ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಾಂಗಣದ ಆಚೆ ಅಮ್ಮ ನ ‘ನಡೆ’

Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಒಳಗೆ... ಕಾದಾಟ ಜೋರಾಗಿ ನಡೆಯುತ್ತಿರುತ್ತದೆ. ಯಾವ ನಡೆ ಯಾರನ್ನು ಕೆಡವುತ್ತದೆ ಎಂದು ಹೇಳಲಾಗದ ಪರಿಸ್ಥಿತಿ. ಸೋಲು – ಗೆಲುವಿನ ಲೆಕ್ಕಾಚಾರದಲ್ಲಿ ಮಕ್ಕಳು ಕಾಯಿಗಳನ್ನು ನಡೆಸುತ್ತಿದ್ದರೆ ಹೊರಗೆ ಕುಳಿತ ತಾಯಂದಿರಲ್ಲಿ ನಿಲ್ಲದ ಬೇಗುದಿ. ಒಣ ಹರಟೆಯಿಂದ ತೊಡಗಿ ದೇಶದ ಸಾಮಾಜಿಕ, ರಾಜಕೀಯ ಮತ್ತು ಕೆಲವೊಮ್ಮೆ ಆರ್ಥಿಕ ವಿದ್ಯಮಾನಗಳವರೆಗಿನ ವಿಷಯಗಳನ್ನು ಚರ್ಚಿಸುತ್ತಿದ್ದರೂ ಅವರ ಮನಸ್ಸು ಒಳಗೆ ತಮ್ಮ ಮಕ್ಕಳು ನಡೆಸುವ ಸೆಣಸಾಟದ ಕುರಿತೇ ಚಿಂತಿಸುತ್ತಿರುತ್ತದೆ.

ಮಕ್ಕಳ ಚೆಸ್‌ ಟೂರ್ನಿಗಳ ಸಂದರ್ಭದಲ್ಲಿ ಸ್ಪರ್ಧೆಗಳು ನಡೆಯುವ ‘ರಣಾಂಗಣ’ದಲ್ಲಿ ಒಂದು ರೀತಿಯ ದುಗುಡ; ಅವರೊಂದಿಗೆ ಬಂದ ತಾಯಂದಿರಿಗೆ ಅಂಗಣದ ಹೊರಗೆ ಒತ್ತಡ... ಒತ್ತಡ... ಒತ್ತಡ.

ಬುದ್ಧಿಗೆ ಗುದ್ದು ನೀಡುವ ಚೆಸ್‌ಗೆ ಸಂಬಂಧಿಸಿದ ಟೂರ್ನಿಗಳು ಇತ್ತೀಚೆಗೆ ಅಲ್ಲಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಪ್ರತಿಭಾವಂತ ಚೆಸ್ ಆಟಗಾರರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದಕ್ಕೆ ಆಗಾಗ ತೆರಳುತ್ತಾರೆ.

ರ್‍ಯಾಪಿಡ್‌ ಟೂರ್ನಿಗಳು ಸಾಮಾನ್ಯವಾಗಿ ಎರಡು ದಿನಗಳಲ್ಲಿ ಮುಗಿಯುತ್ತವೆ. ರಾಷ್ಟ್ರೀಯ ಆಯ್ಕೆಗೆ ಸಂಬಂಧಿಸಿದ ಟೂರ್ನಿ ಯಾದರೆ ನಾಲ್ಕು ದಿನ ಇರುತ್ತವೆ. ಆದರೆ ಕ್ಲಾಸಿಕಲ್‌ ಚೆಸ್‌ ಟೂರ್ನಿ ಸುದೀರ್ಘ ಅವಧಿಯದ್ದು. ರಾಜ್ಯ ಮಟ್ಟದ ಆಯ್ಕೆಯ ಟೂರ್ನಿ ಐದು ದಿನ ನಡೆದರೆ ರಾಷ್ಟ್ರಮಟ್ಟದ ಆಯ್ಕೆಗೆ ಎಂಟು ದಿನಗಳ ಸ್ಪರ್ಧೆ ನಡೆಯುತ್ತದೆ. ದಿನವೊಂದರಲ್ಲಿ ಎರಡು ಅಥವಾ ಮೂರು ಸುತ್ತು ಆಡುವ ಮಕ್ಕಳು ಪ್ರತಿ ದಿನವೂ ಒತ್ತಡ ಅನುಭವಿಸುತ್ತಾರೆ. ಗೆದ್ದವರು ಹೆಚ್ಚು ಸಂಭ್ರಮ ಪಡುವಂತಿಲ್ಲ; ಅವರು ಮರುದಿನದ ಎದುರಾಳಿಯನ್ನು ಹಣಿಯುವ ಲೆಕ್ಕಾಚಾರ ಹಾಕಬೇಕಾಗುತ್ತದೆ. ಸೋತವರು ಮತ್ತೆ ಗೆಲುವಿನ ಹಾದಿಗೆ ಮರಳುವ ಕುರಿತು ಯೋಚನೆ ಮಾಡಬೇಕಾಗುತ್ತದೆ.

ಈ ಪರಿಸ್ಥಿತಿಯಲ್ಲಿ ತಾಯಿಯು ಆಟಗಾರನಿಗೆ ಸಮಾಧಾನ ಮಾಡುವವಳಾಗಿ, ಸಲಹೆಗಾರ್ತಿಯಾಗಿ, ಕೆಲವೊಮ್ಮೆ ಸಮಾಲೋಚಕಿಯಾಗಿ ಕೆಲಸ ಮಾಡಬೇಕಾಗುತ್ತದೆ.

ಶ್ರೇಯಾಂಕಿತರು ಕೆಲವೊಮ್ಮೆ ಶ್ರೇಯಾಂಕ ರಹಿತರ ಮುಂದೆ ಅಥವಾ ತಮಗಿಂತ ಕಡಿಮೆ ಶ್ರೇಯಾಂಕ ಹೊಂದಿರುವವರ ಮುಂದೆ ಸೋಲುವುದು ಚೆಸ್‌ನಲ್ಲಿ ಸಾಮಾನ್ಯ. ಸಹಜವಾಗಿ ಇಂಥ ಸಂದರ್ಭದಲ್ಲಿ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ಆಗ ಅವರಿಗೆ ಧೈರ್ಯ ತುಂಬಿ, ಮುಂದಿನ ಸುತ್ತು ಆಡಲು ತಾಯಿಯೇ ‘ಟಾನಿಕ್‌’ ಆಗಬೇಕು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಹೆಚ್ಚಾಗಿ ಮಕ್ಕಳಿಗೆ ಸಾಥ್‌ ನೀಡುವುದು ತಾಯಂದಿರು. ಸಮೀಪದ ಜಿಲ್ಲೆಗಳಲ್ಲಿ ಸ್ಪರ್ಧೆ ಇದ್ದರೆ ಕೆಲವೊಮ್ಮೆ ತಂದೆ ಉದ್ಘಾಟನೆಯ ದಿನ ಮಾತ್ರ ಕಾಣಸಿಗುತ್ತಾರೆ. ಉಳಿದ ಎಲ್ಲ ದಿನಗಳಲ್ಲೂ ಮಕ್ಕಳ ಯೋಗ ಕ್ಷೇಮದ ಜವಾಬ್ದಾರಿ ತಾಯಂದಿರ ಹೆಗಲಿನಲ್ಲಿರುತ್ತದೆ. ಕೇರಳ ದಿಂದ ಕಾಶ್ಮೀರದವರೆಗೂ ಚೆಸ್‌ ಟೂರ್ನಿಗಳು ನಡೆಯುತ್ತವೆ. ಅಷ್ಟು ದೂರ ಪ್ರಯಾಣ ಮಾಡಿ, ಮಕ್ಕಳನ್ನು ವಿಜಯದ ಹಾದಿಯಲ್ಲಿ ನಡೆಸಬೇಕಾದ ಗುರುತರ ಕೆಲಸವನ್ನು ಅಮ್ಮ  ನಾಜೂಕಾಗಿ ಮಾಡಿ ಮುಗಿಸುತ್ತಾರೆ.

ರಾಜ್ಯ ಮಟ್ಟದ ಟೂರ್ನಿಗಳು ನಡೆಯುವಾಗ ಒಂದಾಗುವ ಬೇರೆ ಬೇರೆ ಜಿಲ್ಲೆಯ ತಾಯಂದಿರು ರಾಷ್ಟ್ರಮಟ್ಟದ ಸ್ಪರ್ಧೆಗಳ ಸಂದರ್ಭದಲ್ಲಿ ರಾಜ್ಯದ ‘ತಂಡ’ ಕಟ್ಟಿಕೊಂಡು ಒಂದೆಡೆ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಅಂತರಂಗ ತೆರೆದುಕೊಳ್ಳುತ್ತದೆ. ಅಡುಗೆ ಮನೆಯ ಸವಿರುಚಿಯಿಂದ ಶುರುವಾಗುವ ಸಂಭಾಷಣೆ ಕೊನೆಗೆ ದೇಶ ಕಟ್ಟುವ ವಿಷಯಗಳವರೆಗೂ ತಲುಪುತ್ತದೆ. ಚೆಸ್‌ ತಂತ್ರಗಳು ಕೂಡ ಅವರ ಮಾತಿನ ನಡುವೆ ನುಸುಳುವುದುಂಟು. ಲ್ಯಾಪ್‌ಟಾಪ್‌ ತೆಗೆದುಕೊಂಡು ಬಂದು ‘ಆನ್‌ಲೈನ್‌’ನಲ್ಲಿ ಕೆಲಸ ಮಾಡುವವರೂ ಇರುತ್ತಾರೆ. ಕಸೂತಿ, ಚಿತ್ರಕಲೆ, ಕಾಗದದ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವವರೂ ಇಲ್ಲದಿಲ್ಲ. ಮನಸ್ಸು ಸ್ಪರ್ಧೆಯ ಕುರಿತು ಚಿಂತಿಸುತ್ತಿರುವುದರಿಂದ ಯಾವ ಹವ್ಯಾಸದಲ್ಲೂ ತೊಡಗಿಸಿಕೊಳ್ಳಲಾಗುವುದಿಲ್ಲ ಎಂದು ಹೇಳಿ ಹರಟೆಯಲ್ಲೇ ಸಮಯ ಕಳೆಯುವವರೂ ಇದ್ದಾರೆ.

15 ವರ್ಷದೊಳಗಿನ ವಿಭಾಗದ ಆಟಗಾರ ಬೆಂಗಳೂರಿನ ರಜತ್‌ ಐತಾಳ ಅವರ ತಾಯಿ ವನಮಾಲಾ ಅವರಿಗೆ ಕಸೂತಿ ಹೆಣೆಯುವ ಹವ್ಯಾಸ. ಟೂರ್ನಿಗಳಿಗೆ ಹೋಗಿ ವಾಪಸಾಗುವಾಗ ಅವರ ಬ್ಯಾಗ್‌ನಲ್ಲಿ ವೈವಿಧ್ಯಮಯ ಕಲಾ ಕುಸುಮಗಳು ಅರಳಿರುತ್ತವೆ. ‘ಕಸೂತಿ ನನ್ನ ಹವ್ಯಾಸ. ಸಮಯ ಕಳೆಯಲು ಮತ್ತು ಮಗನ ಆಟದ ಕುರಿತ ಟೆನ್ಷನ್‌ ಕಡಿಮೆ ಮಾಡಲು ಈ ಕಲೆ ನೆರವಾಗುತ್ತಿದೆ’ ಎನ್ನುತ್ತಾರೆ ವನಮಾಲಾ.

ಸದ್ಯ ರಾಜ್ಯದ 15 ವರ್ಷದೊಳಗಿನವರ ವಿಭಾಗದ ಮಿಂಚು, ಮಂಗಳೂರಿನ ಶರಣ್‌ ಎಸ್.ರಾವ್‌ ಎಲ್ಲ ಕಡೆಗೂ ತಾಯಿ ಜೊತೆಯಲ್ಲೇ ಹೋಗುತ್ತಾರೆ. ‘ಟೂರ್ನಿಗಳಿಗೆ ಬಂದಾಗ ತಾಯಂದಿರು ನಿಜವಾದ ಸವಾಲು ಎದುರಿಸಬೇಕಾಗುತ್ತದೆ. ಪರವೂರಿನಲ್ಲಿ ಮಕ್ಕಳ ಆರೋಗ್ಯ ಕೆಡದಂತೆ ನೋಡಿಕೊಳ್ಳಬೇಕು, ಪ್ರತಿ ಸುತ್ತಿನ ಆಟಕ್ಕೂ ಅವರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು, ಸೋತಾಗ ಮನಸ್ಥೈರ್ಯ ತುಂಬಬೇಕು, ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಬೇಕು. ಇವೆಲ್ಲ ಸುಲಭದ ಕೆಲಸವಲ್ಲ’ ಎಂದು ಹೇಳುತ್ತಾರೆ ಶರಣ್‌ ತಾಯಿ, ಟೆಲಿಕಮ್ಯುನಿಕೇಷನ್‌ ಪದವೀಧರೆ ಜ್ಯೋತಿ ಎಸ್‌.ರಾವ್‌.

ಭಿನ್ನ ಸಂಸ್ಕೃತಿಯ ಪರಿಚಯಕ್ಕೂ ಚೆಸ್‌ ಟೂರ್ನಿಗಳು ತಾಯಂದಿರಿಗೆ ಅವಕಾಶ ಒದಗಿಸುತ್ತವೆ. ಕೆಲವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಗೆಳೆಯರನ್ನೂ ಸಂಪಾದಿಸಿದ್ದಾರೆ. ‘ಟೂರ್ನಿಗಳಿಗೆ ಹೋದಂತೆಲ್ಲ ಗೆಳೆಯರ ಸಂಖ್ಯೆ ಹೆಚ್ಚಿತ್ತಿರುತ್ತದೆ. ಟೂರ್ನಿಯಿಂದ ವಾಪಸಾದ ನಂತರವೂ ಅದನ್ನು ಮುಂದುವರಿಸುತ್ತೇವೆ, ದೂರವಾಣಿ ಕರೆ, ಮೆಸೇಜ್‌, ವಾಟ್ಸ್‌ ಆ್ಯಪ್‌ ಮುಂತಾದವುಗಳ ಮೂಲಕ ಕುಶಲೋಪರಿ ಮುಂದುವರಿ ಯುತ್ತದೆ. ಚೆಸ್‌ ಕುರಿತು ಮಾತನಾಡಲು, ಮುಂದಿನ ಟೂರ್ನಿಗಳಿಗೆ ಸಜ್ಜಾಗಲು ಇದು ನೆರವಾಗುತ್ತದೆ’ ಎಂಬುದು ಮೈಸೂರಿನ ಎನ್‌.ಎಚ್‌. ಜತಿನ್ ತಾಯಿ ವಾಣಿ ಅವರ ಅಭಿಪ್ರಾಯ.

ಇವರಿಗೆ ರಜೆಯ ಸವಿ ದೂರ
ಚೆಸ್‌ ಟೂರ್ನಿಗಳಿಗೆ ಮಕ್ಕಳೊಂದಿಗೆ ತೆರಳುವ ತಾಯಂದಿರು ಹಬ್ಬ ಮತ್ತಿತರ ಸುದೀರ್ಘ ರಜೆಯ ಸವಿಯಿಂದ ವಂಚಿತರಾಗುತ್ತಾರೆ. ಸಾಮಾನ್ಯವಾಗಿ ಒಟ್ಟಿಗೆ ಮೂರು, ನಾಲ್ಕು ದಿನ ಸರ್ಕಾರಿ ರಜೆಗಳು ಬಂದಾಗ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಮನೆ ಮಂದಿಯೆಲ್ಲ ಮನೆಯಲ್ಲೇ ಇದ್ದರೆ ತಾಯಿ ತನ್ನ ಮಗ ಅಥವಾ ಮಗಳೊಂದಿಗೆ ದೂರದ ಊರಿನಲ್ಲಿರಬೇಕಾಗುತ್ತದೆ. ಮಕ್ಕಳು ಗೆದ್ದರೆ ಪ್ರಶಸ್ತಿ ವಿತರಣಾ ಸಮಾರಂಭದ ಸಂದರ್ಭದಲ್ಲಿ ಕೇಕೆ ಹಾಕುವ ಅವರು ಕೆಲವು ಕ್ಷಣ ಮನೆ, ಪರಿವಾರವನ್ನು ಮರೆಯುತ್ತಾರೆ.

ಮಕ್ಕಳ ಸಾಧನೆಗೆ ಸಾಕ್ಷಿ
ದೂರದ ಊರುಗಳಿಗೆ ಹೋಗಿ ಇರಬೇಕಾದ ಪರಿಸ್ಥಿತಿ ಒದಗಿದರೂ ಚೆಸ್‌ನಲ್ಲಿ ಮಕ್ಕಳು ಮಾಡುವ ಸಾಧನೆಗೆ ತಾಯಂದಿರು ಸಾಕ್ಷಿಯಾಗುತ್ತಾರೆ.  ಆಗಾಗ ಕರೆ ಮಾಡಿ ಅಪ್ಪನೊಂದಿಗೆ  ಮಾತನಾಡುತ್ತಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಗ ಅಥವಾ ಮಗಳು ಪ್ರತಿ ಸುತ್ತಿನಲ್ಲಿ ಮಾಡುವ ಸಾಧನೆಯ ಕುರಿತು ‘ಮನೆಯವರಿಗೆ’ ವರದಿ ನೀಡುವ ಜವಾಬ್ದಾರಿಯೂ ಆಕೆಗೆ ಇರುತ್ತದೆ. ಆಟದಲ್ಲಿ ತಲ್ಲೀನರಾಗಿರುವ ಭಂಗಿ, ಗೆದ್ದರೆ ಖುಷಿಯ ಕ್ಷಣ, ಪ್ರಶಸ್ತಿ ಜಯಿಸಿದರೆ ಕಪ್‌ ಜೊತೆಗೆ ಸಂಭ್ರಮಿಸಿದ ಗಳಿಗೆ ಇತ್ಯಾದಿಗಳ ಚಿತ್ರಣವನ್ನು ತಕ್ಷಣ ವಾಟ್ಸ್‌ಆ್ಯಪ್‌ನಲ್ಲಿ ಮನೆಗೆ ತಲುಪಿಸುವುದೂ ಆಕೆಯ ಪಾಲಿಗೆ ಸಂತಸದ ಸಂಗತಿಯಾಗುತ್ತದೆ.

ದೊಡ್ಡ ಪ್ರಮಾಣದ ಟೂರ್ನಿಗಳಲ್ಲಿ ಸ್ಪರ್ಧೆಯನ್ನು ದೂರದಲ್ಲಿ ಕುಳಿತು ನೋಡಲು ಅವಕಾಶ ನೀಡಲಾಗುತ್ತದೆ. ಕೆಲವು ಕಡೆಗಳಲ್ಲಿ ಪಾಲಕರಿಗೂ ಒಂದು ದಿನ ಸ್ಪರ್ಧೆ ಇರುತ್ತದೆ. ಇದೆಲ್ಲವೂ ತಾಯಂದಿರಿಗೆ ಒತ್ತಡದಿಂದ ದೂರ ಇರಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT