ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತಪುರದಲ್ಲಿ ಮೂಲಸೌಕರ್ಯ ಮರೀಚಿಕೆ

Last Updated 27 ಮೇ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಸಂತಪುರ ಗ್ರಾಮದಲ್ಲಿ ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಸೌಕರ್ಯಗಳ ಕೊರತೆ ಇದೆ.

‘ಗ್ರಾಮದಲ್ಲಿ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರು ಅಲ್ಲಲ್ಲಿ ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನರು ಜೀವನ ನಡೆಸುವಂತಾಗಿದೆ’ ಎಂದು ಗ್ರಾಮದ ಚಿನ್ನದೊರೈ ಅಳಲು ತೋಡಿಕೊಂಡರು.

‘ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಕುಡಿಯಲು ಕಾವೇರಿ ನೀರು ಸರಬರಾಜು ಮಾಡಿಲ್ಲ. 12 ದಿನಕ್ಕೊಮ್ಮೆ ನಲ್ಲಿ ನೀರು ಬರುತ್ತದೆ.  ಆದರೆ, ಆ ನೀರು ಕುಡಿಯಲು ಯೋಗ್ಯವಾಗಿಲ್ಲ’ ಎಂದು ಮೂರ್ತಿ ಹೇಳಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಗ್ರಾಮದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಬಿಬಿಎಂಪಿಗೆ ಸೇರ್ಪಡೆಯಾದ ಬಳಿಕ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆದಿಲ್ಲ. ಮಳೆ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತದೆ’ ಎಂದು ಅಳಲು ತೋಡಿಕೊಂಡರು.

ರಾಜಪ್ಪ ಮಾತನಾಡಿ, ‘ಅಕ್ಕಪಕ್ಕದ ಬಡಾವಣೆಗಳಿಗೆ ಕುಡಿಯುವ ನೀರು, ಉತ್ತಮ ರಸ್ತೆ, ಒಳಚರಂಡಿ ವ್ಯವಸ್ಥೆ ಇದೆ. ನಮ್ಮ ಗ್ರಾಮಕ್ಕೆ ಮಾತ್ರ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಟ್ಯಾಂಕರ್‌ ನೀರಿಗೆ 500 ರೂಪಾಯಿ ಕೊಡಬೇಕು. ಆ ನೀರು ಕುಡಿಯಲು ಯೋಗ್ಯವಾಗಿವಿಲ್ಲ. ಡಿ.ಕೆ.ಎಸ್‌. ಚಾರಿಟಬಲ್‌ ಟ್ರಸ್ಟ್‌ ಶುದ್ಧ ನೀರಿನ ಘಟಕ ಸ್ಥಾಪಿಸಿದ್ದು, ದಿನಕ್ಕೆ ನಾಲ್ಕು ರೂಪಾಯಿಗೆ 40 ಲೀಟರ್‌ ನೀರನ್ನು ಮಾತ್ರ ನೀಡುತ್ತಿದೆ. ಆ ನೀರನ್ನೇ ಕುಡಿಯಲು, ಅಡುಗೆ ಮಾಡಲು ಉಪಯೋಗಿಸುತ್ತೇವೆ’ ಎಂದು ರಾಧಾ ಬಾಯಿ ಹೇಳಿದರು.

ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನರಸಿಂಗ್‌ ಬಾಬು, ‘ವಸಂತಪುರ ಬೆಟ್ಟದ ಮೇಲೆ ಇರುವುದರಿಂದ ಕೊಳವೆ ಬಾವಿ ಕೊರೆಸಿದರೆ ನೀರು ಸಿಗುವುದಿಲ್ಲ. ಮಾರುತಿನಗರದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್‌ ಮೂಲಕ ನೀರು ಸರಬರಾಜು ಮಾಡಲು ಟೆಂಡರ್‌ ಕರೆಯಲಾಗಿದೆ’ ಎಂದು  ತಿಳಿಸಿದರು.

ಜನರ ಆರೋಪಗಳು
* ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಸೊಳ್ಳೆ, ನೊಣಗಳ ಹಾವಳಿ

* ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜೀವನ
* 12 ದಿನಕ್ಕೊಮ್ಮೆ  ಬರುವ ಕುಡಿಯುವ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT