ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಸಾಯನಿಕ ಅಸ್ತ್ರ ನಿಗಾ ಸಂಸ್ಥೆಗೆ ಶಾಂತಿ ನೊಬೆಲ್‌

Last Updated 11 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಓಸ್ಲೊ (ಎಎಫ್‌ಪಿ): ವಿಶ್ವದಾದ್ಯಂತ ರಾಸಾಯನಿಕ ಅಸ್ತ್ರ ಬಳಕೆಗೆ ಲಗಾಮು ಹಾಕಲು ಶ್ರಮಿಸುತ್ತಿರುವ ರಾಸಾಯನಿಕ ಅಸ್ತ್ರಗಳ ನಿರ್ಬಂಧ ಸಂಸ್ಥೆಗೆ (ಒಪಿಸಿ­ಡಬ್ಲು)ಈ ಬಾರಿಯ ಶಾಂತಿ ನೊಬೆಲ್‌ ದೊರೆತಿದೆ.

ಸಂಘರ್ಷ ಪೀಡಿತ ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರ ಬಳಕೆಗೆ ಕಡಿವಾಣ ಹಾಕುವ ದಿಸೆಯಲ್ಲಿ ಮಾಡಿದ ಕೆಲಸ­ದಿಂದಾಗಿ ಒಪಿಸಿಡಬ್ಲು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

‘ವಿಶ್ವದಲ್ಲಿ ರಾಸಾಯನಿಕ ಅಸ್ತ್ರಗಳ ನಿರ್ಮೂಲನಕ್ಕೆ ಅವಿರತವಾಗಿ ಶ್ರಮಿಸಿದ  ಸಂಸ್ಥೆಗೆ ಈ ಗೌರವ ಪ್ರಾಪ್ತವಾಗಿದೆ’ ಎಂದು ನಾರ್ವೆಯ ನೊಬೆಲ್‌್ ಆಯ್ಕೆ ಸಮಿತಿ ತನ್ನ ಪ್ರಕಟಣೆಯಲ್ಲಿ  ತಿಳಿಸಿದೆ.

ಈ ಸಂಸ್ಥೆಗೆ ಶಾಂತಿ ನೊಬೆಲ್ ಬರುತ್ತದೆ ಎಂದು ಯಾರೂ ಊಹಿಸಿ­ರಲಿಲ್ಲ. ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ 16 ವರ್ಷದ ಬಾಲಕಿ ಮಲಾಲಾ, ಈ ಬಾರಿಯ ಶಾಂತಿ ನೊಬೆಲ್‌್ ಗೆ ಪಾತ್ರ­ರಾಗುತ್ತಾರೆ ಎಂದು ಅನೇಕರು ನಿರೀಕ್ಷೆ ಇಟ್ಟುಕೊಂಡಿದ್ದರು.

1993ರ ಜನವರಿ 13ರಂದು ಮಾಡಿ­ಕೊಂಡ ರಾಸಾಯನಿಕ ಅಸ್ತ್ರ ಒಪ್ಪಂದ­ವನ್ನು ಜಾರಿಗೆ ತರುವ ಉದ್ದೇಶ­ದೊಂದಿಗೆ 1997ರಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂತು. 189 ದೇಶಗಳು ಹೇಗ್‌ ಮೂಲದ ಈ ಸಂಸ್ಥೆಯ ಸದಸ್ಯತ್ವ ಹೊಂದಿವೆ.  ಅಸ್ತಿತ್ವಕ್ಕೆ ಬಂದ 16 ವರ್ಷ­ಗ­ಳಲ್ಲಿ ಸುಮಾರು 57 ಸಾವಿರ ಟನ್‌ ರಾಸಾಯನಿಕ ಅಸ್ತ್ರಗಳನ್ನು ಈ ಸಂಸ್ಥೆ ನಾಶ ಮಾಡಿದೆ ಎನ್ನುವುದು ವಿಶೇಷ.

ಶಾಂತಿ ನೊಬೆಲ್‌ ಪ್ರಶಸ್ತಿಯು ಸಂಸ್ಥೆ­ಯೊಂದರ ಪಾಲಾಗಿರುವುದು ಇದು ಎರ­ಡನೇ ಬಾರಿ. ಕಳೆದ ವರ್ಷ ಐರೋಪ್ಯ ಒಕ್ಕೂಟಕ್ಕೆ ಈ ಪ್ರಶಸ್ತಿ ಒಲಿದಿತ್ತು.

ಸಂಸ್ಥೆಯ ಪ್ರತಿಕ್ರಿಯೆ: ‘ಈ ಬಾರಿಯ ಶಾಂತಿ ನೊಬೆಲ್ ಪ್ರಶಸ್ತಿಯು ರಾಸಾ­ಯನಿಕ ಅಸ್ತ್ರವನ್ನು ನಿಷೇಧಿಸುವ ದಿಸೆ­ಯಲ್ಲಿ ರಾಷ್ಟ್ರಗಳಿಗೆ  ಪ್ರೇರೇಪಣೆ
ನೀಡ­­ಲಿದೆ’ ಎಂದು ಒಪಿಸಿಡಬ್ಲು ಪ್ರತಿಕ್ರಿಯಿಸಿದೆ.

ತವರಲ್ಲಿ ನಿರಾಸೆ
(ಇಸ್ಲಾಮಾಬಾದ್‌ ವರದಿ
): ಮಲಾಲಾಗೆ ಶಾಂತಿ ನೊಬೆಲ್‌ ಕೈತಪ್ಪಿದ್ದಕ್ಕೆ  ಪಾಕಿ­ಸ್ತಾ­ನದಲ್ಲಿ ರಾಜಕೀಯ ವ್ಯಕ್ತಿಗಳಿಂದ ಹಿಡಿದು ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಲಾಲಾ ಪಾಕಿಸ್ತಾನದ ಹೆಮ್ಮೆಯ ಪುತ್ರಿ’ ಎಂದು ಪ್ರಧಾನಿ ನವಾಜ್‌ ಷರೀಫ್‌ ಬಣ್ಣಿಸಿದ್ದಾರೆ.  ‘ನೊಬೆಲ್‌ ಬಗ್ಗೆ ತಲೆಕೆಡಿಸಿಕೊಳ್ಳು­ವುದು ಬೇಡ, ಮಲಾಲಾ ಭವಿಷ್ಯದ ಪ್ರಧಾನಿ­ಯಾ­ಗಲಿ’ ಎಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ  ಪುತ್ರಿ ಬಖ್ತಾವರ್ ಭುಟ್ಟೊ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT