ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಕವಳ್ಳಿಯಲ್ಲಿ 30ದಿನಕ್ಕಷ್ಟೇ ನೀರು!

ನೀರು ಬಳಸಿಕೊಳ್ಳಲು ಸಮರ ಆರಂಭ
Last Updated 1 ಏಪ್ರಿಲ್ 2016, 19:47 IST
ಅಕ್ಷರ ಗಾತ್ರ

ಶಿವಮೊಗ್ಗ: ನಾಲೆಗಳಿಗೆ 30 ದಿನ ನೀರು ಹರಿದರೆ ಭದ್ರಾ ಜಲಾಶಯ ಖಾಲಿಯಾಗಲಿದ್ದು, ಇರುವ ನೀರು ಬಳಸಿಕೊಳ್ಳಲು ಅಚ್ಚುಕಟ್ಟು ಪ್ರದೇಶದ ರೈತರ ನಡುವೆಯೇ ಸಮರ ಆರಂಭವಾಗಿದೆ.

71.53 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ (ಜಲಾಶಯದ ಗರಿಷ್ಠಮಟ್ಟ 186 ಅಡಿ) ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 27 ಟಿಎಂಸಿ ನೀರಿದೆ. ಅದರಲ್ಲಿ 13 ಟಿಎಂಸಿ ಅನುಪಯುಕ್ತ ಸಂಗ್ರಹ. ಉಳಿದ 14 ಟಿಎಂಸಿಯಲ್ಲಿ ನದಿ ತೀರದ ನಗರ–ಪಟ್ಟಣ, ಗ್ರಾಮೀಣ ಭಾಗದ ನೀರು ಸರಬರಾಜು ಯೋಜನೆಗಳು ಹಾಗೂ ಕೈಗಾರಿಕೆಗಳ ಬಳಕೆಗೆ 4 ಟಿಎಂಸಿ ಮೀಸಲಿಡಬೇಕಿದೆ. ಹಾಗಾಗಿ, ಭದ್ರಾ ಬಲ  ಹಾಗೂ ಎಡ ದಂಡೆ ನಾಲೆಗಳ 1,82,818 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಕೇವಲ 10 ಟಿಎಂಸಿ ಮಾತ್ರ ಲಭ್ಯವಿದೆ.

ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಜನವರಿ 5ರಿಂದ  ಮೇ 18ರವರೆಗೆ ಎರಡೂ ಪ್ರಮುಖ ನಾಲೆಗಳಲ್ಲಿ 21 ದಿನ ನೀರು ಹರಿಸಿ–17 ದಿನ ನಿಲ್ಲಿಸುವ ಪದ್ಧತಿಯಂತೆ ಒಟ್ಟು 84 ದಿನ ನೀರು ಹರಿಸಿ, ಉಳಿದ 51 ದಿನ ನೀರು ನಿಲುಗಡೆ ಮಾಡಲು ನಿರ್ಧರಿಸಲಾಗಿತ್ತು.

ಸಮಿತಿ ತೀರ್ಮಾನದಂತೆ ಈಗಾಗಲೇ 54 ದಿನ ನೀರು ಹರಿಸಲಾಗಿದೆ. ಈಗ ನಾಲೆಯಲ್ಲಿ ಹರಿಯುತ್ತಿರುವ ನೀರನ್ನು ಏ. 10ಕ್ಕೆ ನಿಲುಗಡೆ ಮಾಡಿ, ನಂತರ ಏ.28ರಿಂದ 21 ದಿನ ಹರಿಸಿದರೆ ಜಲಾಶಯದ ನೀರು ಖಾಲಿಯಾಗಲಿದೆ. ಪ್ರಸ್ತುತ ಜಲಾಶಯದ ಮಟ್ಟ 139 ಅಡಿ ಇದೆ. 30 ದಿನ ನೀರು ಹರಿಸಿದರೆ ಅದು 113 ಅಡಿಗೆ ತಲುಪಲಿದೆ. ನಂತರ ಮಳೆ ಬೀಳುವವರೆಗೂ ಒಂದು ಹನಿ ನೀರು ನಾಲೆಗೆ ಹರಿಸಲು ಸಾಧ್ಯವಾಗುವುದಿಲ್ಲ.

ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ: ಜಲಾಶಯದ ನೀರು ಬಳಸಿಕೊಂಡು ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ಹಲವು ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಹಿಂದೆ ಕುಡಿಯುವ ನೀರಿಗಾಗಿ ಕೇವಲ 2 ಟಿಎಂಸಿ ನೀರು ಬಳಸಲಾಗುತ್ತಿತ್ತು. ಈಗ ಈ ಪ್ರಮಾಣ 7 ಟಿಎಂಸಿಗೆ ತಲುಪಿದೆ.

ರೈತರ ನಡುವೆಯೇ ಕದನ: ಭದ್ರಾ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾದರೂ, ಜಲಾಶಯದ ಎಡ ಮತ್ತು ಬಲ ನಾಲೆಯ ದಂಡೆಯ ಉದ್ದಕ್ಕೂ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಮಿತಿ ಮೀರಿದೆ. ಇದು ಅಚ್ಚುಕಟ್ಟು ರೈತರ ನಡುವೆಯೇ ಸಂಘರ್ಷಕ್ಕೆ ನಾಂದಿ ಹಾಡಿದೆ.

ಜಲಾಶಯದ ನೀರು ಮುಖ್ಯ ನಾಲೆ, ವಿತರಣಾ ಹಾಗೂ ಉಪ ನಾಲೆಗಳು ಸೇರಿ ಎಡ ನಾಲೆ 78 ಕಿ.ಮೀ ಮತ್ತು ಬಲ ನಾಲೆ 387.90 ಕಿ.ಮೀ ಸಾಗುತ್ತವೆ. ನಾಲೆ ಸಾಗುವ ಹಲವು ಪ್ರದೇಶಗಳು ಎತ್ತರದಲ್ಲಿದ್ದು, ಅಲ್ಲೆಲ್ಲ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆದು ಒಣ ಭೂಮಿಯಲ್ಲೂ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ. ಹೀಗೆ ಅಕ್ರಮವಾಗಿ ಪಡೆದ ನೀರಿನಲ್ಲಿ ಸಾವಿರಾರು ಎಕರೆ ತೋಟಗಳನ್ನೂ ಬೆಳೆಸಲಾಗಿದೆ.

ಅಕ್ರಮವಾಗಿ ನೀರು ಬಳಸುವ ಕಾರಣ ನಾಲೆಯಲ್ಲಿ ಪ್ರತಿದಿನ 2,650 ಕ್ಯುಸೆಕ್‌ ನೀರು ಹರಿದರೂ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಒಂದು ವೇಳೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹೆಚ್ಚು ನೀರು ಹರಿಸುವ ನಿರ್ಧಾರ ತೆಗೆದುಕೊಂಡರೂ, ನಾಲೆಗಳಿಗೆ ಧಕ್ಕೆಯಾಗುವ ಜತೆಗೆ, ನೀರು ನಿಗದಿಪಡಿಸಿದ  ಅವಧಿಗೂ ಮೊದಲೇ ಖಾಲಿಯಾಗಿ ಬಿಡುತ್ತದೆ.
*
12 ವರ್ಷ ಬಳಿಕ
ಹಿಂದೆಯೂ ಕೆಲ ವರ್ಷ ಭದ್ರಾ ಜಲಾಶಯ ಇಂತಹ ಸ್ಥಿತಿಗೆ ತಲುಪಿತ್ತು. ನೀರಾವರಿ ಬಳಕೆಗಾಗಿ ಮೀಸಲಾದ ನೀರು 2004ರಲ್ಲಿ 16.64 ಟಿಎಂಸಿಗೆ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT