿಸಿಕೊಂಡು ಒಂದಿಷ್ಟು ಬೇಸರಿಕೊಳ್ಳದೇ ಕತೆ ಹೇಳುತ್ತಿದ್ದರು. ಅವರ ಕತೆ  ಹೇಳುವ ಶೈಲಿಗೆ ನಾನು ಬೆರಗಾಗಿದ್ದೇನೆ.

  ದೊಡ್ಡವರು, ಚಿಕ್ಕವರು ಈ ಭೇದ ಭಾವ ಸಿಂಹ ಅವರಿಗೆ ಇರಲಿಲ್ಲ. ಲೋಕೇಶ್‌ ವಿವಿಧ ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳುವಲ್ಲಿ ಸಿಂಹ ಅವರ ಪ್ರಭಾವ ಬಹುದೊಡ್ಡದು. ಅವರ ತುಘಲಕ್‌ ಪಾತ್ರದ ಅಭಿನಯ ಇತಿಹಾಸದಲ್ಲಿದ್ದ ತುಘಲಕ್‌ ಎದ್ದು ಬಂದಂತೆ ಭಾಸವಾಗುತ್ತಿತ್ತು.

  ಕಲಾವಿದರ ಅಭಿನಯದ ತಾಕತ್ತನ್ನು ಅರಿತು ಪಾತ್ರ ನೀಡುತ್ತಿದ್ದರು. ಅವರೊಂದಿಗೆ ಮಾತನಾಡುವುದೆಂದರೆ, ಒಂದು ಪುಸ್ತಕವನ್ನು ಸರಾಗವಾಗಿ ಓದಿ ಮುಗಿಸಿದಂತೆ ಅನಿಸುತ್ತಿತ್ತು. ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ತುಂಬಲಾರದ ನಷ್ಟ.
– ಗಿರಿಜಾ ಲೋಕೇಶ್‌, ರಂಗಭೂಮಿ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT