ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ‘ಕಿಷ್ಕಿಂಧೆ’ಯಲ್ಲಿ ಸುಗ್ರೀವಾಜ್ಞೆ ದರ್ಬಾರ್‌

ಭೂಸ್ವಾಧೀನ ಕಾಯ್ದೆ: ತಿದ್ದುಪಡಿ ಆಜೂಬಾಜು
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ವಸಾಹತುಶಾಹಿ ಕಾಲದ ಭೂಸ್ವಾಧೀನ ಕಾಯ್ದೆಗೆ ವ್ಯಕ್ತವಾಗಿದ್ದ ಜನವಿರೋಧಕ್ಕೆ ಮಣಿದು, ಯುಪಿಎ ಸರ್ಕಾರ 2013ರಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದೀಗ ಎನ್‌ಡಿಎ ಸರ್ಕಾರ ಈ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ  ತಂದಿರುವ ತಿದ್ದುಪಡಿ ‘ಉದ್ದಿಮೆ ಸ್ನೇಹಿ’ ಮತ್ತು ‘ರೈತ ವಿರೋಧಿ’ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತ ವಿಶ್ಲೇಷಣೆಗಳು ಇಲ್ಲಿವೆ...

ಕೇವಲ ಐದು ತಿದ್ದುಪಡಿಗಳ ಮೂಲಕ 2013ರ ಭೂ ಸ್ವಾಧೀನ ಕಾಯ್ದೆಯಲ್ಲಿನ ಎಲ್ಲ ಜನಪರ ಅಂಶಗಳನ್ನೂ ಅಳಿಸಿಬಿಡುವ ಚಾಣಾಕ್ಷತೆ ತೋರಿದೆ ಕೇಂದ್ರದ ಎನ್‌ಡಿಎ ಸರ್ಕಾರ. ಈ ಮೂಲಕ, ಶತಮಾನಕ್ಕೂ ಹೆಚ್ಚು ಕಾಲ ದೇಶದಲ್ಲಿ ಅಸ್ತಿತ್ವದಲ್ಲಿದ್ದ ವಸಾಹತುಶಾಹಿ ಜನವಿರೋಧಿ ಕಾಯ್ದೆಗೆ ನಾವು ವಾಪಸಾದಂತಾಗಿದೆ. ಸರ್ಕಾರದ ಈ ಕೃತ್ಯವನ್ನು ರೈತ ವಿರೋಧಿ, ಪ್ರಜಾತಂತ್ರ ವಿರೋಧಿ, ಸಂವಿಧಾನ ವಿರೋಧಿ ಎಂದೆಲ್ಲ ಆರೋಪಿಸಿ ಇದೀಗ ರೈತ ಸಂಘಟನೆಗಳು, ಜನಾಂದೋಲನಗಳು ತೀವ್ರ ಸಂಘರ್ಷಕ್ಕೆ ಇಳಿದಿವೆ.

2013ರಲ್ಲಿ ಯುಪಿಎ ಸರ್ಕಾರ ತಂದಿದ್ದ ಭೂ ಸ್ವಾಧೀನ ಕಾಯ್ದೆಗೆ ಒಂದು ಚಾರಿತ್ರಿಕ ಹಿನ್ನೆಲೆ ಇದೆ. ಇದು ರೂಪುತಳೆದ ಪ್ರಕ್ರಿಯೆ ಮಹತ್ವದ್ದು. ಮೊದಲನೆಯದಾಗಿ, ಭೂಮಿ ಮತ್ತು ನೆಲೆಯನ್ನು ಕಳೆದುಕೊಳ್ಳುವ ಸಮುದಾಯ­ಗಳಿಗೆ ಬಿಡಿಗಾಸಿನ ಪರಿಹಾರ ನೀಡಿ ಅವರನ್ನು  ನಿರ್ಗತಿಕರನ್ನಾಗಿ ಮಾಡುತ್ತಿದ್ದ 1894ರ ಕಾಯ್ದೆಯನ್ನು ತೊಡೆದು ಹಾಕ­ಬೇಕೆಂಬ ಒತ್ತಾಯದ ಜನಾಂದೋಲನಗಳ ದೀರ್ಘ­ಕಾಲದ ಹೋರಾಟ. ಎರಡನೆಯದಾಗಿ, ಹೊಸ ಕಾಯ್ದೆ­ಯನ್ನು ರೂಪಿಸುವಲ್ಲಿ ದಶಕದಷ್ಟು ದೀರ್ಘ ಕಾಲ ಸತತವಾಗಿ ನಡೆದ ಪ್ರಜಾತಾಂತ್ರಿಕ ಪ್ರಕ್ರಿಯೆ. ಇವೆಲ್ಲದರ ಫಲವಾಗಿ, ‘ಭೂಸ್ವಾಧೀನ ಕಾಯ್ದೆ -1894’ರ ಜಾಗದಲ್ಲಿ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ನೆಲೆ ಕಾಯ್ದೆ -2013’ ಅಸ್ತಿತ್ವಕ್ಕೆ ಬಂದಿತು. ಕಳೆದ ಆಗಸ್‌್ಟನಲ್ಲಿ ಯುಪಿಎ ಸರ್ಕಾರ ಈ ಕಾಯ್ದೆಯ ನಿಯಮಗಳನ್ನು ಅಂಗೀಕಾರ ಮಾಡಿತು. ಈಗ ಎನ್‌ಡಿಎ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಇಡೀ ಪ್ರಕ್ರಿಯೆಯನ್ನು ಒಂದೇ ಬೀಸಿನಲ್ಲಿ ಅಳಿಸಿ­­ಹಾಕುವ ಪ್ರಯತ್ನ ಮಾಡಿದೆ. ಈಗಷ್ಟೇ ಕಣ್ಣು­ಬಿಡುತ್ತಿದ್ದ ಈ ಕಾಯ್ದೆ ದೇಶದ ಅಭಿವೃದ್ಧಿಯ ಅಗತ್ಯ­ಗಳಿಗೆ ಅಡ್ಡಗಾಲಾಗಿದೆ ಎಂದು ಅದು ಆರೋಪಿಸಿದೆ.

ಅಷ್ಟಕ್ಕೂ ಪರಿಹಾರ ಮೊತ್ತದ ವಿಚಾರದಲ್ಲಿ ಯಾವುದೇ ತಿದ್ದುಪಡಿ ಮಾಡಿಲ್ಲದೇ ಇರುವುದರಿಂದ ಇದು ರೈತ ವಿರೋಧಿ ಹೇಗಾಗುತ್ತದೆ ಎನ್ನುವುದು ಸರ್ಕಾರದ ಪ್ರಶ್ನೆ. ಇದು ಅತ್ಯಂತ ಅಸಮಂಜಸ. ಇಲ್ಲಿ ‘ಭೂಮಿ­ಯೊಂದು ಸರಕು, ಭೂಸ್ವಾಧೀನದಲ್ಲಿ ಒಳ­ಗೊಂಡಿರುವುದು ಕೇವಲ ಪರಿಹಾರದ ವಿಷಯ ಮಾತ್ರ’ ಎಂಬ ಅಭಿಪ್ರಾಯ ಸರ್ಕಾರಕ್ಕೆ ಇದ್ದಂತಿದೆ. ಆದ್ದರಿಂದಲೇ, ಭೂಸ್ವಾಧೀನಕ್ಕೆ ಸಮುದಾಯ­ಗಳ ಸಮ್ಮತಿ ಪಡೆಯುವ, ಯೋಜನೆಗಳ ಸಾಮಾಜಿಕ ಪರಿಣಾಮಗಳ ಅಂದಾಜನ್ನು ಪೂರ್ವಭಾವಿ­ಯಾಗಿ ಮಾಡುವ, ವೈವಿಧ್ಯಮಯ ಬೆಳೆಯ ಹಾಗೂ ನೀರಾವರಿ ಜಮೀನು­ಗಳನ್ನು ಸ್ವಾಧೀನಪಡಿಸಿ­ಕೊಳ್ಳದಿರುವ, ಐದು ವರ್ಷಗಳಲ್ಲಿ ಯೋಜನೆ ಪ್ರಾರಂಭ­ವಾಗದಿದ್ದಲ್ಲಿ ಭೂಮಿಯನ್ನು ಮರಳಿಸಬೇಕು ಎನ್ನುವಂಥ ಹೊಸ ಕಾಯ್ದೆಯಲ್ಲಿನ ಅತಿ ಮಹತ್ವದ ವಿಚಾರಗಳು ಈಗಿನ ಸರ್ಕಾರಕ್ಕೆ ಕ್ಷುಲ್ಲಕವಾಗಿ ಕಾಣುತ್ತಿವೆ. ಭೂಸ್ವಾಧೀನವು ರೈತರ ಬದುಕಿನಲ್ಲಿ ಉಂಟು­ಮಾಡುವ ತಲ್ಲಣ ಏನೂ ಅಲ್ಲವೇನೋ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ‘ಅಭಿವೃದ್ಧಿ’ ಹೆಸರಿನಲ್ಲಿ ಕಾರ್ಪೊ­ರೇಟ್‌­ಗಳನ್ನು ಓಲೈಸುವ ಧಾವಂತದಲ್ಲಿ ಸಮು­ದಾಯ­ಗಳ ಸಂಕ­ಟಕ್ಕೆ ಸ್ಪಂದಿಸುವ ಮಾನವೀ­ಯತೆಯೇ ಮಾಯವಾಗಿದೆ.

ವಾಸ್ತವದಲ್ಲಿ, ಪರಿಹಾರದ ಹಣಕ್ಕೆ ಆಸೆಪಟ್ಟು ರೈತರು ಭೂಮಿಯನ್ನು ಬಿಟ್ಟುಕೊಟ್ಟದ್ದು ನಮ್ಮ ಇತಿಹಾಸದಲ್ಲೇ ಇಲ್ಲ. ಇದುವರೆವಿಗೂ ನಮ್ಮಲ್ಲಿ ನಡೆದಿರುವುದೆಲ್ಲ ಬಲವಂತದ ಭೂಸ್ವಾಧೀನಗಳೇ. ‘ಆಧುನಿಕ ಭಾರತದ ದೇವಾಲಯ’ ಎಂದು ಬಣ್ಣಿಸುವ ಭಾಕ್ರಾ ನಂಗಲ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ತಮ್ಮ ನೆಲೆ ತೊರೆಯಲು ಒಪ್ಪದೆ ತೀವ್ರ ಹೋರಾಟ ನಡೆಸಿದ್ದ ರೈತರಿಗೆ ಸರ್ದಾರ್ ಪಟೇಲರು, ‘ಈಗ ಸದ್ದು ಮಾಡುತ್ತೀರಿ, ಜಲಾಶಯದ ಹಿನ್ನೀರು ಉಕ್ಕಿ ಬಂದಾಗ ಬಿಲಗಳಿಂದ ಜಿಗಿದು ಬರುವ ಇಲಿಗಳಂತೆ ನೀವೇ ಜಾಗ ಖಾಲಿ ಮಾಡುತ್ತೀರಿ’ ಎಂದು ಸವಾಲು ಹಾಕಿದ್ದರು. ಈ ಮೂಲಕ  ‘ಬಹುಜನರ ಏಳ್ಗೆಗಾಗಿ ಕೆಲ ಮಂದಿ ತ್ಯಾಗ ಮಾಡಬೇಕಾ­ಗುತ್ತದೆ’ ಎಂಬ ನೈತಿಕ ಉನ್ನತಿಯ ಮಂತ್ರ ಬೋಧಿಸಿದ್ದರು.

* ಭೂಸ್ವಾಧೀನವು ರೈತರ ಬದುಕಿನಲ್ಲಿ ಉಂಟು ಮಾಡುವ ತಲ್ಲಣ ಏನೂ ಅಲ್ಲವೇನೋ ಎಂಬಂತೆ ಸರ್ಕಾರ ವರ್ತಿಸುತ್ತಿದೆ.

* ರೈತರು ಪರಿಹಾರದ ಹಣಕ್ಕೆ ಆಸೆಪಟ್ಟು ಭೂಮಿಯನ್ನು ಬಿಟ್ಟುಕೊಟ್ಟದ್ದು ನಮ್ಮ ಇತಿಹಾಸದಲ್ಲೇ ಇಲ್ಲ. ಇದುವರೆಗೂ ನಮ್ಮಲ್ಲಿ ನಡೆದಿರುವುದೆಲ್ಲ ಬಲವಂತದ ಭೂಸ್ವಾಧೀನಗಳೇ.

ಅಲ್ಲಿಂದೀಚೆಗೆ ವಸಾಹತುಶಾಹಿ ಕಾಯ್ದೆಯನ್ನು ಆಯುಧವನ್ನಾಗಿ ಇಟ್ಟುಕೊಂಡು ಶತಮಾನಕ್ಕೂ ಹೆಚ್ಚು ಕಾಲದಿಂದ ಯಾವುದೇ ಪುನರ್ವಸತಿ, ಪುನರ್‌ನೆಲೆಗಳನ್ನು ಒದಗಿಸದೆ ಸಮುದಾಯಗಳನ್ನು ಇಡಿಇಡಿಯಾಗಿ ನಿರ್ನೆಲೆ­ಗೊಳಿಸುತ್ತಾ ಬರಲಾಗಿದೆ. ಅವರ ಜೀವನೋಪಾ­ಯವನ್ನು ಕಸಿದುಕೊಂಡು ನಿರ್ಗತಿಕರನ್ನಾಗಿ ಮಾಡ­ಲಾಗಿದೆ. ಎಲ್ಲ ಪ್ರತಿಭಟನೆಗಳನ್ನೂ ಹತ್ತಿಕ್ಕಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ನಂದಿ ಗ್ರಾಮ, ಸಿಂಗೂರ್, ಕಳಿಂಗ ನಗರ, ಕಾರಕ್‌ಪಲ್ಲಿ, ಭಟ್ಟಾಪಾರ್ಸೊಲ್‌ ಮುಂತಾದ ಕಡೆಗಳಲ್ಲಿ ಭುಗಿಲೆದ್ದ ಹೋರಾಟಗಳಲ್ಲಿ ಅನೇಕರು ಪ್ರಾಣತ್ಯಾಗ ಮಾಡಬೇಕಾಯಿತು. ಭೂಸ್ವಾಧೀನ ಎನ್ನುವುದು ಈ ದೇಶದ ರೈತರ, ಅರಣ್ಯವಾಸಿಗಳ, ಗ್ರಾಮೀಣ ಸಮುದಾಯ­ಗಳ ಮೇಲೆ ಎಸಗಿರುವ ಕ್ರೌರ್ಯ ದಿಗಿಲು ಹುಟ್ಟಿಸುವಂತಿದೆ.

ಇದನ್ನೆಲ್ಲ ಬೆಳಕಿಗೆ ತಂದು ಅತ್ಯಂತ ಬಲಶಾಲಿಯಾದ ಹೋರಾಟ ಕಟ್ಟಿದ ಹೆಗ್ಗಳಿಕೆ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರಿಗೆ ಸಲ್ಲುತ್ತದೆ. ರಾಷ್ಟ್ರದಾದ್ಯಂತ ಜನಾಂ­ದೋಲನಗಳನ್ನು ಸಮನ್ವಯಿಸಿ, ಭೂಸ್ವಾಧೀನವನ್ನು ಕೇವಲ ಪರಿಹಾರಕ್ಕೆ ಸೀಮಿತಗೊಳಿಸದೆ, ಜನರ ಜೀವನೋ­ಪಾಯಗಳು ನಾಶವಾಗದಂತೆ ಪುನರ್ವಸತಿ ಮತ್ತು ಪುನರ್‌ನೆಲೆಗೆ ಅವಕಾಶ ಮಾಡುವಂತಹ ಕಾಯ್ದೆಯನ್ನು ರೂಪಿಸಬೇಕು ಎನ್ನುವ ಒತ್ತಾಯವನ್ನು ಅವರು ತಂದರು.

ದೇಶದೆಲ್ಲೆಡೆ ಬಾಧೆಗೊಳಪಡುವ ಸಮುದಾಯಗಳು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ದೀರ್ಘವಾಗಿ ಸಮಾ­ಲೋಚಿಸಿ ಕರಡೊಂದನ್ನು ತಯಾರಿಸಿದರು. 2013ರ ಕಾಯ್ದೆಯನ್ನು ರೂಪಿಸುವಲ್ಲಿ ಜನಾಂದೋಲನ­ಗಳು ಹೊರತಂದ ಈ ಕರಡು ಮಹತ್ವದ ಕೊಡುಗೆ ನೀಡಿತು.
ಯುಪಿಎ ಸರ್ಕಾರ, ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಮ್‌ ರಮೇಶ್ ಅವರ ನೇತೃತ್ವದಲ್ಲಿ ಹೊಸ ಕಾಯ್ದೆ ವಿಚಾರದಲ್ಲಿ ಎರಡು ವರ್ಷಗಳ ಕಾಲ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಿತು. ಈ ಪ್ರಕ್ರಿಯೆಯಲ್ಲಿ ಬಿಜೆಪಿ ಕೂಡ ತುಂಬಾ ಕ್ರಿಯಾಶೀಲವಾಗಿ ಪಾಲ್ಗೊಂಡಿತ್ತು.

ಜೈರಾಮ್‌ ರಮೇಶ್ ಅವರೇ ಹೇಳುವಂತೆ, ‘ಎರಡು ಸರ್ವಪಕ್ಷ ಸಭೆಗಳು ನಡೆದಿದ್ದವು. 60 ಸಂಸದರಿಂದ ಲೋಕಸಭೆಯ ಉಭಯ ಸದನಗಳಲ್ಲಿ  14 ಗಂಟೆ ಸತತ ಚರ್ಚೆ ನಡೆಸಲಾಗಿತ್ತು. ಅಂದಿನ ಪ್ರಮುಖ ವಿರೋಧ ಪಕ್ಷವಾಗಿದ್ದ ಬಿಜೆಪಿ ಕೊಟ್ಟ ಸಲಹೆಗಳನ್ನೂ ಕಾಯ್ದೆಯಲ್ಲಿ ಒಳಗೊಳ್ಳ­ಲಾಗಿತ್ತು. ಸರ್ವ ಪಕ್ಷಗಳೂ ಅವಿರೋಧವಾಗಿ ಈ ಕಾಯ್ದೆ­ಯನ್ನು ಬೆಂಬಲಿಸಿದ್ದವು’. ಈ ಕರಡು ಮಸೂದೆ 2007 ಮತ್ತು 2009ರಲ್ಲಿ ಎರಡು ಲೋಕಸಭೆ ಸ್ಥಾಯಿ ಸಮಿತಿಗಳ ಪರಿಶೀಲನೆಗೆ ಒಳಪಟ್ಟಿತ್ತು. ಈ ಎರಡೂ ಸಮಿತಿಗಳ ಅಧ್ಯಕ್ಷತೆಯನ್ನು ಬಿಜೆಪಿಯ ಹಿರಿಯ ನಾಯಕರಾದ ಕಲ್ಯಾಣ್ ಸಿಂಗ್ ಮತ್ತು ಸುಮಿತ್ರಾ ಮಹಾಜನ್ ವಹಿಸಿದ್ದರು! ಆದರೆ ಈಗ ಭೂಸ್ವಾಧೀನ ಕಾಯ್ದೆಯಷ್ಟು ರೈತರ ಮೇಲೆ ನೇರ ಮತ್ತು ತೀಕ್ಷ್ಣ ಪರಿಣಾಮ ಬೀರುವ ಕಾಯ್ದೆ ಇನ್ನೊಂದಿಲ್ಲ ಎಂಬಂತಾಗಿದೆ. ಆದ್ದರಿಂದಲೇ ಈಗ ಸರ್ಕಾರ ತಂದಿರುವ ತಿದ್ದುಪಡಿಯಿಂದಾಗಿ, ತನ್ನೆಲ್ಲ ಕೊರತೆಗಳ ನಡುವೆಯೂ ರೈತರು ಮತ್ತು ಗ್ರಾಮೀಣ ಸಮುದಾಯ­ಗಳ ಹಿತಾಸಕ್ತಿ ಕಾಪಾಡುವಂತಿದ್ದ ಒಂದು ಕಾಯ್ದೆಯ ಅವಸಾನ ಆದಂತಾಗಿದೆ.

(ಲೇಖಕರು ಕೃಷಿ ಕಾರ್ಯಕರ್ತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT