ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕರಲ್ಲೂ ಕಾಣಿಸಿಕೊಳ್ಳುವ ಎಡಿಎಚ್‌ಡಿ

Last Updated 22 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಎಳೆಯರಲ್ಲಿ ಕಾಣಿಸಿಕೊಳ್ಳುವ ಅಟೆನ್‌ಷನ್‌ ಡೆಫಿಸಿಟ್‌ ಹೈಪರ್‌ ಆಕ್ಟಿವಿಟಿ ಡಿಸಾರ್ಡರ್‌’ (ಎಡಿಎಚ್‌ಡಿ) ವಯಸ್ಕರಲ್ಲೂ ಕಾಣಿಸಿಕೊಳ್ಳುತ್ತದೆ. ಎಡಿಎಚ್‌ಡಿಯಿಂದ ಬಳಲುತ್ತಿರುವ  ಶೇ 30ರಿಂದ 70 ರಷ್ಟು ಮಕ್ಕಳು ದೊಡ್ಡವರಾಗುತ್ತಿರುವ ಹಾಗೇ ಎಡಿಎಚ್‌ಡಿ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ.

ಅವರು ಅತೀ ಚಟುವಟಿಕೆಯಿಂದ ಕೂಡಿದವರಾಗಿದ್ದು, ಮಾಡುವ ಕೆಲಸ ಉಪಯೋಗವಾಗಲಿ, ಉಪಯೋಗಕ್ಕೆ ಬಾರದಿರಲಿ ಮಾಡುತ್ತಲೇ ಇರುತ್ತಾರೆ. ಎಡಿಎಚ್‌ಡಿ ಲಕ್ಷಣವಿರುವವರು ಕೆಲವೊಮ್ಮೆ ಸಮಾಜಘಾತುಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಆದರೆ ಅವರಿಗೆ ತಾನು ಮಾಡುವ ಕೆಲಸದಿಂದ ಸಮಾಜಕ್ಕೆ ಕೆಟ್ಟದಾಗುತ್ತದೆ ಎಂಬ ಅರಿವು ಇರುವುದಿಲ್ಲ. ಒಟ್ಟಾರೆ ಏನೋ ಒಂದು ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಮಾಡುತ್ತಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.

ಬಾಲ್ಯದಲ್ಲೇ ಎಡಿಎಚ್‌ಡಿ ಲಕ್ಷಣಗಳನ್ನು ಗುರುತಿಸಿ, ಸರಿಯಾದ ಚಿಕಿತ್ಸೆ ಪಡೆದುಕೊಳ್ಳದ ಮಕ್ಕಳಲ್ಲಿ ದೊಡ್ಡವರಾಗುತ್ತಿದ್ದಂತೆ ರೋಗ ಲಕ್ಷಣಗಳು ಸ್ವಷ್ಟವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅನೇಕರಿಗೆ ತಮಗೆ ಎಡಿಎಚ್‌ಡಿ ಇದೆ ಎಂದು ತಿಳಿದಿರುವುದಿಲ್ಲ. ಅವರಲ್ಲಿ ಏಕಾಗ್ರತೆ ಕಡಿಮೆ ಇರುತ್ತದೆ.  ಎಡಿಎಚ್‌ಡಿ ಇರುವ ವಯಸ್ಕರು ತಮ್ಮ ಗುರಿ ತಲುಪುವಲ್ಲಿ ವಿಫಲರಾಗುತ್ತಾರೆ.

ವಯಸ್ಕರ ಎಡಿಎಚ್‌ಡಿ ಲಕ್ಷಣಗಳು
ಮಕ್ಕಳಲ್ಲಿನ ಎಡಿಎಚ್‌ಡಿ ಲಕ್ಷಣಗಳಿಗಿಂತ ವಯಸ್ಕರಲ್ಲಿ ಸ್ವಲ್ಪ ಭಿನ್ನವಾಗುರುತ್ತದೆ. ಎಡಿಎಚ್‌ಡಿ ಇರುವ ವಯಸ್ಕರು ಸಾಮಾನ್ಯವಾಗಿ ತಮ್ಮ ಕಚೇರಿ ಹಾಗೂ ಸುತ್ತಮುತ್ತ ನಡೆಯುವ ಮುಖ್ಯ ಕಾರ್ಯಕ್ರಮಗಳಿಗೆ ತಡವಾಗಿ ಹಾಜರಾಗುತ್ತಾರೆ. ಅಂತಹ ವ್ಯಕ್ತಿಗೆ ಸೋಮಾರಿತನದಿಂದ ತನ್ನ ಕೆಲಸಗಳು ವಿಳಂಬವಾಗುತ್ತದೆ ಎಂದು ತಿಳಿದಿರುತ್ತದೆ. ಆದರೂ ಕೂಡ ಆತ ಸರಿಯಾದ ಸಮಯಪಾಲನೆ ಮಾಡಲು ಸಾಧ್ಯವಾಗುವುದಿಲ್ಲ.

ಅಪಾಯದ ಚಾಲನೆ: ಎಡಿಎಚ್‌ಡಿ ಇರುವವರು ಸಾಮಾನ್ಯವಾಗಿ ಯಾವುದೇ ಟಾಸ್ಕ್ ಎದುರಾದರೂ ಅದರ ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೆ ಮುಂದುವರಿಯುತ್ತಾರೆ. ಸಾಮಾನ್ಯವಾಗಿ ವಾಹನ ಚಲಾಯಿಸುವಾಗ ಅವರು ಮನಸ್ಸನ್ನು ಚಾಲನೆಯ ಮೇಲೆ ಕೇಂದ್ರಿಕರಿಸದೇ ತೊಂದರೆಗೊಳಗಾಗುವ ಸಂಭವ ಅಧಿಕವಾಗಿದೆ. ಅವರು ವೇಗವಾಗಿ ಓಡಿಸುತ್ತಾರೆ.  ಅಲ್ಲದೇ ಇದರಿಂದ ತಮ್ಮ ಚಾಲನಾ ಪರವಾನಗಿಯನ್ನು ಕಳೆದುಕೊಂಡ ಉದಾಹರಣೆಗಳಿವೆ.

ವ್ಯಾಕುಲತೆ: ಎಡಿಎಚ್‌ಡಿ ಇರುವ ವಯಸ್ಕರು ಸಾಮಾನ್ಯವಾಗಿ ಚಿತ್ತಚಾಂಚಲ್ಯದವರಾಗಿರುತ್ತಾರೆ. ಅವರು ಮಾಡುವ ಪ್ರತಿ ಕೆಲಸವನ್ನು ಪ್ರಾರಂಭಿಸುವಾಗ ಮತ್ತು ಅಂತ್ಯಗೊಳಿಸುವಾಗ ಗೊಂದಲಗಳಿರುತ್ತವೆ. ಎಡಿಎಚ್‌ಡಿ ಇರುವವರು ಸದಾ ಅಸಮಾಧಾನಿಗಳಾಗಿರುತ್ತಾರೆ, ಬಹಳ ಬೇಗ ಸಿಟ್ಟಾಗುತ್ತಾರೆ. ಅವೆಲ್ಲಕ್ಕೂ ಹೆಚ್ಚಾಗಿ ಇವರಿಗೆ ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಇವರ ಭವಿಷ್ಯ, ಸಂಬಂಧ ಹಾಗೂ ಗುರಿಗಳು ಸುಲಭವಾಗಿ ವಿಫಲಗೊಳ್ಳುತ್ತದೆ.

ಸಿಟ್ಟು: ಎಡಿಎಚ್‌ಡಿ ಇರುವವರು ಸಾಮಾನ್ಯ ಸ್ವನಿಯಂತ್ರಣ ಕಳೆದುಕೊಂಡಿರುತ್ತಾರೆ. ಇದರಿಂದ ಅವರು ಬೇಗ ಕೋಪ ಮಾಡಿಕೊಳ್ಳುತ್ತಾರೆ. ಅವರ ವರ್ತನೆ  ಬೇರೆಯವರಿಗೆ ಸಹ್ಯವಾಗುವುದಿಲ್ಲ. ಇತರರೊಂದಿಗೆ ಕೆಟ್ಟ ವರ್ತನೆ ತೋರುವ ಮೂಲಕ ಎದುರಿಗಿರುವವರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಎಡಿಎಚ್‌ಡಿ ಇರುವವರು ತಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸದ ಮೇಲೆ ಅಧಿಕ ಗಮನ ಹರಿಸುತ್ತಾರೆ. ಆದರೆ ಯಾವ ಕೆಲಸದಲ್ಲಿ ಅವರಿಗೆ ಆಸಕ್ತಿ ಇಲ್ಲವೋ ಅದನ್ನು ಮುಗಿಸಲು ಅವರು ಹೆಣಗಾಡುತ್ತಾರೆ.

ಸದ್ಯಕ್ಕೆ ಸಾಮಾನ್ಯವಾಗಿ ಎಲ್ಲರಿಗೂ ಎಡಿಎಚ್‌ಡಿ ಇರುವ ಲಕ್ಷಣಗಳು ಕಂಡು ಬರುತ್ತದೆ. ಯಾಕೆಂದರೆ ನಾವು ನಮಗೆ ಬರುವ ಸಂದೇಶ, ಫೋನ್ ಕರೆ, ಇಮೇಲ್ ಗಳಿಗೆ ತಕ್ಷಣ ಸ್ಪಂದಿಸುತ್ತೇವೆ. ಪ್ರತಿಯೊಬ್ಬರಿಗೂ ಕೆಲಸದಲ್ಲಿ ಹಿಂಜರಿಕೆ ಇರುವುದು ಸಾಮಾನ್ಯ, ಹಲವರು ಆ ಹಿಂಜರಿಕೆಯಲ್ಲೇ ಸುಲಭವಾಗಿ ಕೆಲಸ ನಿಭಾಯಿಸುತ್ತಾರೆ. ಆದರೆ ಎಡಿಎಚ್‌ಡಿ ಇರುವಂತಹವರು ಮನೆಯಲ್ಲಾಗಲಿ, ಕಚೇರಿಯಲ್ಲಾಗಲಿ ಸುಲಭವಾಗಿ ಕೆಲಸವನ್ನು ನಿಭಾಯಿಸಲಾಗುವುದಿಲ್ಲ.

ಹಾಗಂತ ಈ ಎಲ್ಲಾ ಲಕ್ಷಣಗಳು ನಿಮ್ಮಲ್ಲಿವೆ ಎಂದ ಕೂಡಲೇ ನೀವು ಎಡಿಎಚ್‌ಡಿಯಿಂದ ಬಳಲುತ್ತಿದ್ದೀರಾ ಎಂಬ ಅರ್ಥವಲ್ಲ. ಇವು ಕೆಲವು ಇತರ ಮಾನಸಿಕ ರೋಗಗಳ ಲಕ್ಷಣವೂ ಆಗಿರಬಹುದು. ನಿಮಗೆ ಯಾವುದೇ ವಿಷಯದ ಮೇಲೆ ಗಮನ ಹರಿಸಲು ಸಾಧ್ಯವಿಲ್ಲವೆಂದರೆ ಅದು ಡಿಪ್ರೆಷನ್‌ನ ಭಾಗವೂ ಆಗಿರಬಹುದು. ಆತಂಕ ಹಾಗೂ ವಿಶ್ರಾಂತಿ ಇಲ್ಲದೇ ಇರುವಂತೆ ನಿಮಗೆ ಅನ್ನಿಸಿದರೆ ಅದು ಥೈರಾಯ್ಡ್‌ನ ಲಕ್ಷಣವೂ ಇರಬಹುದು. ಈ ಮೇಲಿನ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಅದಕ್ಕೆ ಸೂಕ್ತ ವೈದ್ಯರನ್ನು ಸಂದರ್ಶಿಸಿ ಆ ಮೂಲಕ ನಿಮಲ್ಲಿ ಯಾವ ಕಾಯಿಲೆ ಎಂಬುದನ್ನು ತಿಳಿಯುವುದು ಉತ್ತಮ.

ಎಡಿಎಚ್‌ಡಿ ಕಂಡು ಬರಲು ಮೆದುಳಿನಲ್ಲಿನ ನ್ಯೂರೋಟ್ರಾಸ್ಮಿಟರ್‌ ಎಂಬ ರಸಾಯನಿಕವೊಂದು ಕಡಿಮೆ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದೆ ಕಾರಣ. ಈ ರಾಸಾಯನಿಕ ಅಸಮತೋಲನಕ್ಕೆ ಸರಿಯಾದ ಕಾರಣಗಳನ್ನು ಸಂಶೋಧಕರು ಕಂಡುಕೊಂಡಿಲ್ಲ. ಆದರೆ ವಂಶವಾಹಿನಿಗಳ ಮೂಲಕವೇ ಇದು ಕಂಡು ಬರಲು ಸಾಧ್ಯ ಎಂದು ಅಂದಾಜಿಸಿದ್ದಾರೆ. ಗರ್ಭಿಣಿಯಿದ್ದಾಗ ಅಲ್ಕೋಹಾಲ್ ಮತ್ತು ಸಿಗರೇಟ್ ಸೇವನೆ ಕೂಡ ಕಾರಣವಾಗಬಹುದು.

ಪ್ರೀತಿಯಿಂದ ಬದಲಾವಣೆ
ಎಡಿಎಚ್‌ಡಿ ಇರುವ ವ್ಯಕ್ತಿಗೆ ತಾನು ಮಾಡುವ ಕೆಲಸಗಳ ಬಗ್ಗೆ ಅರಿವಿರುವುದಿಲ್ಲ.  ತಾನು ಮಾಡುವ ಕೆಲಸದಿಂದ ಪರರಿಗೆ ಉಪಕಾರವಾಗುತ್ತದೋ, ಬಿಡುವುದೋ ಎಂದು ಚಿಂತಿಸದೆ ಕೆಲಸ ಮಾಡುತ್ತಾನೆ. ಅವರಿಗೆ ಸುಸ್ತು ಕೂಡ ಆಗುವುದಿಲ್ಲ. ಒಂದೇ ಕೆಲಸವನ್ನು ದಿನವಿಡೀ ಮಾಡುತ್ತಾನೆ. ಅಂತಹವರಿಗೆ ನಾವು ಹೊಡೆದು, ಬಡಿದು ಮಾಡುವುದರಿಂದ ಅವರಲ್ಲಿ ಅಸಹನೆ ಹೆಚ್ಚುತ್ತದೆ. ಪ್ರೀತಿ, ಮಮಕಾರದ ಮಾತಿನಲ್ಲಿ ಹೇಳಬೇಕು.

ಹೈಪರ್ ಎಡಿಎಚ್‌ಡಿ ಎನ್ನಿಸಿದರೆ ‘ಬಿಹೇವಿಯರ್ ಮಾಡಿಫಿಕೇಷನ್‌’ ಮತ್ತು ‘ಕಾಗ್ನೇಟಿವ್‌ ಬಿಹೇವಿಯರ್ ಮಾಡಿಫಿಕೇಷನ್‌’ ಟ್ರೀಟ್‌ಮೆಂಟ್ ನೀಡಬೇಕು. ಇದಕ್ಕೆಲ್ಲಾ ಮುಖ್ಯವಾಗಿ ಅವರಿಗೆ ಎಲ್ಲವನ್ನು ಅರ್ಥವಾಗುವಂತೆ ತಿಳಿಸಿ ಹೇಳಬೇಕು. ಕೆಲಸ ಮಾಡುವಾಗ ಹೇಗೆ, ಯಾವುದನ್ನು ಮಾಡಬೇಕು ಎಂದು ಹೇಳಬೇಕು. ಪ್ರೀತಿಯಿಂದ ಹೇಳುವ ಮೂಲಕ ಅವರ  ವರ್ತನೆಯಲ್ಲಿ ಬದಲಾವಣೆ ತರಬಹುದು.
-ಡಾ. ಮಹಮ್ಮದ್‌ ಇಕ್ಬಾಲ್, ಮನೋಶಾಸ್ತ್ರ ಪ್ರಾಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT