ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗನಮಕ್ಕಿ, ಭದ್ರಾ ಒಳಹರಿವು ಹೆಚ್ಚಳ

ರಾಜ್ಯದ ವಿವಿಧೆಡೆ ಗುರುವಾರ ಜಿಟಿಜಿಟಿ ಮಳೆ
Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ಜಿಟಿಜಿಟಿ ಮಳೆಯಾಗಿದೆ. ಕೊಡಗಿನಲ್ಲೂ ಮಳೆ ಕೊಂಚ ವಿರಾಮ ನೀಡಿತ್ತು. ಕರಾವಳಿ ಭಾಗದಲ್ಲೂ ಮಳೆ ಕಡಿಮೆಯಾಗಿತ್ತು. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1760.50 ಅಡಿಗೆ ಏರಿಕೆಯಾಗಿದೆ.

ಕರಾವಳಿ ಭಾಗದಲ್ಲಿ ಸತತ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಗುರುವಾರ ಸ್ವಲ್ಪ ವಿರಾಮ ದೊರೆಯಿತು. ಆದರೂ ಒಂದರೆಡು ಬಾರಿ ಅಬ್ಬರದ ಮಳೆ ಸುರಿಯಿತು.

ಉಡುಪಿ  ಜಿಲ್ಲೆಯಲ್ಲಿ ಮಳೆಯ ಬಿರುಸು ಕಳೆದುಕೊಂಡರೂ ಗುರುವಾರವೂ ಮಳೆಯಾಗಿದೆ. ಕುಂದಾಪುರ ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಭಾಗದಲ್ಲಿ ಕಡಲ್ಕೊರೆತದ ಪರಿಣಾಮ ಈ ವರೆಗೆ ಸುಮಾರು 40 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಅದೇ ತಾಲ್ಲೂಕಿನ ಶಿರೂರು ಗ್ರಾಮದ ಜ್ಯೋತಿ, ದುರ್ಗಯ್ಯ ಮೇಸ್ತ, ಶಾರದಾ ಎಂಬುವರ ಮನೆ ಹಾಗೂ ಸುಬ್ಬು ಆಚಾರ್ತಿ ಎಂಬುವರ ದನದ ಕೊಟ್ಟಿಗೆ ಮಳೆ– ಗಾಳಿಯಿಂದಾಗಿ ಹಾನಿಯಾಗಿದೆ. ಲಿಂಗನಮಕ್ಕಿ, ಭದ್ರಾ ಒಳಹರಿವು ಹೆಚ್ಚಳ: ಶಿವಮೊಗ್ಗ ಜಿಲ್ಲೆಯಾದ್ಯಂತ ಗುರುವಾರ ಉತ್ತಮ ಮಳೆಯಾಗಿದೆ.

ಶಿವಮೊಗ್ಗ ನಗರ, ಸಾಗರ, ಭದ್ರಾವತಿ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1760.50 ಅಡಿಗೆ ಏರಿಕೆಯಾಗಿದ್ದರೆ, ಜಲಾಶಯದ ಒಳಹರಿವು 29,575 ಕ್ಯೂಸೆಕ್ ಇದೆ. ಭದ್ರಾ ಜಲಾಶಯದ ನೀರಿನ ಮಟ್ಟ 121.70 ಅಡಿ ಇದ್ದರೆ, ಒಳ ಹರಿವು 16,209 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಪ್ರವಾಹ ಮುನ್ನೆಚ್ಚರಿಕೆ: ಉತ್ತರ ಕನ್ನಡ  ಜಿಲ್ಲೆಯ ಬೊಮ್ಮನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು,  ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ಕೆಳದಂಡೆ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುವ ಜನರು ಮುಂಜಾಗ್ರತೆ ವಹಿಸಿ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಕರ್ನಾಟಕ ವಿದ್ಯುತ್‌ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT