ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ಹೊಸ ಪರಿಭಾಷೆ

Last Updated 29 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜಕೀಯ ಎಂದರೇ ಭ್ರಷ್ಟಾಚಾರ ಎಂಬಂತಹ ಭಾವನೆ ಸಾರ್ವಜನಿಕ ವಲಯದಲ್ಲಿದೆ. ಹಣಬಲ, ತೋಳ್ಬಲಗಳೇ ವಿಜೃಂಭಿಸುವ ರಾಜ­ಕೀಯ ಜನಸಾಮಾನ್ಯರಿಗಲ್ಲ ಎಂಬ ಮಾತೂ ಪ್ರಚಲಿತ. ಆದರೆ ದೆಹಲಿ­ಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ಆಡಳಿತಸೂತ್ರವನ್ನು ಹಿಡಿಯುವ ಮೂಲಕ ಈ ದೃಷ್ಟಿಯನ್ನು ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ದೆಹಲಿ ಮುಖ್ಯ­ಮಂತ್ರಿಯಾಗಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಆರು ಮಂದಿ   ಸಂಪುಟ ಸಹೋದ್ಯೋಗಿಗಳೊಂದಿಗೆ ಅಧಿಕಾರ ಸ್ವೀಕರಿಸಿದ್ದಾರೆ.

ಅಧಿಕಾರ ಮದದ ತೋರ್ಪಡಿಕೆ ಇಲ್ಲದ ಹೊಸ ಶೈಲಿಯ ಆಡಳಿತ ನೀಡುವ ಭರವಸೆ­ಯನ್ನು ಈ ತಂಡ ಪುನರುಚ್ಚರಿಸಿದೆ.  ವಿಶ್ವಾಸ ಮತಗಳಿಸುವ ಪರೀಕ್ಷೆಯಲ್ಲಿ ಸಫಲರಾಗದಿದ್ದಲ್ಲಿ ಮತ್ತೆ ಚುನಾವಣೆ ಎದುರಿಸುವಂತಹ ವಾಸ್ತವಿಕ ಮಾತುಗಳನ್ನು  ಕೇಜ್ರಿವಾಲ್ ಆಡಿದ್ದಾರೆ. ಮುಖ್ಯವಾಹಿನಿಯ ರಾಜ­ಕೀಯ ಪಕ್ಷಗಳು ಎದುರಿಸಬೇಕಾಗಿ­ರುವ ಹೊಸ ಶಕ್ತಿಯಾಗಿ ಎಎಪಿ ಉದಯ­ವಾಗಿರುವಂತಹ ಚಾರಿತ್ರಿಕ ಕ್ಷಣ ಇದು. ರಾಜಕಾರಣ ಕೊಳಕು ಎಂಬುದು ಅಣ್ಣಾ ಹಜಾರೆಯವರ ನಿಲುವು.

ಆದರೆ ಈ ಕೊಳಕನ್ನು ಸ್ವಚ್ಛ­ಗೊಳಿಸಲು ಕೊಳಕಿನೊಳಗೇ ಇಳಿಯಬೇಕೆಂಬ ನಂಬಿಕೆಯೊಂದಿಗೆ ರಾಜ­ಕಾರಣ ಪ್ರವೇಶಿಸಿರುವ ಕೇಜ್ರಿವಾಲ್ ಈ  ಸ್ವಚ್ಛತಾ ಕಾರ್ಯದ ಗುರಿ ತಲುಪುವಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆಂಬುದನ್ನು ಕಾಲವೇ ಹೇಳಲಿದೆ.  ಎರಡು ವರ್ಷಗಳ ಹಿಂದೆ  ಅಣ್ಣಾ ಹಜಾರೆ ಆರಂಭಿಸಿದ ಜನಾಂ­ದೋಲನವೊಂದು ರಾಜಕೀಯ ಅಧಿಕಾರ ಹಿಡಿಯುವ ಮಟ್ಟಕ್ಕೆ ತಲು­ಪಿದ್ದು ದೊಡ್ಡದೊಂದು ಕ್ರಾಂತಿ.

  ಈ ಹೋರಾಟದಲ್ಲಿ ಜನಸಾಮಾನ್ಯರು ಹಾಗೂ ಅಧಿ­ಕಾ­ರ­ಶಾಹಿ ಹೇಗೆ ಕೈಜೋಡಿಸುತ್ತಾರೆ ಎಂಬುದೂ ಈ ಹೊಸ ಪ್ರಯೋಗದ ಯಶಸ್ಸು ಅಥವಾ ವೈಫಲ್ಯಕ್ಕೆ ಕಾರಣವಾಗಲಿದೆ. ‘ನನ್ನ­ಲ್ಲೇನ್ನೂ ಮಂತ್ರದಂಡವಿಲ್ಲ. ಎಲ್ಲಾ ಸಮಸ್ಯೆಗಳಿಗೂ  ನಮ್ಮಲ್ಲಿ ಪರಿ­ಹಾರವಿಲ್ಲ. ಆದರೆ ದೆಹಲಿಯ ಜನತೆ ಜೊತೆಗೂಡಿ ನಾವೆಲ್ಲಾ ಸರ್ಕಾರ ರಚಿಸಿ ಜನರಿಗೆ ಸೇವೆ ಮಾಡಬೇಕು’ ಎಂಬ  ಕೇಜ್ರಿವಾಲ್  ನುಡಿ ರಾಜಕೀಯ ಪರಿಭಾಷೆಯನ್ನು ಬದ­ಲಿಸುವಂತಹದ್ದು. ಅಧಿಕಾರ ಹಿಡಿದಿರುವುದು ಅದನ್ನು ಅನುಭವಿಸುವು­ದಕ್ಕಲ್ಲ, ಸೇವೆ ಮಾಡಲು ಎಂಬಂತಹ ರಾಜಕೀಯದ ನಿಜ ತತ್ವವನ್ನು ಜನರ ಬಳಿಗೆ ಒಯ್ಯಲು ಮುಂದಾಗಿರುವುದೂ ಹೊಸತನದ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. 

ಅಧಿಕಾರ ಸೂತ್ರ ಹಿಡಿಯಲು ಆರಂಭದಲ್ಲಿ ಅನಿಶ್ಚಯ ತೋರ್ಪ­ಡಿಸಿದರೂ, ನಂತರ ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಎಎಪಿ  ಮುಂದಾದದ್ದು ಮಹತ್ತರ ಬೆಳವಣಿಗೆ. ವಿಐಪಿ ಸಂಸ್ಕೃತಿಯನ್ನು ಧಿಕ್ಕರಿಸಿ ಜನ­ಸಾಮಾನ್ಯರಂತೆ ಮೆಟ್ರೊ ರೈಲಿನಲ್ಲಿ ಆಗಮಿಸಿ ಸಾಧಾರಣ ಪೋಷಾಕು ಧರಿಸಿ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ ಕೇಜ್ರಿವಾಲ್ ತಂಡ ಹೊಸದೊಂದು ರಾಜಕೀಯ ವಾತಾವರಣವನ್ನು ಸೃಷ್ಟಿಸಿದೆ. ಮಹ­ತ್ವಾ­ಕಾಂಕ್ಷೆಯ ಈ ಪರಿವರ್ತನಶೀಲ ರಾಜಕೀಯದ ಹಾದಿ  ತನ್ನ ಮುಂದಿನ ಸವಾ­ಲು­ಗಳನ್ನು ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲಕರ.

ಭ್ರಷ್ಟಾ­ಚಾರ ಕುರಿತ ದೂರುಗಳಿಗಾಗಿ ಸಹಾಯವಾಣಿಯನ್ನು ಆರಂಭಿಸು­ವುದಾಗಿಯೂ  ಪ್ರಕಟಿಸಲಾಗಿದೆ.ಹಣಕಾಸು ಅಧಿಕಾರ ಹೊಂದಿರುವ ಮೊಹಲ್ಲಾ ಸಮಿತಿಗಳ ರಚನೆಯ ಭರವಸೆ ಮತ್ತೊಂದು ಆಕರ್ಷಣೆ. ಜಾತಿ, ಧರ್ಮಾಧಾರಿತ ರಾಜಕೀಯವನ್ನು ವಿಷಯಾಧಾರಿತವಾಗಿ ನಿರ್ವಹಿಸು­ತ್ತಿರುವುದೂ ಇಲ್ಲಿ  ಮುಖ್ಯ. ಭ್ರಷ್ಟಾಚಾರದಿಂದ ರಾಷ್ಟ್ರವನ್ನು ಸ್ವತಂತ್ರ­ಗೊಳಿಸುವ ಎಎಪಿಯ ಆದರ್ಶಗಳಲ್ಲಿ ಕೆಲವಾದರೂ ಅನುಷ್ಠಾನಗೊಂಡಲ್ಲಿ ರಾಜಕೀಯದ ಈ ಹೊಸ ಪ್ರಯೋಗ  ಹೊಸ ಭರವಸೆಗಳಿಗೆ ನಾಂದಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT