ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಂಡಲದಲಿ ವಿಷವರ್ತುಲ

ಜೀವ ಕಂಟಕ ವಾಯುಮಾಲಿನ್ಯ
Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನಮ್ಮ ಕೋಲಾರದ ಮಾವಿನ ಮರಗಳು ಹೂವು ಬಿಡುವುದು ಏಕೆ ತಡವಾ­ಗಿದೆ? ವಿಜಯಪುರದ ಜೋಳದ ಹಂಗಾಮು ಕೂಡ ಮೊದಲಿನಂತೆ ಇಲ್ಲವಲ್ಲ? ಹೌದು, ರಾಜ್ಯದಲ್ಲಿ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಆ ಪರಿ ಏರುತ್ತಿದೆ­ಯಲ್ಲ, ಏನಿದರ ಮಜಕೂರು? ಬೆಂಗಳೂರಿನಲ್ಲಿ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾದರೂ ಏನು...?

ನಾವು ಎದುರಿಸುತ್ತಿರುವ ಪ್ರಾಕೃತಿಕ, ಸಾಮಾ­ಜಿಕ ಇಲ್ಲವೆ ವೈದ್ಯಕೀಯ ಸಮಸ್ಯೆಗಳ ಕುರಿತು ಇಂತಹ ಎಷ್ಟೇ ಪ್ರಶ್ನೆಗಳು ಉದ್ಭವವಾದರೂ ಉತ್ತರದೊಳಗೆ ಒಂದಿಲ್ಲೊಂದು ರೂಪದಲ್ಲಿ ವಾಯುಮಾಲಿನ್ಯದ ಪ್ರಸ್ತಾಪ ಬಂದೇ ಬರುತ್ತದೆ. ವಾಯು ಹೇಗೆ ಸರ್ವವ್ಯಾಪಿಯೋ ಹಾಗೆಯೇ ಅದರ ಮಾಲಿನ್ಯದ ಪರಿಣಾಮ ಕೂಡ ಭೂಮ್ಯಾಕಾಶದ ತುಂಬಾ ವ್ಯಾಪಿಸಿಬಿಟ್ಟಿದೆ.

ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ನವದೆಹಲಿಗೆ ಬಂದಾಗ ಅಲ್ಲಿನ ವಾಯು­ಮಾಲಿನ್ಯ­ದಿಂದ ಅವರ ಆಯುಷ್ಯದಲ್ಲಿ ಆರು ಗಂಟೆಯಷ್ಟು ಇಳಿಕೆಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹೌದು, ವಾಯುಮಾಲಿನ್ಯಕ್ಕೆ ಮಾನವನ ಆಯುಷ್ಯ­­­ವನ್ನು ಕಡಿತಗೊಳಿಸುವ ಶಕ್ತಿ ಇದೆ. ಅಷ್ಟೇ ಏಕೆ, ಆರೋಗ್ಯ­ವನ್ನು ಸಂಪೂರ್ಣವಾಗಿ ಹದಗೆಡಿಸಿ, ಸಾಮಾಜಿಕ–ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಾಮರ್ಥ್ಯವೂ ಅದಕ್ಕಿದೆ. ತನ್ನ ಸ್ವಾಸ್ಥ್ಯ ಕೆಡಿಸಿದ ಸಮುದಾಯದ ಮೇಲೆ ವಾಯುಮಂಡಲ ಪ್ರತೀಕಾರ ತೆಗೆದುಕೊಳ್ಳದೆ ಬಿಟ್ಟೀತೆ?

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಡೆದಿರುವ ಅಸಂಬದ್ಧ ನಗರೀಕರಣದಿಂದ ವಾತಾ­ವರಣ­ದಲ್ಲಿ ಉಷ್ಣ ವೃದ್ಧಿ ಮಾಡುವ ಅನಿಲ (ಗ್ರೀನ್‌ ಹೌಸ್‌ ಗ್ಯಾಸ್‌– ಜಿಎಚ್‌ಜಿ) ಹೆಚ್ಚಾಗಿದೆ. ವಿದ್ಯುತ್‌ ಉತ್ಪಾದನೆ ಮಾಡುವ ಉಷ್ಣ ಸ್ಥಾವರ, ಇಂಗಾಲದ ಡೈಆಕ್ಸೈಡ್‌ ಉಗುಳುವ ವಾಹನ, ಮಿಥೇನ್‌ ಹೊರಸೂಸುವ ಘನತ್ಯಾಜ್ಯ, ರಾಸಾಯನಿಕ ಕಣಗಳನ್ನು ನಭಕ್ಕೆ ಚಿಮ್ಮಿಸುವ ಕೈಗಾರಿಕೆ (ವಿಶೇಷವಾಗಿ ಉಕ್ಕು ಮತ್ತು ಸಿಮೆಂಟ್‌ ಕಾರ್ಖಾನೆ), ರಸಗೊಬ್ಬರ ಬಳಸುವ ಕೃಷಿ... ವಾಯುಮಾಲಿನ್ಯಕ್ಕೆ ಹೀಗೆ ಲೆಕ್ಕವಿಲ್ಲದಷ್ಟು ದಾರಿ.
ಅತಿ ಹೆಚ್ಚು ವಾಯುಮಾಲಿನ್ಯ ಹೊಂದಿರುವ ದೇಶದ ನಗರಗಳಲ್ಲಿ ನಮ್ಮ ಬೆಂಗಳೂರು ಐದನೇ ಸ್ಥಾನದಲ್ಲಿದೆ ಎನ್ನುವ ಸಮಾಧಾನದ ನಿಟ್ಟುಸಿರು ಬಿಡುವ ಅಗತ್ಯವೇನೂ ಇಲ್ಲ.

ಜನರ ಬದುಕನ್ನು ಅಸಹನೀಯ ಮಾಡುವಷ್ಟು ರಾಸಾಯನಿಕ ಇಲ್ಲಿನ ವಾಯುಮಂಡಲದಲ್ಲೂ ತುಂಬಿದೆ.
ಬೆಂಗಳೂರಿನ ಉದಾಹರಣೆಯನ್ನೇ ತೆಗೆದು­ಕೊಂಡರೆ, ಕಳೆದ ನಾಲ್ಕೂವರೆ ದಶಕದಲ್ಲಿ (1970– 2015) ನಗರದ ಕಾಂಕ್ರೀಟ್‌ ಇಮಾರತಿನ ಪ್ರಮಾಣ ಶೇ 632ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಶೇ 78ರಷ್ಟು ಹಸಿರಿನ ಹೊದಿಕೆ ಕಣ್ಮರೆಯಾಗಿದ್ದು, ಶೇ 79ರಷ್ಟು ಕೆರೆಕುಂಟೆಗಳು ಕಳೆದುಹೋಗಿವೆ. ಒಂದೆಡೆ ಮಾಲಿನ್ಯ ಉಂಟು­ಮಾಡುವ ಪ್ರವೃತ್ತಿ ಹೆಚ್ಚಾಗಿದ್ದರೆ, ಇನ್ನೊಂದೆಡೆ ಅದನ್ನು ಹೀರುವ ಪರಿಸರ ಕಡಿಮೆಯಾಗಿದೆ. ಈ ಅಸಮತೋಲನದ ಪರಿಣಾಮವನ್ನು ಜನಸಮು­ದಾಯ ಅನುಭವಿಸದೆ ಬೇರೆ ವಿಧಿಯೇ ಇಲ್ಲವಾಗಿದೆ.

ಕಟ್ಟಡಗಳಿಗೆ ಗಾಜಿನ ಹೊದಿಕೆ ಹಾಕುವ ಪದ್ಧತಿ ಮೂಲತಃ ಯುರೋಪ್‌ ದೇಶಗಳ ಪರಿಕಲ್ಪನೆ. ಶೀತವಲಯದ ಆ ಪ್ರದೇಶದಲ್ಲಿ ಉಷ್ಣ ವೃದ್ಧಿಗೆ ಕಂಡುಕೊಂಡ ಕ್ರಮಗಳಲ್ಲಿ ಇಂತಹ ವಿನ್ಯಾಸವೂ ಒಂದು. ಆದರೆ, ಉಷ್ಣವಲಯಕ್ಕೆ ಸೇರಿದ ನಾವೂ ಅದನ್ನು ಯಥಾವತ್‌ ನಕಲು ಮಾಡಿದರೆ ಹೇಗೆ? ಈ ‘ಕಾಪಿ–ಪೇಸ್ಟ್‌’ (ನಕಲಿಸು, ಅಂಟಿಸು) ಸಂಸ್ಕೃತಿ­ಯಿಂದ ನಮ್ಮ ಪರಿಸರವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗಿರುವ ಉಷ್ಣದ ಪ್ರಭಾವವನ್ನು ತಗ್ಗಿಸಲು ಹವಾನಿಯಂತ್ರಿತ ವ್ಯವಸ್ಥೆ ಬಳಸುತ್ತೇವೆ. ಇದರಿಂದ ವಿದ್ಯುತ್‌ ಬಳಕೆ ಹೆಚ್ಚುತ್ತದೆ. ಈ ವಿದ್ಯುತ್‌ ಉತ್ಪಾದನೆಗೆ ಕಲ್ಲಿದ್ದಲು ಸುಡಬೇಕು. ಮತ್ತೆ ಉಷ್ಣದ ಬೋನಿನೊಳಗೆ ಬೀಳಬೇಕು. ಈ ವಿಷವರ್ತುಲದಿಂದ ಮುಕ್ತಿ ಎನ್ನುವುದೇ ಇಲ್ಲ.

ಬೆಂಗಳೂರಿನ ಎರಡು ಪ್ರದೇಶಗಳಲ್ಲಿ ನಾವು ವಿದ್ಯುತ್‌ ಬಳಕೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದೆವು. ಹವಾನಿಯಂತ್ರಿತ ವ್ಯವಸ್ಥೆಯನ್ನು ಅಷ್ಟಾಗಿ ಬಳಕೆ ಮಾಡದ ನಗರದ ಹೊರಭಾಗ­ದಲ್ಲಿ ಪ್ರತಿವರ್ಷ ಒಬ್ಬ ವ್ಯಕ್ತಿ ಸರಾಸರಿ 1,400 ಯೂನಿಟ್‌ ವಿದ್ಯುತ್‌ ಉಪಯೋಗಿಸಿದರೆ, ಹವಾ­ನಿಯಂತ್ರಿತ ಸೌಲಭ್ಯ ಹೊಂದಿದ ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಪ್ರತಿವರ್ಷ ಒಬ್ಬ ವ್ಯಕ್ತಿ ಸರಾಸರಿ 15,000 ಯೂನಿಟ್‌ ಬಳಕೆ ಮಾಡುತ್ತಿರುವುದು ಕಂಡುಬಂತು. ವಾಯು­ಮಂಡಲಕ್ಕೆ ಇಷ್ಟೊಂದು ಬಿಸಿ ಉಣಿಸುತ್ತಾ  ಹೋದರೆ ಅದರಲ್ಲಿ ಮೂಲ ಸ್ವರೂಪ ಉಳಿಯುವು­ದಾದರೂ ಹೇಗೆ? ಅದು ತಂಗಾಳಿಯನ್ನು ಬೀಸೀ­ತಾದರೂ ಎಂತು?

ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ಮರಗಳು ವಾರ್ಷಿಕ ಎಂಟು ಟನ್‌ ಇಂಗಾಲದ ಡೈಆಕ್ಸೈಡ್‌ ಇಂಗಿಸಬಲ್ಲವು. ಒಬ್ಬ ವ್ಯಕ್ತಿ

ಪ್ರತಿದಿನ 500ರಿಂದ 900 ಗ್ರಾಂ ಇಂಗಾಲದ ಡೈಆಕ್ಸೈಡ್‌ ಉತ್ಪಾದನೆ ಮಾಡುತ್ತಾನೆ. ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡು ನೋಡಿದಾಗ ಪರಿಶುದ್ಧ ಗಾಳಿಯನ್ನು ಪಡೆಯಲು ಪ್ರತಿ ವ್ಯಕ್ತಿಗೆ 32 ಮರಗಳು ಬೇಕು. ಬೆಂಗಳೂರು ನಗರದಲ್ಲೀಗ 14.78 ಲಕ್ಷ ಮರಗಳಿದ್ದು, 95 ಲಕ್ಷ ಜನಸಂಖ್ಯೆ ಇದೆ. ಅಂದರೆ ಸರಾಸರಿ ಏಳು ಜನರಿಗೆ ಒಂದು ಮರ ಇದ್ದಂತಾಯಿತು. ನೆಮ್ಮದಿಯ ಜೀವನವನ್ನು ನಡೆಸಲು ಬೇಕಾದ ಪರಿಸರಕ್ಕೂ, ನಾವೇ ಸೃಷ್ಟಿಸಿಕೊಂಡ ಪರಿಸರಕ್ಕೂ ತಾಳೆಯೇ ಆಗುವುದಿಲ್ಲ.

ರಾಜ್ಯದೆಲ್ಲೆಡೆ ಘನತ್ಯಾಜ್ಯವನ್ನು ಸಂಸ್ಕರಿಸದೆ ಮುಕ್ತ ವಾತಾವರಣದಲ್ಲಿ ಹಾಗೇ ಸಂಗ್ರಹ ಮಾಡಲಾಗುತ್ತಿದೆ. ಹೀಗಾಗಿ ಈ ತ್ಯಾಜ್ಯದಲ್ಲಿ ಸಾವಯವ ಕ್ರಿಯೆ ನಡೆದು ಹೇರಳ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿರುವ ಮಿಥೇನ್‌ ನೇರವಾಗಿ ವಾತಾವರಣವನ್ನು ಸೇರುತ್ತಿದೆ. ಇಂಗಾಲದ ಡೈಆಕ್ಸೈಡ್‌ಗೆ ಹೋಲಿಸಿದರೆ ಮಿಥೇನ್‌ 21 ಪಟ್ಟು ಹೆಚ್ಚು ಅಪಾಯಕಾರಿ. ಗಾಳಿಯಲ್ಲಿ ನೈಟ್ರಸ್‌ ಆಕ್ಸೈಡ್‌, ಗಂಧಕಯುಕ್ತ ಲವಣದ ಪ್ರಮಾಣವೂ ಅಪಾಯದ ಮಟ್ಟದಲ್ಲಿದೆ. ಗಾಳಿಯಲ್ಲಿ ದೂಳಿನ ಕಣಗಳು ಹೆಚ್ಚಾಗಿರುವುದು ಕೂಡ ಕಂಡುಬಂದಿದೆ.
ವಾಯುಮಂಡಲವನ್ನು ನಾವು ಇಷ್ಟೊಂದು ಕುಲಗೆಡಿಸಿದ್ದರಿಂದ ಅದರ ಲಯ ಹದಗೆಟ್ಟಿದೆ. ಹವಾಮಾನ ವೈಪರೀತ್ಯ ಕೂಡ ಅದರ ಪರಿಣಾಮ. ಸಕಾಲಕ್ಕೆ ಮಳೆ ಆಗುತ್ತಿಲ್ಲ. ಮಾವು ಸಹ ಹೂವು ಬಿಡುತ್ತಿಲ್ಲ. ಜೋಳದ ತೆನೆಗಳು ಬೇಗ ಕಾಳು ಕಟ್ಟುತ್ತಿಲ್ಲ. ಜನಕ್ಕೆ ತಾಜಾತನ ನೀಡಬೇಕಾದ, ನವಚೈತನ್ಯ ತುಂಬಬೇಕಾದ ಗಾಳಿಯೀಗ ವಿಷ ಉಣಿಸುತ್ತಿದೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮಿತಿಮೀರಿ­ದ್ದರೆ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿ ಮೊದಲಾದ ಎರಡನೇ ಹಂತದ ನಗರಗಳಲ್ಲೂ ವಾಹನಗಳ ಭರಾಟೆ ಹೆಚ್ಚಿದೆ. ಸದಾ ಗಿಜಿಗುಡುವ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ತುಸು ಸಮಯ ಕಳೆದರೆ ಸಾಕು, ಆಯುಷ್ಯ ಸರ್ರನೆ ಜಾರುತ್ತದೆ. ಈ ರಸ್ತೆಯಲ್ಲಿ ಹಾದು ಹೋಗುವಾಗ ಉದ್ದಕ್ಕೂ ಚಪ್ಪರದಂತೆ ಚಾಚಿಕೊಂಡಿರುವ ಮರಗಳ ಟೊಂಗೆಗಳನ್ನು ನೀವು ಎಂದಾದರೂ ಕತ್ತು ಮೇಲೆತ್ತಿ ನೋಡಿದ್ದೀರಾ? ಹಸಿರಾಗಿರಬೇಕಿದ್ದ ಎಲೆಗಳೆಲ್ಲ ಇಂಗಾಲವನ್ನು ನುಂಗಿ, ನುಂಗಿ ಕಪ್ಪಿಟ್ಟಿವೆ. ಇಂತಹ ಗಿಜಿಗುಡುವ ಎಲ್ಲ ರಸ್ತೆಗಳಲ್ಲಿ ಇಂಗಾಲದ್ದೇ ರಾಜ್ಯಭಾರ. ಆಮ್ಲಜನಕ ಪಡೆಯಲು ಒದ್ದಾಡ­ಬೇಕು. ವಾಹನಗಳು ಉಗುಳುತ್ತಿರುವ ಮಸಿಯಂ­ತಹ ಹೊಗೆ ಭಯಾನಕ ಪ್ರಮಾಣದಲ್ಲಿ ಎಲರು ಸೇರುತ್ತಿದೆ. ವಾಹನ ಬಳಕೆ ಮಾಡುವುದು ಬೇಡ ಎಂದು ಯಾರಿಗೆ ಹೇಳುವುದು?

ನಮ್ಮ ಸುತ್ತ ಇಷ್ಟೆಲ್ಲ ಅನಾಹುತ ನಡೆದಿದ್ದರೂ ಜನರಿಗೆ ಅದರ ಅರಿವೇ ಇಲ್ಲದಿರುವುದು ಆಶ್ಚರ್ಯ ಉಂಟು ಮಾಡುತ್ತದೆ. ಕ್ಯಾನ್ಸರ್‌ ತರುವಂತಹ ವಿಷಗಾಳಿ ಎಷ್ಟೊಂದು ತುಂಬಿದೆ ಎಂದರೆ ಬೆಂಗಳೂರಿನಲ್ಲಿ ಹಿಂದೆ ಲಕ್ಷಕ್ಕೆ ಒಬ್ಬ ಕ್ಯಾನ್ಸರ್‌ ರೋಗಿ ಇದ್ದರೆ, ಈಗ ಐದು ಸಾವಿರ ಜನರಿಗೆ ಒಬ್ಬರಂತೆ ಕ್ಯಾನ್ಸರ್‌ ರೋಗಿಗಳಿದ್ದಾರೆ. ಈ ಅನು­ಪಾತ ಎಲ್ಲಿಗೆ ಹೋಗಿ ಮುಟ್ಟುವುದೋ ಗೊತ್ತಿಲ್ಲ.
ಇಂಗಾಲದ ಹೆಜ್ಜೆ ಗುರುತುಗಳು ದೊಡ್ಡ ಕಿತಾಪತಿಯನ್ನೇ ಮಾಡುತ್ತಿವೆ. ಸಾಮಾಜಿಕ ಜೀವನದ ಮೇಲೂ ಗಂಭೀರವಾದ ಪರಿಣಾಮ ಬೀರಿವೆ. ವಾರಾಂತ್ಯದ ದಿನಗಳಲ್ಲಿ ಸೌಮ್ಯವಾಗಿ­ರುವ ಗಂಡ, ವಾರದ ದಿನಗಳಲ್ಲಿ ಬಲು ವ್ಯಘ್ರವಾಗಿ ವರ್ತಿಸುತ್ತಾನೆ ಎಂದು ಹಲವು ಮಹಿಳೆಯರು ನೋವು ತೋಡಿಕೊಂಡಿದ್ದಾರೆ. ಅದೇ ರೀತಿ ಕೆಲಸಕ್ಕೆ ಹೋಗುವ ಮಹಿಳೆಯರ ಮೇಲೂ ದೂರುಗಳು ಕೇಳಿ ಬರುತ್ತಿವೆ.

ವಾರದ ದಿನಗಳಲ್ಲಿ ಕೆಲಸಕ್ಕೆ ಹೋಗುವಾಗ ರಾಸಾಯನಿಕ ಮಿಶ್ರಿತ ಗಾಳಿಯನ್ನೇ ಸೇವನೆ ಮಾಡುವುದರಿಂದ ಅವರಲ್ಲಿ ಅಂತಹ ಬದಲಾವಣೆ ಕಂಡು ಬರುತ್ತಿದೆ. ಕೌಟುಂಬಿಕ ಹಿಂಸೆ ಎಲ್ಲೆಡೆ ತುಂಬಿದೆ. ಕೋಪ ತಾರಕಕ್ಕೆ ಹೋಗಿ, ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿದೆ. ವಿಷಗಾಳಿ ಸಂತಾನಶಕ್ತಿಯನ್ನೂ ಕಳೆಯುತ್ತಿದೆ. ಆಸ್ತಮಾ ಸಮಸ್ಯೆಯೂ ವೃದ್ಧಿ­ಯಾಗು­ತ್ತಿದೆ. ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮದಿಂದ ದುಡಿಯುವ ಶಕ್ತಿ ಕುಂಠಿತವಾಗುತ್ತಿದೆ. ವ್ಯಕ್ತಿಗಳ ಸನ್ನಡತೆ ಅಭಾವವೂ ಸಮಾಜವನ್ನು ಕಾಡಲು ಆರಂಭಿಸಿದೆ. ಅಭಿವೃದ್ಧಿಯ ಈ ನಾಗಾಲೋಟ ಹಿಮ್ಮುಖವಾದ ಹಾದಿ ಹಿಡಿದಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಮುಂದಿನ ಪೀಳಿಗೆ ಮೇಲೆ ಕಿಂಚಿತ್ತೂ ಕಾಳಜಿಯಿಲ್ಲದೆ ನಾವು ಅವನತಿಯತ್ತ ಬಲು ವೇಗವಾಗಿ ಹೆಜ್ಜೆ ಹಾಕುತ್ತಿದ್ದೇವೆ.

ಹಾಗಾದರೆ ಇದಕ್ಕೆಲ್ಲ ಏನು ಪರಿಹಾರ ಎನ್ನುವ ಪ್ರಶ್ನೆ ಎದುರಾಗುತ್ತದೆ. ಗೃಹಬಳಕೆ ಇಂಧನದಿಂದ ಆಗುತ್ತಿರುವ ಮಾಲಿನ್ಯ ತಡೆಗಟ್ಟಲು ಕಟ್ಟಿಗೆ ಹಾಗೂ ಸೀಮೆಎಣ್ಣೆ ಬದಲು ಎಲ್‌ಪಿಜಿ, ಸಿಎನ್‌ಜಿ ಅನಿಲ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ವಾಹನಗಳಿಗೆ ಇಂಧನವನ್ನಾಗಿ ಸಿಎನ್‌ಜಿಯನ್ನೇ ಉಪಯೋಗಿಸಬೇಕು.

ಸಮೂಹ ಸಾರಿಗೆ ವ್ಯವಸ್ಥೆಯನ್ನು ಸದೃಢಗೊಳಿಸಿ, ಖಾಸಗಿ ವಾಹನಗಳ ಬಳಕೆ ಮೇಲೆ ನಿರ್ಬಂಧ ವಿಧಿಸಬೇಕು. ಸರ್ಕಾರಿ ಮತ್ತು ಖಾಸಗಿ

ಹಳೆಯ ವಾಹನಗಳನ್ನು ತಕ್ಷಣ ಬದಲಾಯಿಸಬೇಕು. ವಿದ್ಯುತ್‌ ದೀಪ ಬೆಳಗಲು ಹಾಗೂ ನೀರು ಕಾಯಿಸಲು ಸೌರಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು.

ವಲಸೆ ತಪ್ಪಿಸಲು ಹಳ್ಳಿಗಳನ್ನು ‘ಸ್ಮಾರ್ಟ್‌ ವಿಲೇಜ್‌’ ಆಗಿ ಪರಿವರ್ತಿಸಬೇಕು. ಸೌಲಭ್ಯಗಳ ದೃಷ್ಟಿಯಲ್ಲಿ ಈ ಹಳ್ಳಿಗಳು ಸ್ವಾವಲಂಬಿ ಆಗಬೇಕು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಈಗಲೂ ಅನುಷ್ಠಾನ ಯೋಗ್ಯವಾಗಿದೆ. ಜರಡಿಯಲ್ಲಿ ಬಿದ್ದ ನೀರಿನಂತೆ ಅಭಿವೃದ್ಧಿ ಗತಿಯು ರಾಜ್ಯದ ಎಲ್ಲ ಭಾಗಗಳಲ್ಲಿ ಸಮಾನವಾಗಿ ನಡೆದಿರಬೇಕು.

ಹತ್ತಿರದ ನಗರಗಳಿಗೆ ಹೋಗಿ ಬರಲು ಉತ್ತಮ ರಸ್ತೆ ಹಾಗೂ ಸಮರ್ಪಕ ಸಾರಿಗೆ ವ್ಯವಸ್ಥೆ ಇದ್ದರೆ ಹಳ್ಳಿಗಳ ಜನ ವಲಸೆ ಹೋಗುವುದಿಲ್ಲ. ನಿತ್ಯ ನಗರಗಳಿಗೆ ಕೆಲಸಕ್ಕೆ ತೆರಳಿ ಸಂಜೆ ವಾಪಸಾಗುತ್ತಾರೆ. ಇದರಿಂದ ನಗರಗಳ ಮೇಲಿನ ಒತ್ತಡ ಕಡಿಮೆಯಾಗಿ, ಮಾಲಿನ್ಯದ ಪ್ರಮಾಣವನ್ನು ತಡೆಗಟ್ಟಲೂ ಸಾಧ್ಯವಾಗುತ್ತದೆ.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ವಿಭಾಗದ ಸಂಶೋಧಕರು)      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT