ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು: ಟಿಕೆಟ್‌ ರಹಿತರಿಗೆ ದಂಡ

ರೈಲಿನಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು
Last Updated 30 ಮೇ 2015, 6:15 IST
ಅಕ್ಷರ ಗಾತ್ರ

ಹಾವೇರಿ: ಟಿಕೆಟ್‌ ರಹಿತವಾಗಿ ರೈಲಿನಲ್ಲಿ ಹೋಗುವ ಪ್ರಯಾಣಿಕರಿಗೆ ಗುರುವಾರ ಅಚ್ಚರಿ ಕಾದಿತ್ತು. ಪೊಲೀಸರ ಅತಿಥಿಗಳಾಗಿ ದಂಡ ಪಾವತಿಸುವ ‘ದೌರ್ಭಾಗ್ಯ’ ಬಂದಿತ್ತು.

ನೈಋತ್ಯ ವಲಯದ ಮೈಸೂರು ವಿಭಾಗದ ರೈಲ್ವೆ ಸುರಕ್ಷಾ ದಳ ಹಾಗೂ ವಾಣಿಜ್ಯ ವಿಭಾಗದ ಅಧಿಕಾರಿಗಳು ಹುಬ್ಬಳ್ಳಿಯಿಂದ– ಹರಿಹರ ತನಕ ರೈಲು ಪ್ರಯಾಣಿಕರ ತಪಾಸಣೆ ನಡೆಸಿ, ಟಿಕೆಟ್‌ ರಹಿತವಾಗಿ ಪ್ರಯಾಣಿಸುತ್ತಿದ್ದವರಿಗೆ ದಂಡ ವಿಧಿಸಿದರು. ಅಲ್ಲದೇ ಅವರನ್ನು ಹಾವೇರಿ ರೈಲ್ವೆ ಪೊಲೀಸ್‌ ಠಾಣೆಗೆ ಕರೆತಂದು ಕುಳ್ಳಿರಿಸಿಕೊಂಡು ‘ಟಿಕೆಟ್‌ ರಹಿತ ಪ್ರಯಾಣವು ಕಾನೂನು ಬಾಹಿರ’ ಎಂಬ ಕುರಿತು ತಿಳಿವಳಿಕೆ ನೀಡಿದರು. ಒಟ್ಟಾರೆ ಈ ಭಾಗದಲ್ಲಿ ಹೆಚ್ಚಾಗಿರುವ ಟಿಕೆಟ್‌ ರಹಿತ ಪ್ರಯಾಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದರು. ಸುಮಾರು 137 ಜನರ ಬಂಧನಕ್ಕೆ ಒಳಗಾಗಿ, ಬೋಧನೆ ಕೇಳಿಸಿಕೊಂಡರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರೈಲ್ವೆ ಸುರಕ್ಷತಾ ವಲಯದ ಸಹಾಯಕ ಆಯುಕ್ತ ರಾಮಕೃಷ್ಣಪ್ಪ, ‘ಆದಾಯ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದಷ್ಟು ರೈಲ್ವೆ ಇಲಾಖೆಯು ಸೌಕರ್ಯಗಳನ್ನು ಹೆಚ್ಚಿಸುತ್ತದೆ. ಆದರೆ, ಟಿಕೆಟ್‌ ರಹಿತ ಪ್ರಯಾಣದಿಂದ ಒಂದೆಡೆ ಇಲಾಖೆಗೆ ನಷ್ಟ ಉಂಟಾಗುತ್ತದೆ.

ಇನ್ನೊಂದೆಡೆ ಪ್ರಯಾಣಿಕರ ಲೆಕ್ಕ ಸಿಗುವುದಿಲ್ಲ ಹಾಗೂ ಆದಾಯವೂ ಬರುವುದಿಲ್ಲ. ಹೀಗಾಗಿ ರೈಲು ಹೆಚ್ಚಿಸುವ, ಬೋಗಿ ಸೇರಿಸುವ, ಮೂಲಸೌಕರ್ಯ ಅಭಿವೃದ್ಧಿ ಪಡಿಸುವ, ವೇಗದೂತ ರೈಲಿಗೆ ನಿಲುಗಡೆ ನೀಡುವ, ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅವಕಾಶವೇ ಸಿಗುವುದಿಲ್ಲ. ಈ ಭಾಗದಲ್ಲಿ ಟಿಕೆಟ್‌ ರಹಿತ ಪ್ರಯಾಣ ಅತಿಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಾಗಿದೆ. ಅದಕ್ಕಾಗಿ ಇನ್ನು ಆಗಾಗ್ಗೆ ದಾಳಿ ನಡೆಸುತ್ತೇವೆ’ ಎಂದರು.

‘1 ಏಪ್ರಿಲ್ 2015ರಂದು ಹಾವೇರಿ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸ್‌ ಹೊರ ಠಾಣೆ (ಆರ್‌ಪಿಎಫ್‌) ಆರಂಭಿಸಲಾಗಿದ್ದು, ಒಬ್ಬರು ಸಬ್‌ ಇನ್‌ಸ್ಪೆಕ್ಟರ್‌ ಹಾಗೂ 10 ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.  ಪ್ರಯಾಣಿಕರ ಮೂಲ ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ರೈಲು ನಿಲ್ದಾಣದ ಮುಂಭಾಗದಲ್ಲಿ ಆಟೊಗಳ ಅಡ್ಡಾದಿಡ್ಡಿ ನಿಲ್ಲಿಸುವ ಪರಿಣಾಂ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯ ಪೊಲೀಸ್‌ ಇಲಾಖೆ ಜೊತೆ ಮಾತುಕತೆ ನಡೆಸಲಾಗುವುದು. ಜಿಲ್ಲಾ­ಡಳಿತ ಹಾಗೂ ಜಿಲ್ಲಾ ಪೊಲೀಸರು ಮುಂದೆ ಬಂದಲ್ಲಿ ಪ್ರಿಪೇಯ್ಡ್‌ ಮಾದರಿಯ ಆಟೊ ನಿಲ್ದಾಣ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುವುದು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ಪ್ರಬಂಧಕ ಡಿ.ಪಿ ಹಾಲಪ್ಪ ಮಾತನಾಡಿ, ‘ಪ್ರತಿನಿತ್ಯ ಸುಮಾರು ಮೂರು ಸಾವಿರ ಪ್ರಯಾಣಿಕರು ಹಾವೇರಿ ರೈಲು ನಿಲ್ದಾಣದ ಮೂಲಕ ಓಡಾ­ಡುತ್ತಿದ್ದಾರೆ. ಅಂದಾಜು ಒಂದು ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಅತ್ಯಂತ ಕಡಿಮೆ ದರದಲ್ಲಿ ರೈಲ್ವೆ ಇಲಾಖೆಯು ಸೇವೆ ನೀಡುತ್ತಿದೆ. ನಾಗರಿಕರು ಹೆಚ್ಚು ಹೆಚ್ಚು ಬಳಕೆ ಮಾಡಬೇಕು. ಇಲಾಖೆಯು ಈಗಾಗಲೇ ಹಾವೇರಿಯನ್ನು ‘ಬಿ’ದರ್ಜೆಗೆ ಏರಿಸಿದ್ದು, ಆದಾಯ ಹಾಗೂ ಸಂಚಾರ ಹೆಚ್ಚಾದರೆ ಇನ್ನಷ್ಟು ಮೇಲ್ದರ್ಜೆಗೆ ಏರಿಸಿ, ಸೌಕರ್ಯ ಕಲ್ಪಿಸುತ್ತದೆ’ ಎಂದರು.

‘ಟಿಕೆಟ್‌ ರಹಿತವಾಗಿ ಪ್ರಯಾಣಿಸುವ ಜನರಿಂದ ಟಿಕೆಟ್‌ ಪಡೆದು ಪ್ರಯಾ­ಣಿಸುವ ಪ್ರಾಮಾಣಿಕರಿಗೆ ತೊಂದರೆ­ಯಾಗುತ್ತಿದೆ. ಟಿಕೆಟ್‌ ಪಾವತಿಸಿ, ನಿಯ­ಮಾ­ವಳಿ ಪಾಲಿಸುವುದು, ಸ್ವಚ್ಛತೆ ಕಾಪಾಡುವ ಮೂಲಕ ತಮ್ಮ ಪ್ರಯಾಣ­ವನ್ನು ಪ್ರಯಾಣಿಕರೇ ಸುಗಮಗೊಳಿಸ­ಬಹುದು’ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT