ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಯಾಜ್‌ ಮುಗಿಸಿದ ಗಾನ ಗಂಧರ್ವ

Last Updated 24 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎದೆಯೊಳಗೆ ಹೆಪ್ಪುಗಟ್ಟಿದ ಭಾವನೆಗಳನ್ನು ಕರಗಿಸುವಂಥ ಜಿಟಿಜಿಟಿ ಮಳೆ. ಮನ್ನಾ ಡೇ ಅವರ ಸಾವಿನ ಸುದ್ದಿ ತಿಳಿದ ಕೆಲವರಿಗಾದರೂ ‘ಶ್ರೀ 420’ ಚಿತ್ರದ ಮಳೆಹಾಡು ‘ಪ್ಯಾರ್‌ ಹುವಾ ಇಕ್‌ರಾರ್‌ ಹುವಾ ಹೈ’ ನೆನಪಿಗೆ ಬಂದಿರಬೇಕು. ರಾಜ್‌ಕಪೂರ್‌ ಮತ್ತು ನರ್ಗೀಸ್‌ ಅವರ ನಡುವೆ ಪ್ರೇಮದ ರಾಯಭಾರಿಯಂತೆ ಮಳೆ ಸುರಿಯುವ ಗೀತೆಯದು.

ಆ ಹಾಡಿನಲ್ಲಿ ಮಳೆ ಕಾವಿಗೆ ಮೈಯೊಡ್ಡಿದ ಯುವಜೋಡಿ­ಯಷ್ಟೇ ಇರಲಿಲ್ಲ– ಮಳೆಯೊಂದಿಗೆ ಹರಟಿದಂತೆ ಸಾಗುವ ಚಿಣ್ಣರಿದ್ದರು. ಚಹಾ ಅಂಗಡಿ ಯಲ್ಲಿ ಚಹಾ ಹೀರುತ್ತಾ ಮಳೆಯನ್ನು ನೋಡುತ್ತಾ ಕುಳಿತ ಕನಸು­ಗಾರ­ನೊಬ್ಬನಿದ್ದ. ಹೀಗೆ, ಮಳೆ­ಯೊಂದಿಗೆ ಹಲವು ಮನಸುಗಳು ಬೆರೆತ ‘ಪ್ಯಾರ್‌ ಹುವಾ’ ಗೀತೆ ಎಂದೂ ಮರೆ­ಯದ ಹಾಡಾಗಿ ರೂಪುಗೊಳ್ಳು­ವಲ್ಲಿ ಮನ್ನಾ ಡೇ ಅವರ ದನಿಯೂ ಕಾರಣ­ವಾಗಿತ್ತು. ಅಂಥದೇ ಮಳೆಯ ಅಸಂಖ್ಯ ಚಿತ್ರಗಳು ಮನ್ನಾ ಡೇ ಅವರ ಸಾವಿನ ಸಂದರ್ಭದಲ್ಲೂ ಅವರ ಅಭಿಮಾನಿಗಳ ಎದೆಯಲ್ಲಿ ಸುರಿ­ಯುವುದು ಸಹಜವೇ.

>ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ಗಾಯಕರಲ್ಲೊಬ್ಬರು ಎಂದು ಮನ್ನಾ ಡೇ ಅವರನ್ನು ಸುಲಭವಾಗಿ ಬಣ್ಣಿಸಬಹುದು. ಆದರೆ, ಈ ಬಣ್ಣನೆ ಅವರ ಸಾಧನೆಯ ಒಂದು ಮುಖವಷ್ಟೇ ಆಗುತ್ತದೆ. ಕೋಲ್ಕತ್ತದ ತರುಣನೊಬ್ಬ ಮುಂಬೈಗೆ ಹೋಗಿ ಮಹಾನ್‌ ಗಾಯಕನಾಗಿ ರೂಪುಗೊಂಡದ್ದರ ಹಿನ್ನೆಲೆಯಲ್ಲಿ ಎಲ್ಲ ಕಾಲದ ತರುಣ ತರುಣಿಯರಿಗೆ ಮಾದರಿಯಾಗಬಲ್ಲ ಶಿಸ್ತು, ಬದ್ಧತೆಯ ಬದುಕಿದೆ. ಹೇಳಿಕೇಳಿ ಮನ್ನಾಡೇ ಜನಿಸಿದ್ದು ಕಾರ್ಮಿಕರ ದಿನದಂದು (ಮೇ 1, 1919).

ಮನ್ನಾ ಡೇ ಮೂಲತಃ ಕೋಲ್ಕತ್ತದವರು. ಬಂಗಾಲಿ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಅವರ ಮೂಲ ಹೆಸರು ಪ್ರಬೋಧ್‌ ಚಂದ್ರ ಡೇ. ಅವರ ತಂದೆ ಪೂರ್ಣಚಂದ್ರ ಡೇ, ತಾಯಿ ಮಹಾಮಾಯಾ ಡೇ. ಆದರೆ, ಬಾಲಕ ಪ್ರಬೋಧನ ಮೇಲೆ ಹೆಚ್ಚು ಪ್ರಭಾವ ಬೀರಿದ್ದು ಚಿಕ್ಕಪ್ಪ ಕೃಷ್ಣಚಂದ್ರ ಡೇ. ಅವರು ಮೊದಲ ಗುರು ಕೂಡ. ರಿಯಾಜ್‌ ಮಾಡಲು ಹೇಳಿಕೊಟ್ಟಿದ್ದು ಚಿಕ್ಕಪ್ಪನೇ. ಅವಿವಾಹಿತರಾಗಿದ್ದ ಕೃಷ್ಣಚಂದರು ಪ್ರಬೋಧನನ್ನು ಮಗನಂತೆ ಭಾವಿಸಿದ­ವರು. ಚಿಕ್ಕಪ್ಪನ ಹೆಜ್ಜೆಗುರುತುಗಳಲ್ಲಿ ನಡೆಯುತ್ತಲೇ ಮನ್ನಾ ಡೇ ಸಂಗೀತದ ಪ್ರೀತಿ ಬೆಳೆಸಿಕೊಂಡರು, ಚಿತ್ರರಂಗದಲ್ಲೂ ಗುರ್ತಿಸಿಕೊಂಡರು.

ಮೊದಲಿಗೆ ಚಿಕ್ಕಪ್ಪನಿಗೆ ಸಹಾಯಕ­ನಾಗಿ ಕೆಲಸ ಮಾಡಿದ ಅವರು, ೧೯೪೨ನೇ ಇಸವಿಯಲ್ಲಿ ಎಸ್.ಡಿ.ಬರ್ಮನ್ ಗರಡಿ ಸೇರಿಕೊಂಡರು. ಅಲ್ಲಿ ಅವರ ಸಿನಿಮಾ ಕನಸುಗಳು ಚಿಗುರತೊಡಗಿದವು. ಮರುವರ್ಷವೇ ‘ತಮನ್ನಾ’ ಚಿತ್ರಕ್ಕೆ ಹಾಡಿದರು. ಅಲ್ಲಿಂದ ಸುಮಾರು ಐದು ದಶಕಗಳ ಕಾಲ (1990ರವರೆಗೆ) ಅವರು ಭಾರತೀಯ ಚಿತ್ರ ಸಂಗೀತದ ಒಂದು ಗಮನೀಯ ದನಿಯಾಗಿ ಸುಮಾರು ಮೂರೂವರೆ ಸಾವಿರ ಗೀತೆಗಳನ್ನು ಕೊಟ್ಟರು. ಪ್ರಬೋಧ ಎನ್ನುವ ಹಾಡುಹಕ್ಕಿ, ತನ್ನ ಕುಟುಂಬದ ಸದಸ್ಯರು ಪ್ರೀತಿಯಿಂದ ಕರೆಯುತ್ತಿದ್ದ ಮನ್ನಾ ಡೇ ಹೆಸರಿನಿಂದಲೇ ಚಿತ್ರರಂಗದಲ್ಲಿ ಪ್ರಸಿದ್ಧವಾದದ್ದು.

ಸಂಗೀತದ ಸೆಳೆತ: ಬಾಲ್ಯದಿಂದಲೇ ಸಂಗೀತದ ಸೆಳೆತಕ್ಕೆ ಮನ್ನಾ ಡೇ ಒಳಗಾಗಿದ್ದರು. ಶಾಲೆಯಲ್ಲಿದ್ದಾಗ ಬೆಂಚು ಕುಟ್ಟಿ ಸಂಗೀತ ಹೊರಡಿಸುತ್ತಿದ್ದರು. ಕಾಲೇಜಿನಲ್ಲಿದ್ದಾಗ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆಲ್ಲುವುದು ಅವರಿಗೆ ಹವ್ಯಾಸವಾಗಿತ್ತು. ಹೀಗೆ ಹಾಡಿನ ಹಿಂದೆ ಬಿದ್ದ ಅವರು ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲಿಕ್ಕೆ, ತಮ್ಮದೇ ಆದ ಶೈಲಿಯೊಂದನ್ನು ಗುರ್ತಿಸಿಕೊಳ್ಳಲಿಕ್ಕೆ ಪ್ರತಿಭೆಯೇ ಆಸರೆಯಾಯಿತು.

ಶಿಸ್ತು ಹಾಗೂ ಶ್ರದ್ಧೆಯ ಗುಣಗಳು ಕೂಡ ಅವರನ್ನು ಗಾಯಕನಾಗಿ ಬೆಳೆಸಿದವು. ಸ್ವರಶುದ್ಧಿ ಅವರ ಸಂಗೀತದ ಇನ್ನೊಂದು ಗುಣ. ಶಾಸ್ತ್ರೀಯ ಸಂಗೀತ ಎಂದರೆ ಮನ್ನಾ ಡೇ ಅವರನ್ನು ನೆನಪಿಸಿಕೊಳ್ಳಬೇಕು ಎನ್ನುವಂತಿತ್ತು ಅವರ ಹಿಂದೂಸ್ತಾನಿ ಸಾಧನೆ. ತಮ್ಮ ಕಂಠದ ಮೇಲೆ ಅವರಿಗೆ ಅದ್ಭುತ ಹಿಡಿತವಿತ್ತು.

ನಿಮ್ಮ ಸಂಗೀತದ ಯಶಸ್ಸಿನ ಗುಟ್ಟೇನು ಎನ್ನುವ ಪ್ರಶ್ನೆಗೆ ಮನ್ನಾ ಡೇ ಅವರು ನೀಡಿದ್ದ ಉತ್ತರ– ರಿಯಾಜ್‌. ದಿನವೂ ಮಾಡುವ ಅಭ್ಯಾಸವೇ ತನ್ನ ಕಂಠವನ್ನು ಜೀವಂತವಾಗಿಟ್ಟಿದೆ ಎನ್ನುವುದು ಅವರ ನಂಬಿಕೆಯಾಗಿತ್ತು. ರಿಯಾಜ್‌ನ ಗುಟ್ಟನ್ನು ಬಿಟ್ಟುಕೊಟ್ಟಾಗ ಅವರ ವಯಸ್ಸು ತೊಂಬತ್ತು ದಾಟಿತ್ತು. ಬಹುಶಃ ಅವರಿಗೆ ಇಡೀ ಬದುಕೇ ಒಂದು ರಿಯಾಜ್‌ನಂತೆ ಕಂಡಿರಬೇಕು!

ಮನ್ನಾ ಡೇ ಉತ್ತುಂಗದಲ್ಲಿದ್ದ ಕಾಲದಲ್ಲಿ ಅವರಿಗೆ ಸ್ಪರ್ಧೆಯೂ ಸಾಕಷ್ಟಿತ್ತು. ಮಾಂತ್ರಿಕ ಕಂಠದ ಮೊಹಮ್ಮದ್ ರಫಿ, ಭಾವನೆಗಳನ್ನು ವಿಷಾದದಲ್ಲಿ ಅದ್ದಿ ಹಾಡುತ್ತಿದ್ದ ಮಂದ್ರ ಸ್ಥಾಯಿಯ ಮುಖೇಶ್, ಸಿಹಿ ದನಿಯ ಕಿಶೋರ್ ಕುಮಾರ್‌, ಗಾಯಕಿಯರಾಗಿ ತಾರಾ ವರ್ಚಸ್ಸು ಪಡೆದಿದ್ದ ಲತಾ ಮಂಗೇಶ್ಕರ್‌, ಆಶಾ ಭೋಂಸ್ಲೆ– ಇವರೆಲ್ಲ ಅಪ್ರತಿಮ ಹಾಡುಗಾರರೇ. ಇಂಥ ಗಾಯಕರು ಕೂಡ ಅಹುದಹುದು ಎನ್ನುವಂತೆ ಮನ್ನಾ ಡೇ ಹಾಡಿದರು. ‘ನನಗೆ ಚಿತ್ರರಂಗದಲ್ಲಿ ಯಾವ ಗಾಡ್‌ಫಾದರ್‌ ಇರಲಿಲ್ಲ’ ಎಂದಿದ್ದ ಅವರು, ಭಾರತೀಯ ಚಿತ್ರಸಂಗೀತದಲ್ಲಿ ತಮ್ಮದೇ ಆದ ಮಾರ್ಗವೊಂದನ್ನು ರೂಪಿಸಿದರು.

ಸಿನಿಮಾದ ನಾಯಕ ನಾಯಕಿಯ ಕಂಠಕ್ಕೆ ಹೊಂದುವಂತೆ ಗಾಯಕರು ಹಾಡುವುದು ರೂಢಿ. ಆದರೆ, ಮನ್ನಾ ಡೇ ಅವರ ದಾರಿಯೇ ಬೇರೆ. ನಾಯಕನಿಗೆ ತಕ್ಕಂತೆ ಹಾಡುವುದು ಅವರ ಶೈಲಿಯಾಗಿರಲಿಲ್ಲ. ಆ ಕಾರಣದಿಂದಲೇ ಇರಬೇಕು, ಮನ್ನಾ ಡೇ ಹಾಡಿರುವ ಅನೇಕ ಗೀತೆಗಳು ‘ಅವರ ಗೀತೆಗಳಾಗಿಯಷ್ಟೇ’ ಜನರಿಗೆ ಹತ್ತಿರವಾಗಿವೆ.

ವಿಶೇಷ ಗುಣ ಪ್ರಯೋಗಶೀಲತೆ:  ಪ್ರಯೋಗಶೀಲತೆ ಅವರ ಸಂಗೀತದ ಇನ್ನೊಂದು ವಿಶೇಷ ಗುಣ. ಯಾವ ಸಂಗೀತ ನಿರ್ದೇಶಕನಿಗೂ ತನ್ನ ಚಿತ್ರದ ಎಲ್ಲ ಗೀತೆಗಳಿಗೂ ಮನ್ನಾ ಡೇ ಅವರು ಆಯ್ಕೆಯಾಗಿರಲಿಲ್ಲ. ಬಹುಶಃ ಈ ಕಾರಣದಿಂದಲೇ ಇರಬೇಕು, ಐದು ದಶಕಗಳ ಕಾಲ ಹಾಡಿದರೂ
ಸಂಖ್ಯೆಯ ದೃಷ್ಟಿಯಿಂದ ಅವರದು ಗಮನಾರ್ಹ ಸಾಧನೆಯೇನಲ್ಲ. ಹೆಚ್ಚು ಗೀತೆಗಳನ್ನು ಹಾಡುವ ಆಸಕ್ತಿ ಅವರಿಗೂ ಇರಲಿಲ್ಲ.

ಮನ್ನಾ ಡೇ ಅವರ ಸಮಕಾಲೀನ ಗಾಯಕರು ಪ್ರಣಯೋ ನ್ಮಾದದ ಗೀತೆಗಳಲ್ಲಿ
ಹೆಸರು ಮಾಡುತ್ತಿದ್ದರೆ, ಇವರು ಬದುಕಿನ ಎಲ್ಲ ಆಯಾಮಗಳನ್ನು ಚಿತ್ರಿಸುವ ಗೀತೆಗಳಿಗೆ ದನಿ ಯಾಗಿದ್ದರು. ಆ ಕಾರಣದಿಂದಲೇ, ಮನ್ನಾ ಅವರ ಹಾಡು ಗಳೆಂದರೆ  ಬದುಕಿನ ಕುರಿತ ವ್ಯಾಖ್ಯಾನದಂತೆಯೇ ಕಾಣಿಸುತ್ತವೆ.

ಪ್ರೇಮಗೀತೆಗಳನ್ನು ಹಾಡುವುದು ಇವರಿಗೆ ಸಾಧ್ಯವೇ ಇಲ್ಲ ಎಂದು ಕೆಲವರು ಮನ್ನಾ ಡೇ ಅವರ ಬಗ್ಗೆ ಅಡ್ಡಮಾತು ಆಡಿರುವುದಿದೆ. ಈ ಮಾತು ಸುಳ್ಳೆನ್ನುವಂತೆ ರಾಜ್‌ಕಪೂರ್‌ ನಟನೆಯ ಗೀತೆಗಳಲ್ಲಿ  ಮನ್ನಾ ಡೇ ಯುವಜನರ ಮನಸೂರೆಗೊಳ್ಳುವಂತೆ ಹಾಡಿದರು. ಆ ಕಾರಣದಿಂದಲೇ ಇರಬೇಕು, ರಾಜಕಪೂರ್‌ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ. ಫಾಲ್ಕೆ ಪ್ರಶಸ್ತಿ ಬಂದಾಗ, ಆ ಪ್ರಶಸ್ತಿಯನ್ನು ರಾಜ್‌ಕಪೂರ್‌ ಹಾಗೂ ಶಂಕರ್‌ ಜೈಕಿಶನ್‌ ಅವರಿಗೆ ಅರ್ಪಿಸಿದ್ದರು.

ಮನ್ನಾ ಡೇ ಅವರ ಧ್ವನಿಯ ಮಾರ್ದ­ವತೆಯನ್ನು ಸಂಗೀತ ಪ್ರೇಮಿಗಳೆಲ್ಲ ಸವಿದು ಬಲ್ಲರು. ಆದರೆ, ಆ ಮಾರ್ದವತೆಯನ್ನು ಹಾಡುಗಾರನನ್ನು ಹತ್ತಿರದಿಂದ ಬಲ್ಲವರು ಅವರ ಬದುಕು, ವ್ಯಕ್ತಿತ್ವದಲ್ಲೂ ಕಂಡಿದ್ದರು. ‘ಜಿಬೊನರ್‌ ಜಲ್ಸಾಘೋರೆ’ ಅವರ ಆತ್ಮಕಥನ ಹೆಸರು.

ಪ್ರತಿಷ್ಠಿತ ಪ್ರಶಸ್ತಿಗಳು: ಪದ್ಮಭೂಷಣ, ದಾದಾಸಾಹೇಬ್‌ ಫಾಲ್ಕೆ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಮನ್ನಾ ಡೇ ಅವರ ಸಾಧನೆಗೆ ಸಂದಿವೆ. ಆದರೆ, ಸಾಧನೆಯ ಉತ್ತುಂಗದಲ್ಲಿದ್ದ ಸಮಯದಲ್ಲಿ ಮನ್ನಾ ಡೇ ಅವರಿಗೆ ಸಲ್ಲಬೇಕಾದ ಮನ್ನಣೆ ದೊರಕಲಿಲ್ಲ ಎನ್ನುವ ಕೊರಗು ಅವರ ಅಭಿಮಾನಿಗಳನ್ನು ಬಾಧಿಸಿತ್ತು. ಲೋಕದ ಈ ವ್ಯವಹಾರ­ಗಳನ್ನು ಅಷ್ಟು ಹಚ್ಚಿಕೊಳ್ಳದಂತಿದ್ದ ಈ ಹಾಡುಗಾರ ‘ಹಾಡು­ಹಕ್ಕಿಗೆ ಬೇಕೆ ಬಿರುದುಸಮ್ಮಾನ’ ಎನ್ನುವಂತೆ ತಮ್ಮ ಪಾಡಿಗೆ ತಾವು ಎದೆದುಂಬಿ ಹಾಡುವುದರಲ್ಲೇ ಸುಖ ಕಾಣುತ್ತಿದ್ದರು.

ಮನ್ನಾ ಡೇ ಅವರ ಕೊನೆಯ ದಿನಗಳು ಮಧುರಗೀತೆಯೇನೂ ಆಗಿರಲಿಲ್ಲ. ಅವರ ಪತ್ನಿ ಸುಲೋಚನಾ ಕಳೆದ ವರ್ಷ ಕ್ಯಾನ್ಸರ್‌ಗೆ ತುತ್ತಾದರು. ಸಂಗಾತಿಯ ಅಗಲಿಕೆಯಿಂದ ಹಿರಿಯಜ್ಜನನ್ನು ಇನ್ನಿಲ್ಲದ ಒಂಟಿತನ ಕಾಡಿರಬೇಕು. ‘ಆಕೆ ನನ್ನ ಬದುಕಿನ ಎಲ್ಲವೂ ಆಗಿದ್ದಳು. ಆಕೆ ಇಲ್ಲವಾದ ಮೇಲೆ ಶೂನ್ಯವೊಂದು ನನ್ನ ಬದುಕನ್ನು ಆವರಿಸಿದೆ’ ಎಂದವರು ಸಂದರ್ಶನ­ವೊಂದರಲ್ಲಿ ನೋವು ತೋಡಿ­ಕೊಂಡಿ­ದ್ದರು. ವಯಸ್ಸಿನ ಭಾರವೂ ಅವರನ್ನು ಬಾಧಿಸುತ್ತಿತ್ತು. ಆದರೂ, ಸಮಕಾಲೀನ ಸಿನಿಮಾ ಸಂಗೀತದ ಬಗ್ಗೆ ಅವರು ಬಿಡುಗಣ್ಣಾಗಿದ್ದರು.

ಸದ್ದುಗದ್ದಲದ ನಡುವೆ ಮಾಧುರ್ಯ ಕಳೆದುಹೋಗುತ್ತಿರುವ ಕುರಿತು ಅವರಿಗೆ ಖೇದವಿತ್ತು. ಭಾವವಿಲ್ಲದ ಬರಿಯ ಸದ್ದು ಮನಸ್ಸನ್ನು ಮುಟ್ಟುವುದಿಲ್ಲ ಎಂದವರು ನಂಬಿದ್ದರು. ಈ ಗದ್ದಲದ ಜನರ ನಡುವೆ ಕೂತು ಹಾಡುವ ಉತ್ಸಾಹವನ್ನೂ ಅವರು ಕಳೆದುಕೊಂಡಂತಿದ್ದರು. ಕಳೆದ ಐದು ವರ್ಷಗಳಿಂದ ಅವರು ಯಾವ ಸಂಗೀತ ಪ್ರದರ್ಶನವನ್ನೂ ನೀಡಿರಲಿಲ್ಲ.

ಬೆಂಗಳೂರಿನ ವಿಶಿಷ್ಟ ನಂಟು: ಮನ್ನಾ ಡೇ ಅವರಿಗೂ ಬೆಂಗಳೂರಿಗೂ ವಿಶಿಷ್ಟ ನಂಟು. ಸುಮಾರು ಏಳು ಭಾಷೆಗಳ ಸಿನಿಮಾ­ಗಳಲ್ಲಿ ಹಾಡಿರುವ ಅವರು, ಕನ್ನಡ ಚಿತ್ರಗಳಲ್ಲೂ ಹಾಡಿದ್ದರು. ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌  ಸಹಾಯಾರ್ಥ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕೋಲ್ಕತ್ತದ ಬಗ್ಗೆ ಅವರಿಗೆ ಅತೀವ ಪ್ರೀತಿಯಿದ್ದರೂ ಜೀವನ ಸಂಧ್ಯೆ ಕಳೆಯಲು ಅವರು ಆರಿಸಿಕೊಂಡಿದ್ದು ಬೆಂಗಳೂರಿನ ಮಗಳ ಮನೆಯನ್ನು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ಅನಾರೋಗ್ಯದಿಂದ ಬಳಲುತ್ತಿದ್ದ ಹಾಡುಹಕ್ಕಿಯ ಕುಶಲ ವಿಚಾರಿಸಿಕೊಂಡು ಹೋಗಿದ್ದರು. ಮನ್ನಾ ಡೇ ಅವರ ಬ್ಯಾಂಕ್‌ ಖಾತೆಯಲ್ಲಿದ್ದ ಹಣದ ದುರ್ಬಳಕೆ ಕುರಿತ ಪ್ರಕರಣವೂ ಈಚೆಗೆ ಸುದ್ದಿಯಾಗಿತ್ತು. ಹೀಗೆ ಸಂಗೀತೇತರ ಕಾರಣಗಳಿಂದಲೇ ಈಚೆಗೆ ಹೆಚ್ಚು ಸುದ್ದಿಯಲ್ಲಿದ್ದ ಅವರು, ಇದೀಗ ಬದುಕಿನ ಕೊನೆಯ ಚರಣ ಮುಗಿಸಿದ್ದಾರೆ.

ಪಡೋಸನ್‌ ಚಿತ್ರದ ‘ಏಕ್‌ ಚತುರ್‌ ನಾರ್‌’, ಆಶೀರ್ವಾದ್‌ ಚಿತ್ರದ ‘ಪೂಛೋನ ಕೈಸೆ’, ಶೋಲೆ ಸಿನಿಮಾದ ‘ಯೇ ದೋಸ್ತಿ ಹಮ್‌ ನಹೀಂ ಛೋಡೇಂಗೆ’ ಸೇರಿದಂತೆ ಎಷ್ಟೊಂದು ಗೀತೆಗಳು ಸಾಲದೇ ಹಾಡುಗಾರನನ್ನು ಅಮರನನ್ನಾಗಿಸಲು. ‘ಕಲ್ಪವೃಕ್ಷ’ ಕನ್ನಡ ಚಿತ್ರದಲ್ಲಿ ಮನ್ನಾ ಡೇ ಅವರು ಹಾಡಿದ ‘ಜಯತೆ ಜಯತೆ ಸತ್ಯಮೇವ ಜಯತೆ’ ಗೀತೆಯನ್ನು ಕನ್ನಡ ಚಿತ್ರರಸಿಕರು ಮರೆಯುವುದುಂಟೆ. ಕು.ರ. ಸೀತಾರಾಮಶಾಸ್ತ್ರಿಗಳು ರಚಿಸಿದ್ದ ಈ ಗೀತೆಯಲ್ಲಿ ಒಂದು ಸಾಲಿದೆ– ‘ಸರಳ ಜೀವಿಗೆಂದಿಗೂ ಸೋಲೇ ಇಲ್ಲ ಕಾಣಿರಾ’. ಈ ಸಾಲಿನಲ್ಲಿನ ಸೋಲನ್ನು ಮನ್ನಾ ಡೇ ಅವರ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಸಾವು
ಎಂದು ಬದಲಿಸಿಕೊಳ್ಳಬಹುದು. ‘ಕುಹು ಕುಹು ಎನ್ನುತ ಹಾಡಿದ ಕಿನ್ನರ ಕಂಠದ ಕೋಗಿಲೆ’ಗೆ ಎಂದಾದರೂ ಸಾವಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT