ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ 177 ಟನ್ ಮೇವು ವಿತರಣೆ

Last Updated 26 ಮೇ 2016, 8:26 IST
ಅಕ್ಷರ ಗಾತ್ರ

ಹುಕ್ಕೇರಿ: ಬರ ನಿರ್ವಹಣೆ ಮತ್ತು ರೈತರ ಜಾನುವಾರುಗಳ ಆಹಾರ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಆರಂಭಿಸಿದ ಇಲ್ಲಿಯ ಮೇವು ವಿತರಣಾ ಕೇಂದ್ರದಿಂದ ಇದುವರೆಗೆ 177 ಟನ್‌ ಜೋಳದ ಒಣ ಮೇವು ವಿತರಿಸಲಾಗಿದೆ.

ತಾಲ್ಲೂಕಿನ ಒಟ್ಟು 36 ಗ್ರಾಮಗಳ 12,250 ರೈತರು ಕೇಂದ್ರದ ಪ್ರಯೋಜನ ಪಡೆದಿದ್ದಾರೆ. ತಹಶೀಲ್ದಾರ್ ಸಯಿದಾ ಆಫ್ರಿನ್ ಬಾನು ಮಾರ್ಗದರ್ಶನದಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಕಂದಾಯ ನಿರೀಕ್ಷಕ ಮಹಾದೇವ ಸುಲದಾಳ ತಿಳಿಸಿದರು.

ಮಳೆಯಾಗುವ ವರೆಗೆ ಪ್ರತಿ ಜಾನುವಾರಕ್ಕೆ ಕಿಲೊಕ್ಕೆ ₹ 3 ದರದಲ್ಲಿ ದಿನಕ್ಕೆ 5 ಕಿಲೋ ಅಥವಾ ಗರಿಷ್ಠ 20 ಕಿಲೋ ಮೇವು ಒದಗಿಸಲಾಗುವುದು. ಉತ್ತಮ ಗುಣಮಟ್ಟದ ಬಿಳಿ ಜೋಳದ ಮೇವನ್ನು ಯಾದವಾಡ, ಆಲಮಟ್ಟಿ ಪರಿಸರದಿಂದ ಪ್ರತಿ ಕಿಲೊಕ್ಕೆ ₹ 6 ರಂತೆ ಖರೀದಿಸಿ, ಸ್ಥಳೀಯ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಈ ಮೊದಲು ಪಶು ಸಂಗೋಪನಾ ಇಲಾಖೆಯಿಂದ ಜಾನುವಾರಗಳ ಸಮೀಕ್ಷೆ ಮಾಡಲಾಗಿತ್ತು. ಆ ಪ್ರಕಾರ ರೈತರಿಗೆ ವಿತರಣಾ ಕಾರ್ಯ ನಡೆಯುತ್ತಿದೆ. ಮೇವು ಹೇರಲು ಹಾಗೂ ಇಳಿಸಲು 8 ಜನ ಕೂಲಿಕಾರರು, ವಿತರಣೆಗಾಗಿ 5 ಜನ ಹಾಗೂ ಒಬ್ಬ ಉಸ್ತುವಾರಿ ಅಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ಸಂಕೇಶ್ವರ ಹಾಗೂ ಯಮಕನಮರಡಿ ಹೋಬಳಿಗಳಲ್ಲಿಯೂ ಮೇವು ವಿತರಿಸಲಾಗುತ್ತಿದೆ. ಅರ್ಜುನವಾಡ ಗ್ರಾಮ ಸಂಕೇಶ್ವರ ಹೋಬಳಿಯ ಕಾರ್ಯ ವ್ಯಾಪ್ತಿಗೆ ಒಳಪಟ್ಟಿದ್ದರೂ ರೈತರ ಅನಕೂಲಕ್ಕಾಗಿ ಹುಕ್ಕೇರಿಯಲ್ಲಿ ಮೇವು ವಿತರಿಸಲಾಗುತ್ತಿದೆ. ಜೋಳದ ದಂಟಿನ ರವದಿ ಹೆಚ್ಚಿನ ಪ್ರಮಾಣದಲ್ಲಿ ಕೆಳಗೆ ಬಿದ್ದು ನಾಶವಾಗುತ್ತಿದೆ. ಇದರಿಂದ ರೈತರು ಮೇವನ್ನು ವ್ಯವಸ್ಥಿತವಾಗಿ ರವದಿ ನಾಶವಾಗದಂತೆ ತೆಗೆದುಕೊಳ್ಳಲು ಗಮನ ನೀಡಿದೆ. ರೈತರ ಹಿತಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬರಪೀಡಿತ ಪ್ರದೇಶದ ರೈತರ ಸಂಕಷ್ಟ ನಿವಾರಿಸಲು ಸರ್ಕಾರ ಮೇವು ವಿತರಣಾ ಕೇಂದ್ರ ಆರಂಭಿಸಿದೆ. ಪ್ರತಿ ಕೆಜಿ ಮೇವಿಗೆ ₹ 3 ರಂತೆ ವಿತರಿಸಲಾಗುತ್ತಿದೆ. ಆದರೆ ಪ್ರಸ್ತುತ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಉಚಿತವಾಗಿ ಮೇವು ಒದಗಿಸಬೇಕು. ಜಾನುವಾರು ರಕ್ಷಣೆ ಜೊತೆಗೆ ರೈತರ ಭವಿಷ್ಯವನ್ನೂ ಕಾಯಬೇಕು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದ್ದಾರೆ.

ಹೋದ ವರ್ಷ ತೀವ್ರ ಬರಗಾಲದಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಂಥ ರೈತರು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಇನ್ನು ಜಾನುವಾರು ಸಾಕುವುದು ಇನ್ನೂ ತೊಂದರೆದಾಯಕ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ಜಾನುವಾರುಗಳಿಗೆ ಉಚಿತ ಮೇವು ನೀಡಬೇಕು ಮತ್ತು ಬಡ ಸಂತ್ರಸ್ತ ರೈತರು, ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಉಚಿತವಾಗಿ ಹೆಚ್ಚುವರಿ ಪಡಿತರ ಧಾನ್ಯ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ. ಜಾನುವಾರುಗಳಿಗೆ ಈಗಿರುವ 5 ಕಿಲೋ ಬದಲಾಗಿ ಕನಿಷ್ಠ 10 ಕಿಲೋ ಮೇವು ನೀಡಬೇಕು ಎಂದು ರೈತ ಹನುಮಂತ ಒಂಟಿಕುದರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT