ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆಗೆ ನೆಲ ಅಂತಸ್ತು ಸೂಕ್ತವೇ?

ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ನಗರ, ಪಟ್ಟಣಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದೊಡ್ಡ ನಗರಗಳಲ್ಲಿಯಂತೂ ಕೆಲವೊಂದು ಮನೆಗಳಲ್ಲಿ ಎರಡು ಮೂರು ಕಾರು, ಅಷ್ಟೇ ಸಂಖ್ಯೆಯ ದ್ವಿಚಕ್ರ ವಾಹನಗಳೂ ಇರುವುದೂ ಇದೆ. ವಾಹನಗಳನ್ನು ಖರೀದಿಸಲು ಹಣವನ್ನೇನೋ ಧಾರಾಳವಾಗಿ ವೆಚ್ಚ ಮಾಡುವ ಜನರು, ಆ ವಾಹನಗಳನ್ನು ಮನೆಯಲ್ಲಿ ಒಂದೆಡೆ ಸುರಕ್ಷಿತವಾಗಿ ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡುವಲ್ಲಿ ಮಾತ್ರ ಸೋಲುತ್ತಾರೆ.

ಅಪ್ಪ, ಅಮ್ಮನಿಗಾಗಿ ಮಾಸ್ಟರ್‌ ಬೆಡ್‌ರೂಮು, ಇಬ್ಬರು ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕವಾಗಿ ಎರಡು ಕೊಠಡಿ,  ಅಜ್ಜ, ಅಜ್ಜಿ ಇದ್ದರೆ ಅವರಿಗೂ ಒಂದು ಕೋಣೆ. ಇನ್ನು ಅತಿಥಿಗಳು ಬಂದರೆ ಅವರನ್ನು ಎಲ್ಲಿ ಉಳಿಸುವುದು. ಮಾಸ್ಟರ್‌ ಬೆಡ್‌ರೂಮ್‌ ಬಿಟ್ಟುಕೊಡಲು ಸಾಧ್ಯವಿಲ್ಲ. ಅದೇನಿದ್ದರೂ ಮನೆಯ ಯಜಮಾನ ಎನಿಸಿಕೊಂಡವರ ಖಾಸಗಿ ಆವಾಸ.

ಹೊಸ ತಲೆಮಾರಿನ ಪ್ರಶ್ನೆ
ಇನ್ನು ಹೊಸ ಪೀಳಿಗೆಯ ಮಕ್ಕಳಂತೂ ತಮ್ಮ ಕೊಠಡಿಗಳನ್ನು ಬಿಟ್ಟುಕೊಡಲು ಇಚ್ಛಿಸುವುದೇ ಇಲ್ಲ. ಬಲವಂತ ಮಾಡಿದರೆ ಮುನಿದುಕೊಳ್ಳುತ್ತಾರೆ. ಹಾಗೆಂದು ಅಪರೂಪದ ಅತಿಥಿಗಳನ್ನು ಹಜಾರದಲ್ಲಿ ಮಲಗಿಸಲಾದೀತೆ? ಹಾಗಾಗಿ ಮನೆ ಕಟ್ಟುವಾಗಲೇ ಗೆಸ್ಟ್‌ ರೂಂ ಒಂದು ನಿರ್ಮಾಣಗೊಳ್ಳಬೇಕು.

ಹೀಗೆ, ಮಧ್ಯಮ ಆದಾಯ ವರ್ಗದ ಕುಟುಂಬಗಳು ತಮ್ಮ ಕನಸಿನ ಮನೆಯಲ್ಲಿ ಕನಿಷ್ಠ ಮೂರ್ನಾಲ್ಕು ಕೊಠಡಿಗಳನ್ನಾದರೂ ನಿರ್ಮಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ಲಕ್ಷಗಟ್ಟಲೆ ಹಣತೆತ್ತು ಖರೀದಿಸಿದ ಇಷ್ಟದ ಕಾರನ್ನು ಎಲ್ಲಿ ನಿಲ್ಲಿಸುವುದು? ಮಗರಾಯ ಹಠ ಹಿಡಿದು ತೆಗೆಸಿಕೊಂಡ ಮೋಟಾರ್‌ಬೈಕನ್ನು ಜೋಪಾನವಾಗಿ ನಿಲ್ಲಿಸಲು ಪ್ರತ್ಯೇಕ ಜಾಗ ಕೇಳುತ್ತಾನೆ. ಮಗಳ ಸ್ಕೂಟರ್‌ಗೂ ಸುರಕ್ಷಿತ ಜಾಗ ಬೇಕು.

ಚಿಕ್ಕ ನಿವೇಶನದ ಕಷ್ಟ
ಚಿಕ್ಕ ಅಳತೆಯ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಮುಂದಾಗುವವರ ಕಷ್ಟಗಳು ಒಂದೆರಡಲ್ಲ. ಕುಟುಂಬದ ಸದಸ್ಯರ ಪ್ರೈವೆಸಿಗೂ ಆದ್ಯತೆ ನೀಡಬೇಕು. ಅವರ ವಾಹನಗಳಿಗೂ ಜಾಗ ಮಾಡಿಕೊಡಬೇಕು... ಮನೆ ನಿರ್ಮಾಣಕ್ಕಾಗಿ ನೀಲನಕ್ಷೆ ಸಿದ್ದಪಡಿಸುವಾಗಲೇ ಎಂಜಿನಿಯರ್‌ ಅಥವಾ ಆರ್ಕಿಟೆಕ್ಟ್‌ ಅವರು, ಕಾರು, ದ್ವಿಚಕ್ರ ವಾಹನ ನಿಲ್ಲಿಸಲು ಎಲ್ಲಿ ಜಾಗ ಬಿಡಬೇಕು ಹೇಳಿ? ಎಂಬ ಪ್ರಶ್ನೆಯನ್ನೂ  ಹಾಕುತ್ತಾರೆ.

30/40 ಅಡಿಗಳ ಉದ್ದಗಲದ ನಿವೇಶನದಲ್ಲಿ ಎಂಟರಿಂದ ಒಂಬತ್ತು ಚದರ ವಿಸ್ತಾರದ ಮನೆಯನ್ನು ಕಟ್ಟುವಾಗ ಒಂದು ಅಂತಸ್ತಿನಲ್ಲಿ ಹೆಚ್ಚೆಂದರೆ 10/12 ಅಡಿ ಉದ್ದಗಲದ ಎರಡು ಕೊಠಡಿ, 12/14 ಅಡಿ ವಿಸ್ತಾರದ ಹಜಾರ, 7/9 ಅಡಿಗಳ ಅಳತೆಯ ಅಡುಗೆ ಕೋಣೆ, ಮಗ್ಗಲಲ್ಲೇ ಡೈನಿಂಗ್‌, 4/8 ಅಡಿ ಉದ್ದ ಅಗಲದ ಬಾತ್‌ರೂಂ, ಅಷ್ಟೇ ಅಲ್ಲ, ದೇವರ ಪೂಜೆಗೊಂದು ಪುಟ್ಟದಾಗಿಯಾದರೂ (3/4 ಅಡಿ) ಜಾಗ ಬಿಡಬೇಕು. ಇನ್ನೂ ಎರಡು ಅಥವಾ ಮೂರು ಕೊಠಡಿ ಬೇಕೆಂದರೆ ಡ್ಯುಪ್ಲೆಕ್ಸ್‌ (ಮೇಲೊಂದು ಮಹಡಿ+ ಹಜಾರದಿಂದಲೇ ಅದಕ್ಕೆ ಮೆಟ್ಟಿಲು ಇರುವಂತೆ) ಮನೆ ಕಟ್ಟಿಸಿಕೊಳ್ಳಬೇಕು.

ವಾಹನ ನಿಲುಗಡೆ ಪ್ರಶ್ನೆ
ಕೊಠಡಿಗಳ ಸಮಸ್ಯೆಯೇನೋ ಬಗೆಹರಿಯಿತು. ಇನ್ನು, ಕುಟುಂಬದ ಸದಸ್ಯರೆಲ್ಲರೂ ಓಡಾಡಿಸುವ ಕಾರು, ಸ್ಕೂಟರ್‌, ಮೋಟಾರ್‌ಬೈಕ್‌ಗಳನ್ನು ನಿಲ್ಲಿಸಲು ಎಲ್ಲಿ ಜಾಗ ಹುಡುಕುವುದು? ಪುಟ್ಟ ಪೋರ್ಟಿಕೋದಲ್ಲಿ ಕಾರಿಗೆ ಜಾಗ ಸಾಲದು. ಹೆಚ್ಚೆಂದರೆ ಎರಡು ದ್ವಿಚಕ್ರ ವಾಹನ ನಿಲ್ಲಿಸಬಹುದು. ಆದರೆ, ಐದಾರು ಲಕ್ಷ ರೂಪಾಯಿ ಕೊಟ್ಟು ತಂದ ಕಾರನ್ನು ಮನೆಯಾಚೆ, ಕಾಂಪೌಂಡ್‌ ಮಗ್ಗಲಲ್ಲಿ ನಿಲ್ಲಿಸಲಾದೀತೆ?

ಹೊಟ್ಟೆಕಿಚ್ಚಿನ ಜನ ಗೀರು ಮಾಡುತ್ತಾರೆ, ಕಿಡಿಕೇಡಿಗಳು ಕಲ್ಲೆಸೆದರೆ ಗಾಜು ಪುಡಿಯಾಗುತ್ತದೆ.  ಥೂ... ಬೀದಿನಾಯಿಗಳೋ ಚಕ್ರವನ್ನೇ ಗುರಿಯಿಟ್ಟು ಮೂತ್ರ ವಿಸರ್ಜಿಸುತ್ತವೆ, ದನಗಳು ಸೆಗಣಿ ಹಾಕಿದರೆ ಕಾರಿಗೆಲ್ಲಾ ಹಾರಿರುತ್ತದೆ. ಮಳೆಗಾಲದಲ್ಲಿ ನಿತ್ಯ ತೊಯ್ಯುತ್ತದೆ. ಬೇಸಿಗೆ ಕಾಲದಲ್ಲಿ ಬಣ್ಣ ಮಾಸುತ್ತದೆ... ಸಮಸ್ಯೆ ಒಂದೆರಡಲ್ಲ.

ವಾಹನ ಸುರಕ್ಷತೆ?
ಅಂದರೆ, ವರ್ಷಗಳ ಸ್ವಂತ ವಾಹನದ ಕನಸ ಕಂಡು, ಲಕ್ಷಾಂತರ ಹಣ ತೆತ್ತು ತಂದ ಕಾರನ್ನು ಜತನ ಮಾಡಲು ನಿಮ್ಮದೇ ಮನೆಯಂಗಳದಲ್ಲಿ ಜಾಗವೇ ಇಲ್ಲವೇ? ಛೇ... ‘ಚಿಂತೆಯೇಕೆ ಮಾಡುವಿಯೋ ಮನುಜು... ನೆಲದಡಿ ಬಗ್ಗಿ ನೋಡೋ’... ಎನ್ನುತ್ತಾರೆ ವಾಸ್ತುಶಿಲ್ಪಿ.

ಬೇಸ್‌ಮೆಂಟ್ ಅವಕಾಶ
ಹೌದು, ಸೆಲ್ಲಾರ್‌ ಅಥವಾ ಬೇಸ್‌ಮೆಂಟ್‌ ಎಂಬುದೊಂದು ಅವಕಾಶ ಇದೆಯಲ್ಲಾ. ಅಲ್ಲಿ ನಿಮ್ಮ ಕುಟುಂಬದವರ ಎಲ್ಲಾ ವಾಹನಗಳಿಗೂ ಜಾಗ ಮಾಡಿಕೊಡಬಹುದಲ್ಲಾ... 40/60 ಉದ್ದಗಲದ ನಿವೇಶನಗಳಲ್ಲಿ ಸೆಲ್ಲಾರ್‌ ಅಥವಾ ಬೇಸ್‌ಮೆಂಟ್‌ ನಿರ್ಮಿಸಿಕೊಂಡು ಕಾರು ಮತ್ತಿತರ ವಾಹನಗಳನ್ನು ನಿಲ್ಲಿಸಿಕೊಳ್ಳಲು ಸ್ಥಳಾವಕಾಶ ಮಾಡಿಕೊಳ್ಳಬಹುದು.

ಆದರೆ, 30/40 ಅಗಲ, ಉದ್ದದ ನಿವೇಶನಗಳಲ್ಲಿ ಸೆಲ್ಲಾರ್ ನಿರ್ಮಿಸಿಕೊಳ್ಳಲು ಕೆಲವು ನಗರಗಳಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಪಾಲಿಕೆಯಿಂದ ಅನುಮತಿ ದೊರೆಯದೇ ಇರಬಹುದು. ಈ ಬಗ್ಗೆ ಮೊದಲೇ ಈ ಸ್ಥಳೀಯ ಸಂಸ್ಥೆಗಳಲ್ಲಿ ವಿಚಾರಿಸಿಕೊಂಡು ಒಟ್ಟು ಕಟ್ಟಡದ ನೀಲನಕ್ಷೆಯನ್ನು ಬರೆಸಿಕೊಳ್ಳುವುದು ಉತ್ತಮ. ಮನೆ ಕಟ್ಟಲು ಹೊರಟಿದ್ದೀರಾ? ಸದ್ಯ ನಿಮ್ಮಲ್ಲಿ ಯಾವುದೇ ವಾಹನ ಇಲ್ಲವೇ? ಅದೇನೇ ಇದ್ದರೂ ಮುಂದೆ ಮನೆಗೆ ಬರಲಿರುವ ವಾಹನಕ್ಕೂ ಒಂದಿಷ್ಟು ಜಾಗ ಮೀಸಲಿಡಿ. ಸೆಲ್ಲಾರ್‌ ಅಥವಾ ಬೇಸ್‌ಮೆಂಟ್‌ ಪಾರ್ಕಿಂಗ್‌ ಬಗೆಗೂ ಆಲೋಚಿಸಿ.

ಮೈಸೂರಿನ ಒಂದು ಮನೆಯವರದ್ದು ಬೇರೆಯದೇ ಸಮಸ್ಯೆ. 30/40 ಅಡಿ ಉದ್ದ ಅಗಲದ ನಿವೇಶನದಲ್ಲಿ ಅವರು ಡ್ಯುಪ್ಲೆಕ್ಸ್‌ ಮನೆ ನಿರ್ಮಿಸಿದ್ದಾರೆ. ಮೂರು ವಿಶಾಲ ಕೊಠಡಿಗಳು, ಪ್ರತಿಯೊಂದಕ್ಕೂ ಅಟ್ಯಾಚ್ಡ್ ಬಾತ್‌ರೂಂ, ಎರಡು ಲಿವಿಂಗ್‌ ರೂಂ, ಬಹಳ ದೊಡ್ಡದೇ ಇದೆ ಎನಿಸುವಂತಹ ಅಡುಗೆ ಕೋಣೆ, ಎಲ್ಲವೂ ಅವರು ಅಂದುಕೊಂಡಂತೆಯೇ ಅಚ್ಚುಕಟ್ಟಾಗಿಯೇ ನಿರ್ಮಾಣಗೊಂಡಿವೆ. ಆದರೆ, ಕಾರು ನಿಲ್ಲಿಸಲು (ಸದ್ಯ ಅವರ ಬಳಿ ಕಾರಿಲ್ಲ. ಮುಂದೆ ತೆಗೆದುಕೊಂಡರೆ ಜಾಗ ಬೇಕಲ್ಲ ಎಂಬ ಮುಂದಾಲೋಚನೆಯಿಂದ) ಸೆಲ್ಲಾರ್‌ ನಿರ್ಮಿಸಿಕೊಂಡಿದ್ದಾರೆ.

ಮನೆ ಮಂದಿಗೆಲ್ಲಾ ಸೆಲ್ಲಾರ್‌ ಯೋಜನೆಯೇನೋ ಮೊದಲಿಗೆ ಸರಿ ಇದೆ ಎನಿಸಿತ್ತು. ಮನೆ ನಿರ್ಮಾಣ ಪೂರ್ಣಗೊಂಡು ಗೃಹಪ್ರವೇಶಕ್ಕೆ ಬಂಧು ಮಿತ್ರರು ಬಂದಾಗಲೇ ಸಮಸ್ಯೆಯ ಅರಿವಾಗಿದ್ದು. ಸಮೀಪ ಬಂಧುವೊಬ್ಬರು ಕುಟುಂಬ ಸಮೇತ ಟಾಟಾ ಸುಮೊ ವಾಹನದಲ್ಲಿ ಬಂದಿದ್ದರು. ಅವರು ಮೂರ್ನಾಲ್ಕು ದಿನ ಉಳಿಯುವವರಿದ್ದರು. ಹಾಗಾಗಿ, ಸೆಲ್ಲಾರ್‌ ಇದೆಯಲ್ಲಾ, ಅಲ್ಲಿಯೇ ಅವರ ವಾಹನವನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟರು.

ಸೆಲ್ಲಾರ್‌ ಪ್ರವೇಶಕ್ಕಿದ್ದ ಜಾರುಗುಪ್ಪೆಯಲ್ಲಿ ವಾಹನದ ಮುಂದಿನ ಭಾಗವೇನೋ ಸಲಿಸಾಗಿ ಸಾಗಿ ಹೋಯಿತು. 45 ಡಿಗ್ರಿ ಕೋನದಲ್ಲಿ ಎತ್ತರದ ಸುಮೊ ವಾಹನ ಇಳಿದುಬರುವಾಗ ಅದರ ಹಿಂಬದಿಯ ಮೇಲ್ಭಾಗ ತಾರಸಿಗೆ ತಾಗಿತು. ವಾಹನ ಮುಂದೆ ಹೋಗಲಾರದೇ ನಿಂತುಬಿಟ್ಟಿತು.

ಏಕೆ ಹಾಗಾಯಿತು ಎಂದರೆ, ಸೆಲ್ಲಾರ್‌ನ ಎತ್ತರ ಮತ್ತು ಅದರ ಪ್ರವೇಶ ದ್ವಾರ ಕೇವಲ ಆರು ಅಡಿ ಇತ್ತು. ಸುಮೊ ಐದೂವರೆ ಅಡಿ ಎತ್ತರವಿದ್ದರೂ ಇಳಿಜಾರಿನಲ್ಲಿ ಓರೆಯಾದಾಗ ಅದರ ಮೇಲ್ಭಾಗ ತಾರಸಿಗೆ ತಾಗುತ್ತಿತ್ತು. ಆಗಲೇ ಅವರಿಗೆ ಸ್ಪಷ್ಟವಾಗಿದ್ದು, ಸೆಲ್ಲಾರನ್ನು ಕನಿಷ್ಠ ಏಳೂವರೆ ಅಡಿಗಳಷ್ಟು ಎತ್ತರವಾದರೂ ಇರಿಸಬೇಕಿತ್ತು ಎಂದು. ಮೊದಲೇ ಸರಿಯಾಗಿ ಲೆಕ್ಕಾಚಾರ ಮಾಡಿ ಮನೆಯ ನಿರ್ಮಾಣದ ಪ್ಲಾನ್‌ (ಯೋಜನೆ) ರೂಪಿಸಿಕೊಳ್ಳದೇ ಇದ್ದರೆ ಹೀಗೆ ಎಡವಟ್ಟುಗಳಾಗುತ್ತವೆ.

ಮಳೆಗಾಲದ ಫಜೀತಿ
ಬೆಂಗಳೂರಿನ ಆರ್‌.ಟಿ ನಗರದಲ್ಲಿ 40/60 ಅಡಿ ಉದ್ದಗಲದ ನಿವೇಶನದಲ್ಲಿ ಕಟ್ಟಿದ ಆ ಮನೆಯಲ್ಲಿ ವಾಹನ ನಿಲುಗಡೆಗಾಗಿ ನಿವೇಶನದಷ್ಟೇ ವಿಸ್ತಾರದ ಸೆಲ್ಲಾರ್‌ ನಿರ್ಮಿಸಲಾಗಿದೆ. ನೆಲಮಟ್ಟದಿಂದ ಆರೂವರೆ ಅಡಿಗಳಷ್ಟು ಆಳದಲ್ಲಿದೆ ಆ ಸೆಲ್ಲಾರ್‌. ಎರಡು ಮೂರು ಕಾರು, ಅಷ್ಟೇ ಅಲ್ಲ, ಮೂರು ನಾಲ್ಕು ದ್ವಿಚಕ್ರ ವಾಹನಗಳಿಗೂ ಅಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಜತೆಗೆ, ಅಗತ್ಯ ಇರುವ, ಇಲ್ಲದೇ ಇರುವ ಮನೆಯ ಬಹಳಷ್ಟು ಸರಕು ಸರಂಜಾಮುಗಳನ್ನೂ ಅಲ್ಲಿ ಶೇಖರಿಸಿಟ್ಟುಕೊಳ್ಳಲಾಗಿದೆ.

ಅಷ್ಟೊಂದು ವಿಶಾಲವಾಗಿ ಈ ನೆಲ ಅಂತಸ್ತು! ಆದರೆ, ಈಗ ಆ ಮನೆಯ ಮಾಲೀಕರಿಗೆ ಮಳೆಗಾಲ ಎಂದರೆ ಸಣ್ಣಗೆ ಬೆಚ್ಚಿ ಬೀಳುವಂತಾಗುತ್ತದೆ. ಏಕೆಂದರೆ, ಮಳೆಯ ನೀರು ಸೆಲ್ಲಾರ್‌ ಒಳಕ್ಕೆ ನುಗ್ಗುತ್ತದೆ. ಹಾಗೆ ಒಳಸೇರುವ ಮಳೆ ನೀರನ್ನು ಒಂದೆಡೆ ಸಂಗ್ರಹಿಸಿ ಮೋಟಾರ್‌ ಪಂಪ್‌ ಇಟ್ಟು ಮೇಲಕ್ಕೆ ತಂದು ಚರಂಡಿಯಲ್ಲಿ ಹರಿಬಿಡಲಾಗುತ್ತದೆ.

‘ಇದೇನೋ ಮಳೆಗಾಲದ ಸಮಸ್ಯೆ. ಒಂದೆರಡು ತಿಂಗಳ ಮಾತಾಯಿತು. ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ನಮ್ಮದೇ ಸಾಲಿನ ಒಂದು ಮನೆಯಲ್ಲಿ ಈಗಲೂ ತೆರೆದ ಬಾವಿ ಇದೆ. ಕೆಲವು ಮನೆಗಳಲ್ಲಿ ನಮ್ಮ ಸೆಲ್ಲಾರ್‌ನಷ್ಟೇ ಆಳದ ಸಂಪ್‌ಗಳಿವೆ. ಆ ಬಾವಿ ಮತ್ತು ಸಂಪ್‌ ನೀರು ನಿಧಾನವಾಗಿ ಜಿನುಗುತ್ತಾ ಬಂದು ನಮ್ಮ ಸೆಲ್ಲಾರ್‌ ಸೇರುತ್ತದೆ.

ಇದಕ್ಕೆ ಕಾರಣ, ನಮ್ಮ ಸೆಲ್ಲಾರ್‌ ಆರೂವರೆ ಅಡಿಗಳಷ್ಟು ಆಳವಾಗಿರುವುದು. ಎರಡು ಮೂರು ಅಡಿ ಕಡಿಮೆ ಆಳ ಇದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ ನೋಡಿ. ಇದು ಆರಂಭದಲ್ಲಿ ಸರಿಯಾಗಿ ಪ್ಲಾನ್‌ ಮಾಡದೇ ಇದ್ದುದರ ಪ್ರತಿಕೂಲ ಪರಿಣಾಮ’ ಎಂದು ನಿಟ್ಟುಸಿರು ಬಿಡುತ್ತಾರೆ ಆ ಮನೆ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT