ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಗಡಿ ಅಕ್ರಮ ಪ್ರವೇಶವೇ ಕಾರಣ

ರಷ್ಯಾ ಯುದ್ಧವಿಮಾನದ ಮೇಲೆ ದಾಳಿ: ಟರ್ಕಿ ಸಮರ್ಥನೆ
Last Updated 24 ನವೆಂಬರ್ 2015, 19:34 IST
ಅಕ್ಷರ ಗಾತ್ರ

ಅಂಕಾರ/ಮಾಸ್ಕೊ (ಎಪಿ/ರಾಯಿಟರ್ಸ್): ಸಿರಿಯಾ ಗಡಿಯಲ್ಲಿ ಮಂಗಳವಾರ ರಷ್ಯಾದ ಸುಖೋಯ್‌ ಯುದ್ಧ ವಿಮಾನವನ್ನು ಟರ್ಕಿ ಸೇನೆಯ ಎಫ್‌16 ಯುದ್ಧ ವಿಮಾನ ಹೊಡೆದುರುಳಿಸಿದೆ. ತನ್ನ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಹಾಗೂ ಈ ಬಗ್ಗೆ ಹಲವು ಬಾರಿ ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದ್ದಕ್ಕಾಗಿ ರಷ್ಯಾ ವಿಮಾನವನ್ನು ಹೊಡೆದುರುಳಿಸಲಾಯಿತು ಎಂದು ಟರ್ಕಿ ಹೇಳಿದೆ. 

‘ವಿಮಾನ ಸಿರಿಯಾ ಗಡಿಯಲ್ಲೇ ಇತ್ತು. ಅದು ಟರ್ಕಿ ಗಡಿಯನ್ನು ಪ್ರವೇಶಿಸಿಲ್ಲ ಎಂಬುದನ್ನು ಸಾಬೀತು ಮಾಡುತ್ತೇವೆ. ಇದೊಂದು ಗಂಭೀರ ವಾದ ಘಟನೆ’ ಎಂದು ರಷ್ಯಾ ಹೇಳಿದೆ. 1950ರ ನಂತರ ಇದೇ ಮೊದಲ ಬಾರಿ ‘ನ್ಯಾಟೊ’ ಸದಸ್ಯ ರಾಷ್ಟ್ರದ ಸೇನೆ ರಷ್ಯಾದ ಯುದ್ಧವಿಮಾನವೊಂದನ್ನು ಹೊಡೆದುರುಳಿಸಿದೆ.

ಈ ಘಟನೆಯಿಂದ ರಷ್ಯಾ ಮತ್ತು ಟರ್ಕಿ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರುವ ಅಪಾಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಮಾನ ಹೊಡೆದುರುಳಿಸುತ್ತಿದ್ದಂತೆ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್‌ನಿಂದ ಕೆಳಗೆ ಜಿಗಿದರು. ಈ ಇಬ್ಬರೂ ಬದುಕಿದ್ದಾರೆ ಎಂದು ಟರ್ಕಿ ಹೇಳಿದೆ.
*
‘ರಷ್ಯಾದ ಎರಡು ಯುದ್ಧ ವಿಮಾನಗಳು ನಮ್ಮ ಗಡಿಯನ್ನು ಸಮೀಪಿಸುತ್ತಿದ್ದವು. ನಮ್ಮ ಗಡಿ ಪ್ರವೇಶಿದಂತೆ ಅವರಿಗೆ ನಾವು ಎಚ್ಚರಿಕೆ ನೀಡಿದೆವು. ಐದು ನಿಮಿಷದಲ್ಲಿ ಒಟ್ಟು 10 ಬಾರಿ ಎಚ್ಚರಿಕೆ ನೀಡಿದ್ದೇವೆ. ಅದನ್ನು ವಿಮಾನದ ಸಿಬ್ಬಂದಿ ಕಡೆಗಣಿಸಿದರು. ಹೀಗಾಗಿ ವಿಮಾನವನ್ನು ಹೊಡೆದುರುಳಿಸಿದೆವು’ ಎಂದು ಟರ್ಕಿ ಸೇನೆ  ಪ್ರಕಟಣೆ ಹೇಳಿದೆ.

‘ಹಲವು ಬಾರಿ ನಮ್ಮ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲಾಗಿದೆ. ಜತೆಗೆ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ’ ಎಂದು ಟರ್ಕಿ ವಿವರಿಸಿದೆ.

ಟರ್ಕೊಮನ್ ಪರ್ವತಶ್ರೇಣಿಯಲ್ಲಿ ಕಾರ್ಯಾಚರಣೆ:  ಕಳೆದ ಕೆಲವು ದಿನಗಳಿಂದ ಸಿರಿಯಾದಲ್ಲಿ ಉಗ್ರರ ವಿರುದ್ಧ ನಡೆಯತ್ತಿರುವ ದಾಳಿಯಿಂದ ತಪ್ಪಿಸಿಕೊಳ್ಳಲು 1700ಕ್ಕೂ ಹೆಚ್ಚು ಮಂದಿ ಸಿರಿಯಾ ಬಂಡುಕೋರರು ಟರ್ಕೊಮನ್ ಪರ್ವತ ಪ್ರದೇಶದತ್ತ ಓಡಿ ಹೋಗಿದ್ದಾರೆ. ಅವರ ವಿರುದ್ಧ ಸಿರಿಯಾ ಸೇನೆ ಮತ್ತು ರಷ್ಯಾ ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ.

ತನ್ನ ಹಳ್ಳಿಗಳ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯ ಬಗ್ಗೆ ಚರ್ಚಿಸಲು ಭದ್ರತಾ ಮಂಡಳಿಯ ಸಭೆ ಕರೆಯಬೇಕೆಂದು ಟರ್ಕಿ ಕಳೆದ ವಾರ ವಿಶ್ವಸಂಸ್ಥೆಯನ್ನು ಕೋರಿತ್ತು. ಈ ಬಗ್ಗೆ ಉತ್ತರಿಸುವಂತೆ ಟರ್ಕಿಯಲ್ಲಿರುವ ರಷ್ಯಾ ರಾಯಭಾರಿಗೂ ಸಮನ್ಸ್ ಜಾರಿ ಮಾಡಿತ್ತು.

ಪರ್ವತಕ್ಕೆ ಅಪ್ಪಳಿಸಿದ ವಿಮಾನ: ಬೆಂಕಿ ಹೊತ್ತಿ ಉರಿಯುತ್ತಿದ್ದ ವಿಮಾನವೊಂದು ಪರ್ವತಕ್ಕೆ ಅಪ್ಪಳಿಸುವ ದೃಶ್ಯವನ್ನು ಟರ್ಕಿಯ ಸುದ್ದಿವಾಹಿನಿಯೊಂದು ಬಿತ್ತರಿಸಿದೆ. ವಿಮಾನ ಟರ್ಕೊ ಮನ್ ಪರ್ವತ ಪ್ರದೇಶದಲ್ಲಿ ಪತನ ಗೊಂಡಿದೆ ಎಂದು ಸುದ್ದಿ ವಾಹಿನಿ ತಿಳಿಸಿದೆ. ಪರ್ವತದ ಮತ್ತೊಂದು ಮಗ್ಗುಲಿನಿಂದ ಚಿತ್ರೀಕರಿಸಿರುವ ವಿಡಿಯೊವನ್ನು ಮತ್ತೊಂದು ಟಿವಿ ವಾಹಿನಿ ಪ್ರಸಾರ ಮಾಡಿದೆ.

ವಿಮಾನ ಪರ್ವತಕ್ಕೆ ಅಪ್ಪಳಿಸುವ ಮುನ್ನವೇ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್‌ಗಳ ನೆರವಿನಿಂದ ಇಳಿಯುತ್ತಿರುವುದೂ ಈ ವಿಡಿಯೊದಲ್ಲಿ ಸೆರೆಯಾಗಿದೆ. ಈ ಎರಡೂ ದೃಶ್ಯಾವಳಿಗಳು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
*
ಪೈಲಟ್‌ಗೆ ಗುಂಡಿಕ್ಕಿದ ಬಂಡುಕೋರರು
ಪ್ಯಾರಾಚೂಟ್‌ ಮೂಲಕ ಇಳಿದ ಒಬ್ಬ ಪೈಲಟ್‌ನನ್ನು ಗುಂಡಿಕ್ಕಿ ಕೊಂದಿರುವುದಾಗಿ ಸಿರಿಯಾ ಬಂಡುಕೋರರ ಗುಂಪೊಂದು ಹೇಳಿದೆ. ಜತೆಗೆ ಮತ್ತೊಬ್ಬ ಪೈಲಟ್ ತಪ್ಪಿಸಿಕೊಂಡಿದ್ದಾನೆ ಎಂದೂ ಅದು ಹೇಳಿದೆ. ಪ್ಯಾರಾಚೂಟ್‌ನೊಂದಿಗೆ ಇಳಿಯುತ್ತಿರುವ ಪೈಲಟ್‌ಗೆ ಸಿರಿಯಾ ಬಂಡುಕೋರರು ಗುಂಡು ಹಾರಿಸುತ್ತಿರುವ ವಿಡಿಯೊ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದೆ.

ಪ್ಯಾರಾಚೂಟ್‌ನೊಂದಿಗೆ ಸತ್ತುಬಿದ್ದಿರುವ ಪೈಲಟ್‌ ಒಬ್ಬನ ಸುತ್ತ ಹಲವು ಶಸ್ತ್ರಧಾರಿ ಬಂಡುಕೋರರು ನಿಂತಿರುವ ಮತ್ತೊಂದು ವಿಡಿಯೊ ಸಹ ಯೂಟ್ಯೂಬ್‌ನಲ್ಲಿದೆ. ಆದರೆ ಪೈಲಟ್‌ಗಳು ಬದುಕಿದ್ದಾರೆ ಎಂದು ಟರ್ಕಿ ಅಧಿಕಾರಿ ಮಂಗಳವಾರ ರಾತ್ರಿ ಸ್ಪಷ್ಟಪಡಿಸಿದ್ದಾರೆ.
*
ಟರ್ಕಿ ಗಡಿಯಿಂದ ನಾಲ್ಕು ಕಿ.ಮೀ ದೂರದಲ್ಲಿ ವಿಮಾನ ಬಿದ್ದಿದೆ. ಟರ್ಕಿಗೆ ಅದರಿಂದ ಅಪಾಯವಿರಲಿಲ್ಲ. ಈ ಘಟನೆ ರಷ್ಯಾ– ಟರ್ಕಿ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ
-ವ್ಲಾಡಿಮರ್ ಪುಟಿನ್,
ರಷ್ಯಾ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT