ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಭಾಷೆಗಳಿಗೆ ವಚನಗಳ ಭಾಷಾಂತರ

Last Updated 26 ಏಪ್ರಿಲ್ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜಯಪುರದ ಬಿಎಲ್‌ಡಿ ಶಿಕ್ಷಣ ಸಂಸ್ಥೆಯು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಸಹಕಾರದಲ್ಲಿ ₨2 ಕೋಟಿ ವೆಚ್ಚದಲ್ಲಿ ವಚನಗಳ ಭಾಷಾಂತರ ಯೋಜನೆ ಕೈಗೆತ್ತಿಕೊಂಡಿದೆ’ ಎಂದು ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಬಸವ ವೇದಿಕೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬಸವಶ್ರೀ’ ಮತ್ತು ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಎರಡು ಸಂಪುಟಗಳಲ್ಲಿ ಭಾಷಾಂತರ ಕೃತಿ ಹೊರಬರಲಿದೆ. ಮೊದಲ ಸಂಪುಟದಲ್ಲಿ ಬಸವಣ್ಣನವರ ಜೀವನ ಚರಿತ್ರೆ, ಇತಿಹಾಸ, ಆಯ್ದ ವಚನಗಳು ಹಾಗೂ ಎರಡನೇ ಸಂಪುಟದಲ್ಲಿ ಸಮಗ್ರ ವಚನಗಳು ಇರಲಿವೆ. ಹಿಂದಿ, ಇಂಗ್ಲಿಷ್‌, ಫ್ರೆಂಚ್‌, ಇಟಾಲಿಯನ್‌, ಸ್ಪ್ಯಾನಿಷ್‌ ಮೊದಲಾದ ಭಾಷೆಗಳಿಗೆ ವಚನಗಳನ್ನು ಭಾಷಾಂತರ ಮಾಡಲಾಗುವುದು’ ಎಂದರು.

‘ಸಮಾನತೆ, ಮೂಢನಂಬಿಕೆ, ಮಾನವೀಯ ಮೌಲ್ಯಗಳ ಬಗ್ಗೆ ಉದಾರವಾದ ಚಿಂತನೆ ಹೊಂದಿ, ಅನುಭವ ಮಂಟಪದ ಪರಿಕಲ್ಪನೆ ಮೂಲಕ ಸಾಮಾಜಿಕ ಶುದ್ಧೀಕರಣ ಮಾಡಲು ಬಸವಾದಿ ಶರಣರು ಬಯಸಿದ್ದರು. ಅವರ ಅಂದಿನ ಕನಸುಗಳು ಇಂದಿಗೂ ಸಾಕಾರಗೊಂಡಿಲ್ಲ. ಈ ಕುರಿತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್‌ ಮಾತನಾಡಿ, ‘ಬಸವಣ್ಣನವರು ಸಾಮಾಜಿಕ ಸುಧಾರಣೆಯ ಮುಂಜಾವಿನ ಧ್ರುವತಾರೆ’ ಎಂದು ಬಣ್ಣಿಸಿದರು.

‘ಅವರು ಸಮ ಸಮಾಜದ ಕನಸು ಕಂಡಿದ್ದರು. 800 ವರ್ಷಗಳ ಹಿಂದೆಯೇ ಜಾಗತಿಕ ಸಂವಿಧಾನ ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಸರ್ಕಾರಗಳನ್ನು ನಡೆಸುವ, ಸಮಾಜ ಮುನ್ನಡೆಸುವ ಹೊಣೆಗಾರಿಕೆ ನಮ್ಮ ಮೇಲಿದೆ’ ಎಂದು ಹೇಳಿದರು.

ಹಿರಿಯ ಸಾಹಿತಿ ಕಮಲಾ ಹಂಪನಾ ಮಾತನಾಡಿ, ‘ವಚನ ಸಾಹಿತ್ಯ ಇದ್ದಕ್ಕಿದ್ದ ಹಾಗೇ ಮೂಡಿದ ಸಾಹಿತ್ಯವಲ್ಲ. ದೇಶದಲ್ಲಿ ಈ ಹಿಂದೆ ಇದ್ದ ಅನೇಕ ಧರ್ಮಗಳನ್ನು ಸ್ವೀಕರಿಸಿ ಅದು ಬೆಳೆಯಿತು. ಆಡುನುಡಿಯಲ್ಲಿ ಜನಸಾಮಾನ್ಯರ ಮನಸ್ಸು ಮುಟ್ಟಿ, ಅವರನ್ನು ಪರಿವರ್ತಿಸುವುದು  ವಚನಗಳ ವೈಶಿಷ್ಟ್ಯ. ಇಂದಿಗೂ ವಚನ ಸಾಹಿತ್ಯದ ಪ್ರಭಾವ ದಟ್ಟವಾಗಿರುವ ಪರಿಸರದಲ್ಲಿ  ಶಾಂತಿ, ನೆಮ್ಮದಿ, ಸುವ್ಯವಸ್ಥೆ, ಸಹಬಾಳ್ವೆ ಮತ್ತು ಸಮಾನತೆ ಚೆನ್ನಾಗಿದೆ’ ಎಂದು ಹೇಳಿದರು.

ನಿಘಂಟುತಜ್ಞ ಜಿ.ವೆಂಕಟಸುಬ್ಬಯ್ಯ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಮತ್ತು ಸಾಹಿತಿ ಕೆ.ಸಿ.ಶಿವಪ್ಪ, ಗಾಯಕಿ ಸಂಗೀತಾ ಕಟ್ಟಿ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ  ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT