ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ವೇಳೆ ‘ಎಟಿಎಂ’ ಅಗತ್ಯವಿದೆಯೇ?

Last Updated 27 ನವೆಂಬರ್ 2013, 19:29 IST
ಅಕ್ಷರ ಗಾತ್ರ

ಬೆಂಗಳೂರು: ರಾತ್ರಿ ವೇಳೆ­ಯಲ್ಲಿ ಹಣ ಬಳಕೆಗೆ ಅವಕಾಶವೇ ಕಡಿಮೆ­ಯಾಗಿರುವಾಗ ೨೪ ಗಂಟೆ ಕಾಲ ಎಟಿಎಂ ತೆರೆಯುವ ಅಗತ್ಯವೇ ಇಲ್ಲ. ಭದ್ರತೆ­ಯಿರುವ ಬ್ಯಾಂಕ್‌ ಅಥವಾ ಪೊಲೀಸ್‌ ಠಾಣೆ ಬಳಿ ಮಾತ್ರ ರಾತ್ರಿ ವೇಳೆ ಎಟಿಎಂ ತೆರೆದರೆ ಸಾಕು.

ಇದು ಸಾರ್ವಜನಿಕರ ಅಭಿಪ್ರಾಯ ಹಾಗೂ ಪ್ಲಾಸ್ಟಿಕ್‌ ಹಣದ ಕಲ್ಪನೆ ಹರಿದುಬಂದಿರುವ ಅಮೆರಿಕದಲ್ಲಿಯೂ ಇದೇ ಪರಿಸ್ಥಿತಿಯಿದೆ.

‘ಅಮೆರಿಕದಲ್ಲಿ ಬ್ಯಾಂಕ್‌ ಎಟಿಎಂಗಳು ರಾತ್ರಿ ವೇಳೆಯಲ್ಲಿ ತೆರೆದಿರುವುದೇ ಕಡಿಮೆ. ಬ್ಯಾಂಕ್‌ನ ಪಕ್ಕದಲ್ಲಿರುವ ಎಟಿಎಂಗಳಷ್ಟೇ ತೆರೆದಿರುತ್ತವೆ. ಉಳಿದ ಎಟಿಎಂಗಳನ್ನು ರಾತ್ರಿ 9 ಗಂಟೆ ಹೊತ್ತಿಗೆ ಮುಚ್ಚಲಾಗುತ್ತದೆ. ಇದನ್ನು ಇಲ್ಲೂ ಅನುಸರಿಸುವುದು ಸೂಕ್ತ’ ಎನ್ನುವುದು  ನಗರ ಯೋಜನಾ ತಜ್ಞ ಲೋಕೇಶ್‌ ಹೆಬಾನಿ ಅವರ ಸ್ಪಷ್ಟವಾದ ನುಡಿ.

ಲೋಕೇಶ್‌ ಅವರು ಪ್ರಸ್ತುತ ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು
ನಗರ ಯೋಜನಾ ಕೇಂದ್ರ (ಸಿಸ್ಟುಪ್‌)ನಲ್ಲಿ ಸಾರಿಗೆ ಯೋಜನಾ ವ್ಯವಸ್ಥಾಪಕರಾಗಿದ್ದಾರೆ. ಉನ್ನತ ವ್ಯಾಸಂಗ ಹಾಗೂ ಉದ್ಯೋಗದ ನಿಮಿತ್ತ 1992ರಿಂದ 2007ರವರೆಗೆ ನೆಲೆಸಿದ್ದ ಅವರು ಅಮೆರಿಕದಲ್ಲಿನ ವ್ಯವಸ್ಥೆ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿನ ವ್ಯವಸ್ಥೆ ಬದಲಾವಣೆ ಬಗ್ಗೆಯೂ ಸಲಹೆ ನೀಡಿದ್ದಾರೆ. 

‘ಅಮೆರಿಕದಲ್ಲಿ ಶಾಪಿಂಗ್‌ ಮಾಲ್‌ಗಳು, ರಸ್ತೆ ಬದಿ ಇರುವ ಎಟಿಎಂ ಕೇಂದ್ರಗಳನ್ನು ರಾತ್ರಿ 9 ಗಂಟೆಯಾಗುತ್ತಲೇ ಮುಚ್ಚಲಾಗುತ್ತದೆ. ಬ್ಯಾಂಕ್‌ ಪಕ್ಕದಲ್ಲಿರುವ ಎಟಿಎಂ ಕೇಂದ್ರಗಳು ಮಾತ್ರ ತೆರೆದಿರುತ್ತವೆ. ಈ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ ಸೇರಿದಂತೆ ಸುಸಜ್ಜಿತ ಭದ್ರತಾ ಸೌಕರ್ಯಗಳು ಇರುತ್ತವೆ’
ಎಂದು ಅವರು ಮಾಹಿತಿ ನೀಡಿದರು.

‘ಅಮೆರಿಕದಲ್ಲಿ ಎಟಿಎಂ ಸಂಸ್ಕೃತಿಯೂ ಕಡಿಮೆ. ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನೇ ಶೇ 99 ವ್ಯವಹಾರಕ್ಕೆ ಬಳಸಲಾಗುತ್ತದೆ. ಆಸ್ಪತ್ರೆಗಳು, ಮಾಲ್‌ಗಳು ಸೇರಿದಂತೆ ಎಲ್ಲ ಬಗೆಯ ವ್ಯವಹಾರಕ್ಕೆ ಇವುಗಳು ಸ್ವೀಕಾರಾರ್ಹ. ದೂರದ ಪ್ರಯಾಣ ಮತ್ತಿತರ ಸಂದರ್ಭಗಳಲ್ಲಿ  ಮಾತ್ರ ಎಟಿಎಂ­ಗಳಿಂದ ಹಣ ಡ್ರಾ ಮಾಡಿ ಬಳಸಲಾಗುತ್ತಿದೆ. ನಾನು 20 ವರ್ಷಗಳ ಅವಧಿಯಲ್ಲಿ ಎಟಿಎಂ ಬಳಸಿದ್ದೇ ಕಡಿಮೆ’ ಎಂದು ಅವರು ನೆನಪಿಸಿಕೊಂಡರು.

‘ಗ್ರಾಹಕರ ಸುರಕ್ಷತೆ ದೃಷ್ಟಿ ಹಾಗೂ ಬ್ಯಾಂಕ್‌ಗಳ ವಿಶ್ವಾಸಾರ್ಹತೆ ದೃಷ್ಟಿಯಿಂದ ಅಮೆರಿಕದ ಮಾದರಿಯ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು. ಜನರು ರಾತ್ರಿ ಹೊತ್ತಿನಲ್ಲಿ ಎಟಿಎಂ ಬಳಸದೇ ಇರುವುದೇ ಸೂಕ್ತ. ಬ್ಯಾಂಕ್‌ಗಳು ಸಹ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಹೆಚ್ಚಿನ ಎಟಿಎಂಗಳನ್ನು ಮುಚ್ಚುವುದು ಉತ್ತಮ’ ಎಂದು ಅವರು ಕಿವಿಮಾತು ಹೇಳಿದರು.

‘ಪೊಲೀಸ್‌ ಠಾಣೆಯ ಸಮೀಪದಲ್ಲಿರುವ ಎಟಿಎಂ ಕೇಂದ್ರಗಳು ಮಾತ್ರ ರಾತ್ರಿ ವೇಳೆಯಲ್ಲಿ ತೆರೆದಿರಲಿ. ತುರ್ತು ಸಂದರ್ಭಗಳಲ್ಲಿ ಈ ಎಟಿಎಂಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಈ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ, ಸಿ.ಸಿ. ಕ್ಯಾಮೆರಾ, ಅಲಾರಂ ಸೌಲಭ್ಯಗಳನ್ನು ಒದಗಿಸಬೇಕು. ವ್ಯವಸ್ಥೆಯನ್ನು ಬದಲಾವಣೆ ಮಾಡಿದರೆ ಜನರು ಸಹ ಹೊಂದಿಕೊಳ್ಳುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ೨೪ ಗಂಟೆ ಕಾಲ ಎಲ್ಲಾ ಔಷಧ ಮಳಿಗೆಗಳು ತೆರೆದಿರುವುದಿಲ್ಲ. ಅದೇ ರೀತಿಯಲ್ಲಿ ಮುಖ್ಯ ರಸ್ತೆ, ಭದ್ರತೆಯಿರುವ ಬ್ಯಾಂಕ್‌ ಬಳಿ ದಿನಪೂರ್ತಿ ಎಟಿಎಂ ತೆರೆಯಲಿ. ರಾತ್ರಿ ವೇಳೆ ತೆರೆದಿರುವ ಆಸ್ಪತ್ರೆ ಮತ್ತು ಔಷಧ ಮಳಿಗೆಗಳಲ್ಲಿ ಕ್ರೆಡಿಟ್‌ ಮತ್ತು ಡಿಬಿಟ್‌ ಕಾರ್ಡ್‌ಗಳನ್ನು ಬಳಸಲು ಅವಕಾಶವಿ
ರುತ್ತದೆ. ಹೀಗಾಗಿ ಎಲ್ಲಾ ಎಟಿಎಂಗಳು ೨೪ ಗಂಟೆ ಕೆಲಸ ಮಾಡಬೇಕೇ ಎನ್ನುವ ಬಗ್ಗೆ ಚರ್ಚೆ ನಡೆಯಬೇಕು ಎನ್ನುವರು.

24 ಗಂಟೆ ಕಾರ್ಯಾಚರಣೆ ಅನಗತ್ಯ: ‘ಬ್ಯಾಂಕ್‌ ಎಟಿಎಂಗಳಲ್ಲಿ ರಾತ್ರಿ ವೇಳೆಗೆ ಹಣ ತೆಗೆಯುವವರು ಬೆರಳೆಣಿಕೆಯ ಮಂದಿ. ಬಹುತೇಕ ಕಳ್ಳರು ಕಾರ್ಯಾಚರಣೆ ನಡೆಸುವುದು ಸಹ ತಡ ರಾತ್ರಿಯ ವೇಳೆಗೇ. ಎಟಿಎಂಗಳು 24 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುವುದರಿಂದ ಲಾಭಕ್ಕಿಂತ ಅಪಾಯವೇ ಜಾಸ್ತಿ’. 

–ಇದು ಬ್ಯಾಂಕ್‌ ಗ್ರಾಹಕರಿಂದ ವ್ಯಕ್ತವಾದ ಅಭಿಪ್ರಾಯ. ನಗರದ ಕಾರ್ಪೊರೇಷನ್‌ ವೃತ್ತದ ಬಳಿಕ ಎಟಿಎಂನಲ್ಲಿ ಮಹಿಳೆಯ ಮೇಲೆ ಬರ್ಬರ ಹಲ್ಲೆ ಘಟನೆ ನಡೆದ ಬಳಿಕ ಎಟಿಎಂಗಳ ಸುರಕ್ಷತೆ ಬಗ್ಗೆ ಜನರಲ್ಲಿ ಅನುಮಾನ ಮೂಡಿದೆ. ಅವುಗಳ ಕಾರ್ಯಾಚರಣೆಯ ವೈಖರಿಯಲ್ಲಿ ಬದಲಾವಣೆ ಆಗಬೇಕು
ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ‘24 ಗಂಟೆಗಳ ಕಾಲ ತೆರೆದಿರುವುದು ಒಳ್ಳೆಯದಲ್ಲ’ ಎಂಬ ಸಲಹೆಯನ್ನೂ ಗ್ರಾಹಕರು ನೀಡಿದ್ದಾರೆ.

‘ಈಚಿನ ಕೆಲವು ವರ್ಷಗಳಲ್ಲಿ ಎಟಿಎಂಗಳ ಪ್ರಮಾಣ ಹೆಚ್ಚಿದೆ. ಇದರಿಂದಾಗಿ ಅವುಗಳ ಬಳಕೆ ಪ್ರಮಾಣವೂ ನಾಲ್ಕೈದು ಪಟ್ಟು ಹೆಚ್ಚಿದೆ. ಎಟಿಎಂಗಳು ತುರ್ತು ಸಂದರ್ಭದಲ್ಲಿ ನೆರವಿಗೆ ಬರುತ್ತವೆ ಎಂಬ ವಾದ ಮಂಡಿಸಲಾಗುತ್ತಿದೆ. ಇದು ಸಂಪೂರ್ಣ ಸತ್ಯ ಅಲ್ಲ ಎನ್ನುವ ಎಂದು ಖಾಸಗಿ ಕಂಪೆನಿಯೊಂದರ ಉದ್ಯೋಗಿ ಕೃತಿಕಾ ರಾವ್‌, ಈ ಹಿಂದೆಯೂ ಜನರಿಗೆ ಅನೇಕ ಸಮಸ್ಯೆಗಳು ಇದ್ದವು. ಮನೆಯಲ್ಲೇ ಸಣ್ಣ ಇಡುಗಂಟು ಇಟ್ಟುಕೊಂಡು ಇಂತಹ ಸಂದರ್ಭದಲ್ಲಿ ಬಳಸುತ್ತಿದ್ದರು.

ಈಗ ದಿನಕ್ಕೆ ನಾಲ್ಕೈದು ಬಾರಿ ಹಣ ತೆಗೆಯುವುದು ಫ್ಯಾಷನ್‌ ಆಗಿದೆ. ಇದು ಕೊಳ್ಳುಬಾಕ ಸಂಸ್ಕೃತಿಯ ಕೊಡುಗೆಯೂ ಹೌದು’ ಎಂದು ಹೇಳುತ್ತಾರೆ.

‘ರಾತ್ರಿ 10ರ ಬಳಿಕ ಎಟಿಎಂ ಬಳಸುವವರು ಕಡಿಮೆ. ಅಲ್ಲದೆ ಭದ್ರತಾ ಸಿಬ್ಬಂದಿ ಯನ್ನು ನಿಯೋಜಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಅವರಿಗೆ ನೀಡುವುದು ಜುಜುಬಿ ಸಂಬಳ. ಮುಂದೊಂದು ದಿನ ಅವರಿಂದಲೂ ಬ್ಯಾಂಕ್‌ ಗ್ರಾಹಕರಿಗೆ  ಅಪಾಯ ಎದುರಾಗಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ. 

‘ಈಗ ನಗರದಲ್ಲಿ ಗಲ್ಲಿ ಗಲ್ಲಿಗಳಲ್ಲೂ ಎಟಿಎಂ ಕೇಂದ್ರಗಳು ತಲೆ ಎತ್ತಿವೆ. ಇವುಗಳಿಂದ ಉಪಕಾರಕ್ಕಿಂತ ಸಮಸ್ಯೆಯೇ ಜಾಸ್ತಿ. ಇದರ ಬದಲು ಮುಖ್ಯ ರಸ್ತೆಗಳಲ್ಲಿ ಮಾತ್ರ ಎಟಿಎಂ ಕೇಂದ್ರಗಳನ್ನು ತೆರೆದು ಅವುಗಳಿಗೆ ಭದ್ರತಾ ಸಿಬ್ಬಂದಿ ನಿಯೋಜನೆ, ಸಿ.ಸಿ.ಕ್ಯಾಮೆರಾ ಅಳವಡಿಕೆಯಂತಹ ಅಗತ್ಯ ವ್ಯವಸ್ಥೆಗಳನ್ನು ಒದಗಿಸಬೇಕು. ಈ ವ್ಯವಸ್ಥೆ ಗ್ರಾಹಕರಿಗೆ ಸುರಕ್ಷತಾ ಭಾವನೆ ಮೂಡುವಂತಿರಬೇಕು. ಈಗಂತೂ ಕೆಲ ಭದ್ರತಾ ಸಿಬ್ಬಂದಿಯನ್ನು ನೋಡಿದರೆ
ಭಯ ಹುಟ್ಟಿಸುವಂತಿರುತ್ತಾರೆ. ರಾತ್ರಿ ವೇಳೆಯಂತೂ ಇವರು ಸಮವಸ್ತ್ರವನ್ನೂ ಹಾಕಿರುವುದಿಲ್ಲ. ಇವರೇ ಭದ್ರತಾ ಸಿಬ್ಬಂದಿ ಎಂದು ಹೇಗೆ ನಂಬುವುದು’ ಎಂದು ವಿದ್ಯಾರ್ಥಿನಿ ಜೀವನಾ ಪ್ರಶ್ನಿಸುತ್ತಾರೆ.

‘ರಾತ್ರಿ ವೇಳೆಯಲ್ಲಿ ಆಸ್ಪತ್ರೆ ಖರ್ಚಿಗೆ ಮತ್ತಿತರ ತುರ್ತು ಕಾರಣಗಳಿಗೆ ಹಣ ಬೇಕಾಗುತ್ತದೆ. ಇದಕ್ಕೆ ಎಟಿಎಂಗಳನ್ನೇ ಆಶ್ರಯಿಸಬೇಕಿಲ್ಲ. ಇಂತಹ ಸಂದರ್ಭಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಬಳಸಬಹುದು. ನಡುರಾತ್ರಿಯಲ್ಲಿ ಸಾವಿರಾರು ರೂಪಾಯಿಗಳನ್ನು ತೆಗೆಯುವುದು ಅಪಾಯವೇ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಎಟಿಎಂಗಳನ್ನು ಮುಚ್ಚುವುದು ಸೂಕ್ತ’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಸುಧೀಂದ್ರ ಹೇಳುತ್ತಾರೆ.

‘ಕಳೆದ ಆರು ತಿಂಗಳಿನಲ್ಲಿ ಎಟಿಎಂ ದರೋಡೆ, ಭದ್ರತಾ ಸಿಬ್ಬಂದಿಯ ಕೊಲೆ ಮಾಡಿ ಲೂಟಿಯಂತಹ ಐದಾರು ಪ್ರಕರಣಗಳು ನಡೆದಿವೆ. ಹೆಚ್ಚಿನ ಘಟನೆಗಳು ನಡೆದಿರುವುದು ರಾತ್ರಿ ಹೊತ್ತಿನಲ್ಲೇ. ರಾತ್ರಿ 10ರ ನಂತರ ಎಟಿಎಂ ವ್ಯವಸ್ಥೆ ಇಲ್ಲದಿದ್ದರೂ ಏನೂ ಸಮಸ್ಯೆಯಾಗುವುದಿಲ್ಲ’ ಎಂದು ವಿದ್ಯಾರ್ಥಿನಿ ಪಾವನಾ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT