ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ರಾವ್‌ ವಜಾಕ್ಕೆ ಸಹಿ ಸಂಗ್ರಹ

ನಿರ್ಣಯ ಮಂಡಿಸಲು ಶಾಸಕರಿಂದ ಅವಕಾಶ ಕೋರಿಕೆ
Last Updated 2 ಜುಲೈ 2015, 19:39 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಅವರ ಮಗನ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿರುವ ಬೆನ್ನಲ್ಲೇ, ಲೋಕಾಯುಕ್ತರ ಪದಚ್ಯುತಿಗೆ ವಿಧಾನ ಮಂಡಲದಲ್ಲಿ ನಿರ್ಣಯ ಮಂಡಿಸಲು ಅವಕಾಶ ಕೊಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಹಿ ಸಂಗ್ರಹ ಆರಂಭಿಸಿದ್ದಾರೆ.

ವಿಧಾನ ಪರಿಷತ್ತಿನ ಜೆಡಿಎಸ್‌, ಬಿಜೆಪಿಯ 33 ಸದಸ್ಯರು ಈಗಾಗಲೆ ಸಹಿ ಹಾಕಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ಸಲ್ಲಿಸಿದ್ದಾರೆ.

ವಿಧಾನ ಸಭೆ ಅಧ್ಯಕ್ಷರಿಗೆ ಸಲ್ಲಿಸುವ ಮನವಿ ಪತ್ರಕ್ಕೆ  ಗುರುವಾರ ಸಂಜೆ ಹೊತ್ತಿಗೆ 54 ಶಾಸಕರು ಸಹಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪತ್ರವನ್ನು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಶುಕ್ರವಾರ ಅಥವಾ ಸೋಮವಾರ ಸಲ್ಲಿಸುವ ಸಾಧ್ಯತೆ ಇದೆ.

ಮನವಿಯಲ್ಲಿ ಏನಿದೆ?: ‘ಲೋಕಾಯುಕ್ತರು ಮತ್ತು ಅವರ ಮಗ ಅಶ್ವಿನ್‌ರಾವ್‌, ಸಂಸ್ಥೆಯನ್ನು ದುರ್ಬಳಕೆ ಮಾಡಿ ಭ್ರಷ್ಟ ಸರ್ಕಾರಿ ನೌಕರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರು ನೀಡಿದ್ದ ಆದೇಶವನ್ನು ಲೋಕಾಯುಕ್ತರೇ ರದ್ದು ಮಾಡಿದ್ದಾರೆ ಎಂದೂ ವರದಿಯಾಗಿದೆ’ ಎಂಬ ಅಂಶ ಶಂಕರಮೂರ್ತಿರವರಿಗೆ ಸಲ್ಲಿಸಿರುವ ಮನವಿಯಲ್ಲಿದೆ.

‘ಆರೋಪಗಳಿಗೆ ಸಂಬಂಧಿಸಿ ನೈತಿಕ ಹೊಣೆ ಹೊತ್ತು ಭಾಸ್ಕರ ರಾವ್ ಅವರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಕೀಲರು, ಕೆಲವು ಸಂಘ-ಸಂಸ್ಥೆಗಳ ಮುಖಂಡರು ಆಗ್ರಹಿಸಿದ್ದಾರೆ. ಲೋಕಾಯುಕ್ತ ಸಂಸ್ಥೆ ದುರ್ಬಲಗೊಂಡಿರುವುದನ್ನು ಈ ಎಲ್ಲ ಬೆಳವಣಿಗೆಗಳು ಎತ್ತಿ ತೋರಿಸುತ್ತಿವೆ. ಲೋಕಾಯುಕ್ತರು ಮತ್ತು ಅವರ ಕುಟುಂಬದ ಸದಸ್ಯರು ಭ್ರಷ್ಟಾಚಾರದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂಥ ಸಂಗತಿ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಭ್ರಷ್ಟಾಚಾರ ತಡೆಯಲು ಲೋಕಾಯುಕ್ತರು ಯಾವುದೇ ಕ್ರಮ ಕೈಗೊಳ್ಳದಿರುವುದು, ತಮ್ಮ ಪುತ್ರನ ಮೇಲೆ ಬಂದಿರುವ ಆರೋಪಗಳನ್ನು ತಾವೇ ಸೂಚಿಸಿದ ತನಿಖಾ ಸಂಸ್ಥೆಗೆ ವಹಿಸುವಂತೆ ಕೋರಿರುವುದು ಅವರ ಕಾರ್ಯವೈಖರಿ ಬಗ್ಗೆ ಅನುಮಾನಕ್ಕೆ ಎಡೆ ಮಾಡುತ್ತಿದೆ ಎಂದು ಬಿಜೆಪಿ-ಜೆಡಿಎಸ್ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಶೆಟ್ಟರ್‌ ಅಭಿಮತ: ‘ನೈತಿಕ ಹೊಣೆ ಹೊತ್ತು ಭಾಸ್ಕರರಾವ್ ರಾಜೀನಾಮೆ ನೀಡಬೇಕಿತ್ತು. ಅವರ ಪದಚ್ಯುತಿ ಸಂಬಂಧ ನಿರ್ಣಯ ಮಂಡಿಸಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದ್ದಾರೆ.

‘ಈ ವಿಚಾರವನ್ನು ನಾವು ಸೋಮವಾರ ಮತ್ತೆ ಪ್ರಸ್ತಾಪಿಸುತ್ತೇವೆ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಲಿವೆ’ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ  ತಿಳಿಸಿದ್ದಾರೆ.

* ಪ್ರತಿಪಕ್ಷದ ಸದಸ್ಯರ ಬೇಡಿಕೆ ಬಗ್ಗೆ ವಿಧಾನಸಭಾಧ್ಯಕ್ಷರು ನಿರ್ಣಯ ಕೈಗೊಳ್ಳುತ್ತಾರೆ. ಆ ಬಗ್ಗೆ ನಮ್ಮದೇನಿಲ್ಲ
-ಸಿದ್ದರಾಮಯ್ಯ
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT