ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಸೌರಭ ಕಾಲೇಜು ನಂಟು ರಂಗದ ಅಂಟು!

ಅಂಕದ ಪರದೆ
Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಕಾಲೇಜು ನಾಟಕ ತಂಡದಲ್ಲಿ ಸಕ್ರಿಯರಾಗಿದ್ದು, ಕಾಲೇಜಿನಲ್ಲಿದ್ದಾಗಲೇ ರಂಗಾಸಕ್ತಿ ಬೆಳೆಸಿಕೊಂಡ ಗೆಳೆಯರ ಸಮೂಹ ಸೇರಿ ಕಟ್ಟಿದ ತಂಡ ರಂಗಸೌರಭ. ಕಾಲೇಜಿನಲ್ಲಿದ್ದಾಗಲೇ ರಂಗಭೂಮಿಯಲ್ಲಿ ಹೊಸತೊಂದು ಆಯಾಮವನ್ನು ಸೃಷ್ಟಿಸಬೇಕು ಎಂಬ ತುಡಿತದೊಂದಿಗೆ ತಂಡ ಕಟ್ಟಿಕೊಂಡ ರಂಗಸೌರಭ ಇಂದು ನಗರದಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದೆ.

ರಂಗಸೌರಭ ತಂಡ ಆರಂಭವಾಗಿದ್ದು 2000ನೇ ಇಸವಿಯಲ್ಲಿ.  ಆರಂಭಿಸಿದಾಗ ಆರೇಳು ಜನ ಸ್ನೇಹಿತರೇ ಇದ್ದ  ತಂಡದಲ್ಲಿ ಇಂದು 250 ಜನ ಸದಸ್ಯರಿದ್ದಾರೆ.

 ಕಾಲೇಜಿನ ದಿನಗಳು ಹಾಗೂ ಕಾಲೇಜು ಮುಗಿದ ಮೇಲೂ ಕಾಲೇಜು ಆಡಳಿತ ಮಂಡಳಿಯಿಂದ ನಾಟಕಗಳನ್ನು ಮಾಡಲು ಅಂತಹ ಪ್ರೋತ್ಸಾಹವಿರಲಿಲ್ಲ, ಆದರೂ ಛಲ ಬಿಡದ ತಿವಿಕ್ರಮರಂತೆ ಕಾಲೇಜಿನ ಹಳೆಯ ಪ್ರಾಂಶುಪಾಲರು ಹಾಗೂ ಕೆಲ ಪ್ರಾಧ್ಯಾಪಕರ ಸಹಾಯದೊಂದಿಗೆ ರಂಗತಂಡವನ್ನು ಮುನ್ನಡೆಸಿಕೊಂಡು ಬಂದವರು ರಂಗಸೌರಭ ಮಿತ್ರರು. ಪ್ರಮೋದ ಶೆಟ್ಟಿ, ನವೀನ್‌ ಎಂ. ಜಿ, ಸುನಿಲ್‌ ಕುಮಾರ್‌, ಸುಪ್ರೀತಾ ಶೆಟ್ಟಿ, ವಲ್ಲಭ ಸೂರಿ ಈ ಐದು ಜನರು ಆರಂಭದಿಂದ ಇಂದಿನವರೆಗೂ ರಂಗಸೌರಭದಲ್ಲಿ ತೊಡಗಿಕೊಂಡು ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವವರು, ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿಕೊಂಡವರು ಹೀಗೆ ವಿವಿಧ ವೃತ್ತಿಯ ಹವ್ಯಾಸಿ ಕಲಾವಿದರು ಈ ತಂಡದಲ್ಲಿ ಅಭಿನಯಿಸುತ್ತಿದ್ದಾರೆ. ಅಧೋರಕ್ತಿ, ಷಟವಿ, ಮಾತೃಕ, ಘಾಸಿರಾಮ್‌ ಕೊತ್ವಾಲ್‌, ಸಾವು ಬಂತು ಸಾವು, ಕಾಕನಕೋಟೆ, ಮಾದಾರಿ ಮಾದಯ್ಯ, ಮೈಸೂರು ಮಲ್ಲಿಗೆ, ಶಾಸ್ತ್ರ ಪರ್ವ, ಒಪೇರಾ ಹೌಸ್‌, ಮಳೆ ನಿಲ್ಲುವವರೆಗೂ, ನಮ್‌ ಕಂಪ್ನಿ, ಗಂಗಾವತರಣ ಇವು ತಂಡದಿಂದ ಪ್ರದರ್ಶಿತವಾದ ನಾಟಕಗಳು.

ಈ ತಂಡದಿಂದ ಅತಿ ಹೆಚ್ಚು ಪ್ರದರ್ಶನಗೊಂಡ ನಾಟಕ ‘ಗಂಗಾವತರಣ’. ಇಲ್ಲಿಯವರಗೂ 48 ಪ್ರದರ್ಶನಗಳನ್ನು ಪೂರ್ಣಗೊಳಿಸಿದ ಈ ನಾಟಕದ 49ನೇ ಪ್ರದರ್ಶನ  ಅಕ್ಟೋಬರ್‌ 16ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಬೇಂದ್ರೆ ಅವರ ಕವನಗಳನ್ನು ಆಧರಿಸಿದ ಈ ನಾಟಕದ 50ನೇ ಪ್ರದರ್ಶನವನ್ನು ಬೇಂದ್ರೆ ಭವನದಲ್ಲಿ ಮಾಡಬೇಕು ಎಂಬ ಮಹದಾಸೆ ತಂಡದ ನಿರ್ವಾಹಕ ಪ್ರಮೋದ ಶೆಟ್ಟಿ ಅವರದ್ದು.

ವಿದ್ಯಾರ್ಥಿಗಳು ಹಾಗೂ ಇಂದಿನ ಯುವಪೀಳಿಗೆಯವರು ಸಾಹಿತ್ಯದ ಮೇಲೆ ಒಲವು ತೋರುತ್ತಿಲ್ಲ.  ಸಾಹಿತ್ಯದ ಘಮಲು ಎಲ್ಲಿಯೋ  ಕಮರಿ ಹೋಗುತ್ತಿದೆ ಎಂಬ ಕಾರಣಕ್ಕೆ ದ.ರಾ. ಬೇಂದ್ರೆ, ಕೆ. ಎಸ್‌. ನರಸಿಂಹ ಸ್ವಾಮಿ ಮುಂತಾದವರ ಕವನಗಳನ್ನು ಆಧರಿಸಿದ ನಾಟಕಗಳನ್ನು ರಚಿಸಿ, ಅವನ್ನು ರಂಗರೂಪಕ್ಕೆ ತಂದ ಕೀರ್ತಿ ರಂಗಸೌರಭಕ್ಕೆ ಸಲ್ಲುತ್ತದೆ.

ಕವನಗಳನ್ನಾಧರಿಸಿ ರಚಿಸಿದ ನಾಟಕಗಳು ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಂಡವು. ಇಷ್ಟೇ ಅಲ್ಲದೆ ತಂಡದಿಂದ ಪ್ರದರ್ಶನವಾದ ಹಲವು ನಾಟಕಗಳು ಪ್ರಶಸ್ತಿಯ ಗರಿಮೆಯನ್ನು ಕೂಡ ಪಡೆದುಕೊಂಡಿವೆ.

2010–11ನೇ ಸಾಲಿನ ಅಂತರ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹರಿಯಾಣದ ರೋಥಕ್‌ನಲ್ಲಿ ನಡೆದ ನಾಟಕೋತ್ಸವದಲ್ಲಿ ರಂಗಸೌರಭ ತಂಡದಿಂದ ಪ್ರದರ್ಶನಗೊಂಡ ‘ಶಾಸ್ತ್ರಪರ್ವ’ ನಾಟಕ ಚಿನ್ನದ ಪದಕ ಪಡೆದುಕೊಂಡಿತ್ತು. ಪ್ರತಿಯೊಂದು ರಂಗತಂಡ ರಚಿಸುವಾಗಲೂ ತಂಡಕ್ಕೆ ಹೊಂದುವ ಸೂಕ್ತವಾದ ಹೆಸರು ನೀಡುವುದು ರಂಗಕರ್ಮಿಗಳಿಗೊಂದು ಸವಾಲು. ರಂಗಸೌರಭ ಆರಂಭವಾದಾಗ ತಂಡದ ಸದಸ್ಯರೆಲ್ಲರೂ ಸೇರಿ ಚರ್ಚಿಸಿ ತಂಡಕ್ಕೊಂದು ನಾಮಕರಣ ಮಾಡಬೇಕು ಎಂದುಕೊಂಡಾಗ ರವಿ ಪ್ರಶಾಂತ್‌ ಎನ್ನುವವರು ರಂಗಸೌರಭ ಎನ್ನುವ ಹೆಸರು ಸೂಚಿಸಿದ್ದರು. 

ಕಿರುತೆರೆ–ಹಿರಿತೆರೆ ನಂಟು
ರಂಗತಂಡಗಳಿಗೂ ಹಿರಿತೆರೆ, ಕಿರುತೆರೆಗೂ ಏನೋ ನಂಟು.  ರಂಗಸೌರಭದಲ್ಲೂ ಟೀವಿ ಪರದೆ ಮೇಲೆ ಕಾಣಿಸಿಕೊಂಡು ಹೆಸರು ಮಾಡಿದವರಿದ್ದಾರೆ. ಅಂಥವರಲ್ಲಿ ಪ್ರಮುಖರು ‘ಉಳಿದವರು ಕಂಡಂತೆ’, ‘ರಂಗಿತರಂಗ’, ‘ರಿಕ್ಕಿ’ ಚಿತ್ರದಲ್ಲಿ ಕಾಣಿಸಿಕೊಂಡ ಪ್ರಮೋದ್ ಶೆಟ್ಟಿ. ಕುಲವಧು, ಗಾಳಿಪಟ ಮುಂತಾದ ಕನ್ನಡ ಧಾರಾವಾಹಿಗಳ ಮೂಲಕ ಹೆಸರು ಗಳಿಸಿದ ಸುಪ್ರೀತಾ ಶೆಟ್ಟಿ ಹಾಗೂ ಮುಕ್ತ ಮುಕ್ತ, ರಾಧಾ ಕಲ್ಯಾಣ ಧಾರಾವಾಹಿಗಳಲ್ಲಿ ನಟಿಸಿದ ನವೀನ್‌ ಎಂ.ಜಿ, ರಾಮಾಯಣ ಧಾರಾವಾಹಿಯ ಲಕ್ಷ್ಮಣ ಹಾಗೂ ಮಹಾಭಾರತ ಧಾರಾವಾಹಿಯ ಕೃಷ್ಣ ಪಾತ್ರಧಾರಿ ವಲ್ಲಭ ಸೂರಿ, ಸುನೀಲ್‌, ಅನಿರುದ್ಧ ಮುಂತಾದವರು ಎರಡೂ ಕ್ಷೇತ್ರಗಳಲ್ಲಿ ಛಾಪುಮೂಡಿಸಿದ್ದಾರೆ.

ರಂಗಸೌರಭ ಕಾಲೇಜಿನಲ್ಲೇ ಸ್ಥಾಪಿತವಾದ ತಂಡವಾದದ್ದರಿಂದ ಮೊದಲ ವರ್ಷ ಕಾಲೇಜಿನ ನಿಧಿಯಿಂದಲೇ ನಾಟಕಗಳನ್ನು ಮಾಡಿದ್ದರು. ನಂತರದ ದಿನಗಳಲ್ಲಿ ತಂಡದ ಸದಸ್ಯರು ನೀಡಿದ ಹಣ ಹಾಗೂ ನಾಟಕಗಳ ಪ್ರದರ್ಶನದ ಟಿಕೆಟ್ ಶುಲ್ಕದಿಂದ ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು ತಂಡದ ಸದಸ್ಯರು. ‘ನಮ್ಮ ತಂಡದಲ್ಲಿ ಅನೇಕರಿಗೆ ಸಿನಿಮಾ ರಂಗದ  ರಕ್ಷಿತ್‌ ಶೆಟ್ಟಿ, ಯಜ್ಞಾ ಶೆಟ್ಟಿ, ರಿಷಭ್‌ ಮುಂತಾದವರು ಆತ್ಮೀಯರಾಗಿದ್ದ ಕಾರಣ ಅವರು ನಾಟಕಗಳಿಗೆ ಫಂಡಿಗ್‌ ಮಾಡುತ್ತಾರೆ, ಅದು ನಮ್ಮ ತಂಡಕ್ಕೊಂಡು ಊರುಗೋಲು’ ಎನ್ನುತ್ತಾರೆ ತಂಡದ ನಿರ್ವಾಹಕ ಪ್ರಮೋದ್ ಶೆಟ್ಟಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT