ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾ ಭಯ್ಯಾ ವಿರುದ್ಧ ಕೊಲೆ ಮೊಕದ್ದಮೆ

Last Updated 7 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಡಿವೈಎಸ್‌ಪಿ ಜಿಯಾ ಉಲ್ ಹಕ್ ಹತ್ಯೆ ಪ್ರಕರಣದಲ್ಲಿ ಉತ್ತರ ಪ್ರದೇಶದ ವಿವಾದಾತ್ಮಕ ರಾಜಕಾರಣಿ ರಾಜಾ ಭಯ್ಯಾ ವಿರುದ್ಧ ಸಿಬಿಐ ಕೊಲೆ ಮೊಕದ್ದಮೆ ದಾಖಲಿಸಿದೆ.

ಈ ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶ ರಾಜ್ಯ ಸರ್ಕಾರ ಸಿಬಿಐಗೆ ವರ್ಗಾಯಿಸಿದ ನಂತರ, ಅದು ಈ ಕ್ರಮ ಕೈಗೊಂಡಿದೆ.
ಪ್ರಕರಣ ಸಂಬಂಧ ಸಿಬಿಐ ನಾಲ್ಕು ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್) ಹಾಕಿದ್ದು, ಆ ಪೈಕಿ ಒಂದು ಎಫ್‌ಐಆರ್‌ನಲ್ಲಿ ರಾಜಾ ಭಯ್ಯಾನನ್ನು  ಕೊಲೆ ಆರೋಪಿ ಎಂದು ದಾಖಲಿಸಲಾಗಿದೆ.

ಹಕ್ ಅವರ ಪತ್ನಿ ಪರ್ವೀನ್ ಆಜಾದ್ ಅವರು ನೀಡಿದ್ದ ದೂರು ಆಧರಿಸಿ ರಾಜಾ ಭಯ್ಯಾ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. `ಸಿಬಿಐ ತನಿಖೆಯಲ್ಲಿ ನ್ಯಾಯ ಲಭಿಸಲಿದೆ ಎಂಬ ವಿಶ್ವಾಸವಿದೆ. ರಾಜಕೀಯ ಒತ್ತಡಕ್ಕೆ ಸಿಬಿಐ ಒಳಗಾಗಬಾರದು' ಎಂದು ಪರ್ವೀನ್ ಹೇಳಿದ್ದಾರೆ.

44 ವರ್ಷದ ರಾಜಾ ಭಯ್ಯಾ ಮತ್ತು ಇತರ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ಕೊಲೆ, ಕ್ರಿಮಿನಲ್ ಸಂಚು, ಹಲ್ಲೆ, ಹಿಂಸೆ ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅಪಮಾನ ಎಸಗಿದ ಆರೋಪಗಳನ್ನು ಹೊರಿಸಲಾಗಿದೆ.

ಈ ಮಧ್ಯೆ ಸಿಬಿಐ, ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ 10 ಸದಸ್ಯರ ವಿಶೇಷ ಅಪರಾಧ ತನಿಖಾ ಅಧಿಕಾರಿಗಳನ್ನು ಘಟನೆ ನಡೆದ ಸ್ಥಳಕ್ಕೆ ಶುಕ್ರವಾರ ರಾತ್ರಿ ಕಳುಹಿಸಿದೆ. ಪ್ರಕರಣದ ಆರೋಪಿಗಳ ಪೈಕಿ ರಾಜಾ ಭಯ್ಯಾ ಆಪ್ತರಾದ ರಾಜೀವ್ ಸಿಂಗ್ ಮತ್ತು ಗುದ್ದು ಸಿಂಗ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಸಿಬಿಐ ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಳ್ಳಲಿದೆ.

ಪ್ರತಾಪ್‌ಗಡ ಜಿಲ್ಲೆಯ ಕುಂದಾ ಕ್ಷೇತ್ರದಿಂದ ಐದು ಬಾರಿ ಶಾಸಕ ಸ್ಥಾನಕ್ಕೆ ಆಯ್ಕೆಯಾಗಿರುವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ವಿರುದ್ಧ ಉತ್ತರ ಪೊಲೀಸರು ಈ ಮುನ್ನ ಎಫ್‌ಐಆರ್ ದಾಖಲಿಸಿದ್ದರು.

ಕುಂದಾದಲ್ಲಿ ಮಾರ್ಚ್ 2ರಂದು ಕರ್ತವ್ಯದ ವೇಳೆ ಜಿಯಾ ಅವರನ್ನು ಗುಂಡೇಟಿನಿಂದ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT