ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆ ಪಾರದರ್ಶಕವಾಗಿರಲಿ

Last Updated 1 ಮೇ 2014, 19:30 IST
ಅಕ್ಷರ ಗಾತ್ರ

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳ ವರ್ಗಾವಣೆ ವಿಷಯ ರಾಜ್ಯದಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ಸಮೂಹದ ನಡುವೆ ಸಂಘ­ರ್ಷಕ್ಕೆ ಕಾರಣವಾಗುವ ಲಕ್ಷಣ ಕಾಣುತ್ತಿದೆ. ಇದು ಶುಭ ಸೂಚನೆ ಅಲ್ಲ. ಐಎಎಸ್‌, ಐಪಿಎಸ್‌ ಮುಂತಾದ ಹಿರಿಯ ಅಧಿಕಾರಿಗಳ ವರ್ಗಾವಣೆ­ಯನ್ನು ನಾಗರಿಕ ಸೇವಾ ಮಂಡಳಿಯೇ ಮಾಡಬೇಕು ಹಾಗೂ ಈ ಅಧಿಕಾರಿ­ಗಳು ಒಂದು ಸ್ಥಾನದಲ್ಲಿ ಕನಿಷ್ಠ ಎರಡು ವರ್ಷ ಇರಬೇಕು ಎಂದು ಸುಪ್ರೀಂ­ಕೋರ್ಟ್ ಹೇಳಿದೆ. ಈ ಆದೇಶವನ್ನು ಪಾಲಿಸುವ ವಿಚಾರದಲ್ಲಿ ಮುಖ್ಯ­ಮಂತ್ರಿ ಮತ್ತು ಇತರ ಸಚಿವರ ನಡೆ ಸಂಶಯಾತ್ಮಕವಾಗಿದೆ. ಸುಪ್ರೀಂ­ಕೋರ್ಟ್ ಆದೇಶವನ್ನು ಒಪ್ಪಿಕೊಂಡ ರಾಜ್ಯ ಸರ್ಕಾರ ಮಂಡಳಿ ರಚಿಸುವು­ದಾಗಿ ಪ್ರಕಟಿಸಿತ್ತು. ನಾಗರಿಕ ಸೇವಾ ಮಂಡಳಿ ಸ್ಥಾಪಿಸುವ ಕುರಿತ ಎರಡು ಕಡತ­ಗಳಿಗೆ ಮುಖ್ಯಮಂತ್ರಿ ಸಹಿ ಮಾಡಿದ್ದಾರೆ.

ಆದರೆ ಮಾರ್ಚ್ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಂದ ಭಾರೀ ವಿರೋಧ ವ್ಯಕ್ತವಾಗಿ­ದ್ದರಿಂದ ನಾಗರಿಕ ಸೇವಾ ಮಂಡಳಿ ರಚಿಸುವ ವಿಚಾರವನ್ನು ಮುಖ್ಯಮಂತ್ರಿ ತಡೆ ಹಿಡಿದಿದ್ದಾರೆ. ಸುಪ್ರೀಂಕೋರ್ಟ್ ಅಕ್ಟೋಬರ್‌ 31ರಂದು ನೀಡಿದ ಆದೇಶ­ವನ್ನು 90 ದಿನಗಳಲ್ಲಿ ಜಾರಿಗೆ ತರಬೇಕಾಗಿದ್ದ ಸರ್ಕಾರ ಯಾವುದೇ ನಿಖರ­ವಾದ ಕಾರಣವನ್ನು ನೀಡದೇ ಹಿಂದಕ್ಕೆ ಹೆಜ್ಜೆ ಇಟ್ಟಿರುವುದು ಸರಿಯಲ್ಲ. ಅಧಿಕಾರಿಗಳ ವರ್ಗಾವಣೆಯ ಜವಾಬ್ದಾರಿ ತಮ್ಮ ಬಳಿಯೇ ಇರಬೇಕು ಎನ್ನುವ ರಾಜಕಾರಣಿಗಳ ನಿಲುವು ಕೂಡ ಸಮರ್ಥನೀಯ ಅಲ್ಲ. ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ವರ್ಗಾವಣೆ ಮಾಡಲೂ ಸೂಕ್ತವಾದ ನಿಯ­ಮಾ­ವಳಿಗಳಿವೆ. ಆದರೆ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸೂಕ್ತ ನಿಯ­ಮ­ಗಳೇ ಇಲ್ಲ. ಅಧಿಕಾರದಲ್ಲಿ ಇರುವ ಪಕ್ಷದ ರಾಜಕಾರಣಿಗಳು ತಮ್ಮ ಇಷ್ಟಕ್ಕೆ ಬೇಕಾದಂತೆ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಾರೆ ಎಂದರೆ ಅದಕ್ಕೆ ಅರ್ಥವೇ ಇಲ್ಲ. ಇದಕ್ಕೆ ಕಡಿವಾಣ ಹಾಕಲೇ ಬೇಕಿದೆ.

ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲು ಮುಂದಾದ ಹಾಗೂ ಈ ಸಂಬಂಧ ಹೈಕೋರ್ಟ್‌ಗೆ ರಾಜ್ಯದ ಪರವಾಗಿ ಪ್ರಮಾಣ ಪತ್ರ ಸಲ್ಲಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ರೇಗಾಡಿರುವುದು ಮತ್ತು ಅವ­ರಿಗೆ ನೋಟಿಸ್‌ ನೀಡಿರುವುದು ಸಮರ್ಥನೀಯ ಅಲ್ಲ. ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಈ ಹಿಂದೆ ಕೂಡ ಐಎಎಸ್ ಅಧಿಕಾರಿಗಳ ಮೇಲೆ ರೇಗಾಡಿದ ಪ್ರಸಂಗಗಳು ಇವೆ.

ಅಧಿಕಾರಿಗಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರುವ ಜವಾಬ್ದಾರಿ ಮುಖ್ಯಮಂತ್ರಿ ಅವರಿಗೆ ಸೇರಿದ್ದು. ಆದರೆ ಅಧಿಕಾರಿಗಳು ಕಾನೂನು ಬದ್ಧವಾಗಿ ನಡೆದುಕೊಂಡಾಗ ರಾಜಕೀಯ ಕಾರ­ಣ­­ಗಳಿಗೆ ಅಥವಾ ಸಚಿವರ ಒತ್ತಡಕ್ಕೆ ಮಣಿದು ಅವರ ಮೇಲೆ ರೇಗಾಡು­ವುದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ. ಇದು ಅಧಿಕಾರಿಗಳ ಮನೋ­ಸ್ಥೈರ್ಯ­ವನ್ನು ಕೆಡಿಸುತ್ತದೆ. ರಾಜ್ಯದಲ್ಲಿ ನಾಗರಿಕ ಸೇವಾ ಮಂಡಳಿ ರಚನೆಗೆ ಮುಖ್ಯಮಂತ್ರಿ ಮುಂದಾಗಬೇಕು. ಇದನ್ನು ವಿರೋಧಿಸುವ ಸಚಿವರ ಬಾಯಿ ಮುಚ್ಚಿಸುವ ಕೆಲಸವನ್ನೂ ಅವರೇ ಮಾಡಬೇಕು. ಹಿರಿಯ ಅಧಿಕಾರಿಗಳ ವರ್ಗಾವಣೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ರಾಜಕಾರಣಿಗಳ ಆಟದ ಬೊಂಬೆಗಳಲ್ಲ ಎನ್ನುವುದನ್ನು ನಿರೂ­ಪಿಸುವ ಕೆಲಸವನ್ನೂ ಅವರೇ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT